
ಆರ್.ಎಸ್.ಎಸ್. ಸಮಾನತೆಯನ್ನು ಸಹಿಸಲ್ಲ :ಸಿದ್ದರಾಮಯ್ಯ
ತಿ.ನರಸೀಪುರ: ಆರ್.ಎಸ್.ಎಸ್. ಸನಾತನ ಧರ್ಮದ ಆಚರಣೆಯ ಮುಖೇನ ಚತುರ್ವರ್ಣ ಪದ್ದತಿಯನ್ನು ಜಾರಿಗೆ ತರಲು ಪ್ರಯತ್ನಿಸುತ್ತಿದ್ದು,ಸಮಾಜದಲ್ಲಿನ ಸಮಾನತೆಯನ್ನು ಅದು ಸಹಿಸುವುದಿಲ್ಲ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದರು.
ಪಟ್ಟಣದ ಮಹದೇವಪ್ಪ ಸ್ಮಾರಕ ಭವನದಲ್ಲಿ ವರುಣಾ ಕ್ಷೇತ್ರದ ಹಲವು ಬಿಜೆಪಿ ಮತ್ತು ಬಿ.ಎಸ್.ಪಿ ಮುಖಂಡರ ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಪ್ರಸ್ತುತ ಸಂವಿಧಾನವನ್ನು ಆರ್.ಎಸ್.ಎಸ್ ಮತ್ತು ಬಿಜೆಪಿ ಪಕ್ಷ ಒಪ್ಪುವುದಿಲ್ಲ. ಮನುಸ್ಮೃತಿ,ಚತುರ್ವರ್ಣ ಪದ್ಧತಿ ಜಾರಿಯಾಗಬೇಕೆಂಬುದು ಅವರ ಅಭಿಲಾಷೆ. ದಲಿತ, ಅಲ್ಪ ಸಂಖ್ಯಾತರು, ಹಿಂದುಳಿದ ವರ್ಗಗಳು ಶೈಕ್ಷಣಿಕ,ರಾಜಕೀಯ ಮತ್ತು ಆರ್ಥಿಕವಾಗಿ ಏಳಿಗೆ ಆಗುವುದು ಅವರಿಗಿಷ್ಟ ಇಲ್ಲ. ಬಿಜೆಪಿ ಪಕ್ಷ ಮಾತಿಗೆ ಮಾತ್ರ ದಲಿತರ, ಅಲ್ಪಸಂಖ್ಯಾತ ಮತ್ತು ಹಿಂದುಳಿದ ವರ್ಗಗಳ ಪರ ಎಂದು ಹೇಳುತ್ತದೆ. ಆದರೆ ಅದರ ರಹಸ್ಯ ಕಾರ್ಯಾಸೂಚಿ ಬೇರೆಯೇ ಇದೆ. ಹಾಗಾಗಿ ಅಂಬೇಡ್ಕರ್ ಮೇಲೆ ಅಭಿಮಾನ ಮತ್ತು ಗೌರವ ಇರುವ ಯಾವೊಬ್ಬ ದಲಿತನು ಬಿಜೆಪಿ ಪಕ್ಷದಲ್ಲಿ ಇರಬಾರದು ಎಂದರು.
ಬಡ್ತಿ ಮೀಸಲಾತಿ, ಎಸ್.ಸಿ.ಪಿ ಮತ್ತು ಟಿ.ಎಸ್.ಪಿ ಯೋಜನೆಗಳನ್ನು ಜಾರಿಗೆ ತಂದಿದ್ದು ಕಾಂಗ್ರೆಸ್ ಪಕ್ಷ.ನಮ್ಮ ಅಧಿಕಾರಾವಧಿಯಲ್ಲಿ ಎಸ್.ಸಿ.ಪಿ ಮತ್ತು ಟಿ.ಎಸ್.ಪಿ ಗಾಗಿ 88 ಸಾವಿರ ಕೋಟಿಗಳನ್ನು ಮೀಸಲಿಡಲಾಗಿತ್ತು. ಬಿಜೆಪಿ ಸರ್ಕಾರ ಬೇಕಂತಲೇ ಅನುದಾನ ಕಡಿತ ಮಾಡಿದೆ. ಅಲ್ಲದೆ ಬಿಜೆಪಿ ಸರ್ಕಾರ ಬಜೆಟ್ ಗಾತ್ರವನ್ನು 2ಲಕ್ಷ ಕೋಟಿಗೆ ಇಳಿಸಿದ್ದು, ಈ ಪೈಕಿ 22ಸಾವಿರ ಕೋಟಿ ರೂಗಳನ್ನು ಮಾತ್ರ ಎಸ್.ಸಿ.ಪಿ ಮತ್ತು ಟಿ.ಎಸ್.ಪಿ ಗೆ ಮೀಸಲಿರಿಸಿದೆ. ಇದು ದಲಿತರ ಮೇಲೆ ಬಿಜೆಪಿ ಪಕ್ಷಕ್ಕಿರುವ ನೈಜ ಪ್ರೀತಿ ಎಂದು ಕಿಡಿಕಾರಿದರು.
ಬಿಜೆಪಿ ಪಕ್ಷ ಹಿಂದೂ ಧರ್ಮ ಸಂರಕ್ಷಕ ಎಂದು ಅಲ್ಲಲ್ಲಿ ಹೇಳುತ್ತದೆ. ವಿಪರ್ಯಾಸವೆಂದರೆ ಹಿಂದೂ ಧರ್ಮದಲ್ಲಿರುವ ದಲಿತರನ್ನು ಅವರು ಹಿಂದೂಗಳು ಎಂದು ಪರಿಗಣಿಸುವುದಿಲ್ಲ. ಅಲ್ಲದೆ ಯಾವ ಧರ್ಮವೂ ಕೂಡ ಅನ್ಯ ಧರ್ಮವನ್ನು ದ್ವೇಷಿಸುವಂತೆ ಹೇಳದು. ಆದರೆ, ಬಿಜೆಪಿ ಪಕ್ಷದವರು ಬೇಕಂತಲೇ ಕ್ರಿಶ್ಚಿಯನ್ ಮತ್ತು ಇಸ್ಲಾಂ ಧರ್ಮಗಳನ್ನು ಅಪಮಾನ ಮಾಡುತ್ತಿದ್ದು, ಇದು ಅವರ ಬೌದ್ಧಿಕ ದಿವಾಳಿತನದ ಪ್ರತೀಕ ಎಂದರು.