ಆಡಳಿತ ವಿರೋಧ ಪಕ್ಷದ ನಡುವೆ ವಾಗ್ವಾದಕ್ಕೆ ಕಾರಣವಾದ ಕಿನ್ನಿಮೂಲ್ಕಿ ಮೀನು ಮಾರಾಟ ಶೆಡ್ ತೆರವು ಪ್ರಕರಣ

Spread the love

ಆಡಳಿತ ವಿರೋಧ ಪಕ್ಷದ ನಡುವೆ ವಾಗ್ವಾದಕ್ಕೆ ಕಾರಣವಾದ ಕಿನ್ನಿಮೂಲ್ಕಿ ಮೀನು ಮಾರಾಟ ಶೆಡ್ ತೆರವು ಪ್ರಕರಣ

ಉಡುಪಿ: ಎರಡು ದಿನಗಳ ಹಿಂದೆ ಕಿನ್ನಿಮೂಲ್ಕಿ ವಾರ್ಡಿನಲ್ಲಿ ಮೀನುಗಾರ ಮಹಿಳೆಯರಿಗೆ ನಿರ್ಮಿಸಿದ ತಾತ್ಕಾಲಿಕ ಶೆಡ್ ತೆರವು ಪ್ರಕರಣ ಮಂಗಳವಾರ ನಡೆದ ಉಡುಪಿ ನಗರಸಭೆಯ ಸಾಮಾನ್ಯ ಸಭೆಯಲ್ಲಿ ಆಡಳಿತ ಹಾಗೂ ಪ್ರತಿಪಕ್ಷದ ನಡುವೆ ತೀವ್ರ ವಾಗ್ವಾದಕ್ಕೆ ಕಾರಣವಾಯಿತು.

ನಗರಸಭೆಯ ನಾಮ ನಿರ್ದೇಶಿತ ಸದಸ್ಯ ದೇವದಾಸ್ ಶೆಟ್ಟಿಗಾರ್ ಅವರು ಸಭೆಯಲ್ಲಿ ವಿಷಯ ಪ್ರಸ್ತಾಪಿಸಿ ಸರಕಾರಿ ಜಾಗದಲ್ಲಿ ಅಕ್ರಮವಾಗಿ ಶೆಡ್ ನಿರ್ಮಿಸಿದ್ದಲ್ಲದೆ ಅದನ್ನು ತೆರವುಗೊಳಿಸಲು ಬಂದ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದು ಇದರಲ್ಲಿ ಕಿನ್ನಿಮೂಲ್ಕಿ ವಾರ್ಡಿನ ನಗರಸಭಾ ಸದಸ್ಯೆ ಅಮೃತಾ ಕೃಷ್ಣಮೂರ್ತಿ ನೇರ ಭಾಗಿಯಾಗಿದ್ದು ಅವರ ವಿರುದ್ದ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.

ಇದಕ್ಕೆ ಉತ್ತರಿಸಿದ ಸದಸ್ಯೆ ಇದಕ್ಕೆ ಪ್ರತಿಕ್ರಿಯಿಸಿದ ಅಮೃತಾ ಕೃಷ್ಣಮೂರ್ತಿ, ಕಳೆದ 30 ವರ್ಷಗಳಿಂದ ರಸ್ತೆ ಬದಿಯಲ್ಲಿ ಮೀನು ಮಾರಾಟ ಮಾಡುತ್ತಿದ್ದ ಮೀನುಗಾರ ಮಹಿಳೆಯರ ಮನವಿಯಂತೆ ಶೆಡ್ ನಿರ್ಮಿಸಿಕೊಟ್ಟಿದ್ದೇನೆ. ಇದು ತಾತ್ಕಾಲಿಕವೇ ಹೊರತು ಶಾಶ್ವತ ಕಾಮಗಾರಿ ಅಲ್ಲ. ಆದರೆ ಅಧಿಕಾರಿಗಳು ಯಾವುದೇ ನೋಟೀಸ್ ನೀಡದೆ ಏಕಾಏಕಿ ತೆರವುಗೊಳಿ ಸಿರುವುದು ಸರಿಯಲ್ಲ. ಅಲ್ಲದೆ ಶೆಡ್ ನ ವಸ್ತುಗಳನ್ನು ಸಂಪೂರ್ಣವಾಗಿ ಧ್ವಂಸಗಳಿಸಿದ್ದಾರೆ ಎಂದರು.

