ಆಳ್ವಾಸ್ ನಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಕುರಿತು ವೆಬಿನಾರ್

Spread the love

ಆಳ್ವಾಸ್ ನಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಕುರಿತು ವೆಬಿನಾರ್

ಮೂಡುಬಿದಿರೆ: ಪ್ರಾಚೀನ ಕಾಲದಿಂದಲೂ ಭಾರತ ಶೈಕ್ಷಣಿಕ ರಂಗದಲ್ಲಿ ಸಾರ್ವಭೌಮತ್ವ ಸ್ಥಾಪಿಸಿದ್ದು, ಪ್ರಸ್ತುತ ಜಗತ್ತಿಗೆ ತಕ್ಕಂತೆ ನಮ್ಮ ಶಿಕ್ಷಣ ವ್ಯವಸ್ಥೆಯನ್ನು ಮರು ವಿನ್ಯಾಸಗೊಳಿಸುವ ಅವಶ್ಯಕತೆ ಇದೆ. ಇದಕ್ಕಾಗಿ ನಮ್ಮ ಸಾಂಪ್ರದಾಯಿಕ ವಿದ್ಯಾ ತತ್ವಗಳನ್ನು ತಳಹದಿಯಾಗಿಸಿ ಸಮಗ್ರ ಹಾಗೂ ಬಹುಶಿಸ್ತೀಯ ವಿಧಾನವನ್ನು ಶಿಕ್ಷಣ ರಂಗಕ್ಕೆ ಪರಿಚಯಿಸುವ ವಿನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಕೇಂದ್ರ ಸರಕಾರ ರೂಪಿಸುತ್ತಿದೆ. ಈ ಮೂಲಕ ಕೌಶಲ್ಯಪೂರ್ಣ ಮಾನವ ಸಂಪನ್ಮೂಲವನ್ನು ತಯಾರಿಗೊಳಿಸಿ ನಾಲ್ಕನೇ ಕೈಗಾರಿಕಾ ಕ್ರಾಂತಿ ಸಮಯದಲ್ಲಿ ಭಾರತವನ್ನು ಮುಂಚೂಣಿ ರಾಷ್ಟ್ರವಾಗಿಸುವ ಯೋಜನೆ ಕೇಂದ್ರದ ಮುಂದಿದೆ” ಎಂದು ಸುರತ್ಕಲ್ ಎನ್‌ಐಟಿಕೆಯ ಬೋರ್ಡ್ ಆಫ್ ಗವರ್ನರ್ಸ್ ಅಧ್ಯಕ್ಷ ಡಾ ಕೆ. ಬಲವೀರ ರೆಡ್ಡಿ ಹೇಳಿದರು.

ಆಳ್ವಾಸ್ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿAಗ್ ಆ್ಯಂಡ್ ಟೆಕ್ನಾಲಜಿ ಆಯೋಜಿಸಿದ್ದ ‘ ‘ರಾಷ್ಟ್ರೀಯ ಶಿಕ್ಷಣ ನೀತಿ- ಶಿಕ್ಷಕರ ಪಾತ್ರ’ ವೆಬಿನಾರ್ ನಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು. ನೂತನ ಶಿಕ್ಷಣ ನೀತಿಯು ಪಠ್ಯ ಕ್ರಮದಲ್ಲಿ, ಬೋಧನಾ ವಿಧಾನಗಳಲ್ಲಿ ಹಾಗೂ ಉನ್ನತ ಶಿಕ್ಷಣ ವಲಯದಲ್ಲಿ ಆಮೂಲಾಗ್ರ ಬದಲಾವಣೆ ತರಲಿದ್ದು, ಬದಲಾದ ಸ್ಪರ್ಧಾತ್ಮಕ ಜಗತ್ತಿಗೆ ತಕ್ಕಂತೆ ವಿದ್ಯಾರ್ಥಿಗಳನ್ನು ಸಿದ್ಧಪಡಿಸಲಿದೆ. ಇದರ ಜತೆಗೆ ರಾಷ್ಟ್ರ, ಭಾರತೀಯ ತತ್ವಗಳು, ಸಾಂವಿಧಾನಿಕ ಮೌಲ್ಯಗಳಿಗೆ ಈ ನೀತಿ ಒತ್ತು ಕೊಡಲಿದೆ ಎಂದು ಅವರು ತಿಳಿಸಿದರು.

೨೦೧೮ರ ವರದಿಯ ಪ್ರಕಾರ ನಮ್ಮ ದೇಶದಲ್ಲಿ ಕೇವಲ ೨೬.೩% ರಷ್ಟು ವಿದ್ಯಾರ್ಥಿಗಳು ಮಾತ್ರ ಉನ್ನತ ಶಿಕ್ಷಣಕ್ಕೆ ದಾಖಲಾಗಿದ್ದು, ಇದು ಆ ಕ್ಷೇತ್ರದಲ್ಲಿನ ಕೊರತೆಗಳನ್ನು ತೋರಿಸುತ್ತದೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಸರಕಾರ ಸಮಗ್ರ ಹಾಗೂ ಬಹುಶಿಸ್ತೀಯ ಕೋರ್ಸ್ಗಳಿಗೆ ಪ್ರಾಮುಖ್ಯತೆ ನೀಡಲು ನಿರ್ಧರಿಸಿದೆ. ತನ್ಮೂಲಕ ೨೦೩೫ರ ಹೊತ್ತಿಗೆ ೫೦% ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕೆ ದಾಖಲಾಗುವಂತೆ ಮಾಡುವ ಗುರಿಯನ್ನು ಹೊಂದಿದೆ. ಇದರೊಡನೆ ಶೈಕ್ಷಣಿಕ ಸಂಸ್ಥೆಗಳ ಸ್ಥಾಪನೆ, ಕಾರ್ಯ ವೈಖರಿ ಹಾಗೂ ಬೋಧನಾ ವಲಯದಲ್ಲಿಯೂ ರಚನಾತ್ಮಕ ಬದಲಾವಣೆಗಳಾಗಲಿವೆ. ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ಕಾಲೇಜು, ಖಾಸಗಿ ವಿವಿ, ಸರಕಾರಿ ವಿವಿ, ಡೀಮ್ಡ್ ವಿವಿ ಎಂಬ ಸಂಕೀರ್ಣ ವ್ಯವಸ್ಥೆಗಳು ಹೋಗಿ ‘ಯುನಿವರ್ಸಿಟಿ’ ಎಂಬ ಒಂದೇ ವ್ಯವಸ್ಥೆ ಕಾರ್ಯ ನಿರ್ವಹಿಸಲಿದೆ ಎಂಬ ಮಾಹಿತಿ ನೀಡಿದರು.

