ಅಲ್ಪಸಂಖ್ಯಾತ ಆಯೋಗದಲ್ಲಿ ಎಲ್ಲರಿಗೂ ಪ್ರಾತಿನಿಧ್ಯ ನೀಡಬೇಕು – ಡಾ.ಅನಿಲ್ ಥಾಮಸ್

Spread the love

ಅಲ್ಪಸಂಖ್ಯಾತ ಆಯೋಗದಲ್ಲಿ ಎಲ್ಲರಿಗೂ ಪ್ರಾತಿನಿಧ್ಯ ನೀಡಬೇಕು – ಡಾ.ಅನಿಲ್ ಥಾಮಸ್

ಮೈಸೂರು: ಅಲ್ಪಸಂಖ್ಯಾತರಿಗೆ ಸಂಬಂಧಿಸಿದ ಆಯೋಗ ಮೊದಲಾದ ಕಚೇರಿಗಳಲ್ಲಿ ಒಂದು ಧರ್ಮದವರಷ್ಟೆ ಅಧಿಕಾರಿಗಳು ಹಾಗೂ ನೌಕರರು ಇರುತ್ತಾರೆ. ಕ್ರೈಸ್ತ, ಜೈನ, ಸಿಖ್, ಪಾರ್ಸಿ ಮೊದಲಾದವರ ಪ್ರಾತಿನಿಧ್ಯ ಸಿಕ್ಕಿಲ್ಲ ಆದ್ದರಿಂದ ಎಲ್ಲರಿಗೂ ಪ್ರಾತಿನಿಧ್ಯ ಸಿಗುವಂತಾಗಬೇಕು ಎಂದು ಬಿಜೆಪಿ ಅಲ್ಪಸಂಖ್ಯಾತರ ಮೋರ್ಚಾದ ರಾಜ್ಯ ಕಾರ್ಯದರ್ಶಿ ಡಾ.ಅನಿಲ್ ಥಾಮಸ್ ಒತ್ತಾಯಿಸಿದ್ದಾರೆ.

ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಅಬ್ದುಲ್ ಅಜೀಂ ಅಧ್ಯಕ್ಷತೆಯಲ್ಲಿ ಜಿ.ಪಂ ಸಭಾಂಗಣದಲ್ಲಿ ಬುಧವಾರ ನಡೆದ ಅಲ್ಪಸಂಖ್ಯಾತ ಸಮುದಾಯದ ಮುಖಂಡರೊಂದಿಗೆ ಕೋಮು ಸೌಹಾರ್ದ ಸಭೆಯಲ್ಲಿ ಅವರು ಮಾತನಾಡಿ ಅಧ್ಯಕ್ಷರ ನೇಮಕದ ವಿಚಾರದಲ್ಲೂ ಹೀಗೆಯೇ ಆಗಿದೆ. ಆವರ್ತನ ರೀತಿಯಲ್ಲಿ ಅವಕಾಶ ದೊರೆಯಬೇಕು. ಜಿಲ್ಲಾ ಮಟ್ಟದ ಅಧಿಕಾರಿಗಳ ವಿಷಯದಲ್ಲೂ ಹೀಗೆಯೇ ಆಗಬೇಕು ಎಂದು ಆಗ್ರಹಿಸಿದರು.

ಇದೇ ವೇಳೆ ಸಭೆಯಲ್ಲಿ ಜಾತಿ-ಆದಾಯ ಪ್ರಮಾಣಪತ್ರ, ವಿದ್ಯಾರ್ಥಿವೇತನ ಪಡೆಯುವಲ್ಲಿ ಆಗುತ್ತಿರುವ ತೊಂದರೆಗಳನ್ನು ನಿವಾರಿಸಬೇಕು. ಪ್ರತ್ಯೇಕ ಸ್ಮಶಾನ ಭೂಮಿ ಒದಗಿಸಬೇಕು. ಸೌಲಭ್ಯಕ್ಕಾಗಿ ಅಲೆದಾಡಿಸಬಾರದು. ಪಾಸ್ಟರ್‌ಗಳಿಗೆ ಕಿರುಕುಳ ಕೊಡುವುದನ್ನು ತಡೆಯಬೇಕು. ಬಸದಿಗಳ ಗಡಿ ಸಮೀಕ್ಷೆ ನಡೆಸಿ ರಕ್ಷಿಸಬೇಕು. ತಾಲೂಕುಗಳಲ್ಲಿ ಕ್ರೈಸ್ತರಿಗೆ ಸಮುದಾಯ ಭವನ ನಿರ್ಮಿಸಬೇಕು ಎಂಬ ಒತ್ತಾಯಗಳು ಕೇಳಿ ಬಂದವು.