ಇವರ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದ ಆಡಳಿತ ಪಕ್ಷದ ಸದಸ್ಯರು ವಿರೋಧ ಪಕ್ಷದ ಸದಸ್ಯರೊಂದಿಗೆ ವಾಗ್ವಾದಕ್ಕೆ ಇಳಿದರು. ಇದರಿಂದ ಸಭೆಯಲ್ಲಿ ಗೊಂದಲ, ಗದ್ದಲ ಉಂಟಾಗಿ ಕೋಲಾಹಲ ಸೃಷ್ಟಿಯಾಯಿತು. ಬಳಿಕ ಆಡಳಿತ ಪಕ್ಷದ ಸದಸ್ಯರನ್ನು ಶಾಸಕ ರಘುಪತಿ ಭಟ್ ಸಮಾಧಾನ ಪಡಿಸಿದರು. ಈ ಬಗ್ಗೆ ಪ್ರತಿಕ್ರಿಯಿಸಿದ ಪೌರಾಯುಕ್ತ ಡಾ.ಉದಯ ಕುಮಾ‌ ಶೆಟ್ಟಿ, ನಾವು ಕಾನೂನು ಪ್ರಕಾರ ಕ್ರಮ ಕೈಗೊಂಡಿದ್ದೇವೆ. ಸರಕಾರಿ ಜಾಗದಲ್ಲಿರುವ ಅಕ್ರಮ ಶೆಡ್ ತೆರವುಗೊಳಿಸುವಾಗ ನೋಟೀಸ್ ನೀಡಬೇಕಾಗಿಲ್ಲ ಎಂದರು.

ಸದಸ್ಯೆ ಅಮೃತಾ ಕೃಷ್ಣಮೂರ್ತಿ ಅವರ ವಿರುದ್ಧ ಖಂಡನಾ ನಿರ್ಣಯ ತೆಗೆದು ಕೊಳ್ಳಬೇಕು ಮತ್ತು ಸದಸ್ಯತ್ವವನ್ನು ಅನರ್ಹಗೊಳಿಸಬೇಕು. ಇಲ್ಲದಿದ್ದರೆ ಅವರು ಸದನದಲ್ಲಿ ಕ್ಷಮೆಯಾಚಿಸಬೇಕು ಎಂದು ಆಡಳಿತ ಪಕ್ಷದ ಸದಸ್ಯರು ಪಟ್ಟು ಹಿಡಿದರು. ಅಮೃತಾ ಕೃಷ್ಣಮೂರ್ತಿ ಪರವಾಗಿ ಮಾತನಾಡಿದ ವಿಪಕ್ಷ ನಾಯಕ ರಮೇಶ್ ಕಾಂಚನ್, ತೆರವು ಕಾರ್ಯಾಚರಣೆ ವೇಳೆ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿ ಪಡಿಸಿರುವುದು ವಿಷಾಧನೀಯ. ಆದರೆ ಇದರೊಂದಿಗೆ ನಗರದಲ್ಲಿರುವ ಬೇರೆ ಅಕ್ರಮ ಕಟ್ಟಡಗಳ ವಿರುದ್ಧವೂ ನಾವು ಅಭಿಯಾನ ಆರಂಭಿಸುತ್ತೇವೆ, ಅದರ ವಿರುದ್ಧವೂ ಅಧಿಕಾರಿಗಳು ಕ್ರಮಕೈಗೊಳ್ಳಬೇಕು ಎಂದು ಹೇಳಿದರು. ಈ ಮೂಲಕ ಖಂಡನಾ ನಿರ್ಣಯ ಕೈಬಿಡಲಾಯಿತು.

