ಆಡಳಿಯ ಮಂಡಳಿಯ ಕನಸಿಗೆ ಗ್ರಾಹಕರು ಜೊತೆಯಾಗಬೇಕು – ನಾಡೋಜ ಡಾ. ಜಿ. ಶಂಕರ್

Spread the love

ಆಡಳಿಯ ಮಂಡಳಿಯ ಕನಸಿಗೆ ಗ್ರಾಹಕರು ಜೊತೆಯಾಗಬೇಕು – ನಾಡೋಜ ಡಾ. ಜಿ. ಶಂಕರ್

ಕುಂದಾಪುರ: 450 ಕೋಟಿ ರೂ. ಬಂಡವಾಳವಿರುವ ಬ್ಯಾಂಕ್‍ನ ಬಂಡವಾಳದ ಗುರಿಯನ್ನು 1000 ಕೋಟಿಗೆ ತಲುಪಿಸುವ ಆಡಳಿಯ ಮಂಡಳಿಯ ಕನಸಿಗೆ ಗ್ರಾಹಕರು ಜೊತೆಯಾಗಬೇಕು. ಬ್ಯಾಂಕ್‍ನಿಂದ ವಿದ್ಯಾರ್ಥಿವೇತನಕ್ಕಾಗಿ ಬರೋಬ್ಬರಿ 25ಲಕ್ಷ ರೂ ವೆಚ್ಚ ಮಾಡಿರುವುದು ಪುಣ್ಯದ ಕಾರ್ಯ ಎಂದು ಉಡುಪಿಯ ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್‍ನ ಪ್ರವರ್ತಕ, ನಾಡೋಜ ಡಾ. ಜಿ. ಶಂಕರ್ ಹೇಳಿದರು.

ಇಲ್ಲಿನ ಹೆಮ್ಮಾಡಿಯ ಜಯಶ್ರೀ ಸಭಾಭವನದಲ್ಲಿ ಶನಿವಾರ  ನಡೆದ ಮಹಾಲಕ್ಷ್ಮೀ ಕೋ-ಆಪರೇಟಿವ್ ಬ್ಯಾಂಕ್‍ನ ಕುಂದಾಪುರ, ಬೈಂದೂರು ಹಾಗೂ ಉತ್ತರ ಕನ್ನಡ ಜಿಲ್ಲೆಯ ಗ್ರಾಹಕರ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕುಟುಂಬದ ಹೊಣೆಯನ್ನು ಹೊರುವ ಮಹಿಳೆಯರು ಪ್ರಾಮಾಣಿಕರಾಗಿದ್ದು, ಸಾಲವನ್ನು ತೀರಿಸುವ ಬದ್ದತೆಯನ್ನು ಹೊಂದಿರುವುದರಿಂದ ಮಹಿಳೆಯರಿಗೆ ಸಾಲವನ್ನು ನೀಡುವ ಆರ್ಥಿಕ ಸಂಸ್ಥೆಗಳು ಉತ್ತರೋತ್ತರ ಅಭಿವೃದ್ದಿಯನ್ನು ಸಾಧಿಸುತ್ತದೆ. ಸ್ವಾವಲಂಬಿ ಬದುಕಿಗಾಗಿ ಕಷ್ಟ ಪಡುವ ಮಹಿಳೆಯರಿಗೆ ಕಡಿಮೆ ಬಡ್ಡಿಯಲ್ಲಿ 10-25 ಸಾವಿರ ಸಾಲವನ್ನು ನೀಡುವ ಕೆಲಸ ಬ್ಯಾಂಕ್‍ನಿಂದ ಆಗಬೇಕು. ಈ ರೀತಿ ನೀಡುವ ಸಾಲದ ಸದ್ಭಳಕೆಯಾಗುತ್ತದೆ ಎನ್ನುವ ನಂಬಿಕೆ ನನಗಿದೆ.

ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟ ಅವರು ಮಾತನಾಡಿ, ಕೆ.ಸಿ ಕುಂದರ್ ಅಂತಹ ಹಿರಿಯರ ಸಾರಥ್ಯದಲ್ಲಿ ಅಭಿವೃದ್ದಿಯ ಶಕೆಯನ್ನು ಆರಂಭಿಸಿದ ಈ ಬ್ಯಾಂಕ್ ಅವಿಭಜಿತ ದ.ಕ ಜಿಲ್ಲೆಯ ಹೆಮ್ಮೆಯ ಸಹಕಾರಿ ಸಂಸ್ಥೆಗಳಲ್ಲಿ ಒಂದಾಗಿದೆ. ನಮ್ಮ ಜಿಲ್ಲೆಯ ಹಿರಿಯರು ಸಹಕಾರಿ ಕ್ಷೇತ್ರದಲ್ಲಿ ತೋರಿದ ಬದ್ದತೆ ಹಾಗೂ ಪ್ರಾಮಾಣಿಕತೆಯ ಪರಂಪರೆಯಿಂದಾಗಿ ಅವಳಿ ಜಿಲ್ಲೆಗಳ ಸಹಕಾರಿ ಬ್ಯಾಂಕ್‍ಗಳು ಇಂದಿಗೂ ಸುಸ್ಥಿತಿಯಲ್ಲಿದೆ. ಬ್ಯಾಂಕ್‍ಗೆ ಬರುವ ಗ್ರಾಹಕರನ್ನು ಸತಾಯಿಸದೆ ಅವರಿಗೆ ಸ್ನೇಹಪರವಾದ ಹಾಗೂ ತ್ವರಿತ ಸೇವೆಯನ್ನು ನೀಡಲು ಬ್ಯಾಂಕ್‍ಗಳು ಕಾಳಜಿ ವಹಿಸಬೇಕು. ಸಾಲ ನೀಡುವ ಮೊದಲು ನೀಡಬೇಕಾಗಿರುವ ದಾಖಲೆ ಪತ್ರಗಳ ಕುರಿತಾದ ತಡೆ ಪಟ್ಟಿಯನ್ನು ಮುಂಚಿತವಾಗಿ ನೀಡುವುದರಿಂದ ಅನಗತ್ಯ ಅಲೆದಾಟಗಳು ತಪ್ಪುತ್ತದೆ. ಆಶ್ವಾಸನೆ, ಭರವಸೆ ನೀಡುವ ಮೊದಲು ಪೂರ್ವಾಲೋಚನೆ ಮಾಡಿಕೊಳ್ಳಬೇಕು. ಸಹಾಯ ಕೇಳಿಬಂದ ಯಾರಿಗೂ ಕೂಡ ಭ್ರಮನಿರಸನ ಮಾಡಕೂಡದು ಎಂದರು.

ಬೈಂದೂರು ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ಮಾತನಾಡುತ್ತಾ, ಸಾಹಸ ಪ್ರವೃತ್ತಿಯ ಕರಾವಳಿಯ ಮೀನುಗಾರರು ಪ್ರಾಮಾಣಿಕರು ಹಾಗೂ ನಂಬಿಕಸ್ಥರು. ಜೀವವನ್ನು ಪಣಕ್ಕಿಟ್ಟು ಮೀನುಗಾರಿಕೆಗೆ ತೆರಳುವ ಅವರಿಗೆ ಭಗವಂತನ ಶ್ರೀರಕ್ಷೆ ಇದೆ. ಮಧ್ವರಾಜ್, ಕೆಸಿ ಕುಂದರ್ ಮುಂತಾದ ಮೀನುಗಾರ ಮುಖಂಡರ ಹಾದಿಯಲ್ಲೇ ಸಾಗಿ ಬಂದ ನಾಡೋಜ ಜಿ. ಶಂಕರ್ ಅವರ ನೇತೃತ್ವದಲ್ಲಿ ಪುನರ್‍ನಿರ್ಮಾಣವಾದ ಉಚ್ಚಿಲದ ಮಹಾಲಕ್ಷ್ಮೀ ಅಮ್ಮನವರ ದೇವಸ್ಥಾನ ನಮ್ಮ ಜಿಲ್ಲೆಯ ಗೌರವನ್ನು ಹೆಚ್ಚಿಸಿದೆ ಎಂದರು.