ಜೈನ ಸಮುದಾಯದ ಮುಖಂಡ ಸುರೇಶ್‌ಕುಮಾರ್ ಜೈನ್ ಮಾತನಾಡಿ, ಜೈನರಲ್ಲಿ ದಿಗಂಬರ ಹಾಗೂ ಶ್ವೇತಾಂಬರರಲ್ಲಿ ಉಪಜಾತಿಗಳಿವೆ. ಆದರೆ, ಅದು ನಮೂದಾಗುತ್ತಿಲ್ಲ. ಆದ್ದರಿಂದ, ಜನಗಣತಿ ನಮೂನೆಯಲ್ಲೇ ಉಪ ಜಾತಿಗಳನ್ನು ನಮೂದಿಸಬೇಕು. ದಿಗಂಬರ ಪ್ರಮಾಣಪತ್ರ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಮೈಸೂರಿನಲ್ಲಿ ಜೈನರಿಗೆ ಪ್ರತ್ಯೇಕ ಸ್ಮಶಾನ ಭೂಮಿ ಇಲ್ಲ. ಸರ್ಕಾರದಿಂದ ಜಾಗ ಒದಗಿಸಿದರೆ, ಸಮಾಜದಿಂದಲೇ ನಿರ್ವಹಣೆ ಮಾಡಿಕೊಳ್ಳುತ್ತೇವೆ ಎಂದು ತಿಳಿಸಿದರು. ಜೈನರ ಬಸದಿ, ದೇವಸ್ಥಾನ ಮೊದಲಾದ ಆಸ್ತಿಗಳ ಗಡಿ ಸಮೀಕ್ಷೆ ನಡೆಸಬೇಕು. ಎಷ್ಟೋ ಜಾಗಗಳು ನಮಗೇ ಸೇರಿದ್ದರೂ ಬಹುಸಂಖ್ಯಾತರ ಮುಂದೆ ನಾವು ಮಾತನಾಡಲಾಗದ ಸ್ಥಿತಿ ಇದೆ. ಚಾಮುಂಡಿಬೆಟ್ಟದ ದೇವಸ್ಥಾನ ಜೈನರಿಗೆ ಸೇರಿದ್ದು. ಹೀಗೆ ಅನೇಕ ನಿದರ್ಶನಗಳಿವೆ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷ ಅಜೀಂ, ಜನಗಣತಿ ನಮೂನೆಯಲ್ಲಿ ಉಪ ಜಾತಿ ನಮೂದಿಸುವಂತೆ ಸೂಚಿಸಲಾಗುವುದು. ಸ್ಮಶಾನಗಳಿಗೆ ಜಾಗ ಕೊಡಬೇಕು. ಇಲ್ಲದಿದ್ದರೆ ಖರೀದಿಸಿಕೊಡಬೇಕು ಎಂದು ತಹಶೀಲ್ದಾರ್‌ಗಳಿಗೆ ಸರ್ಕಾರ ಆದೇಶಿಸಿದೆ. ಬಸದಿಗಳ ಗಡಿ ಸಮೀಕ್ಷೆಗೂ ಸೂಚಿಸಲಾಗಿದೆ ಎಂದು ತಿಳಿಸಿದರು.

ನಿಸ್ವಾರ್ಥ ಸೇವೆ ಮಾಡುತ್ತಿರುವ ಕ್ರೈಸ್ತ ಸಂಘಸಂಸ್ಥೆಗಳವರು ಸೌಲಭ್ಯ ಪಡೆಯಬೇಕಾದರೆ ಕಚೇರಿಗಳಿಗೆ ಅಲೆಯಬೇಕಾದ ಸ್ಥಿತಿ ಇದೆ. ಇದು ತಪ್ಪಬೇಕು. ನಿಸ್ವಾರ್ಥ ಸೇವೆಯನ್ನು ಅಗೌರವಿಸದೆ ಅಧಿಕಾರಿಗಳೇ ಹೋಗಿ ಸೌಲಭ್ಯ ಕಲ್ಪಿಸುವಂತಾಗಬೇಕು. ಈಗಿನದ್ದು ಬಿಜೆಪಿ ಸರ್ಕಾರ, ಕ್ರೈಸ್ತರಿಗೆ ಆದ್ಯತೆ ಕೊಡಲಾಗುವುದಿಲ್ಲ ಎನ್ನುವ ಉತ್ತರವನ್ನು ಅಧಿಕಾರಿಯೊಬ್ಬರು ನೀಡಿದ್ದಾರೆ. ಇಂಥದ್ದು ಸರಿಯಲ್ಲ. ಕಚೇರಿಗಳನ್ನು ಲಂಚದಿಂದ ಮುಕ್ತಗೊಳಿಸಬೇಕು ಎಂದು ಆಗ್ರಹಿಸಿದರು.

ಸಮಸ್ಯೆಗಳಿದ್ದಲ್ಲಿ ನೇರವಾಗಿ ಆಯೋಗದ ಕಚೇರಿ ಸಂಪರ್ಕಿಸಬೇಕು. ಸೌಹಾರ್ದ ಕಾಪಾಡಿಕೊಳ್ಳಬೇಕು. ಪೊಲೀಸ್ ಭದ್ರತೆ ಬೇಕಿದ್ದಲ್ಲಿ ನೇರವಾಗಿ ನನ್ನನ್ನೇ ಸಂಪರ್ಕಿಸಿ ಎಂದು ಅಧ್ಯಕ್ಷ ಅಜೀಂ ಹೇಳಿದರು. ಇದೇ ವೇಳೆ ಆಯೋಗದ ಕಾರ್ಯದರ್ಶಿ ಸಲ್ಮಾ ಫಿರ್ದೋಸ್ ಇದ್ದರು.


Spread the love