ನಗರಸಭಾ ಕಚೇರಿಯಲ್ಲಿ ಬ್ರೋಕರ್ ಹಾವಳಿ
ನಗರಸಭಾ ಕಚೇರಿಯಲ್ಲಿ ಬ್ರೋಕರ್ ಹಾವಳಿ ಹೆಚ್ಚಾದ ಕುರಿತು ವಿಷಯ ಪ್ರಸ್ತಾಪಿಸಿದ ಆಡಳಿತ ಪಕ್ಷದ ಪ್ರಭಾಕರ ಪೂಜಾರಿ ನಗರಸಭೆಯಲ್ಲಿ ಯಾವುದೇ ಕೆಲಸವಾಗಬೇಕಾದರೂ ಬ್ರೋಕರ್ ಗಳ ಮೂಲಕವೇ ನಡೆಯುತ್ತಿದೆ ಇದಕ್ಕೆ ಪೌರಾಯುಕ್ತರು ಕಡಿವಾಣ ಹಾಕಬೇಕು. ಕಚೇರಿಯ ವೇಳೆಯ ಬಳಿಕವೂ ಬ್ರೋಕರ್ ಗಳು ಇಲ್ಲಿ ಬಂದು ತಮ್ಮ ದರ್ಪ ತೋರುತ್ತಿದ್ದಾರೆ ಅವರ ವಿರುದ್ದ ಪೊಲೀಸ್ ದೂರು ದಾಖಲಿಸಬೇಕು ಎಂದು ಒತ್ತಾಯಿಸಿದರು. ಇದಕ್ಕೆ ಆಡಳಿತ ಮತ್ತು ವಿರೋಧ ಪಕ್ಷದ ಸದಸ್ಯರೂ ಕೂಡ ದನಿಗೂಡಿಸಿ ಸಹಮತ ವ್ಯಕ್ತಪಡಿಸಿದರು.

ಇದೇ ವೇಳೆ ಮಾತನಾಡಿದ ವಿಪಕ್ಷ ನಾಯಕ ರಮೇಶ್ ಕಾಂಚನ್ ಅಧಿಕಾರಿಗಳು ಕಚೇರಿಯಲ್ಲಿ ಸಾರ್ವಜನಿಕರ ಅರ್ಜಿಗಳನ್ನು ಸೂಕ್ತ ಸಮಯದಲ್ಲಿ ವಿಲೇವಾರಿ ಮಾಡಿದರೆ ಯಾರೂ ಕೂಡ ಬ್ರೋಕರ್ ಗಳ ಬಳಿ ಹೋಗುವುದಿಲ್ಲ. ಅಧಿಕಾರಿಗಳ ಬೇಜಾವಬ್ದಾರಿ ವರ್ತನೆ ಇಂತಹ ಬ್ರೋಕರ್ ಗಳು ಹುಟ್ಟಿಕೊಳ್ಳಲು ಕಾರಣವಾಗಿದೆ ಈ ಬಗ್ಗೆ ಪೌರಾಯುಕ್ತರು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಶಾಸಕ ರಘುಪತಿ ಭಟ್ ಅಧಿಕಾರಿಗಳು ಕಚೇರಿಯಲ್ಲಿ ಜವಾಬ್ದಾರಿಯುತವಾಗಿ ವರ್ತಿಸಬೇಕು ಸಾರ್ವಜನಿಕರ ಅರ್ಜಿಗಳನ್ನು ವಿಲೇವಾರಿ ಮಾಡವಲ್ಲಿ ನಿರ್ಲಕ್ಷ್ಯ ಸಲ್ಲದೆ. ಒಂದು ವೇಳೆ ಅಂತಹ ಯಾವುದೇ ಅದಿಕಾರಿಗಳು ನಿರ್ಲಕ್ಷ್ಯ ತೋರಿದರೆ ಅಂತಹ ಅಧಿಕಾರಿಗಳು ಪೌರಾಯುಕ್ತರು ಅಮಾನತುಗೊಳಿಸಬೇಕು ಎಂದು ಹೇಳಿದರು.

ಅಕ್ಟೋಬರ್ ಒಳಗೆ ಗುಂಡಿ ಮುಕ್ತ ನಗರಸಭಾ ರಸ್ತೆಗಳು
ನಗರ ಸಭಾ ವ್ಯಾಪ್ತಿಯ ಹಲವೆಡೆ ರಸ್ತೆಗಳು ಗುಂಡಿಮಯವಾಗಿದ್ದು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಜನರು ಹಿಡಿಶಾಪ ಹಾಕುತ್ತಿದ್ದಾರೆ ಆದಷ್ಟು ಬೇಗ ಅದಕ್ಕೆ ಮುಕ್ತಿ ನೀಡಿ ಎಂದು ವಿಪಕ್ಷ ನಾಯಕ ರಮೇಶ್ ಕಾಂಚನ್ ಆಗ್ರಹಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ರಘುಪತಿ ಭಟ್ ಅವರು ಈಗ ಮಳೆ ಬರುತ್ತಿರುವ ಸಮಯದಲ್ಲಿ ರಸ್ತೆ ಕಾಮಗಾರಿ ಆರಂಭಿಸುವುದು ಕಷ್ಟದ ಕೆಲಸ ಆದ್ದರಿಂದ ಮಳೆಗಾಲ ಮುಗಿದ ಕೂಡಲೇ ನಗರದ ಎಲ್ಲ ರಸ್ತೆಗಳನ್ನು ದುರಸ್ತಿ ಮಾಡುವ ಮೂಲ ಅಕ್ಟೋಬರ್ ತಿಂಗಳೊಳಗೆ ರಸ್ತೆ ಗುಂಡಿ ಮುಕ್ತ ಉಡುಪಿ ನಗರಸಭೆ ಮಾಡಲಾಗುವುದು ಎಂದು ಶಾಸಕ ರಘುಪತಿ ಭಟ ತಿಳಿಸಿದರು.

