ಆರೋಗ್ಯ ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರಿಗೆ ಸೇವಾ ಭದ್ರತೆ !

Spread the love

ಆರೋಗ್ಯ ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರಿಗೆ ಸೇವಾ ಭದ್ರತೆ !

ಬೆಂಗಳೂರು : ಆರೋಗ್ಯ ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರಿಗೆ ಸೇವಾ ಭದ್ರತೆ ಸಂಬಂಧ ನಿವೃತ್ತ ಐ.ಎ.ಎಸ್ ಅಧಿಕಾರಿ ಶ್ರೀನಿವಾಸಾಚಾರಿ ಅವರ “ಮಾನವ ಸಂಪನ್ಮೂಲ ನೀತಿ” ಸಮಿತಿ ವರದಿಯ ಅನುಷ್ಠಾನ ಕುರಿತಂತೆ ಕ್ಯಾಬಿನೆಟ್ ನಲ್ಲಿ ಮಂಡಿಸುವಂತೆ ಆರೋಗ್ಯ ಸಚಿವರಿಗೆ ಮುಖ್ಯಮಂತ್ರಿಗಳು ಸೂಚಿಸಿದ್ದಾರೆ ಎಂದು ವಿಧಾನಪರಿಷತ್ ಸದಸ್ಯ ಆಯನೂರು ಮಂಜುನಾಥ್ ತಿಳಿಸಿದ್ದಾರೆ.

ಕೊರೊನಾ ಸಂಕಷ್ಟದ ಸಮಯದಲ್ಲಿ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ಹಾಗೂ ರಾಷ್ಟ್ರೀಯ ಆರೋಗ್ಯ ಅಭಿಯಾನದ ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರಿಗೆ ಸೇವಾ ಭದ್ರತೆ ಮತ್ತು ವೇತನ ಪರಿಷ್ಕರಣೆ ಸಂಬಂಧ ಮಾನವ ಸಂಪನ್ಮೂಲ ನೀತಿ ವರದಿಯ ಕಡತವನ್ನು ಸಂಪುಟ ಸಭೆಯಲ್ಲಿ ಮಂಡಿಸುವಂತೆ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಆರೋಗ್ಯ ಸಚಿವರಿಗೆ ಹಾಗೂ ಸಂಬಂಧಿಸಿದ ಅಧಿಕಾರಿಗಳಿಗೆ ಮುಖ್ಯಮಂತ್ರಿಗಳು ಸೂಚನೆ ನೀಡಿದ್ದಾರೆ ಎಂದು ಭಾರತೀಯ ಮಜ್ದೂರ್ ಸಂಘದ ಗೌರವಾಧ್ಯಕ್ಷರೂ ಆಗಿರುವ ಆಯನೂರು ಮಂಜುನಾಥ್ ಹೇಳಿದ್ದಾರೆ.

ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರು, ಯಾವುದೇ ಭದ್ರತೆ ಇಲ್ಲದೇ ಅತ್ಯಂತ ಕಡಿಮೆ ವೇತನ ಪಡೆಯುತ್ತಾ, ಪ್ರಾಮಾಣಿಕವಾಗಿ ಜೀವನದ ಹಂಗನ್ನು ತೊರೆದು ಉತ್ತಮ ಸೇವೆ ನೀಡುತ್ತಿದ್ದು, ಸರ್ಕಾರ ಕೂಡಲೇ ನಿವೃತ್ತ ಐಎಎಸ್ ಅಧಿಕಾರಿ ಶ್ರೀನಿವಾಸಾಚಾರಿ ನೇತೃತ್ವದ ಸಲ್ಲಿಸಿದ ವರದಿ ಐದಾರು ತಿಂಗಳು ಕಳೆದರೂ ಜಾರಿ ಆಗಿರುವುದಿಲ್ಲ. ಕೂಡಲೇ ಈ ವರದಿ ಜಾರಿ ಮಾಡಿ ನೌಕರರು ಆತ್ಮಸ್ಥೈರ್ಯದಿಂದ ಕೆಲಸ ಮಾಡಲು ಅನುಕೂಲ ಮಾಡಿ ಕೊಡುವಂತೆ ತಾವು ಮಾಡಿದ ಮನವಿಗೆ ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂದಿಸಿರುವುದಾಗಿ ತಿಳಿಸಿದ್ದಾರೆ.

