
ಅಶ್ವತ್ಥನಾರಾಯಣ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲಿ: ಐವನ್ ಡಿಸೋಜ
ಮಂಗಳೂರು: ರಾಜ್ಯ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರ ವಿರುದ್ಧ ಪ್ರಚೋದನಕಾರಿ ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ ಅವರು ತಮ್ಮ ಸಚಿವ ಸ್ಥಾನಕ್ಕೆ ತಕ್ಷಣ ರಾಜೀನಾಮೆ ನೀಡಬೇಕು ಕೆಪಿಸಿಸಿ ಉಪಾಧ್ಯಕ್ಷ ಐವನ್ ಡಿಸೋಜ ಒತ್ತಾಯಿಸಿದ್ದಾರೆ.
ನಗರದಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿವ ಅಶ್ವತ್ಥನಾರಾಯಣ ವಿರುದ್ಧ ಭಾರತೀಯ ದಂಡ ಸಂಹಿತೆ 352ರ ಪ್ರಕಾರ ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಸಚಿವರೊಬ್ಬರು ಈ ರೀತಿ ಪ್ರಚೋದನಕಾರಿ ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ ಅವರ ವಿರುದ್ಧ ಸ್ವಯಂ ಪ್ರೇರಿತರಾಗಿ ಪೊಲೀಸರು ಪ್ರಕರಣ ದಾಖಲಿಸಬೇಕು. ರಾಜ್ಯಪಾಲರು ಈ ಪ್ರಕರಣದಲ್ಲಿ ಮಧ್ಯ ಪ್ರವೇಶಿಸಬೇಕು ಎಂದು ಐವನ್ ಆಗ್ರಹಿಸಿದರು.
ಸಚಿವ ಡಾ.ಅಶ್ವತ್ಥನಾರಾಯಣ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವವರೆಗೆ, ಅವರನ್ನು ಪೊಲೀಸರು ಬಂಧಿಸುವವರೆಗೆ ಕಾಂಗ್ರೆಸ್ ಪ್ರತಿಭಟನೆ ನಡೆಸಲಿದೆ ಎಂದು ಐವನ್ ಡಿಸೋಜ ತಿಳಿಸಿದರು.
ಟಿಪ್ಪುವಿನ ಬಗ್ಗೆ ಜನರಲ್ಲಿ ದ್ವೇಷ ಭಾವನೆ ಮೂಡಿಸುತ್ತಿರುವ ಅಶ್ವತ್ಥನಾರಾಯಣ ಅವರು, ಟಿಪ್ಪು ಪುಸ್ತಕ ಬಿಡುಗಡೆಗೊಳಿಸಿದ ಜಗದೀಶ್ ಶೆಟ್ಟರ್, ಟಿಪ್ಪು ಪೋಷಾಕು ಧರಿಸಿದ ಯಡಿಯೂರಪ್ಪರಿಗೂ ಸಿದ್ದರಾಮಯ್ಯರ ವಿರುದ್ಧ ನೀಡಿದ ಹೇಳಿಕೆಯನ್ನೇ ನೀಡುತ್ತಾರಾ ಎಂದು ಐವನ್ ಪ್ರಶ್ನಿಸಿದರು.