Home Mangalorean News Kannada News ಅರಿಶಿಣಮಕ್ಕಿ ಪ್ರಕರಣ ವಿಧಾನ ಪರಿಷತ್ ಶೂನ್ಯವೇಳೆಯಲ್ಲಿ ಕಾರ್ಣಿಕ್ ಪ್ರಸ್ತಾಪ

ಅರಿಶಿಣಮಕ್ಕಿ ಪ್ರಕರಣ ವಿಧಾನ ಪರಿಷತ್ ಶೂನ್ಯವೇಳೆಯಲ್ಲಿ ಕಾರ್ಣಿಕ್ ಪ್ರಸ್ತಾಪ

Spread the love

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ಅರಿಸಿನ ಮಕ್ಕಿ ಹಸ್ತ್ಯಡ್ಕದಲ್ಲಿ ರೈತ ಕುಟುಂಬದ ಮೇಲೆ ರಾಜಕೀಯ ದ್ವೇಷದ ಹಿನ್ನೆಲೆಯಲ್ಲಿ ಸುಳ್ಳು ಕೇಸ್ ದಾಖಲಿಸಿ, ಪೊಲೀಸ್ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳಿಂದ ದೌರ್ಜನ್ಯ ನಡೆದಿರುವುದು ರಾಜ್ಯದಲ್ಲಿ ರೈತರು ತಮ್ಮ ಕೃಷಿ ಬದುಕಿನ ಹೋರಾಟದ ನಡುವೆ  ತಮ್ಮ ಕೃಷಿ ಭೂಮಿಯನ್ನು ಉಳಿಸಿಕೊಳ್ಳಲು ಅಸಮರ್ಥರಾಗಿರುವಂಥಹ ವಾತಾವರಣಕ್ಕೆ ಒಂದು ಸ್ಪಷ್ಟ ನಿದರ್ಶನವಾಗಿದೆ ಎಂದು ಕ್ಯಾಪ್ಟನ್ ಗಣೇಶ್ ಕಾರ್ಣಿಕ್‍ರವರು ವಿಧಾನ ಪರಿಷತ್ ಶೂನ್ಯವೇಳೆಯಲ್ಲಿ ಪ್ರಸ್ತಾಪಿಸಿದರು.

1958 ರಿಂದ ಅಡಕೆ ಮತ್ತು ರಬ್ಬರ್ ಕೃಷಿ ಮಾಡಿಕೊಂಡು ಬಂದಿರುವ ಬೆಳ್ತಂಗಡಿ ತಾಲ್ಲೂಕಿನ ಅರಿಸಿನ ಮಕ್ಕಿ             ಕೇಶವ್ ರಾವ್ ಕುಟುಂಬದ ಪಟ್ಟ ಜಾಗಕ್ಕೆ ಸಂಬಂಧಿಸಿದ ಕುಂಕ್ಕಿ ಜಾಗದಲ್ಲಿ ಅರಿಸಿನ ಮಕ್ಕಿ ಗ್ರಾಮ ಪಂಚಾಯತ್ ಬಲಾತ್ಕಾರವಾಗಿ ಸ್ಮಶಾನ ನಿರ್ಮಿಸಲು ಮುಂದಾಗಿದ್ದು, ಈ ಜಾಗದ ಕುರಿತಾಗಿ ಈ ಹಿಂದೆಯೇ ಕೇಶವ್ ರಾವ್ ಕುಟುಂಬದವರು ತಹಶೀಲ್ದಾರ್, ಅಸಿಸ್ಟೆಂಟ್ ಕಮೀಷನರ್ ಹಾಗೂ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದು, ಅದು ಜಿಲ್ಲಾಧಿಕಾರಿಗಳ ಕೋರ್ಟ್‍ನಲ್ಲಿ ವಿಚಾರಣೆಯ ಹಂತದಲ್ಲಿರುತ್ತದೆ.

