ಅ. 10 (ನಾಳೆ) ಶಂಕರ ಪ್ರತಿಷ್ಠಾನ ಉದ್ಘಾಟನೆ

Spread the love

ಅ. 10 (ನಾಳೆ) ಶಂಕರ ಪ್ರತಿಷ್ಠಾನ ಉದ್ಘಾಟನೆ

ಉಡುಪಿ: ಸುಮಾರು 5 ದಶಕಗಳಿಗೂ ಹೆಚ್ಚುಕಾಲ ಸಾಮಾಜಿಕ, ರಾಜಕೀಯ ಧಾರ್ಮಿಕ ಮುಂದಾಳು ಆಗಿದ್ದ ಪೆರ್ಣಂಕಿಲ ಶಂಕರ ನಾಯಕ್‌ ಸ್ಮರಣಾರ್ಥ ಶಂಕರ ಪ್ರತಿಷ್ಠಾನ ಎಂಬ ಸೇವಾ ಸಂಸ್ಥೆಯನ್ನು ಆರಂಭಿಸಲು ನಿರ್ಧರಿಸಲಾಗಿದ್ದು ಅಕ್ಟೋಬರ್‌ 10 ರಂದು ಇದರ ಉದ್ಘಾಟನೆ ಜರುಗಲಿದೆ.

ಪೆರ್ಣಂಕಿಲ ಎನ್ನುವುದು ಕಾಪು ತಾಲೂಕಿನ ಒಂದು ತೀರಾ ಗ್ರಾಮೀಣ ಪ್ರದೇಶ. ಇಲ್ಲಿನ ಕೃಷಿ ಕುಟುಂಬದಲ್ಲಿ ಹುಟ್ಟಿದ ದಿನಗಳ ಪೆರ್ಣಂಕಿಲ ಶಂಕರ ನಾಯಕ್ ಅವರು ಸುಮಾರು 5 ದಶಕಗಳಿಗೂ ಹೆಚ್ಚು ಕಾಲ ಸಾಮಾಜಿಕ, ರಾಜಕೀಯ, ಧಾರ್ಮಿಕ ಮುಂದಾಳುವಾಗಿ ಪ್ರಸಿದ್ಧರಾದವರು. ಜನಸಂಘ ನಂತರ ಭಾರತೀಯ ಜನತಾ ಪಕ್ಷದಲ್ಲಿ ಸಕ್ರಿಯರಾಗಿ, ಕಾಪು ಮತ್ತು ಉಡುಪಿ ತಾಲೂಕುಗಳ ಗ್ರಾಮೀಣ ಭಾಗಗಳಲ್ಲಿ ಪಕ್ಷವನ್ನು ಕಟ್ಟಿದವರು, ಬಂಟಕಲ್ಲು ದುರ್ಗಾಪರಮೇಶ್ವರಿ ಮತ್ತು ಇತರ ದೇವಸ್ಥಾನಗಳನ್ನು ಮುಂದಾಳುವಾಗಿ ಬೆಳೆಸಿದವರು. ಸಹಕಾರಿ ಧುರೀಣರಾಗಿ ಗ್ರಾಮೀಣ ಜನರ ಆರ್ಥಿಕ ಸ್ವಾವಲಂಬನೆಗಾಗಿ ದುಡಿದವರು, ಜಿಪಂ ಸದಸ್ಯರಾಗಿ ಜನರ ಸುಖದುಃಖಗಳಲ್ಲಿ ಬೆರೆತವರು.

ಗ್ರಾಮೀಣ ಪ್ರದೇಶದ ಜನರ ಕಷ್ಟ ಸಂಕಷ್ಟಗಳಿಗೆ ಸ್ಪಂದಿಸುತ್ತಾ ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾದ ಒಂದಷ್ಟು ಸೇವಾಕಾರ್ಯಗಳನ್ನು ಕೈಗೆತ್ತಿಕೊಳ್ಳಬೇಕು ಎಂಬ ಸದುದ್ದೇಶದಿಂದ ಪೆರಣಂಕಿಲ ಶಂಕರ ಪ್ರತಿಷ್ಠಾನ ಎಂಬ ಸೇವಾ ಸಂಸ್ಥೆಯನ್ನು ಆರಂಭಿಸಲು ಮುಂದಡಿ ಇಡಲಾಗಿದೆ

