ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿದ ಮನಪಾ ನೈರ್ಮಲ್ಯ ನಿರೀಕ್ಷಕರಿಗೆ 4 ವರ್ಷ ಜೈಲು ಶಿಕ್ಷೆ

Spread the love

ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿದ ಮನಪಾ ನೈರ್ಮಲ್ಯ ನಿರೀಕ್ಷಕರಿಗೆ 4 ವರ್ಷ ಜೈಲು ಶಿಕ್ಷೆ

ಮಂಗಳೂರು: ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿದ ಪ್ರಕರಣದಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಹಿರಿಯ ನೈರ್ಮಲ್ಯ ನಿರೀಕ್ಷಕರಿಗೆ 4 ವರ್ಷ ಸಜೆ ಹಾಗೂ 1 ಕೋಟಿ ರೂಪಾಯಿ ದಂಡ ವಿಧಿಸಿ 3 ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ ಆದೇಶ ನೀಡಿದೆ.

ಆರೋಪಿ ಶ್ರೀ ಶಿವಲಿಂಗ ಕೊಂಡಗುಳಿ ಹಿರಿಯ ನೈರ್ಮಲ್ಯ ನಿರೀಕ್ಷಕರು ಮಹಾನಗರ ಪಾಲಿಕೆ, ಮಂಗಳೂರು ಇಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಸದರಿಯವರು ಬಲ್ಲ ಮೂಲಗಳ ಪ್ರಕಾರ ಆದಾಯಕ್ಕಿಂತ ಹೆಚ್ಚಿನ ಪ್ರಮಾಣದ ಆಸ್ತಿಯನ್ನು ಹೊಂದಿರುವುದು ವಿಶ್ವಾಸರ್ಹ ಮಾಹಿತಿಯಿಂದ ತಿಳಿದು ಬಂದಿದ್ದು, ಸದರಿ ಮಾಹಿತಿಯ ಮೇರೆಗೆ ಆರೋಪಿತರ ವಿರುದ್ಧ ದಾಳಿ ನಡೆಸಿ ಮಂಗಳೂರು ಕರ್ನಾಟಕ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ವಿ 15-02-2013 ರಂದು ಮೊಕದ್ದಮೆ ಸಂಖ್ಯೆ 05/2013 ಕಲಂ 13(1)(2) ಜೊತೆಗೆ 13(2) ಲಂಚ ವಿರೋಧಿ ಕಾಯಿದೆ 1988 ರೀತಿಯ ಪ್ರಕರಣವನ್ನು ದಾಖಲು ಮಾಡಿಕೊಂಡಿದ್ದು ಇರುತ್ತದೆ.

ಸದ್ರಿ ಪ್ರಕರಣದ ವಿಚಾರಣೆಯನ್ನು ಘನ 3ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ ಮಂಗಳೂರು ಇದರ ನ್ಯಾಯಾಧೀಶರಾದ ಮಾನ್ಯ ಬಿ.ಬಿ, ಜಕಾತಿ ಇವರು ವಿಚಾರಣೆ ನಡೆಸಿ ದಿ:14-10-2022 ರಂದು ಅಂತಿಮ ತೀರ್ಪು ನೀಡಿದ್ದು, ತೀರ್ಪಿನಲ್ಲಿ ಶ್ರೀ ಶಿವಲಿಂಗ ಕೊಂಡಗುಳಿ ಹಿರಿಯ ನೈರ್ಮಲ್ಯ ನಿರೀಕ್ಷಕರು ಮಂಗಳೂರು ಮಹಾನಗರ ಪಾಲಿಕೆ ಇವರ ವಿರುದ್ಧ ಕಲಂ 13(1)(ಇ) ಜೊತೆಗೆ 13(2) ಲಂಚ ನಿರೋಧ ಕಾಯ್ದೆ 1988 ಕಲಂ ರಂತೆ 04 ವರ್ಷಗಳ ಕಾಲ ಸಾದಾ ಸಜೆ ಹಾಗೂ ರೂ. 1,00,00,000/- (ಒಂದು ಕೋಟಿ) ದಂಡ ವಿಧಿಸಿದ್ದು, ಆರೋಪಿಯು ದಂಡ ಕಟ್ಟಲು ವಿಫಲನಾದಲ್ಲಿ ಮತ್ತೆ 11 ವರ್ಷ ಸಾದಾ ಸಜೆಗೆ ಆದೇಶಿಸಿ ಅಂತಿಮ ತೀರ್ಪು ಹೊರಡಿಸಿರುತ್ತದೆ. ಹಾಲಿ ಶಿವಾನಂದ ಕುಂಡಗುಳಿ ಇವರು ಹಿರಿಯ ನೈರ್ಮಲ್ಯ ನಿರೀಕ್ಷಕರಾಗಿ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.


Spread the love