ಅರದೇಶನಹಳ್ಳಿಯಲ್ಲಿನ ಪುರಾತನ ವೀರಗಲ್ಲುಗಳ ಸಂರಕ್ಷಣೆಗೆ ಕ್ರಮ

Spread the love

ಅರದೇಶನಹಳ್ಳಿಯಲ್ಲಿನ ಪುರಾತನ ವೀರಗಲ್ಲುಗಳ ಸಂರಕ್ಷಣೆಗೆ ಕ್ರಮ

ದೇವನಹಳ್ಳಿ: ತಾಲೂಕಿನ ಜಾಲಿಗೆ ಗ್ರಾ.ಪಂ ವ್ಯಾಪ್ತಿಯ ಅರದೇಶನಹಳ್ಳಿ ಗ್ರಾಮದಲ್ಲಿ ವ್ಯಾಪ್ತಿಯ ವಿವಿಧೆಡೆ ಗಂಗ, ಚೋಳ ಮತ್ತು ರಾಷ್ಟ್ರಕೂಟರ ಕಾಲದ ವೀರಗಲ್ಲುಗಳು ಪತ್ತೆಯಾಗಿದ್ದು, ಇವುಗಳ ಸಂರಕ್ಷಣೆಗೆ ಜಾಲಿಗೆ ಗಾ.ಪಂ ವ್ಯಾಪ್ತಿಯ ಪಿಡಿಓ ಪ್ರಕಾಶ್ ಅವರು ಮುಂದಾಗಿದ್ದಾರೆ.

ಈ ವೀರಗಲ್ಲುಗಳು ಗತ-ಶತಮಾನಗಳ ಇತಿಹಾಸವನ್ನು ಹೊಂದಿದ್ದು ಅವುಗಳನ್ನು ಮುಂದಿನ ಪೀಳಿಗೆಗೆ ಸಂರಕ್ಷಿಸುವ ಸಲುವಾಗಿ ಕ್ರಮಕ್ಕೆ ಮುಂದಾಗಿದ್ದು, ಸ್ಮಾರಕವಿರುವ ಸ್ಥಳವನ್ನು ಪರಿಶೀಲಿಸಿ, ಸಂರಕ್ಷಣೆ ಮಾಡಲು ಪೌರ ಕಾರ್ಮಿಕರಿಗೆ ಸೂಚನೆ ನೀಡಿದ್ದಾರೆ. ಅರದೇಶನಹಳ್ಳಿ ಗ್ರಾಮದಲ್ಲಿನ ನಾಲ್ಕೈದು ಸ್ಥಳಗಳಿಗೆ ಭೇಟಿ ನೀಡಿ ಅಲ್ಲಿನ ವಾಸ್ತವಾಂಶವನ್ನು ಪರಿಶೀಲನೆ ನಡೆಸಿದ್ದು, ಗಂಗ, ಚೋಳ ಮತ್ತು ರಾಷ್ಟ್ರಕೂಟರ ಕಾಲದ ವಿವಿಧ ಭಂಗಿಗಳ ವೀರಗಲ್ಲುಗಳನ್ನು ಪರಿಶೀಲನೆ ಮಾಡಿದ್ದಾರೆ. ಇದೇ ವೇಳೆ ಅರದೇಶನಹಳ್ಳಿ ಗ್ರಾಮದಲ್ಲಿನ ರಾಷ್ಟ್ರಕೂಟರ ಕಾಲದ ಬೃಹತ್ ಬಂಡೆಯಲ್ಲಿ ಕೆತ್ತಲ್ಪಟ್ಟ ವೀರಗಲ್ಲು ಇತಿಹಾಸವನ್ನು ಹೊಂದಿದ್ದು, ಈ ಸಂಬಂಧ ಸ್ಥಳೀಯ ಹಿರಿಯರಿಂದ ಕೆಲವು ಮಾಹಿತಿಯನ್ನು ಪಡೆದುಕೊಂಡರು.