ಎಪ್ಪತ್ತರ ದಶಕದಲ್ಲಿ ಉಡುಪಿಯ ಅತ್ಯಂತ ಹಿಂದುಳಿದ ಪ್ರದೇಶಗಳಾಗಿದ್ದ ಪಟ್ಲ ಚಿತ್ರಬೈಲು, ಪೆರಂಕಿಲ ವರ್ವಾಡಿ ಮೊದಲಾದ ಹತ್ತಾರು ಊರುಗಳು ಕನಿಷ್ಠ ಮೂಲಭೂತ ಸೌಕರ್ಯಗಳು ಇಲ್ಲದೆ ನಲುಗಿ ಹೋಗಿದ್ದವು. ಶಿಕ್ಷಣ ಆರೋಗ್ಯ ರಸ್ತೆ ಮೊದಲಾದ ಸೌಕರ್ಯಗಳು ಈ ಭಾಗದ ಜನರಿಗೆ ಗಗನಕುಸುಮವಾಗಿತ್ತು. ನಾಗರೀಕ ಸಮಾಜದ ನಾಗಾಲೋಟದಲ್ಲಿ ಹಿಂದೆ ಉಳಿದಿದ್ದ ಈ ಭಾಗದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದವರಲ್ಲಿ ಅಗ್ರಗಣ್ಯರು ಶ್ರೀ ಪರಣಂಕಿಲ ಶಂಕರ್ ನಾಯಕ್ ಅವರು, ರಾಜ ಕಾರಣವೆನ್ನುವುದು ಕೇವಲ ಅಧಿಕಾರದ ಗದ್ದುಗೆ ಮಾತ್ರವಲ್ಲ ಅದರ ಮೂಲಕ ಸಾಧ್ಯವಿದೆ ಎನ್ನುವುದನ್ನು ತನ್ನ ಬದುಕಿನಲ್ಲಿ ನಿರೂಪಿಸಿದ ವ್ಯಕ್ತಿತ್ವ ಅವರದ್ದು. ಸಾಮಾಜಿಕ ಬದಲಾವಣೆಯನ್ನು ತರಲು ಗ್ರಾಮೀಣ ಪ್ರದೇಶದ ಮಕ್ಕಳಿಗೆ ಅನ್ನಕ್ಕಿಂತ ಅಕ್ಷರ ಮುಖ್ಯ ಎಂಬ ಪ್ರಶ್ನೆಯನ್ನು ಬೆಳೆಸಿ ಶಿಕ್ಷಣದ ಮಹಾ ಕ್ರಾಂತಿಗೆ ನಾಂದಿ ಹಾಡಿದ ಶಂಕರ್ ನಾಯಕ್ ಅವರು ಹಲವಾರು ಶಾಲೆಗಳಿಗೆ ಪೋಷಕರಾಗಿ ನಿಂತು ಶಿಕ್ಷಣ ವ್ಯವಸ್ಥೆಯನ್ನು ಬಲಗೊಳಿಸಿದರು.

ಪೆರ್ಣಂಕಿಲ ದಲ್ಲಿ ಬಡವರ ಮನೆಗಳಿಗೆ ಕಷ್ಟಗಳು ಒತ್ತರಿಸಿಕೊಂಡು ಬಂದಾಗ ಅವರಿಗೆ ಆಶಾಕಿರಣದಂತೆ ಗೋಚರಿಸುತ್ತಿದ್ದರು ಶಂಕರ್ ನಾಯಕ್, ಹೀಗೆ ಪರೋಪಕಾರಾರ್ಥಂ ಇದಂ ಶರೀರಂ ಎಂಬ ಸುಭಾಷಿತದ ಮಾತಿನಂತೆ ತನ್ನ ಬದುಕಿನ ಬಹುಭಾಗವನ್ನು ಸಮಾಜದ ಸೇವೆಯಲ್ಲಿ ಕಳೆದು ಕಾಯ ಅಳಿದರೂ ಕೀರ್ತಿಯನ್ನು ಉಳಿಸಿ ಹೋದ ಪೆರ್ಣಂಕಿಲ ಶಂಕರ್‌ ನಾಯಕ್ ಅವರ ಸಮಾಜ ಸೇವೆಯ ಹಾದಿಯಲ್ಲಿ ಎರಡು ಹೆಜ್ಜೆ ಇಡುವ ಪುಟ್ಟ ಪ್ರಯತ್ನ ಇದಾಗಿದೆ.

