ಅ.30, ಬಿಜೆಪಿ ಹಿಂದುಳಿದ ವರ್ಗಗಳ ಬೃಹತ್ ಸಮಾವೇಶ

Spread the love

ಅ.30, ಬಿಜೆಪಿ ಹಿಂದುಳಿದ ವರ್ಗಗಳ ಬೃಹತ್ ಸಮಾವೇಶ

ರಾಮನಗರ: ಅಕ್ಟೋಬರ್ 30 ರಂದು ಕಲ್ಬುರ್ಗಿಯಲ್ಲಿ ಬಿಜೆಪಿ ಆಯೋಜಿಸಿರುವ ಹಿಂದುಳಿದ ವರ್ಗಗಳ ಬೃಹತ್ ಸಮಾವೇಶವು ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಲಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು.

ನಗರದ ರಾಯರದೊಡ್ಡಿಯಲ್ಲಿನ ಖಾಸಗಿ ಕಲ್ಯಾಣ ಮಂಟಪದಲ್ಲಿ ಜಿಲ್ಲಾ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಆಯೋಜಿಸಿದ್ದ ಜಾಗೃತಿ ಸಮಾವೇಶದ ಪೂರ್ವಭಾವಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಲ್ಬುರ್ಗಿಯ ಸಮಾವೇಶದಿಂದ ರಾಜ್ಯದಲ್ಲಿ ಹಿಂದುಳಿದ ವರ್ಗದವರು ಒಟ್ಟಾಗಿರುತ್ತೇವೆ ಎಂಬ ಸಂದೇಶ ರವಾನೆಯಾಗಲಿದೆ. ಅಲ್ಲದೆ ಮುಂಬರುವ 2023ರ ವಿಧಾನಸಭಾ ಚುನಾವಣೆಗೆ ಇದು ದಿಕ್ಸೂಚಿ ಆಗಲಿದೆ ಎಂದರು.

ಹಿಂದುಳಿದ ವರ್ಗಗಳಲ್ಲಿ 208 ಮುಖ್ಯ ಜಾತಿಗಳಿದ್ದು, 675ಉಪಜಾತಿಗಳಿವೆ. ಎಲ್ಲವೂ ಒಟ್ಟಾಗಿ ಭಾಗಿಯಾಗುವ ಮೂಲಕ ನಮ್ಮ ಸಂಘಟನೆ, ಸಾಮರ್ಥ್ಯ, ಶಕ್ತಿ ಪ್ರದರ್ಶನ ಮಾಡಬೇಕಿದೆ. ಆ ಮೂಲಕ ಬಿಜೆಪಿ ನೇತೃತ್ವದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಶಕ್ತಿ ತುಂಬಬೇಕಾಗಿದೆ. ನಾಡಿನ ಅಭಿವೃದ್ಧಿ ಮತ್ತು ಜನರ ಸೇವೆಗಾಗಿ ನೀಡಿರುವ ಅವಕಾಶವನ್ನು ಸದ್ಬಳಕೆ ಮಾಡಿಕೊಂಡು ಜನರಿಗೆ ಸೌಲಭ್ಯ ಕಲ್ಪಿಸಿ ಬದುಕು ಕಟ್ಟಿಕೊಡುವ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತಂದಿವೆ ಎಂದು ತಿಳಿಸಿದರು.

ಮುಂದಿನ ದಿನಗಳಲ್ಲಿ ಚುನಾವಣೆಗಳು ಅಭಿವೃದ್ಧಿಯ ಆಧಾರದ ಮೇಲೆ ನಡೆಯುವುದಿಲ್ಲ. ಭಯೋತ್ಪಾದಕರನ್ನು ವಿರೋಧಿಸುವ ಹಾಗೂ ಬೆಂಬಲಿಸುವರ ವಿರುದ್ಧ ನಡೆಯಲಿದೆ. ಬಿಜೆಪಿ ಸರ್ಕಾರ ಭಯೋತ್ಪಾದನೆ ಉಂಟು ಮಾಡುವ ಶಕ್ತಿಗಳನ್ನು ಮಟ್ಟ ಹಾಕಲು ಸಮರ್ಥವಾಗಿದೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

ರಷ್ಯಾ, ಅಮೇರಿಕಾ, ಬ್ರಿಟನ್, ಜಪಾನ್ ನಂತಹ ರಾಷ್ಟ್ರಗಳು ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿವೆ. ಬಿಜೆಪಿಯಿಂದ ಆಯ್ಕೆಯಾದ ಪ್ರಧಾನಿ ನರೇಂದ್ರ ಮೋದಿರವರು ಉತ್ತಮ ನಾಯಕತ್ವದಿಂದ ವಿಶ್ವನಾಯಕನಾಗಿರುವುದು ಹೆಮ್ಮಯ ವಿಷಯ ಎಂದರು.

ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್, ಹಿರಿಯೂರು ಶಾಸಕಿ ಪೂರ್ಣಿಮ, ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶಿವಮಾದು, ಮಾಗಡಿ ಯೋಜನಾ ಪ್ರಾಧಿಕಾರ ಅಧ್ಯಕ್ಷ ರಂಗಧಾಮಯ್ಯ, ಬಿಬಿಎಂಪಿ ವಿಪಕ್ಷ ಮಾಜಿ ನಾಯಕ ಬಸವರಾಜು, ಬಿಜೆಪಿ ಜಿಲ್ಲಾಧ್ಯಕ್ಷ ದೇವರಾಜು, ಡಿ.ನರೇಂದ್ರ, ಮಂಜು, ನಾರಾಯಣರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು.


Spread the love