
ಅವ್ಯವಸ್ಥೆಗಳನ್ನು ಸರಿಪಡಿಸಿ ಹೊಸ ನೀತಿ ಜಾರಿಗೊಳಿಸಲಿ: ಕೆ.ಎಸ್.ಬಿ.ಸಿ.ಎಲ್ ನ ಹೊಸ ನಿಯಮದ ವಿರುದ್ದ ಭುಗಿಲೆದ್ದ ಆಕ್ರೋಶ
ಕುಂದಾಪುರ: ಮದ್ಯ ಖರೀದಿಸಲು ಕರ್ನಾಟಕ ರಾಜ್ಯ ಪಾನೀಯ ನಿಗಮ(ಕೆ.ಎಸ್.ಬಿ.ಸಿಎಲ್) ಹೊಸ ನಿಯಮ ಜಾರಿಗೊಳಿಸಿದ ಪರಿಣಾಮ ಗ್ರಾಮೀಣ ಭಾಗದ ಪರವಾನಿಗೆದಾರರು ಸಂಕಷ್ಟ ಎದುರಿಸುತ್ತಿದ್ದಾರೆ ಎಂದು ಆರೋಪಿಸಿ ಒಂದು ತಿಂಗಳವರೆಗಾದರೂ ಹಳೆ ನಿಯಮದಂತೆ ಮದ್ಯ ಖರೀದಿಸಲು ಅವಕಾಶ ಮಾಡಿಕೊಡಬೇಕೆಂದು ಆಗ್ರಹಿಸಿ ಉಡುಪಿ ಜಿಲ್ಲಾ ವೈನ್ಸ್ ಮರ್ಚೆಂಟ್ಸ್ ಅಸೋಸಿಯೇಶನ್ ವತಿಯಿಂದ ಕೋಟೇಶ್ವರ ಸಮೀಪದಲ್ಲಿರುವ ಕೆ.ಎಸ್.ಬಿ.ಸಿ.ಎಲ್ ಡಿಪೋ ಎದುರು ಬುಧವಾರ ಪ್ರತಿಭಟನೆ ನಡೆಯಿತು.
ಕರ್ನಾಟಕ ರಾಜ್ಯ ಪಾನೀಯ ನಿಗಮದ ಹೊಸ ನೀತಿಯಿಂದಾಗಿ ಎಲ್ಲರೂ ಹೈರಾಣಾಗಿದ್ದೇವೆ. ವೆಬ್ ಇಂಡೆಂಟಿಂಗ್ ಮೂಲಕ ಮದ್ಯ ಖರೀದಿಸುವ ವ್ಯವಸ್ಥೆಯನ್ನು ಏಕಾಏಕಿಯಾಗಿ ಜಾರಿಗೊಳಿಸಲಾಗಿದೆ. ಹೊಸ ನಿಯಮಗಳಿಂದ ಉಂಟಾಗುವ ಸಾಧಕ-ಬಾಧಕಗಳ ಕುರಿತು ಚರ್ಚಿಸದೆ ಸಾಕಷ್ಟು ವಿರೋಧದ ನಡುವೆಯೂ ಹೊಸ ನಿಯಮವನ್ನು ಜಾರಿಗೊಳಿಸಿರುವುದು ಖಂಡನೀಯ.
ಹೊಸ ನಿಯಮದಂತೆ ರಾತ್ರಿ ಒಂಭತ್ತರಿಂದ ಬೆಳಿಗ್ಗೆ ಒಂಭತ್ತು ಗಂಟೆಯ ತನಕ ಪರ್ಮಿಟ್ ಮಾಡಲು ಅವಕಾಶ ಕಲ್ಪಿಸಲಾಗಿದೆ. ಈ ಸಮಯದಲ್ಲಿ ವೆಬ್ ಸೈಟ್ ಸರಿಯಾಗಿ ಕಾರ್ಯಾಚರಿಸುತ್ತಿಲ್ಲ. ಬೆಳಿಗ್ಗೆ ಮೂರು ಗಂಟೆಯಾದರೂ ಸರ್ವರ್ ಸಮಸ್ಯೆಗಳಿಂದಾಗಿ ವೆಬ್ ಸೈಟ್ ಕೈ ಕೊಡುತ್ತಿದೆ. ಇದರಿಂದಾಗಿ ತಡ ರಾತ್ರಿಯವರೆಗೂ ದುಡಿದು ಮತ್ತೆ ನಿದ್ದೆ ಬಿಡಬೇಕಾದ ಪರಿಸ್ಥಿತಿ ಬಂದೊದಗಿದೆ. ಹೊಸ ನಿಯಮಕ್ಕೆ ನಮ್ಮ ವಿರೋಧವಿಲ್ಲ. ಹೊಸ ನಿಯಮವನ್ನು ಜಾರಿಗೊಳಿಸುವುದಾದರೆ ಸರ್ವರ್ ಡೌನ್ ಮುಂತಾದ ಅವ್ಯವಸ್ಥೆಗಳನ್ನು ಸರಿಪಡಿಸಿ ಜಾರಿಗೊಳಿಸಲಿ. ಅದನ್ನು ಬಿಟ್ಟು ಏಕಾಏಕಿ ಜಾರಿಗೊಳಿಸದರೆ ಇದರಿಂದ ಗೊಂದಲ ಉಂಟಾಗುತ್ತದೆ. ಕನಿಷ್ಟ ಒಂದು ತಿಂಗಳ ಮಟ್ಟಿಗಾದರೂ ಹೊಸ ಹಾಗೂ ಹಳೆ ವ್ಯವಸ್ಥೆಯಲ್ಲೇ ಮದ್ಯ ಖರೀದಿಸಲು ಅವಕಾಶ ಮಾಡಿಕೊಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಬೆಂಗಳೂರಿನ ಕೆ.ಎಸ್.ಬಿ.ಸಿ.ಎಲ್ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಪಿ.ಸಿ ಜಾಫರ್ ಅವರಿಗೆ ಕೋಟೇಶ್ವರ ಡಿಪೋ ಮ್ಯಾನೇಜರ್ ಎಸ್.ಬಿ ಕಟ್ಟಿಮನಿ ಅವರ ಮೂಲಕ ಮನವಿ ನೀಡಲಾಯಿತು.
ಈ ವೇಳೆಯಲ್ಲಿ ಕುಂದಾಪುರ ತಾಲೂಕು ವೈನ್ ಮರ್ಚೆಂಟ್ಸ್ ಅಸೋಸಿಯೇಶನ್ ಅಧ್ಯಕ್ಷ ರೋಹಿತ್ ಕುಮಾರ್ ಶೆಟ್ಟಿ, ಉಪಾಧ್ಯಕ್ಷ ವೈ. ಕರುಣಾಕರ್ ಶೆಟ್ಟಿ, ಉಡುಪಿ ಜಿಲ್ಲಾ ವೈನ್ ಮೃಚೆಂಟ್ಸ್ ಅಸೋಸಿಯೇಶನ್ ಸಂಚಾಲಕ ಡೇರಿಕ್ ಮೊದಲಾದವರು ಇದ್ದರು.