ತಾಂತ್ರಿಕ ಸಮಸ್ಯೆಯಿಂದ ಇಂದ್ರಾಳಿ ರಸ್ತೆ ಕಾಮಗಾರಿ ವಿಳಂಬವಾಗಿದೆ. ಪರ್ಕಳ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯನ್ನು ಡಿಸೆಂಬರ್ ಒಳಗೆ ಪೂರ್ಣಗೊಳಿಸ ಲಾಗುವುದು, ಗುಂಡಿಬೈಲು ರಸ್ತೆ ದುರಸ್ತಿ ನಮ್ಮ ಮುಂದಿರುವ ದೊಡ್ಡ ಸವಾಲು ಆಗಿದ್ದು, ಈ ಕಾಮಗಾರಿಯನ್ನು ಶೀಘ್ರ ಮುಗಿಸಲಾಗುವುದು. ಮಲ್ಪೆ ಆದಿ ಉಡುಪಿ ಚತುಷ್ಪಥ ಕಾಮಗಾರಿಯನ್ನು ಅಕ್ಟೋಬರ್ ತಿಂಗಳಲ್ಲಿ ಆರಂಭಿಸ ಲಾಗುವುದು ಎಂದು ಅವರು ಹೇಳಿದರು.

ಉಡುಪಿ ನಗರದ ಹಳೆ ತಾಲೂಕು ಕಚೇರಿ ಸಮೀಪದ ವೃತ್ತಕ್ಕೆ ‘ವೀರ ಸಾವರ್ಕರ್’ ಸರ್ಕಲ್
ನಗರದ ಬ್ರಹ್ಮಗಿರಿ ವೃತ್ತದಲ್ಲಿ ಸಾವರ್ಕರ್ ಪುತ್ಥಳಿ ನಿರ್ಮಾಣಕ್ಕೆ ಅನುವ ನಿರಾಕರಿಸಿ ಮತ್ತು ಉಡುಪಿ ನಗರದ ಹಳೆ ತಾಲೂಕು ಕಚೇರಿ ಸಮೀಪದ ಲಯನ್ಸ್ ವೃತ್ತಕ್ಕೆ ‘ವೀರ ಸಾವರ್ಕರ್’ ನಾಮಕರಣ ಮಾಡುವ ಕುರಿತು ಸಾಮಾನ್ಯ ಸಭೆಯಲ್ಲಿ ಸರ್ವಾನುಮತದ ನಿರ್ಣಯ ಕೈಗೊಳ್ಳಲಾಯಿತು.

ಉಡುಪಿ ಬ್ರಹ್ಮಗಿರಿ ವೃತ್ತದಲ್ಲಿ ವಿನಾಯಕರ ದಾಮೋದರ್ ಸಾವರ್ಕರ್ ಪುತ್ಥಳಿ ನಿರ್ಮಾಣ ಮಾಡುವಂತೆ ಅಖಿಲ ಭಾರ ಹಿಂದೂ ಮಹಾಸಭಾ ಮತ್ತು ಅಂಬೇಡ್ಕರ್ ಪುತ್ಥಳಿಯನ್ನು ನಿರ್ಮಿಸುವಂತೆ ಎಸ್‌ಡಿಪಿಐ ಕೋರಿದ್ದರು. ಅಲ್ಲದೆ ಶಾಸ ಕೆ.ರಘುಪತಿ ಭಟ್‌ ಹಳೆ ತಾಲೂಕು ಕಚೇರಿ ಸಮೀಪದ ವೃತ್ತಕ್ಕೆ ಸಾವರ್ಕರ್ ನಾಮಕರಣ ಮಾಡುವಂತೆ ಕೋರಿದರು. ವಿಚಾರ ಇಂದಿನ ಸಭೆಯ ನಡವಳಿಯಲ್ಲಿ ಉಲ್ಲೇಖಿಸಲಾಗಿತ್ತು.