ಬಳಿಕ ಮಾತನಾಡಿದ ಪಿ.ಡಿ.ಒ ಪ್ರಕಾಶ್ ಅವರು, ಜಾಲಿಗೆ ಗ್ರಾ.ಪಂ. ವ್ಯಾಪ್ತಿಯ ಅರದೇಶನಹಳ್ಳಿಯಲ್ಲಿ ಸಾಕಷ್ಟು ವೀರಗಲ್ಲುಗಳಿವೆ ಎಂಬ ಮಾಹಿತಿಯ ಮೆರೆಗೆ ಭೇಟಿ ನೀಡಿ ಪರಿಶೀಲನೆ ಮಾಡಲಾಗಿದೆ, ಪ್ರಕಟಿತ ವೀರಗಲ್ಲು ಮತ್ತು ಶಾಸನಗಳು ದೊರೆತಿವೆ, ಇಲ್ಲಿನ ಜಾಗವನ್ನು ಸ್ವಚ್ಛಗೊಳಿಸಿ ಸಂರಕ್ಷಿಸಲು ಚಾವಡಿ ಮಾಡಿಸಿ, ಕ್ರಮವಹಿಸಲಾಗುತ್ತದೆ, ಸ್ಥಳೀಯ ಹಿರಿಯರಿಂದ ಮಾಹಿತಿಯನ್ನು ಪಡೆದುಕೊಳ್ಳಲಾಗಿದೆ. ಅಪ್ರಕಟಿತ ವೀರಬಲ್ಲಾಳ ಶಾಸನವೂ ಸಹ ಇದೆ. ಪುರಾತತ್ವ ಇಲಾಖೆಯ ಸಂಬಂಧಪಟ್ಟವರ ಜೊತೆ ಸಂಪರ್ಕಿಸಿ ಅದನ್ನು ಸಹ ಪರಿಶೀಲನೆ ನಡೆಸಿ ಗ್ರಾಪಂನಿಂದ ಸೂಕ್ತ ನಿರ್ವಹಣೆಗೆ ಮುಂದಾಗಲಾಗುತ್ತದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಸ್ಥಳೀಯ ಮಹಿಳೆಯೊಬ್ಬರು ಬೃಹತ್ ಗಾತ್ರದ ಕಲ್ಲಿನಲ್ಲಿ ವೀರಗಲ್ಲು ಶಾಸನ ಹೊಂದಿರುವುದಕ್ಕೆ ಪೂಜೆ ನೆರವೇರಿಸಿದ್ದು ಗಮನಸೆಳೆಯಿತು. ನಂತರ ಮತ್ತೊಂದು ಪ್ರದೇಶದಲ್ಲಿರುವ ವೀರಗಲ್ಲುಗಳ ಮುಂಭಾಗದಲ್ಲಿ ಚಿಲ್ಲರೆ ಹಣವನ್ನು ಹಾಕಿ ಪೂಜಿಸಿರುವುದು ಅಲ್ಲಿನ ಸ್ಥಳೀಯರು ಎಷ್ಟು ಪ್ರಾಮುಖ್ಯತೆ ಕೊಡುತ್ತಾರೆಂಬುವುದಕ್ಕೆ ಸಾಕ್ಷಿಯಾಗಿತ್ತು.

ಈ ವೇಳೆ ಮಾತನಾಡಿದ ಗ್ರಾಮಸ್ಥರಾದ ಮುನಿಯಪ್ಪ ಅವರು, ಸುಮಾರು 1200 ವರ್ಷಗಳಷ್ಟು ಹಳೆಯ ವೀರಗಲ್ಲು ಇದಾಗಿದೆ, ಇಲ್ಲಿನ ಇತಿಹಾಸವು ಆಗಿನ ಕಾಲದ ಹೊಯ್ಸಳ, ಚಾಲುಕ್ಯ, ರಾಷ್ಟ್ರಕೂಟ, ಕದಂಬ ರಾಜರ ಕಾಲದ್ದಾಗಿದೆ, ಯುದ್ಧದ ಸಮಯದಲ್ಲಿ ನಾಯಕ ವೀರ ಹೋರಾಟಗಾರರೊಬ್ಬರು ಯುದ್ಧ ಮಾಡಿ, ಸಾವನ್ನಪ್ಪಿದ್ದರಿಂದ ಅವರನ್ನು ಸ್ಮರಣೆ ಮಾಡುವ ಉದ್ದೇಶದಿಂದ ಇಂತಹ ವೀರಗಲ್ಲುಗಳನ್ನು ಮಾಡಿದ್ದಾರೆ ಎಂದು ಮಾಹಿತಿ ನೀಡಿದರು.


Spread the love