ಆರೋಗ್ಯ ಕಾರ್ಯಕ್ರಮಗಳ ಅನುಷ್ಠಾನದಲ್ಲಿ ಉಡುಪಿ ಜಿಲ್ಲೆ ಮುಂಚೂಣಿಯಲ್ಲಿದೆ – ಡಾ.ನಾಗಭೂಷಣ ಉಡುಪ

Spread the love

ಆರೋಗ್ಯ ಕಾರ್ಯಕ್ರಮಗಳ ಅನುಷ್ಠಾನದಲ್ಲಿ ಉಡುಪಿ ಜಿಲ್ಲೆ ಮುಂಚೂಣಿಯಲ್ಲಿದೆ – ಡಾ.ನಾಗಭೂಷಣ ಉಡುಪ

ಉಡುಪಿ: ಕೇಂದ್ರ ಸರ್ಕಾರದ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳ ಪರಿಣಾಮಕಾರಿ ಅನುಷ್ಠಾನದಲ್ಲಿ ಉಡುಪಿ ಜಿಲ್ಲೆ ಮುಂಚೂಣಿಯಲ್ಲಿದೆ ಎಂದು ಡಿಎಚ್ಒ ಡಾ.ನಾಗಭೂಷಣ ಉಡುಪ ಸಂತಸ ವ್ಯಕ್ತಪಡಿಸಿದರು.

ಬುಧವಾರ ಪ್ರೆಸ್ಕ್ಲಬ್ನಲ್ಲಿ ಹಮ್ಮಿಕೊಂಡಿದ್ದ ಆರೋಗ್ಯ ಅರಿವು ಕಾರ್ಯಕ್ರಮದಲ್ಲಿ ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆಯ ಎಲ್ಲ ಸಿಬ್ಬಂದಿಯ ಸಂಘಟಿತ ಶ್ರಮದಿಂದ ಆರೋಗ್ಯ ಸೇವೆಗಳು ಸಮರ್ಪಕವಾಗಿ ಸಾರ್ವಜನಿಕರಿಗೆ ತಲುಪಿಸುವುದು ಸಾಧ್ಯವಾಗಿದೆ.ಆರೋಗ್ಯ ಇಲಾಖೆಯ ಕಾರ್ಯಗಳಲ್ಲಿ ಮಾಧ್ಯಮಗಳ ಸಹಕಾರವೂ ಅಭಿನಂದನೀಯ ಎಂದರು.

ಕೋವಿಡ್ ಸಂದರ್ಭದಲ್ಲಿ ಮಾಧ್ಯಮಗಳು ಸರ್ಕಾರದ ನಿಯಮಗಳು, ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳನ್ನು ಸಾರ್ವಜನಿರಿಗೆ ಅತ್ಯಂತ ಸಮರ್ಪಕವಾಗಿ ಮುಟ್ಟಿಸಿ ಜಾಗೃತಿ ಮೂಡಿಸಿವೆ. ಪ್ರಧಾನಮಂತ್ರಿ ಜನಾರೋಗ್ಯ ಕಾರ್ಡ್ಗಳ ಬಗ್ಗೆಯೂ ವ್ಯಾಪಕ ಪ್ರಚಾರ ನೀಡಬೇಕು. ಫಲಾನುಭವಿಗಳಿಗೆ ಯೋಜನೆಯ ಲಾಭ ಸಿಗುವಂತೆ ಮಾಡಬೇಕು ಎಂದು ಮನವಿ ಮಾಡಿದರು.

ಜಿಲ್ಲಾ ಆರ್ಸಿಎಚ್ ಅಧಿಕಾರಿ ಎಂ.ಜಿ.ರಾಮ ಮಾತನಾಡಿ, ಜಿಲ್ಲೆಯಲ್ಲಿ ಶೇ 40ರಷ್ಟು ಹೆರಿಗೆಗಳು ಸರ್ಕಾರಿ ಆಸ್ಪತ್ರೆಗಳಲ್ಲಿ ಶೇ 60ರಷ್ಟು ಹೆರಿಗೆಗಳು ಖಾಸಗಿ ಆಸ್ಪತ್ರೆಯಲ್ಲಿ ನಡೆಯುತ್ತಿವೆ. ಕುಂದಾಪುರ, ಕಾರ್ಕಳ, ಉಡುಪಿ, ಬೈಂದೂರು, ಬ್ರಹ್ಮಾವರ ಕೋಟದಲ್ಲಿ ಸಿಸೇರಿಯನ್ ಹೆರಿಗೆ ಸೌಲಭ್ಯಗಳಿದ್ದು ಮುಂದೆ ಶಿರ್ವ, ಹೆಬ್ರಿ, ನಿಟ್ಟೆಯಲ್ಲೂ ಸಿಸೇರಿಯನ್ ಸೌಲಭ್ಯ ನೀಡುವ ಸಿದ್ಧತೆಗಳು ನಡೆಯುತ್ತಿವೆ ಎಂದರು.