ಈ ಸಂಸ್ಥೆಯ ಮೂಲ ಉದ್ದೇಶ ಗ್ರಾಮೀಣ ಪ್ರದೇಶದಲ್ಲಿ ಆರ್ಥಿಕವಾಗಿ ಹಿಂದುಳಿದ ಫಲಾನುಭವಿಗಳನ್ನು ಗುರುತಿಸಿ ಅವರಿಗೆ ಶಿಕ್ಷಣ ಆರೋಗ್ಯ ಮತ್ತು ಮೂಲಭೂತ ಸೌಕರ್ಯಗಳನ್ನು ಒದಗಿಸುವುದಾಗಿದೆ. ಇದರ ಜೊತೆಗೆ ಪರ್ಯಾವರಣವನ್ನು ಉಳಿಸಿ ಬೆಳೆಸುವ ಸಂಕಲ್ಪವನ್ನು ನಾವು ಕೊಟ್ಟಿದ್ದೇವೆ. ನೆಲ-ಜಲ ಪರ್ಯಾವರಣದ ಪರಿಶುದ್ಧತೆ ಮತ್ತು ಗೋ ರಕ್ಷಣೆ ಗೆ ಪರಿಣಾಮಕಾರಿ ಕಾರ್ಯಕ್ರಮಗಳನ್ನು ನಮ್ಮ ಈ ಸಂಸ್ಥೆ ಹಮ್ಮಿಕೊಳ್ಳಲಿದೆ. ಸಾಮಾಜಿಕ ಸಂಘಟನೆ ಮತ್ತು ಯುವಪೀಳಿಗೆಯಲ್ಲಿ ಸಂಸ್ಕಾರವನ್ನು ರೂಪಿಸುವ ನಿಟ್ಟಿನಲ್ಲಿ ಮಾಹಿತಿ ಶಿಬಿರಗಳು, ಧಾರ್ಮಿಕ ಸಂಗಗಳು, ಗ್ರಾಮವಿಕಾಸದ ಪರಿಕಲ್ಪನೆಯಲ್ಲಿ ದುಶ್ಚಟ ಮುಕ್ತ ಸಮಾಜ ನಿರ್ಮಾಣಕ್ಕೆ ಕಾರ್ಯಾಗಾರ ಹೀಗೆ ಅನೇಕ ಕನಸುಗಳು ಮುಂದಿವೆ.

ಈ ಪ್ರತಿಷ್ಠಾನವನ್ನು ಅಕ್ಟೋಬರ್ 10, ಆದಿತ್ಯವಾರದಂದು ಬೆಳಿಗ್ಗೆ 11 ಗಂಟೆಗೆ ಪೆರ್ಣಂಕಿಲ ಗ್ರಾಮದ ಪಡುಬೆಟ್ಟು ಎಂಬಲ್ಲಿ ಕೊಪ್ಪ ಗೌರಿಗದ್ದೆಯ ಅವಧೂತ ಶ್ರೀ ವಿನಯ ಗುರೂಜಿ ಅವರು ಉದ್ಘಾಟಿಸಲಿದ್ದಾರೆ. ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರು ಸಾನಿಧ್ಯ ವಹಿಸಿ ಆಶೀರ್ವಚನ ನೀಡಲಿದ್ದಾರೆ ಎಂದು ಟ್ರಸ್ಟಿನ ವಿಸ್ವಸ್ಥರಾದ ಪೆರ್ಣಂಕಿಲ ಶ್ರೀಶ ನಾಯಕ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love