ಆಯುಷ್ ವೈದ್ಯಾಧಿಕಾರಿಗಳಿಗೂ ವಿಶೇಷ ಭತ್ಯೆಯನ್ನು ಮಂಜೂರು ಮಾಡಲು ಆಗ್ರಹಿಸಿ ಮನವಿ

Spread the love

ಆಯುಷ್ ವೈದ್ಯಾಧಿಕಾರಿಗಳಿಗೂ ವಿಶೇಷ ಭತ್ಯೆಯನ್ನು ಮಂಜೂರು ಮಾಡಲು ಆಗ್ರಹಿಸಿ ಮನವಿ

ಕುಂದಾಪುರ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಆಯುಷ್ ವೈದ್ಯಾಧಿಕಾರಿಗಳನ್ನು ಹೊರತುಪಡಿಸಿ ಇತರ ವೈದ್ಯಾಧಿಕಾರಿಗಳಿಗೆ ವಿಶೇಷ ಭತ್ಯೆಯನ್ನು ಹೆಚ್ಚಿಸಿ ಸರಕಾರ ಆದೇಶಿಸಿದ್ದು, ಈ ವಿಶೇಷ ಭತ್ಯೆಯನ್ನು ಆಯುಷ್ ವೈದ್ಯಾಧಿಕಾರಿಗಳಿಗೂ ಮಂಜೂರು ಮಾಡಿ ಆದೇಶ ಹೊರಡಿಸಬೇಕೆಂದು ಕರ್ನಾಟಕ ಸರ್ಕಾರಿ ಆಯುಷ್ ವೈದ್ಯಾಧಿಕಾರಿಗಳ ಸಂಘದ ಉಡುಪಿ ಜಿಲ್ಲಾ ಘಟಕ ಆಗ್ರಹಿಸಿದೆ.

ಮಂಗಳವಾರ ಉಡುಪಿ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿದ ಉಡುಪಿ ಜಿಲ್ಲಾ ಘಟಕ ಅಧ್ಯಕ್ಷೆ ಡಾ.ವೀಣಾ ಎನ್.ಕಾರಂತ್ ನೇತೃತ್ವದ ಆಯುಷ್ ವೈದ್ಯಾಧಿಕಾರಿಗಳ ನಿಯೋಗ ಈ ಸಂಬAಧ ಮನವಿಯನ್ನು ರಾಜ್ಯದ ಮುಖ್ಯಮಂತ್ರಿಯವರಿಗೆ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಿ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿದೆ.

ಕೊರೊನಾ ವೈರಾಣುವಿನ ಹಾವಳಿಯ ಸಂದರ್ಭದಲ್ಲಿ ಸರ್ಕಾರವು ಪ್ರತಿಯೊಬ್ಬ ಅಲೋಪಥಿ-ಆಯುಷ್ ವೈದ್ಯಾಧಿಕಾರಿಗಳನ್ನು ವಿವಿಧ ಜವಾಬ್ದಾರಿಗಳ ನಿರ್ವಹಣೆಗೆ ನಿಯೋಜಿಸಿದೆ. ಅಲೋಪಥಿ-ಆಯುಷ್ ವೈದ್ಯಾಧಿಕಾರಿಗಳನ್ನು ಯಾವುದೇ ತಾರತಮ್ಯವಿಲ್ಲದೇ ಎಲ್ಲ ರೀತಿಯ ಸೇವೆಗಳಿಗೂ ನಿಯೋಜಿಸಿ ಸರ್ಕಾರವು ಸರಿಸಮಾನವಾಗಿ ಸೇವೆಯನ್ನು ಪಡೆಯುತ್ತಿದೆ. ಪ್ರತಿ ಹಂತದಲ್ಲಿಯೂ ಕೋವಿಡ್ಕೆ 19 ಲಸ ಕಾರ್ಯಗಳಲ್ಲಿ ಆಯುಷ್ ವೈದ್ಯರನ್ನು ಬಳಸಿಕೊಂಡು ವಿಶೇಷ ಭತ್ಯೆಯ ಪರಿಷ್ಕರಣೆಯಲ್ಲಿ ಮಾತ್ರ ಕೈಬಿಟ್ಟು ಆದೇಶ ಹೊರಡಿಸಿರುವುದು ತಾರತಮ್ಯ ನೀತಿಯಾಗಿದೆ ಎಂದು ಸಂಘದ ಜಿಲ್ಲಾ ಘಟಕ ಆಕ್ರೋಶ ವ್ಯಕ್ತಪಡಿಸಿದೆ.

