ಆರ್.ಎಸ್.ಎಸ್. ಸೇರುವ ಸುದ್ದಿಗಳು ಸತ್ಯಕ್ಕೆ ದೂರ – ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಸ್ಪಷ್ಟನೆ
ಬೆಂಗಳೂರು: ನಾನು ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ಸೇರುವುದು ಕೇವಲ ವದಂತಿ ಅಂತಹ ಯಾವುದೇ ರೀತಿಯ ಯೋಚನೆ ನನ್ನ ಮುಂದೆ ಇಲ್ಲ ಎಂದು ಮಾಜಿ ಐಪಿಎಸ್ ಅಧಿಕಾರಿ ಕೆ. ಅಣ್ಣಾಮಲೈ ಅವರು ಸ್ಪಷ್ಟಪಡಿಸಿದ್ದಾರೆ.
ಅವರು ಆರ್ ಎಸ್ ಎಸ್ ಸೇರಲಿದ್ದು ಕೊಯಮತ್ತೂರಿನಲ್ಲಿ ಆರ್ ಎಸ್ ಎಸ್ ಶಾಖೆಯನ್ನು ಆರಂಭಿಸಲಿದ್ದಾರೆ ಎಂಬ ಕೆಲವು ಮಾಧ್ಯಮಗಳ ವರದಿಗೆ ಸ್ಪಷ್ಟನೆ ನೀಡಿರುವ ಅಣ್ಣಾಮಲೈ ಅವರು ನಾನು ಒಂದು ನಿರ್ದಿಷ್ಟ ಸಂಸ್ಥೆಗೆ ಸೇರ್ಪಡೆಗೊಂಡಿದ್ದೇನೆ ಮತ್ತು ಅದರ ಶಾಖೆಯನ್ನು ಕೊಯಮತ್ತೂರಿನಲ್ಲಿ ಪ್ರಾರಂಭಿಸುತ್ತಿದ್ದೇನೆ ಎಂದು ನನ್ನ ಗಮನಕ್ಕೆ ತರಲಾಗಿದೆ. ಈ ಎಲ್ಲಾ ಫಾರ್ವರ್ಡ್ಗಳು ಮತ್ತು ಸಂದೇಶಗಳು ಸತ್ಯದಿಂದ ದೂರವಿದೆ ಮತ್ತು ನಾನು ಯಾವುದೇ ಸಂಸ್ಥೆಯಲ್ಲಿ ಯಾವುದೇ ಶಾಖೆಯಲ್ಲಿ ಸೇರಿಕೊಂಡಿಲ್ಲ. ನನ್ನ ರಾಜೀನಾಮೆಯನ್ನು ಇನ್ನೂ ಕೂಡ ಕೇಂದ್ರ ಸರ್ಕಾರ ಒಪ್ಪಿಕೊಂಡಿಲ್ಲ ಮತ್ತು ನಾನು ಹಿಂದಿನಂತೆ ಸರ್ಕಾರದ ಭಾಗವಾಗಿ ಮುಂದುವರಿಯುತ್ತಿದ್ದೇನೆ ಆದರೆ ಸಕ್ರಿಯವಾಗಿ ಸರ್ಕಾರದ ಸೇವೆಯಲ್ಲಿ ಪಾತ್ರ ವಹಿಸುತ್ತಿಲ್ಲ.
ನಾನು ನನ್ನ ಸಮಯವನ್ನು ಪ್ರಯಾಣ, ಜನರನ್ನು ಭೇಟಿಯಾಗುವುದರಲ್ಲಿ ಕಳೆಯುತ್ತಿದ್ದು ಇದು ನನ್ನ ಜ್ಞಾನ ಮತ್ತು ನಂಬಿಕೆಗಳ ವ್ಯಾಪ್ತಿಯನ್ನು ಹೆಚ್ಚಿಸಲು ಭಾರತದ ಎಲ್ಲಾ ಪ್ರಮುಖ ಧರ್ಮಗಳ ಧಾರ್ಮಿಕ ಮುಖ್ಯಸ್ಥರನ್ನು ಭೇಟಿಯಾಗುವುದನ್ನು ಇದು ಒಳಗೊಂಡಿದೆ. ಹಾಗೆಂದ ಮೇಲೆ ನಾನು ಒಂದು ನಿರ್ದಿಷ್ಟ ಧರ್ಮಕ್ಕಾಗಿ ನಿಲ್ಲುತ್ತೇನೆ ಮತ್ತು ಇತರರಿಗಾಗಿ ಅಲ್ಲ ಎಂದು ತಪ್ಪಾಗಿ ಯೋಚಿಸಬಾರದು.
ಒಮ್ಮೆ ನನ್ನ ರಾಜೀನಾಮೆಯನ್ನು ಅಧಿಕೃತವಾಗಿ ಅಂಗೀಕರಿಸಿದ ನಂತರ, ನನ್ನ ಭವಿಷ್ಯದ ಯೋಜನೆಗಳ ಬಗ್ಗೆ ನಾನು ಖಂಡಿತವಾಗಿಯೂ ನನ್ನ ನಿಲುವನ್ನು ಸ್ಪಷ್ಟಪಡಿಸುತ್ತೇನೆ. ಅಲ್ಲಿಯವರೆಗೆ ಇಂತಹ ಎಲ್ಲಾ ಉಹಾಪೋಹಗಳಿಂದ ದೂರವಿರಲು ಬಯಸುತ್ತೇನೆ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.