
ಆನೆಗುಡ್ಡೆ ವಿನಾಯಕನಿಗೆ ಕಡುಬು ಸೇವೆ ಅರ್ಪಿಸಿದ ನಟ ರಿಷಬ್ ಶೆಟ್ಟಿ
ಕುಂದಾಪುರ: ಚಿತ್ರ ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ಕುಟುಂಬ ಸಮೇತರಾಗಿ ಸೋಮವಾರ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.
ವಿನಾಯಕನಿಗೆ ಪ್ರಿಯವಾದ ಮುಡಿಅಕ್ಕಿ ಕಡಬು ಸೇವೆ ನೀಡಿ ವಿಶೇಷ ಪೂಜೆ ಸಲ್ಲಿಸಿದ ರಿಷಬ್ ಅವರನ್ನು ದೇವಸ್ಥಾನದ ವತಿಯಿಂದ ಹಿರಿಯ ಮೊಕ್ತೇಸರ ಕೆ.ಸೂರ್ಯನಾರಾಯಣ ಉಪಾಧ್ಯಾಯ ಗೌರವಿಸಿದರು. ಈ ಸಂದರ್ಭ ಪತ್ನಿ ಪ್ರಗತಿ ಶೆಟ್ಟಿ, ಮಕ್ಕಳಾದ ರಣ್ವಿತ್ ಶೆಟ್ಟಿ, ರಾಧ್ಯಾ ಶೆಟ್ಟಿ ಹಾಗೂ ಕುಟುಂಬ ಸದಸ್ಯರು ಇದ್ದರು.
ಭಾರತೀಯ ಚಿತ್ರರಂಗದಲ್ಲಿ ನಿರೀಕ್ಷೆಗೂ ಮೀರಿ ಯಶಸ್ಸು ಕಂಡು, ವಿದೇಶದಲ್ಲಿಯೂ ಸುದ್ದಿ ಮಾಡುತ್ತಿರುವ ಕರಾವಳಿ ದೈವಗಳ ದಂತಕಥೆಯ ಕುರಿತಾದ ಕಾಂತಾರ ಸಿನಿಮಾದ ಯಶಸ್ಸಿನ ಹಿನ್ನೆಲೆಯಲ್ಲಿ ಪೂಜೆ ಸಲ್ಲಿಸಲಾಗಿದೆ. ಸಿನಿಮಾದ ಮೂಹರ್ತವೂ ಇದೇ ದೇವಸ್ಥಾನದಲ್ಲಿ ಮಾಡಲಾಗಿತ್ತು ಎನ್ನುವುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.
ಆನೆಗುಡ್ಡೆ ದೇವಸ್ಥಾನದ ಆಡಳಿತ ಮೊಕ್ತೇಸರ ಕೆ.ಶ್ರೀರಮಣ ಉಪಾಧ್ಯಾಯ, ಹಿರಿಯ ಮೊಕ್ತೇಸರ ಕೆ.ಸೂರ್ಯನಾರಾಯಣ ಉಪಾಧ್ಯಾಯ, ಪರ್ಯಾಯ ಅರ್ಚಕರಾ ಕೆ.ದೇವಿದಾಸ್ ಉಪಾಧ್ಯಾಯ, ಅರ್ಚಕ ಮಂಡಳಿ ಸದಸ್ಯರು, ಸಿಬ್ಬಂದಿಗಳು ಇದ್ದರು.
ಕೊಲ್ಲೂರಿನ ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಸೋಮವಾರ ಮುಂಜಾನೆ ಕುಟುಂಬ ಸಹಿತರಾಗಿ ಭೇಟಿ ನೀಡಿದ್ದ ನಟ ರಿಷಬ್ ಶೆಟ್ಟಿ ಕುಟುಂಬ ಸಮೇತರಾಗಿ ಅರ್ಚಕರ ಮೂಲಕ ಶ್ರೀ ದೇವರಿಗೆ ವಿಶೇಷ ಪೂಜೆ ಹಾಗೂ ಪ್ರಾರ್ಥನೆ ಸಲ್ಲಿಸಿದ್ದಾರೆ.