ಆಯುಷ್ ವೈದ್ಯಾಧಿಕಾರಿಗಳು ಕೇವಲ ಕರ್ತವ್ಯ ನಿರ್ವಹಣೆಗೆ ಮಾತ್ರ ಬೇಕು. ಆರ್ಥಿಕ ಸೌಲಭ್ಯಗಳಿಗೆ ಮಾತ್ರ ಹೊರತಾಗಿರಬೇಕು ಎನ್ನುವುದು ನಿಜಕ್ಕೂ ನೋವಿನ ಸಂಗತಿ. ಆಯುಷ್ ವೈದ್ಯರೂ ಕೂಡ ಮನುಷ್ಯರೆನ್ನುವುದನ್ನು ಮರೆತು, ಭೇದವೆಣಿಸಿ, ಆರ್ಥಿಕ ಸೌಲಭ್ಯವನ್ನು ಕೆಲವರಿಗೆ ಮಾತ್ರ ವಿಸ್ತರಿಸುವುದು ಖೇದನೀಯ. ಈ ಬಗ್ಗೆ ಕರ್ನಾಟಕ ಸರ್ಕಾರಿ ಆಯುಷ್ ವೈದ್ಯಾಧಿಕಾರಿಗಳ ಸಂಘವು ಅನೇಕ ಬಾರಿ ಸರ್ಕಾರಕ್ಕೆ ಮನವಿಯನ್ನು ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಆರೋಪಿಸಿರುವ ಆಯುಷ್ ವೈದ್ಯಾಧಿಕಾರಿಗಳು, ಇಂತಹ ತಾರತಮ್ಯ ನೀತಿಯನ್ನು ಹೊಗಲಾಡಿಸಿ ಸರ್ಕಾರವು ಎಂ.ಬಿ.ಬಿ.ಎಸ್. ಮತ್ತು ಬಿ.ಡಿ.ಎಸ್. ವೈದ್ಯಾಧಿಕಾರಿಗಳಿಗೆ ನೀಡಿರುವ ವಿಶೇಷ ಭತ್ಯೆಯನ್ನು ಆಯುಷ್ ವೈದ್ಯಾಧಿಕಾರಿಗಳಿಗೂ ಮಂಜೂರು ಮಾಡಿ ಆದೇಶಿಸಬೇಕು. ನಮ್ಮ ಈ ನ್ಯಾಯಯುತ ಬೇಡಿಕೆ ಈಡೇರಿಸದಿದ್ದಲ್ಲಿ ಆಯುಷ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಎಲ್ಲ ವೈದ್ಯಾಧಿಕಾರಿಗಳು ಜೂ.೧ ರಿಂದ ಕಪ್ಪು ಪಟ್ಟಿಯನ್ನು ಧರಿಸಿ ಕರ್ತವ್ಯ ನಿರ್ವಹಿಸುತ್ತಲೇ ಪ್ರತಿಭಟನೆ ನಡೆಸುತ್ತೇವೆ. ಜೂ.೭ ರಿಂದ ಕೋವಿಡ್ ಸಂಬAಧಿತ ಎಲ್ಲ ರೀತಿಯ ಕೆಲಸ ಕಾರ್ಯಗಳನ್ನು ಬಹಿಷ್ಕರಿಸಿ, ಕೇವಲ ಇಲಾಖೆಯ ಆಯುಷ್ ಚಿಕಿತ್ಸಾಲಯ/ಆಸ್ಪತ್ರೆಗಳಿಗೆ ಸೀಮಿತವಾಗಿ ಕರ್ತವ್ಯ ನಿರ್ವಹಿಸುತ್ತೇವೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಮನವಿ ಸ್ವೀಕರಿಸಿ ಮಾತನಾಡಿದ ಜಿಲ್ಲಾಧಿಕಾರಿ ಜಿ.ಜಗದೀಶ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯಾಧಿಕಾರಿಗಳಿಗೆ ಮಂಜೂರು ಮಾಡಿರುವ ವಿಶೇಷ ಭತ್ಯೆಯನ್ನು ಆಯುಷ್ ವೈದ್ಯಾಧಿಕಾರಿಗಳಿಗೆ ಮಂಜೂರು ಮಾಡುವಂತೆ ಮುಖ್ಯಮಂತ್ರಿಯವರಿಗೆ ಶಿಫಾರಸ್ಸು ಮಾಡುವುದಾಗಿ ಭರವಸೆ ನೀಡಿದರು.

ಉಡುಪಿ ಜಿಲ್ಲಾ ಘಟಕದ ಉಪಾಧ್ಯಕ್ಷ ಡಾ.ಪ್ರದೀಪ ಶೆಟ್ಟಿ, ಜಿಲ್ಲಾ ಆಯುಷ್ ಆಸ್ಪತ್ರೆಯ ಹಿರಿಯ ವೈದ್ಯರಾದ ಡಾ.ಶ್ಯಾಮ ರಾವ್, ಡಾ.ದಿನಕರ ಡೋಂಗ್ರೆ, ಸುಧಾಕರ ಟಿ. ಉಪಸ್ಥಿತರಿದ್ದರು.


Spread the love