ಆತ್ಮ ತೃಪ್ತಿಗಿಂತ ಮಿಗಿಲಾದ ಲಾಭ ಮತ್ತೊಂದಿಲ್ಲ – ಜಯಪ್ರಕಾಶ್ ಹೆಗ್ಡೆ

Spread the love

ಆತ್ಮ ತೃಪ್ತಿಗಿಂತ ಮಿಗಿಲಾದ ಲಾಭ ಮತ್ತೊಂದಿಲ್ಲ – ಜಯಪ್ರಕಾಶ್ ಹೆಗ್ಡೆ

ಉಡುಪಿ: ಯಾವುದೇ ವ್ಯಕ್ತಿ ತನ್ನ ಉದ್ಯಮದಲ್ಲಿ ಎಷ್ಟೇ ಲಾಭ ಗಳಿಸಿದರೂ ಅದರ ಲಾಭದಲ್ಲಿ ಸ್ವಲ್ಪವಾದರೂ ಕಷ್ಟದಲ್ಲಿರುವವರೊಂದಿಗೆ ಹಂಚಿಕೊಂಡಾಗ ಸಿಗುವ ಆತ್ಮ ತೃಪ್ತಿಗಿಂತ ಮಿಗಿಲಾದ ಲಾಭ ಮತ್ತೊಂದಿಲ್ಲ ಎಂದು ರಾಜ್ಯ ಹಿಂದುಳಿದ ವರ್ಗಗಳ ಅಧ್ಯಕ್ಷ ಕೆ ಜಯಪ್ರಕಾಶ್ ಹೆಗ್ಡೆ ಹೇಳಿದರು.

ಅವರು ಸೋಮವಾರ ಮಲಬಾರ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ 9 ಅರ್ಹ ವಸತಿ ರಹಿತರಿಗೆ ಸಹಾಯಧನ ಚೆಕ್ ವಿತರಿಸಿ ಮಾತನಾಡಿದರು.

ನಮ್ಮಲ್ಲಿ ಎಷ್ಟೇ ಶ್ರೀಮಂತಿಕೆ ಇದ್ದರೂ ಕೂಡ ಸಹಾಯ ಮಾಡುವ ಹೃದಯ ಶ್ರೀಮಂತಿಕೆ ಅಗತ್ಯವಿದೆ ಅಂತಹ ಹೃದಯ ಶ್ರೀಮಂತಿಕೆ ಮಲಬಾರ್ ಟ್ರಸ್ಟ್ ಹೊಂದಿದ್ದು ಇದರ ಸಮಾಜಮುಖಿ ಸೇವೆ ಇನ್ನಷ್ಟು ಮುಂದುವರೆಯುವಂತಾಗಲಿ. ಈ ಮೂಲಕ ಸಮಾಜದಲ್ಲಿ ಕಷ್ಟದಲ್ಲಿ ಇರುವವರ ಕಣ್ಣೀರು ಒರೆಸುವ ಕೆಲಸವಾಗಲಿ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಸಮಾಜದಲ್ಲಿ ವಿವಿಧ ರಂಗದಲ್ಲಿ ಸಮಾಜಸೇವೆ ಚಟುವಟಿಕೆಗಳನ್ನು ನಡೆಸಿಕೊಂಡು ಬಂದಿರುವ ದಿನೇಶ್ ಭಾಂಧವ್ಯ, ರಾಘವೇಂದ್ರ ಪ್ರಭು ಕರ್ವಾಲು, ಆಸಿಫ್ ಅಪತ್ಭಾಂಧವ ಇವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯತ್ ಸದಸ್ಯೆ ಡಾ. ಸುನೀತಾ ಶೆಟ್ಟಿ, ಬಡಗಬೆಟ್ಟು ಕೋ ಅಪರೇಟಿವ್ ಸೊಸೈಟಿ ಇದರ ವ್ಯವಸ್ಥಾಪಕರಾದ ಜಯಕರ ಶೆಟ್ಟಿ ಇಂದ್ರಾಳಿ, ಸಾಮಾಜಿಕ ಕಾರ್ಯಕರ್ತ ವಿಶ್ವನಾಥ ಶೆಣೈ, ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ ಅಧ್ಯಕ್ಷರಾದ ಯಾಸೀನ್ ಮಲ್ಪೆ ಉಪಸ್ಥಿತರಿದ್ದರು.

ವಿದ್ಯಾ ಸ್ವಾಗತಿಸಿ, ಮಲಬಾರ್ ಟ್ರಸ್ಟ್ ಉಡುಪಿ ಇದರ ವ್ಯವಸ್ಥಾಪಕರಾದ ಹಫೀಝ್ ರೆಹಮಾನ್ ವಂದಿಸಿದರು. ಪವಿತ್ರ ಕಾರ್ಯಕ್ರಮ ನಿರೂಪಿಸಿದರು. ಸಂಸ್ಥೆಯ ರಾಘವೇಂದ್ರ ನಾಯಕ್, ತಂಝೀಮ್ ಸಹಕರಿಸಿದರು.


Spread the love