ಆದಾಯಕ್ಕಿಂತ ಹೆಚ್ಚು ಆಸ್ತಿ: ಬಂಟ್ವಾಳ ತಾ. ಕಚೇರಿ ಪ್ರಥಮ ದರ್ಜೆ ಸಹಾಯಕನಿಗೆ 4 ವರ್ಷ ಸಜೆ

Spread the love

ಆದಾಯಕ್ಕಿಂತ ಹೆಚ್ಚು ಆಸ್ತಿ: ಬಂಟ್ವಾಳ ತಾ. ಕಚೇರಿ ಪ್ರಥಮ ದರ್ಜೆ ಸಹಾಯಕನಿಗೆ 4 ವರ್ಷ ಸಜೆ

ಕಾರ್ಕಳ: ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿದ ಆರೋಪ ಎದುರಿಸುತ್ತಿದ್ದ ಬಂಟ್ವಾಳ ತಾಲೂಕು ಕಚೇರಿಯ ಪ್ರಥಮ ದರ್ಜೆ ಸಹಾಯಕ ಓಂ ಪ್ರಕಾಶ್ ಹೆಗ್ಡೆ ಅವರಿಗೆ 4 ವರ್ಷಗಳ ಸಾದ ಸಜೆ ಹಾಗೂ ಒಂದು ಕೋಟಿ ರೂ ಗಳ ದಂಡ ವಿಧಿಸಿ ಮಂಗಳೂರು 3 ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ ಆದೇಶ ನೀಡಿದೆ.

ಓಂ ಪ್ರಕಾಶ್ ಹೆಗ್ಡೆ ಅವರು ಬಂಟ್ವಾಳ ತಾಲೂಕು ಕಚೇರಿಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದು ಆದಾಯಕ್ಕಿಂತ ಹೆಚ್ಚಿನ ಪ್ರಮಾಣದ ಆಸ್ತಿಯನ್ನು ಹೊಂದಿರುವ ಕುರಿತು 2014 ಜನವರಿ 28 ರಂದು ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣದ ವಿಚಾರಣೆಯನ್ನು 3ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ ಮಂಗಳೂರು ಇದರ ನ್ಯಾಯಾಧೀಶರಾದ ಬಿ ಬಿ ಜಕಾತಿ ವಿಚಾರಣೆ ನಡೆಸಿ ಅಗಸ್ಟ್ 1 ರಂದು ಅಂತಿಮ ತೀರ್ಪು ನೀಡಿದ್ದು, ಓಂ ಪ್ರಕಾಶ‍್ ಅವರಿಗೆ ಲಂಚ ನಿರೋಧ ಕಾಯ್ದೆ 1988 ರಂತೆ 4 ವರ್ಷಗಳ ಸಜೆ ಹಾಗೂ ರೂ ಒಂದು ಕೋಟಿ ದಂಡ ವಿಧಿಸಿದೆ. ದಂಡ ಕಟ್ಟಲು ವಿಫಲರಾದಲ್ಲಿ ಮತ್ತೆ 1 ವರ್ಷಗಳ ಕಾಲ ಸಾದಾ ಶಿಕ್ಷೆಯನ್ನು ಆದೇಶಿಸಿದೆ.

ಈ ಪ್ರಕರಣದಲ್ಲಿ ಅಂದಿನ ಪೊಲೀಸ್ ನಿರೀಕ್ಷಕರು ಕರ್ನಾಟಕ ಲೋಕಾಯುಕ್ತ ಮಂಗಳೂರು ಹಾಗೂ ಹಾಲಿ ಪೊಲೀಸ್ ಉಪಾಧೀಕ್ಷಕರು ಕಾರ್ಕಳ ಉಪ ವಿಭಾಗ ಉಡುಪಿ ಇದರ ಎಸ್ ವಿಜಯ ಪ್ರಸಾದ್ ಅವರು ಸಮಗ್ರ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದ್ದು ರವೀಂದ್ರ ಮುನ್ನಿಪಾಡಿ ವಿಶೇಷ ಸಾರ್ವಜನಿಕ ಅಭಿಯೋಜಕರು ಕರ್ನಾಟಕ ಲೋಕಾಯುಕ್ತ ಮಂಗಳೂರು ಇವರು ಸರ್ಕಾರದ ಪರವಾಗಿ ವಾದ ಮಂಡಿಸಿದ್ದರು.

ಆರೋಪಿಯು ಪ್ರಸ್ತುತ ಜಿಲ್ಲಾ ಕಾರಾಗೃಹ ಮಂಗಳೂರು ಇಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ


Spread the love

Leave a Reply

Please enter your comment!
Please enter your name here