ಈ ಬಗ್ಗೆ ಸಭೆಯಲ್ಲಿ ಚರ್ಚೆ ನಡೆದು ವಿಪಕ್ಷಗಳ ಯಾವುದೇ ವಿರೋಧ ಇಲ್ಲದೆ ಹಳೆ ತಾಲೂಕು ಕಚೇರಿ ವೃತ್ತಕ್ಕೆ ಸಾವರ್ಕರ ನಾಮಕರಣ ಮಾಡುವ ಬಗ್ಗೆ, ಸರ್ವಾನುಮತದ ತೀರ್ಮಾನ ತೆಗೆದುಕೊಳ್ಳಲಾಯಿತು. ಬ್ರಹ್ಮಗಿರಿ ವೃತ್ತಕ್ಕೆ ಈಗಾಗಲೇ ಅಶ್ವಿನ ಶೆಟ್ಟಿ ಹಾಗೂ ಆಸ್ಕರ್ ಫೆರ್ನಾಂಡಿಸ್ ವೃತ್ತ ಎಂಬುದಾಗಿ ನಾಮಕರಣ ಮಾಡಿ ಸರಕಾರಕ್ಕೆ ಕಳುಹಿಸಿರುವುದರಿಂದ ಇದಕ್ಕೆ ಬೇರೆ ಹೆಸರು ಮತ್ತು ಪುತ್ಥಳಿ ನಿರ್ಮಾಣಕ್ಕೆ ಅವಕಾಶ ನೀಡಬಾರದು ಎಂಬುದಾಗಿ ಸಭೆಯಲ್ಲಿ ತೀರ್ಮಾನಿಸಲಾಯಿತು.

ವೃತ್ತಗಳಲ್ಲಿ ಪುಷ್ಪಳಿ ನಿರ್ಮಾಣಕ್ಕೆ ಅವಕಾಶ ನೀಡದರೆ ಮುಂದೆ ಕಿಡಿಗೇಡಿ ಗಳು ಅವಮಾನ ಮಾಡುವ ಸಾಧ್ಯತೆ ಇರುತ್ತದೆ. ಆದುದರಿಂದ ಪುತ್ಥಳಿ ನಿರ್ಮಾಣಕ್ಕೆ ಅವಕಾಶ ನೀಡಬಾರದು. ಅದರ ಬದಲು ವೃತ್ತಕ್ಕೆ ನಾಮಕರಣ ಮಾಡಬೇಕು. ಅದೇ ರೀತಿ ಯಾವುದೇ ವೃತ್ತದಲ್ಲಿ ಯಾರ ಪುತ್ಥಳಿ ನಿರ್ಮಾಣಕ್ಕೂ ಅವಕಾಶ ನೀಡಬಾರದು. ಬೀಡಿನಗುಡ್ಡೆಯ ಬದಲು ಸಂಸ್ಕೃತ ಕಾಲೇಜಿನ ಸಮೀಪದ ವೃತ್ತಕ್ಕೆ ಪಣಿಯಾಡಿ ಶ್ರೀನಿವಾಸ ಉಪಾಧ್ಯಾಯ ಹೆಸರು ಇಡುವ ಬಗ್ಗೆ ನಿರ್ಣಯ ಮಾಡಬೇಕು ಎಂದು ಸಭೆಯಲ್ಲಿ ಹಾಜರಿದ್ದ ಶಾಸಕ ಕೆ.ರಘುಪತಿ ಭಟ್ ಅಭಿಪ್ರಾಯ ಪಟ್ಟರು,

ಸಭೆಯ ಅಧ್ಯಕ್ಷತೆಯನ್ನು ಅಧ್ಯಕ್ಷರಾದ ಸುಮಿತ್ರಾ ನಾಯಕ್ ವಹಿಸಿದ್ದರು. ಉಪಾಧ್ಯಕ್ಷ ಲಕ್ಷ್ಮೀ ಮಂಜುಕೊಳ, ಪೌರಾಯುಕ್ತ ಉದಯಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.


Spread the love