ಮುಖ್ಯಮಂತ್ರಿಗೆ ಮನವಿ ಸಲ್ಲಿಕೆ:

ಇದೆಲ್ಲದರ ನಡುವೆ ಕೋವಿಡ್ -19 ರೂಪಾಂತರ ವಿಷಮ ಪರಿಸ್ಥಿತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರ ಮಧ್ಯೆ ತಾರತಮ್ಯ ಸಲ್ಲದು. ಹಾಗಾಗಿ ಕೋವಿಡ್ ರಿಸ್ಕ್ ಇನ್ಸೆಂಟಿವ್ ಅನ್ನು ಎಲ್ಲಾ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರಿಗೆ ನೀಡಬೇಕು, ಕೊರೊನಾ ಸಂದರ್ಭದಲ್ಲಿ ಮೃತಪಟ್ಟ ಎಲ್ಲಾ ನೌಕರರ ಕುಟುಂಬಕ್ಕೆ ಪರಿಹಾರವನ್ನು ನೀಡಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿಗಳಿಗೆ ಆಯನೂರು ಮಂಜುನಾಥ್ ನೇತೃತ್ವದಲ್ಲಿ, ಸಂಘದ ರಾಜ್ಯ ಕಾರ್ಯದರ್ಶಿ ಶ್ರೀ ರುದ್ರೇಶ್, ಜಿಲ್ಲಾ ಘಟಕದ ಗೌರವಾಧ್ಯಕ್ಷ ಡಾ. ರಾಘವೇಂದ್ರ ಶಿಲ್ಪಿ, ಜಿಲ್ಲಾ ಉಪಾಧ್ಯಕ್ಷ ಶಂಕರ್, ನವೀನ್ ಮತ್ತು ಇತರೆ ಸಂಘದ ಪ್ರಮುಖ ಪದಾಧಿಕಾರಿಗಳು ಮನವಿ ಸಲ್ಲಿಸಿದ್ದಾರೆ.

ವೇತನ ಪರಿಷ್ಕರಣೆ, ಸೇವಾ ಭಧ್ರತೆ ನೀಡುತ್ತಾ ಸರ್ಕಾರ ರಚಿಸಿದ ಸಮಿತಿಯ ಶಿಫಾರಸ್ಸು ಅನುಷ್ಠಾನ ಸಂಬಂಧ ಸರ್ಕಾರ ಸಕಾರಾತ್ಮಕ ನಡೆ ಇಟ್ಟಿರುವುದು ಉತ್ತಮ ಎಂದು ಸಂಘದ ರಾಜ್ಯಾಧ್ಯಕ್ಷರಾದ ಶ್ರೀ ವಿಶ್ವರಾಧ್ಯ ಎಚ್. ಯಮೋಜಿ ತಿಳಿಸಿದ್ದಾರೆ.

ಬೇಡಿಕೆ ಈಡೇರಿಸುವ ಆಶಯ

ಆರೋಗ್ಯ ಸಚಿವರು ಸಹ 15 ದಿನದೊಳಗಾಗಿ ಕ್ಯಾಬಿನೆಟ್’’ ಗೆ ಮಂಡಿಸಲು ಸಿದ್ಧತೆ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿರುವುದು ಸಂತೋಷದ ವಿಷಯ. ನೌಕರರ ಬೇಡಿಕೆಗಳನ್ನು ಈಡೇರಿಸಿ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ವಿಷಯವಾಗಿ ರಾಷ್ಟ್ರದಲ್ಲೇ ಮಾದರಿಯಾಗಲಿ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್ ಸ್ವಾಮಿ ಆಶಯ ವ್ಯಕ್ತಪಡಿಸಿದ್ದಾರೆ.


Spread the love