ಮಕ್ಕಳು ಹುಟ್ಟಿದ ಕೂಡಲೇ ಪೊಲಿಯೋ, ಹೆಪಟೈಟಿಸ್, ಬಿಸಿಜಿ ಲಸಿಕೆ ನೀಡಲಾಗುತ್ತಿದ್ದು, ನಂತರ ಕಾಲಕಾಲಕ್ಕೆ ತಕ್ಕಂತೆ ಲಸಿಕೆಗಳನ್ನು ಹಾಕಲಾಗುತ್ತಿದೆ ಎಂದರು. ಮಕ್ಕಳಲ್ಲಿ ಅತಿಸಾರ ಬೇಧಿ ತಡೆಗೆ ಪ್ರತಿ ಮನೆ ಮನೆಗೂ ಆಶಾ ಕಾರ್ಯಕರ್ತೆಯರ ಮೂಲಕ ಓಆರ್ಎಸ್ ಪ್ಯಾಕೇಟ್ಗಳನ್ನು ನೀಡಲಾಗುತ್ತಿದೆ.

ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಹೆರಿಗೆ ಮಾಡಿಸಿಕೊಂಡರೆ ಗ್ರಾಮೀಣ ಭಾಗಗಳಲ್ಲಿ ₹ 700, ನಗರ ಭಾಗಗಳಲ್ಲಿ ₹ 600 ದೊರೆಯಲಿದೆ. ಜನನಿ ಶಿಶು ಸುರಕ್ಷಾ ಯೋಜನೆಯಡಿ ಔಷಧ, ರಕ್ತ, ರೋಗಿಯ ಸಾಗಣೆ ವೆಚ್ಚವನ್ನು ಸಂಬಂಧಪಟ್ಟ ಆಸ್ಪತ್ರೆ ಭರಿಸಲಿದೆ ಎಂದರು.

ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಕೆ.ರಾಮರಾವ್ ಮಾತನಾಡಿ, ಕುಟುಂಬ ಕಲ್ಯಾಣ ಕಾರ್ಯಕ್ರಮಗಳಿಂದ ತಾಯಿ ಹಾಗೂ ಶಿಶು ಮರಣ ಪ್ರಮಾಣ ಇಳಿಕೆಯಾಗಿದೆ. ಕಾನೂನು ಬಾಹಿರ ಗರ್ಭಪಾತ ತಡೆಗೆ ಮದುವೆಯಾದ ದಂಪತಿಗೆ ಮಾಹಿತಿ ನೀಡಲಾಗುತ್ತಿದೆ. ಗರ್ಭ ನಿರೋಧಕವಾಗಿ ಇಂಜೆಕ್ಷನ್ ಹಾಗೂ ಮಾತ್ರೆಗಳನ್ನು ನೀಡಲಾಗುತ್ತಿದೆ ಎಂದರು.

ರಾಷ್ಟ್ರೀಯ ಶ್ರವಣದೋಷ ನಿಯಂತ್ರಣ ಹಾಗೂ ನಿವಾರಣೆ ಕಾರ್ಯಕ್ರಮದಡಿ ಕಿವುಡುತನ ಪತ್ತೆಗೆ ಒತ್ತು ನೀಡಲಾಗುತ್ತಿದೆ. ಸರ್ಕಾರಿ ಆಸ್ಪತ್ರೆಗಳಿಗೆ ಇಎನ್ಟಿ ತಜ್ಞರನ್ನು ನೇಮಕ ಮಾಡಿಕೊಳ್ಳಲಾಗಿದ್ದು, ಮಕ್ಕಳಲ್ಲಿ ಆರಂಭದಲ್ಲೇ ಕಿವುಡುತನ ಪತ್ತೆಗೆ ಅಂಗನವಾಡಿ ಕಾರ್ಯಕರ್ತೆಯರ ನೆರವು ಪಡೆದು ಶ್ರವಣದೋಷ ಇರುವ ಮಕ್ಕಳನ್ನು ಗುರುತಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅಗತ್ಯವಿದ್ದವರಿಗೆ ಉಚಿತವಾಗಿ ಶ್ರವಣ ಸಾಧನಗಳನ್ನು ವಿತರಿಸಲಾಗುತ್ತಿದೆ ಎಂದರು.

ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ನಾಗರತ್ನ ಮಾತನಾಡಿ, ಸಾಂಕ್ರಮಿಕ ರೋಗಗಳ ಪತ್ತೆಗೆ ನಿರಂತರ ಸಮೀಕ್ಷೆ, ಶಂಕಿತ ರೋಗಿಗಳ ಪರೀಕ್ಷೆ, ನೀರಿನ ಪರೀಕ್ಷೆಗಳ ಮೂಲಕ ಸಾಂಕ್ರಮಿಕ ರೋಗಗಳ ತಡೆಗೆ ಕ್ರಮ ಕೈಗೊಳ್ಳಲಾಗಿದೆ. ಆರಂಭದಲ್ಲೇ ರೋಗಪತ್ತೆ ಮಾಡಿ ಸಾವಿನ ಪ್ರಮಾಣ ಕಡಿಮೆ ಮಾಡಲು ಮಣಿಪಾಲದ ಕೆಎಂಸಿ ಸಹಭಾಗಿತ್ವದಲ್ಲಿ ಕ್ಯಾನರ್, ಸ್ತನ ಕ್ಯಾನ್ಸರ್, ಡೆಂಟಲ್ ಕ್ಯಾನ್ಸರ್ ಪತ್ತೆಗೆ ನಿರಂತರವಾಗಿ ಶಿಬಿರ ನಡೆಸಲಾಗುತ್ತಿದೆ ಎಂದರು.

ಜಿಲ್ಲಾ ಕುಷ್ಠ ರೋಗ ನಿರ್ಮೂಲನಾಧಿಕಾರಿ ಡಾ.ಲತಾ ನಾಯಕ್ ಮಾತನಾಡಿ, ಜಿಲ್ಲೆಯಲ್ಲಿ 31 ಕುಷ್ಟರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದು ಕುಷ್ಟ ರೋಗಿಗಳನ್ನು ಮುಟ್ಟುವುದರಿಂದ ರೋಗ ಹರಡುವುದಿಲ್ಲ. ಕುಷ್ಟರೋಗಿಗಳ ಜತೆ ಹಲವು ವರ್ಷಗಳ ಒಡನಾಟ ಹೊಂದಿದವರಲ್ಲಿ ಮಾತ್ರ ಕುಷ್ಟ ಕಾಣಿಸಿಕೊಳ್ಳುತ್ತದೆ ಎಂದರು.

ಮಾನಸಿಕ ಆರೋಗ್ಯ, ಅಂಧತ್ವ ನಿವಾರಣೆಗೆ ಒತ್ತು ನೀಡಲಾಗಿದ್ದು ಉಚಿತವಾಗಿ ಕಣ್ಣಿನ ತಪಾಸಣೆ, ಪೊರೆ ಶಸ್ತ್ರ ಚಿಕಿತ್ಸೆ , ಶಾಲಾ ಮಕ್ಕಳಿಗೆ ಉಚಿತವಾಗಿ ಕನ್ನಡಕಗಳನ್ನು ವಿತರಣೆ ಮಾಡಲಾಗುತ್ತಿದೆ ಎಂದರು.

ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಪ್ರಶಾಂತ್ ಭಟ್ ಮಾತನಾಡಿ, ಜಿಲ್ಲೆಯಲ್ಲಿ 18 ಮಂದಿಯಲ್ಲಿ ಮಲೆರಿಯಾ ಕಾಣಿಸಿಕೊಂಡಿದ್ದು ಶಿರಿಬೀಡು ವಾರ್ಡ್ನಲ್ಲಿ ರೋಗಿಗಳ ಸಂಖ್ಯೆ ಹೆಚ್ಚಾಗಿದೆ. ಸಾರ್ವಜನಿಕರು ರಾತ್ರಿ ಮನೆಯಿಂದ ಹೊರಗೆ ಹಾಗೂ ಬಯಲು ಪ್ರದೇಶದಲ್ಲಿ ಮಲಗಬಾರದು ಎಂದು ಸಲಹೆ ನೀಡಿದರು.

ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ್, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ ಇದ್ದರು.


Spread the love

Leave a Reply

Please enter your comment!
Please enter your name here