ಪದವಿ ಹಾಗೂ ಸ್ನಾತಕೋತ್ತರ ಪದವಿ ಅಧ್ಯಯನಗಳು ಗುಣಾತ್ಮಕ ಅಭಿವೃದ್ಧಿ ಹೊಂದಲಿದ್ದು, ಇಂಟಿಗ್ರೇಟೆಡ್ ಕೋರ್ಸ್ ಗಳನ್ನು ಪರಿಚಯಿಸಲಾಗುತ್ತದೆ. ಒಬ್ಬ ವಿದ್ಯಾರ್ಥಿ ಪದವಿ ಕಲಿಕೆಯ ಯಾವುದೇ ಹಂತದಲ್ಲಿ ಕೋರ್ಸ್ನ್ನು ಬಿಡುವ ಮತ್ತು ಯಾವುದೇ ಹಂತದಲ್ಲಿ ಮರು ಪ್ರವೇಶ ಪಡೆಯುವ ಅವಕಾಶ ಕಲ್ಪಿಸಲಾಗುವುದು. ಹಾಗೂ ವಿವಿಧ ಕಲಿಕಾ ಹಂತಗಳನ್ನು ರೂಪಿಸಲಾಗಿದ್ದು, ಪ್ರತಿ ಹಂತದ ಮುಕ್ತಾಯದ ಬಳಿಕ ವಿಭಿನ್ನ ಪ್ರಮಾಣ ಪತ್ರಗಳನ್ನು ವಿದ್ಯಾರ್ಥಿಗಳು ಪಡೆಯಬಹುದಾಗಿದೆ. ಪ್ರೊಫೆಷನಲ್ ಕೋರ್ಸ್ ಗಳಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಹತ್ವವಿರುವ ವಿಷಯಗಳಿಗೆ ಹೆಚ್ಚು ಪ್ರಾಮುಖ್ಯತೆ ಕೊಡಲಾಗುತ್ತದೆ. ಈ ಮೂಲಕ ರಾಷ್ಟ್ರೀಯ ಶಿಕ್ಷಣ ನೀತಿ ವಿದ್ಯಾರ್ಥಿ ಸ್ನೇಹಿಯಾಗಿರಲಿದೆ ಎಂದು ಅವರು ಅಭಿಪ್ರಾಯಪಟ್ಟರು.

ಹೊಸ ಶಿಕ್ಷಣ ನೀತಿಗೆ ಪೂರಕವಾಗಿ ಮಾನವ ಸಂಪನ್ಮೂಲವನ್ನು ಅಭಿವೃದ್ಧಿ ಪಡಿಸುವ ದೊಡ್ಡ ಜವಾಬ್ದಾರಿ ಶಿಕ್ಷಕರ ಮೇಲಿದ್ದು, ಅದಕ್ಕೆ ತಕ್ಕಂತೆ ವಿನೂತನ ಪ್ರಯೋಗಗಳನ್ನು ಅವರು ಮಾಡಬೇಕಿದೆ. ಜತೆಗೆ ಶಿಕ್ಷಕರೂ ಅಭಿವೃದ್ಧಿ ಹೊಂದಬೇಕಿದೆ ಎಂದು ವಿಶ್ಲೇಷಿಸಿದರು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಿವಿಧ ಶಿಕ್ಷಣ ಸಂಸ್ಥೆಗಳ ಉಪನ್ಯಾಸಕರು ಈ ಕರ‍್ಯಕ್ರಮದಲ್ಲಿ ಪಾಲ್ಗೊಂಡರು. ಕಂಪ್ಯೂಟರ್ ಸೈನ್ಸ್ ವಿಭಾಗದ ಉಪನ್ಯಾಸಕಿ ಮೇಘಾ ಹೆಗ್ಡೆ ಕಾರ್ಯಕ್ರಮ ನಿರ್ವಹಿಸಿದರು. ಸಂಸ್ಥೆಯ ಮ್ಯಾನೇಜ್‌ಮೆಂಟ್ ಟ್ರಸ್ಟೀ ವಿವೇಕ್ ಆಳ್ವ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಪ್ಲೇಸ್ ಮೆಂಟ್ ಆಫೀಸರ್ ಸುಶಾಂತ್ ಅನಿಲ್ ಲೋಬೊ ವೆಬಿನಾರ್ ನಲ್ಲಿ ಉಪಸ್ಥಿತರಿದ್ದರು.


Spread the love