ಆತ್ಮನಿರ್ಭರ ಭಾರತವನ್ನು ಕಟ್ಟೋಣ: ಉಪರಾಷ್ಟ್ರಪತಿ ವೆಂಕಯ್ಯನಾಯ್ಡು

Spread the love

ಆತ್ಮನಿರ್ಭರ ಭಾರತವನ್ನು ಕಟ್ಟೋಣ: ಉಪರಾಷ್ಟ್ರಪತಿ ವೆಂಕಯ್ಯನಾಯ್ಡು

ಬೆಂಗಳೂರು: ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಸಮಾನತೆಯ ಮೂಲಕ ಆತ್ಮನಿರ್ಭರ ಭಾರತವನ್ನು ಕಟ್ಟಲು ಹಿರಿಯರ ಹಾದಿಯಲ್ಲಿ ಇಂದಿನ ಯುವಕರು ನಡೆಯುವ ಮೂಲಕ ನವಭಾರತವನ್ನು ನಿರ್ಮಿಸಲು ಕೈಜೋಡಿಸಬೇಕೆಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಯುವ ಉದ್ಯಮಿಗಳಿಗೆ ಕರೆ ನೀಡಿದರು.

ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‍ನಲ್ಲಿ ಹಮ್ಮಿಕೊಳ್ಳಲಾಗಿದ್ದ 2020ರ ಸಾಲಿನ ಸರ್.ಎಂ.ವಿ. ಸ್ಮಾರಕ ಪ್ರಶಸ್ತಿಯನ್ನು ಎಂ.ಎಸ್. ರಾಮಯ್ಯ ಗ್ರೂಪ್ ಅಧ್ಯಕ್ಷರಾದ ಡಾ.ಎಂ.ಆರ್ ಜಯರಾಮ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ನಂತರ ಮಾತನಾಡಿದ ಅವರು, ಕರ್ನಾಟಕ ರಾಜ್ಯ ಸ್ವಾತಂತ್ರ್ಯ ಪೂರ್ವದಿಂದಲೂ ದೇಶದಲ್ಲಿಯೇ ಅತ್ಯಂತ ಮುಂದುವರೆದ ರಾಜ್ಯವಾಗಿ ಗುರುತಿಸಿಕೊಳ್ಳಲು ಕಾರಣರಾದ ಸರ್.ಎಂ.ವಿಶ್ವೇಶ್ವರಯ್ಯರಂತಹ ಮಹನೀಯರ ಹೆಸರಿನ ಪ್ರಶಸ್ತಿಯನ್ನು ಪ್ರಸ್ತುತ ಸಾಧಕರಿಗೆ ಗುರುತಿಸಿ ನೀಡುತ್ತಿರುವ ಈ ಸುಸಂದರ್ಭದಲ್ಲಿ ಪಾಲ್ಗೊಂಡಿರುವುದು ತಮಗೂ ಸಹ ಅತ್ಯಂತ ಹೆಮ್ಮೆಯ ವಿಷಯವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಸ್ವಾತಂತ್ರ್ಯ ಪೂರ್ವದಲ್ಲಿಯೇ ವಿಶ್ವೇಶ್ವರಯ್ಯರಂತಹ ಮಹನೀಯರ ಮುಂದಾಲೋಚನೆಯಿಂದ ಭಾರತದಂತಹ ಅಭಿವೃದ್ಧಿಶೀಲ ರಾಷ್ಟ್ರದಲ್ಲಿ ವಿವಿಧ ರೀತಿಯ ಕೈಗಾರಿಕೆಗಳು ಮುಖ್ಯವಾಗಿ ಬ್ಯಾಂಕಿಂಗ್ ವ್ಯವಸ್ಥೆ ಕರ್ನಾಟಕದಲ್ಲಿ ಪ್ರಾರಂಭಿಸಲಾಗಿತ್ತು. ಕರ್ನಾಟಕದ ಅಭಿವೃದ್ಧಿಯಲ್ಲಿ ಸರ್.ಎಂ.ವಿ. ಅವರ ಕೊಡುಗೆ ಚಿರಸ್ಮರಣೀಯವಾಗಿದ್ದು, ಅವರು ಸ್ಥಾಪಿಸಿದ ಕೈಗಾರಿಕೆಗಳು, ಬ್ಯಾಂಕ್‍ಗಳು ಹಾಗೂ ನೀರಾವರಿ ಯೋಜನೆಗಳು ದೇಶದ ಜೀವನಾಡಿಯಾಗಿವೆ ಎಂದು ಹೇಳಿದರು.

ಸ್ವಾತಂತ್ರ್ಯದ ನಂತರದ ಭಾರತದಲ್ಲಿ ಕರ್ನಾಟಕ ತಾಂತ್ರಿಕ ಹಾಗೂ ವೈದ್ಯಕೀಯ ಶಿಕ್ಷಣದಲ್ಲಿ ಅತ್ಯುತ್ತಮ ರಾಜ್ಯವೆಂದು ಗುರುತಿಸಿಕೊಳ್ಳಲು ಕಾರಣವಾಗಿರುವ ಖಾಸಗಿ ಸಂಸ್ಥೆಗಳ ಕೊಡುಗೆಯಲ್ಲಿ ಎಂ.ಎಸ್.ರಾಮಯ್ಯ ಸಂಸ್ಥೆಯ ಕೊಡುಗೆ ಚಿರಸ್ಮರಣೀಯವಾಗಿದ್ದು, ಅಂತಹ ಮಹನೀಯರು ಕಟ್ಟಿ ಬೆಳೆಸಿದ ಸಂಸ್ಥೆಯನ್ನು ಯಶಸ್ವಿಯಾಗಿ ಮುನ್ನಡೆಸುತ್ತಿರುವ ಡಾ.ಎಂ.ಆರ್. ಜಯರಾಮ್ ಅವರಿಗೆ ಸರ್ ಎಂ.ವಿ ಪ್ರಶಸ್ತಿಯನ್ನು ನೀಡುತ್ತಿರುವ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ವಾಣಿಜ್ಯ ಸಂಸ್ಥೆ ಉತ್ತಮ ಹಾಗೂ ಜವಾಬ್ದಾರಿಯುತ ಕೆಲಸ ಮಾಡುತ್ತಿದ್ದು, ಇದೊಂದು ಯುವ ಉದ್ಯಮಿಗಳಿಗೆ ಪ್ರೋತ್ಸಾಹ ನೀಡುತ್ತಿರುವ ಅತ್ಯುತ್ತಮ ಸಂಸ್ಥೆಯಾಗಿ ದೇಶದಲ್ಲಿಯೇ ಗುರುತಿಸಿಕೊಂಡಿದೆ ಎಂದು ಹೇಳಿದರು.

ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಪ್ರಶಸ್ತಿ ಪ್ರದಾನ ಮಾಡಿ ಕನ್ನಡದಲ್ಲಿಯೇ ಭಾಷಣ ಆರಂಭಿಸಿ ವೇದಿಕೆ ಮೇಲಿದ್ದ ಗಣ್ಯರಿಗೆಲ್ಲಾ ಕನ್ನಡದಲ್ಲಿಯೇ ಶುಭಾಶಯ ಕೋರಿದ್ದು ವಿಶೇಷವಾಗಿತ್ತು.


Spread the love