ಮಹಾಲಕ್ಷ್ಮೀ ಕೋ-ಆಪರೇಟಿವ್ ಬ್ಯಾಂಕ್‍ನ ಅಧ್ಯಕ್ಷ ಯಶ್‍ಪಾಲ್ ಎ ಸುವರ್ಣ ಅಧ್ಯಕ್ಷತೆ ವಹಿಸಿದ್ದರು. ದ.ಕ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ ಕೋಟ್ಯಾನ್, ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ಕೆರಾಡಿ, ಮುಂಬೈ ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿಯ ಗೌರವಾಧ್ಯಕ್ಷ ಸುರೇಶ್ ಕಾಂಚನ್, ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ ಕುಂದಾಪುರ ಶಾಖೆಯ ಅಧ್ಯಕಷ ಉದಯ್ ಕುಮಾರ್ ಹಟ್ಟಿಯಂಗಡಿ, ತಾಲೂಕು ಬಿಲ್ಲವ ಸೇವಾ ಸಂಘದ ಅಧ್ಯಕ್ಷ ಅಶೋಕ ಪೂಜಾರಿ ಬೀಜಾಡಿ, ಅಖಿಲ ಭಾರತ ಕೊಂಕಣ ಖಾರ್ವಿ ಮಹಾಜನ ಸಭಾ ಅಧ್ಯಕ್ಷ ಮೋಹನ್ ಬಾನವಳಿಕರ್, ಮೂಡ್ಲಕಟ್ಟೆ ಎಮ್‍ಐಟಿ ಕಾಲೇಜಿನ ಅಧ್ಯಕ್ಷ ಸಿದ್ದಾರ್ಥ ಜೆ ಶೆಟ್ಟಿ, ರಾಜ್ಯ ಸಾಂಪ್ರದಾಯಿಕ ನಾಡ ದೋಣಿ ಮೀನುಗಾರರ ಒಕ್ಕೂಟ ಅಧ್ಯಕ್ಷ ಆನಂದ ಖಾರ್ವಿ, ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತ ಬೆಂಗಳೂರು ಇದರ ಮಾಜಿ ಅಧ್ಯಕ್ಷರಾದ ಬಿ. ಹೆಚ್ ಕೃಷ್ಣ ರೆಡ್ಡಿ, ಬ್ಯಾಂಕ್‍ನ ವ್ಯವಸ್ಥಾಪಕ ನಿರ್ದೇಶಕ ಜಗದೀಶ ಮೊಗವೀರ ಇದ್ದರು.

ಕೊಡೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಭಿವೃದ್ದಿಗೆ ನೀಡಲಾದ 50,000 ಸಹಾಯ ಧನದ ಚೆಕ್ ಅನ್ನು ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಹಸ್ತಾಂತರಿಸಿದರು. 100 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ವಿತರಿಸಲಾಯಿತು

ಸರಿತಾ ಪ್ರಾರ್ಥಿಸಿದರು. ಯಶ್‍ಪಾಲ್ ಸುವರ್ಣ ಸ್ವಾಗತಿಸಿದರು. ವಿಜೇತಾ ಶೆಟ್ಟಿ ಪ್ರಗತಿಯ ವರದಿ ಮಂಡಿಸಿದರು. ಶಿಕ್ಷಕ ಸತೀಶ ಶೆಟ್ಟಿ ಪಿತ್ರೋಡಿ ನಿರೂಪಿಸಿದರು.


Spread the love

Leave a Reply

Please enter your comment!
Please enter your name here