ಆರಂಭಗೊಳ್ಳದ 2ನೇ ಹಂತದ ಮರವಂತೆ ಬಂದರು ಕಾಮಗಾರಿ – ಮೀನುಗಾರರಿಂದ ಮತದಾನ ಬಹಿಷ್ಕಾರಕ್ಕೆ ತೀರ್ಮಾನ

Spread the love

ಆರಂಭಗೊಳ್ಳದ 2ನೇ ಹಂತದ ಮರವಂತೆ ಬಂದರು ಕಾಮಗಾರಿ – ಮೀನುಗಾರರಿಂದ ಮತದಾನ ಬಹಿಷ್ಕಾರಕ್ಕೆ ತೀರ್ಮಾನ

ಕುಂದಾಪುರ: ಮರವಂತೆ ಮೀನುಗಾರಿಕಾ ಬಂದರಿನ ಎರಡನೇ ಹಂತದ 85 ಕೋ. ರೂ. ವೆಚ್ಚದ ಕಾಮಗಾರಿ ಘೋಷಣೆಯಾಗಿ ಟೆಂಡರ್ ಆದರೂ ಇದುವರೆಗೂ ಕಾಮಗಾರಿ ಆರಂಭಗೊಂಡಿಲ್ಲ. ಈ ಬಗ್ಗೆ ಸಂಬಧಪಟ್ಟ ಇಲಾಖೆ, ಸರ್ಕಾರದ ಗಮನ ಸೆಳೆದರೂ ನಮ್ಮ ಮನವಿಗಳಿಗೆ ಸ್ಪಂದನೆ ಸಿಕ್ಕಿಲ್ಲ. ಆದ್ದರಿಂದ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮತದಾನವನ್ನು ಬಹಿಷ್ಕರಿಸುವ ತೀರ್ಮಾನಕ್ಕೆ ಮುಂದಾಗಿದ್ದೇವೆ ಎಂದು ಮೀನುಗಾರಿಕಾ ಸೇವಾ ಸಮಿತಿ ಅಧ್ಯಕ್ಷ ವಾಸುದೇವ ಖಾರ್ವಿ ತಿಳಿಸಿದ್ದಾರೆ.

ಗುರುವಾರ ಮರವಂತೆ ಮೀನುಗಾರಿಕಾ ಹೊರ ಬಂದರುವಿನಲ್ಲಿ ಕರೆಯಲಾದ ಸುದ್ದಿಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು.

ಮರವಂತೆ ಹೊರಬಂದರು ಮೊದಲ ಹಂತದ ಕಾಮಗಾರಿ ಅಪೂರ್ಣಗೊಂಡಿದ್ದು, ಅದನ್ನು ಪೂರ್ಣಗೊಳಿಸುವ ಸಲುವಾಗಿ ಸರ್ಕಾರ 85 ಕೋ. ರೂ. ನೀಡಿ ಮಂಜೂರಾತಿಗೊಳಿಸಿತ್ತು. ಅದರಂತೆ ಮೀನುಗಾರಿಕಾ ಇಲಾಖೆಯು 2020ರ ಏಪ್ರಿಲ್ 24 ರಂದು ಟೆಂಡರ್ ಕರೆದು ಆ ಬಳಿಕ ಕಳೆದ ನವೆಂಬರ್ ನಲ್ಲಿ ಮುಖ್ಯಮಂತ್ರಿಗಳು ಬಂದು ಕಾಮಗಾರಿಗೆ ಶಿಲನ್ಯಾಸ ನೆರವೇರಿಸಿದ್ದರು. ಆದರೆ ಈವರೆಗೂ ಕಾಮಗಾರಿ ಮಾತ್ರ ಆರಂಭಗೊಂಡಿಲ್ಲ. ಇದನ್ನು ಪ್ರಶ್ನಿಸಿದರೆ ಕೇವಲ ಕ್ಷುಲ್ಲಕ ಕಾರಣಗಳನ್ನು ಕೊಡುತ್ತಿದ್ದಾರೆ. ನಮ್ಮ ಮನವಿಗಳಿಗೆ ಸ್ಪಂದಿಸದ ಜನಪ್ರತಿನಿಧಿಗಳನ್ನು ಆರಿಸಿ ಕಳುಹಿಸುವುದರಲ್ಲಿ ಅರ್ಥವೇ ಇಲ್ಲ. ಹೀಗಾಗಿ ಮರವಂತೆಯ ಎಲ್ಲಾ ಮೀನುಗಾರರು ಈ ಬಾರಿಯ ಚುನಾವಣಾ ಬಹಿಷ್ಕಾರಕ್ಕೆ ಮುಂದಾಗಿದ್ದೇವೆ ಎಂದರು.