ಯಾವುದೇ ನೋಟೀಸ್ ನೀಡದೆ ಗ್ರಾಮ ಪಂಚಾಯತ್ ಅಧಿಕಾರಿಗಳು ಪೊಲೀಸರ ಸಮೇತ ಆಗಮಿಸಿ ಜೆ.ಸಿ.ಬಿ ಬಳಸಿ ಕೇಶವ್ ರಾವ್ ಅವರು ಮಾಡಿದ ಕೃಷಿ ನಾಶ ಮಾಡುವ ಸಮಯದಲ್ಲಿ ಇದಕ್ಕೆ ಆಕ್ಷೇಪಿಸಿದರು ಎನ್ನುವ ಕಾರಣಕ್ಕಾಗಿ ಕೇಶವ್ ರಾವ್, ಅವರ ಸಹೋದರ ಹಾಗೂ 70 ವರ್ಷ ವಯಸ್ಸಿನ ತಾಯಿ ಲಕ್ಷ್ಮೀ ಅವರ ಮೇಲೆ ಹಲ್ಲೆ ನಡೆಸಿ ಬಂಧಿಸಿ ಉಪ್ಪಿನಂಗಡಿ ಪೊಲೀಸ್ ಠಾಣೆಗೆ ಕೊಂಡೋಯ್ದು ಚಿತ್ರ ಹಿಂಸೆ ನೀಡಿರುತ್ತಾರೆ. ಕೈಕಾಲುಗಳಿಗೆ ಕೋಳ ತೊಡಿಸಿ, ಮೈಮೇಲೆ ಬಾಸುಂಡೆ ಬರುವಂತೆ ಹೊಡೆದಿರುವುದನ್ನು ಕೇಶವ್ ರಾವ್ ಪತ್ರಕರ್ತರ ಮುಂದೆ ವಿವರಿಸಿದ್ದು, ಕರ್ತವ್ಯಕ್ಕೆ ಅಡ್ಡಿ, ಹಲ್ಲೆ ಮುಂತಾದ ಜಾಮೀನು ರಹಿತ ಪ್ರಕರಣಗಳನ್ನು ದಾಖಲಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದರೂ ನ್ಯಾಯಾಲಯ ನ್ಯಾಯವನ್ನು ಎತ್ತಿ ಹಿಡಿದು ಜಾಮೀನು ನೀಡಿರುತ್ತದೆ. ಪೊಲೀಸರ ಚಿತ್ರಹಿಂಸೆಯಿಂದ ಮೈಮೇಲೆ ಆದ ಗಾಯವನ್ನು ಪತ್ರಕರ್ತರ ಮುಂದೆ ಪ್ರದರ್ಶಿಸಿ ಶ್ರೀ ಕೇಶವ್ ರಾವ್, ಅವರ ತಾಯಿ ಲಕ್ಷ್ಮೀ, ಅವರ ಪತ್ನಿ ಅನುರಾಧ ಹಾಗೂ ಸಹೋದರರು ಕಣ್ಣೀರಿಟ್ಟು ನಮ್ಮ ಕೃಷಿ ಭೂಮಿಯನ್ನು ಉಳಿಸಿಕೊಡಿ ಎಂದು ವಿನಂತಿಸಿಕೊಂಡಿರುವುದು ಪತ್ರಿಕೆಗಳಲ್ಲಿ ವರದಿಯಾಗಿರುತ್ತದೆ.

ಶ್ರೀ ಕೇಶವ್ ರಾವ್ ಅವರ ಜಮೀನಿನ ಸುತ್ತ ಸುಮಾರು 40 ಎಕರೆಗಳ ಸರ್ಕಾರಿ ಜಮೀನು ಲಭ್ಯವಿದ್ದರು, ರಾಜಕೀಯ ದ್ವೇಷದ ಹಿನ್ನಲೆಯಲ್ಲಿ ಸ್ಥಳೀಯ ಮುಖಂಡರ ಒತ್ತಡಕ್ಕೆ ಮಣಿದು ಪೊಲೀಸ್ ಇಲಾಖೆಯು ಕಂದಾಯ ಇಲಾಖೆಯ ಅಧಿಕಾರಿಗಳೊಂದಿಗೆ ಶಾಮೀಲಾಗಿ ರೈತ ಕುಟುಂಬದ ಮೇಲೆ ದೌರ್ಜನ್ಯ ನಡೆಸಿ ಚಿತ್ರಹಿಂಸೆ ನೀಡಿರುವುದನ್ನು ರಾಜ್ಯ ರೈತ ಸಮುದಾಯದ ಪರವಾಗಿ ತೀವ್ರವಾಗಿ ಖಂಡಿಸುತ್ತಾ, ಕಾನೂನಿನ ರಕ್ಷಣೆ ಮಾಡಬೇಕಾಗಿರುವ ಪೊಲೀಸ್ ಇಲಾಖೆಯೇ ಕಾನೂನನ್ನು ಕೈಗೆತ್ತಿಕೊಂಡು ಕಾನೂನಿನ ದುರುಪಯೋಗ ಮಾಡಿರುವುದನ್ನು ಪ್ರಸ್ತಾಪಿಸುತ್ತಾ, ಶ್ರೀ ಕೇಶವ್ ರಾವ್ ಕುಟುಂಬದ ಮೇಲೆ ದೌರ್ಜನ್ಯ ಎಸಗಿ ಚಿತ್ರಹಿಂಸೆ ನೀಡಿರುವ ಪೊಲೀಸ್ ಸಿಬ್ಬಂದಿಯನ್ನು ಗುರುತಿಸಿ ಸೂಕ್ತ ಕಾನೂನಿನ ಕ್ರಮ ಕೈಗೊಳ್ಳುವಂತೆ ಹಾಗೂ ನೊಂದ ರೈತ ಕುಟುಂಬಕ್ಕೆ ಸಾಂತ್ವಾನ ಹೇಳಿ ಪರಿಹಾರ ನೀಡಿ, ಕೂಡಲೇ ನ್ಯಾಯ ಒದಗಿಸುವಂತೆ ವಿಧಾನ ಪರಿಷತ್ತಿನ ಶೂನ್ಯವೇಳೆಯಲ್ಲಿ ಸರಕಾರವನ್ನು ಒತ್ತಾಯಿಸಿದರು.

 


Spread the love

Exit mobile version