
ಅರುಣ್ ಪುತ್ತಿಲಗೆ ಲೋಕಸಭಾ ಟಿಕೇಟ್ ನೀಡುವಂತೆ ‘ಪುತ್ತಿಲ ಫಾರ್ ಎಂಪಿ 2024’ ಅಭಿಯಾನ
ಮಂಗಳೂರು: ಕರಾವಳಿ ಭಾಗದಲ್ಲಿ ಅರುಣ್ ಪುತ್ತಿಲ ಹವಾ ಮತ್ತಷ್ಟು ಹೆಚ್ಚಾಗಿದೆ. ವಿಧಾನಸಭೆ ಚುನಾವಣೆ ಮುಗಿದು ಇದೀಗ ಲೋಕಸಭಾ ಎಲೆಕ್ಷನ್ ಬಿಸಿ ಹೆಚ್ಚಾಗಿದೆ. ಅರುಣ್ ಪುತ್ತಿಲಗೆ ಎಂಪಿ ಟಿಕೆಟ್ ನೀಡಲು ಅಭಿಯಾನ ಆರಂಭವಾಗಿದೆ. ಮಂಗಳೂರಿನಾದ್ಯಂತ ನಮ್ಮ ಮುಂದಿನ ಸಂಸದರು ಅರುಣ್ ಕುಮಾರ್ ಪುತ್ತಿಲ ಎಂದು ಅಭಿಯಾನ ಆರಂಭವಾಗಿದೆ.
ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿ ಕಾಂಗ್ರೆಸ್ಗೆ ಪ್ರಬಲ ಪೈಪೋಟಿ ನೀಡುವುದರ ಜೊತೆಗೆ ಬಿಜೆಪಿಯನ್ನು ಪ್ರಶ್ನಿಸುವಂತೆ ಮಾಡಿರುವ ಬಿಜೆಪಿ ಬಂಡಾಯ ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ಅಭಿಮಾನಿಗಳು ಇದೀಗ ಮುಂಬರುವ ಲೋಕಸಭಾ ಚುನಾವಣೆಯತ್ತ ಗಮನ ಹರಿಸಿದ್ದಾರೆ.
ಪುತ್ತಿಲ ಮತ್ತು ಅವರ ಅಭಿಮಾನಿ ಬೆಂಬಲಿಗರ ಬಳಗವು 2024ರ ಲೋಕಸಭಾ ಚುನಾವಣೆಯತ್ತ ದೃಷ್ಟಿಹಾಯಿಸುತ್ತಿದೆ ಎಂಬ ಮಾತು ಕೇಳಿ ಬರುತ್ತಿದೆ. ‘ಪುತ್ತೂರಿಗೆ ಪುತ್ತಿಲ’ ವಾಟ್ಸಪ್ ಗ್ರೂಪುಗಳ ಲಾಂಛನ ಬದಲಾಗಿದೆ. ತುಳುನಾಡಿಗೆ ಪುತ್ತಿಲ ಎಂಬ ಆ್ಯಪ್ ಬಂದಿದೆ. ಅಲ್ಲದೆ ಆ್ಯಟ್ ಪುತ್ತಿಲ ಫಾರ್ ಎಂಪಿ 2024 ಇನ್ಸ್ಟಾಗ್ರಾಂ ಖಾತೆ ಆರಂಭಗೊಂಡಿದೆ.
ಅರುಣ್ ಪುತ್ತಿಲ ಪುತ್ತೂರಿನಲ್ಲಿ ಬಿಜೆಪಿಯನ್ನೇ ಮೂರನೇ ಸ್ಥಾನಕ್ಕೆ ತಳ್ಳಿದ್ದಾರೆ. ಪುತ್ತಿಲ ಮತ ಬೇಟೆಯ ಬಗ್ಗೆ ಬಿಜೆಪಿ ಹೈಕಮಾಂಡ್ಗೂ ಮಾಹಿತಿ ಇದೆ. ಸದ್ಯ ಅಭಿಯಾನದ ಮೂಲಕ ಮತ್ತೊಮ್ಮೆ ಶಕ್ತಿ ಪ್ರದರ್ಶನಕ್ಕೆ ಪುತ್ತಿಲ ಅಭಿಮಾನಿಗಳು ಮುಂದಾಗಿದ್ದಾರೆ.
ಪುತ್ತಿಲಗೆ ದ.ಕ ಲೋಕಸಭಾ ಸಂಸದ ಸ್ಥಾನದ ಟಿಕೆಟ್ ನೀಡಲು ಅಭಿಯಾನ ನಡೆಯುತ್ತಿದೆ. ಸದ್ಯ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕಟೀಲ್ ದ.ಕ ಲೋಕಸಭಾ ಸಂಸದರಾಗಿದ್ದಾರೆ. ಈ ಬಾರಿ ಕಟೀಲ್ ಬದಲಿಸಿ ಪುತ್ತಿಲಗೆ ಟಿಕೆಟ್ ನೀಡಲು ಅಭಿಯಾನ ನಡೆಯುತ್ತಿದೆ.