ಮೀನುಗಾರ ಮುಖಂಡ ಮೋಹನ್ ಖಾರ್ವಿ ಮಾತನಾಡಿ, ಕಾಂಗ್ರೆಸ್, ಬಿಜೆಪಿ ಎರಡೂ ಪಕ್ಷಗಳು ಕೇವಲ ಭರವಸೆಯನ್ನು ಕೊಡುತ್ತಿದೆ ಬಿಟ್ಟರೆ ಮೀನುಗಾರರ ಪರವಾಗಿ ಯಾರೂ ಕೆಲಸ ಮಾಡುತ್ತಿಲ್ಲ. ಬಿಜೆಪಿಗೆ ದೊಡ್ಡ ಶಕ್ತಿ ಕೊಡುವ ನಮ್ಮ ಸಮುದಾಯವನ್ನು ಕಡೆಗಣಿಸುತ್ತಿದೆ. ಜೂನ್ ತಿಂಗಳಲ್ಲಿ ತೂಫಾನ್ ಪ್ರಾರಂಭವಾಗುತ್ತದೆ. ತೂಫಾನ್ ಪ್ರಾರಂಭಗೊಂಡರೆ ಈಗಿದ್ದ ಬಂದರು ಕೊಚ್ಚಿ ಹೋಗಲಿದೆ. ಚುನಾವಣಾ ಹಿತದೃಷ್ಠಿಯಿಂದ ನಾವು ಮತದಾನ ಬಹಿಷ್ಕರಿಸುವುದು ತಪ್ಪು. ಆದರೆ ನಮ್ಮ ಬದುಕಿನ ಪ್ರಶ್ನೆ ಅಂತ ಬಂದಾಗ ಚುನಾವಣೆ ಬಹಿಷ್ಕರಿಸದೇ ಬೇರೆ ದಾರಿ ನಮಗಿಲ್ಲ ಎಂದರು.

ಕಚೇರಿಯಿಂದ ಕಚೇರಿಗೆ ಅಲೆದಾಡಿದ್ದೇವೆ. ಒಬ್ಬೊಬ್ಬರಿಗೆ ಹತ್ತತ್ತು ಮನವಿಗಳನ್ನು ನೀಡಿದ್ದೇವೆ. ತೌಕ್ತೆ ಚಂಡಮಾರುತ ಬಂದು ಕಡಲ್ಕೊರೆತವಾದಾಗ ಸ್ವತಃ ಮಂತ್ರಿಗಳು, ಗ್ರಹ ಸಚಿವರು ಈ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ ನಮ್ಮ ಮನವಿಯನ್ನು ಸ್ವೀಕರಿಸಿದ್ದಾರೆ. ಅಂತಹ ಸಮಯದಲ್ಲೇ ಅವರಲ್ಲಿ ಮಾಡಲಿಕಕ್ಕೆ ಸಾಧ್ಯವಾಗಿಲ್ಲ. ಇದು ಬಿಜೆಪಿಯ ಭದ್ರಕೋಟೆ, ಏನೇ ಆದರೂ ಬಿಜೆಪಿಗೆ ಮತ ಹಾಕುತ್ತೇವೆ ಎಂದು ನಂಬಿಕೊಂಡಿದ್ದಾರೆ. 2012ರಿಂದ ನಿರಂತರವಾಗಿ ಬಂದರು ಕುಸಿಯುತ್ತಾ ಬಂದಿದೆ. ಇದು ಹೀಗೆಯೇ ಮುಂದುವರಿದರೆ ಇನ್ನು ಬಂದರು ಕಾಣಲಿಕ್ಕೆ ಸಿಗೋದಿಲ್ಲ. ಕ್ಷುಲ್ಲಕ ಕಾರಣಗಳನ್ನು ಮುಂದಿಟ್ಟುಕೊಂಡು ಕಾಮಗಾರಿ ಚಾಲನೆಗೆ ಮೀನಾಮೇಶ ಎಣಿಸುತ್ತಿದ್ದಾರೆ. ಮೀನುಗಾಗರರೇ ೨೫-೩೦ ಲಕ್ಷ ಹಣ ಹಾಕಿ ಬಂದರೊಳಗೆ ಕೆರೆ ನಿರ್ಮಾಣ ಮಾಡಿಕೊಳ್ಳುತ್ತೇವೆ. ಮಾಡಿಲ್ಲವೆಂದರೆ ಬೇರೆ ಬಂದರುಗಳಿಗೆ ಹೋಗುವ ಸ್ಥಿತಿ ಇದೆ ಎಂದರು.

ಸಮಿತಿಯ ಮಾಜಿ ಅಧ್ಯಕ್ಷರಾದ ಚಂದ್ರ ಖಾರ್ವಿ, ವೆಂಕಟರಮಣ ಖಾರ್ವಿ, ಸೋಮಯ್ಯ ಖಾರ್ವಿ, ಉಪಾಧ್ಯಕ್ಷ ಶೇಖರ್ ಖಾರ್ವಿ, ಮಾರ್ಕೆಟಿಂಗ್ ಸಮಿತಿ ಅಧ್ಯಕ್ಷ ಶಂಕರ್ ಖಾರ್ವಿ, ಶ್ರೀಧರ್ ಖಾರ್ವಿ ಪತ್ರಿಕಾಗೋಷ್ಠಿಯಲ್ಲಿದ್ದರು.


Spread the love