ಅರಮನೆ ನಗರಿ ಮೈಸೂರಿಗೆ ಹರಿದು ಬಂದ ಜನಸಾಗರ

Spread the love

ಅರಮನೆ ನಗರಿ ಮೈಸೂರಿಗೆ ಹರಿದು ಬಂದ ಜನಸಾಗರ

ಮೈಸೂರು: ಹೊಸ ವರ್ಷದ ಆರಂಭ ಮತ್ತು ವಾರಾಂತ್ಯದ ದಿನವಾಗಿದ್ದರಿಂದ ಪ್ರವಾಸಿಗರ ದಂಡು ಅರಮನೆ ನಗರಿಯಲ್ಲಿ ಕಂಡು ಬಂದಿತು. ಹೆಚ್ಚಿನವರು ವರ್ಷದ ಮೊದಲ ದಿನವನ್ನು ದೇವರ ದರ್ಶನದ ಮೂಲಕ ಆರಂಭಿದ್ದರಿಂದ ನಗರದ ದೇಗುಲ, ಚರ್ಚ್ ಗಳಲ್ಲಿ ಜನಸಾಗರವೇ ಕಂಡು ಬಂದಿತು.

ಚಾಮುಂಡಿಬೆಟ್ಟ, ಮೈಸೂರು-ನಂಜನಗೂಡು ರಸ್ತೆಯ ಗಣಪತಿ ಸಚ್ಚಿದಾನಂದ ಆಶ್ರಮ, ಒಂಟಿಕೊಪ್ಪಲಿನ ವೆಂಕಟರಮಣಸ್ವಾಮಿ ದೇವಸ್ಥಾನ, ಯೋಗನರಸಿಂಹಸ್ವಾಮಿ ದೇವಾಲಯ ಸೇರಿದಂತೆ ನಗರದ ಹತ್ತಾರು ದೇವಸ್ಥಾನದಲ್ಲಿ ಭಕ್ತರು ವಿಶೇಷ ಪೂಜೆ ಸಲ್ಲಿಸಿದರು. ಅಲ್ಲದೆ ನಗರದ ಸಂತ ಫಿಲೋಮಿನಾ ಚರ್ಚ್ ಸೇರಿದಂತೆ ಹಲವು ಚರ್ಚ್‌ಗಳಲ್ಲಿ ಮುಂಜಾನೆಯಿಂದಲೇ ಯೇಸುವಿಗೆ ಪ್ರಾರ್ಥನೆ ಸಲ್ಲಿಸಲಾಯಿತು. ನೂರಾರು ಸಂಖ್ಯೆಯಲ್ಲಿ ಕ್ರೈಸ್ತ ಬಾಂಧವರು ಈ ಪ್ರಾರ್ಥನೆಯಲ್ಲಿ ಪಾಲ್ಗೊಂಡು ವರ್ಷಾರಂಭದ ಸ್ವಾಗತ ಕೋರಿದ್ದು ಕಂಡು ಬಂತು.

ಜೆ.ಪಿ.ನಗರದ ಗಣಪತಿ ದೇವಸ್ಥಾನ, ಗಾಯತ್ರಿ ದೇವಸ್ಥಾನ, ವಿಶ್ವೇಶ್ವರನಗರ ಸುಬ್ರಹ್ಮಣ್ಯೇಶ್ವರ ದೇವಸ್ಥಾನ, ಸುಣ್ಣದಕೇರಿ ಮಹದೇಶ್ವರಸ್ವಾಮಿ ದೇವಸ್ಥಾನ, ಅಗ್ರಹಾರದ 101 ಗಣಪತಿ ದೇವಸ್ಥಾನ, ಅರಮನೆ ಕೋಟೆ ಆಂಜನೇಯಸ್ವಾಮಿ ದೇವಾಲಯ, ಪ್ರಸನ್ನ ಗಣಪತಿ ದೇವಸ್ಥಾನ, ಚಂದ್ರಮೌಳೇಶ್ವರ ದೇವಸ್ಥಾನ, ಸಿದ್ಧಾರ್ಥನಗರದ ಗಣಪತಿ ದೇವಸ್ಥಾನ, ಒಂಟಿಕೊಪ್ಪಲು ವೆಂಕಟರಮಣಸ್ವಾಮಿ ದೇವಸ್ಥಾನ, ನಾರಾಯಣಶಾಸ್ತ್ರಿ ರಸ್ತೆಯ ರಾಘವೇಂದ್ರಮಠ, ಶ್ರೀರಾಂಪುರದ ಶಿವದೇವಾಲಯ, ಶ್ರೀರಾಂಪುರ ಎರಡನೇ ಹಂತದ ಬಲಮುರಿ ವಿನಾಯಕ ದೇವಸ್ಥಾನ, ಚಾಮುಂಡೇಶ್ವರಿ ದೇವಸ್ಥಾನ, ಮಂಚೇಗೌಡನಕೊಪ್ಪಲು ಮಹದೇಶ್ವರ ದೇವಸ್ಥಾನ ಸೇರಿ ಮೊದಲಾದ ದೇವಸ್ಥಾನದಲ್ಲಿ ಸಾರ್ವಜನಿಕರು ಜಮಾಯಿಸಿದ್ದು ಕಂಡುಬಂತು. ಬೆಳಗ್ಗೆಯಿಂದ ರಾತ್ರಿವರೆಗೆ ತಮ್ಮ ಅನುಕೂಲಕ್ಕೆ ತಕ್ಕಂತೆ ದೇವಾಲಯಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿ ದೇವರ ದರ್ಶನ ಪಡೆದರು.

ಹೊಸ ವರ್ಷದ ಹಿನ್ನೆಲೆಯಲ್ಲಿ ಚಾಮುಂಡಿಬೆಟ್ಟಕ್ಕೆ ಭಕ್ತರ ಪ್ರವೇಶಕ್ಕೆ ಮುಕ್ತ ಅವಕಾಶ ಕಲ್ಪಿಸಿದ್ದರಿಂದ ಸಾವಿರಾರು ಮಂದಿ ಬೆಟ್ಟಕ್ಕೆ ಭೇಟಿ ನೀಡಿ ತಾಯಿಯ ದರ್ಶನ ಪಡೆದರು. ಇದರಿಂದ ಬೆಟ್ಟದಲ್ಲಿ ಭಕ್ತರ ದಂಡೇ ನೆರಿದತ್ತು. ಚಳಿ, ಮಂಜನ್ನೂ ಲೆಕ್ಕಿಸದೇ ಮುಂಜಾನೆಯಿಂದಲೇ ಬೆಟ್ಟಕ್ಕೆ ದಾವಿಸಿ ಬಂದ ಭಕ್ತರು ಸರತಿ ಸಾಲಿನಲ್ಲಿ ನಿಂತು ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿ ಹೊಸ ವರ್ಷ ಶುಭ ತರಲಿ ಎಂದು ಪ್ರಾರ್ಥಿಸಿದರು ಇನ್ನು ನಗರದ ಅಂಬಾವಿಲಾಸ ಅರಮನೆಗೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಿದ್ದರು.


Spread the love