Home Mangalorean News Kannada News ಆಳ್ವಾಸ್ ನುಡಿಸಿರಿ 2017 ಎರಡನೇ ದಿನದ ಗೋಷ್ಠಿಗಳು

ಆಳ್ವಾಸ್ ನುಡಿಸಿರಿ 2017 ಎರಡನೇ ದಿನದ ಗೋಷ್ಠಿಗಳು

Spread the love

ನಮ್ಮೊಳಗಿರುವ ದೇವರನ್ನು ಹುಡುಕಿ: ಎಸ್.ಷಡಕ್ಷರಿ

ಮೂಡುಬಿದಿರೆ:` ನಮ್ಮೊಳಗೆ ಬಂಗಾರದ ವ್ಯಕ್ತಿತ್ವವಿದೆ. ಆದರೆ ಮನುಷ್ಯ ತನ್ನ ಸಣ್ಣತನದಿಂದಾಗಿ ಮಣ್ಣಿನ ವಿಗ್ರಹವಾಗಿದ್ದಾನೆ. ನಮ್ಮ ಉನ್ನತ ನಡವಳಿಕೆಯಿಂದ ನಮ್ಮ ಒಳಗಿರುವ ಚಿನ್ನದ ವ್ಯಕ್ತಿತ್ವ ಗೋಚರಿಸುವಂತಾಗಬೇಕು’ ಎಂದು ಎಸ್.ಷಡಕ್ಷರಿ ಹೇಳಿದರು.

 ಆಳ್ವಾಸ್ ನುಡಿಸಿರಿಯಲ್ಲಿ ನಡೆದ `ಧಾರ್ಮಿಕ ಬಹುತ್ವ-ಸಹಬಾಳ್ವೆಯ ನೆಲೆ’ ವಿಚಾರಗೋಷ್ಠಿಯಲ್ಲಿ ಆರಾಧನಾ ದೃಷ್ಟಿಯ ಕುರಿತಾಗಿ ತಮ್ಮ ವಿಚಾರಗಳನ್ನು ಹಂಚಿಕೊಂಡರು. ದೇವರು ನಮ್ಮಲ್ಲೇ ಇದ್ದಾನೆ. ಈ ದೇವರನ್ನು ವಿವಿಧ ಬಗೆಯಲ್ಲಿ ತಲುಪುವ, ಆರಾಧಿಸುವ ಮಾರ್ಗವನ್ನು ನಮ್ಮ ಪರಂಪರೆ ಹೇಳಿಕೊಟ್ಟಿದೆ. ವಿವಿಧ ದಾಸರು, ದೈವಭಕ್ತರು ಹಾಡಿದ ಕೀರ್ತನೆಗಳು, ರಚಿಸಿದ ಶ್ಲೋಕಗಳು ಆರಾಧನೆಗಿರುವ ಮಹತ್ವವನ್ನು ತಿಳಿಸಿಕೊಡುತ್ತವೆ. ದೇವರು ಒಬ್ಬನೇ ಆದರೂ ಅವನಿಗೆ ನಾವು ಕೊಟ್ಟಿರುವ ಹೆಸರುಗಳು, ರೂಪಗಳು ಬೇರೆ. ನಮ್ಮ ಔನ್ನತ್ಯದಲ್ಲಿ ಅಡಗಿರುವ ಆ ದೈವತ್ವವನ್ನು ಹುಡುಕುವ, ತಲುಪುವ ಪ್ರಯತ್ನ ನಮ್ಮಿಂದಾಗಬೇಕು ಎಂದರು.

  ದೇವರ ಶಕ್ತಿ, ಕಾರಣಿಕದ ಕುರಿತು ಇರುವ ಚರ್ಚೆಗಳ ಬಗ್ಗೆ ಮಾತನಾಡಿದ ಅವರು, ನಮ್ಮ ಇಷ್ಟಾರ್ಥಗಳನ್ನು ನೆರವೇರಿಸುವ ದೇವರು ಮಾತ್ರ ಶಕ್ತಿವಂತ; ಬಾಕಿ ದೇವತೆಗಳು ದುರ್ಬಲರು ಎಂದು ಜನ ವ್ಯಾಖ್ಯಾನಿಸುತ್ತಾರೆ. ಆದರೆ ನಮ್ಮೊಳಗಿನ ನಂಬಿಕೆ, ಆರಾಧನೆಯ ಬಗೆ ಗಟ್ಟಿಯಾದಾಗ ಮಾತ್ರ ದೇವರು ಗಟ್ಟಿಯಾಗುತ್ತಾನೆ, ನಂಬಿಕೆ ಹುಸಿಯಾಗಿದ್ದರೆ ಎಂದಿಗೂ ದೇವರನ್ನು ತಲುಪಲು ಸಾಧ್ಯವಿಲ್ಲ ಎಂದು ಷಡಕ್ಷರಿ ಅಭಿಪ್ರಾಯಪಟ್ಟರು. ತಮ್ಮ ವಿಚಾರಮಂಡನೆಯ ಸಂದರ್ಭದಲ್ಲಿ ಖ್ಯಾತ ದಾಸರ, ಭಕ್ತಿಪಂಥದ ಕರ್ತೃಗಳ ಶ್ಲೋಕಗಳು, ಕೀರ್ತನೆಗಳನ್ನು ಅವರು ಪ್ರಸ್ತುತಪಡಿಸಿದರು.

  ಗೋಷ್ಠಿಯಲ್ಲಿ ಆಳ್ವಾಸ್ ನುಡಿಸಿರಿಯ ಸಮ್ಮೇಳನಾಧ್ಯಕ್ಷ ಡಾ.ನಾಗತಿಹಳ್ಳಿ ಚಂದ್ರಶೇಖರ್, ಸಾಹಿತಿ ಡಾ. ನಾ.ದಾ.ಶೆಟ್ಟಿ ಉಪಸ್ಥಿತರಿದ್ದರು.

ಪಂಥೀಯವಾದಿಗಳ ಆರ್ಭಟದಿಂದ ಧರ್ಮಕ್ಕೆ ಧಕ್ಕೆಯಾಗುವುದಿಲ್ಲ: ವೀಣಾ ಬನ್ನಂಜೆ

ಮೂಡುಬಿದಿರೆ:  `ನಮ್ಮ ದೇಶದಲ್ಲಿ ಇಂದು ಜಾತಿ, ಮತ, ಎಡ-ಬಲ ವಾದಗಳನ್ನು ಬೆಂಬಲಿಸುತ್ತಿರುವವರು ನಿಜಧರ್ಮದ ಒಳಹುಗಳನ್ನು ಅರಿತಿಲ್ಲ; ಅನುಭಾವವನ್ನು ಅನುಭವಿಸಿಲ್ಲ. ಇಂತಹವರು ಕೇವಲ ನಾಲ್ಕು ದಿನ ದಿನಪತ್ರಿಕೆಗಳ ಮುಖ್ಯ ಸುದ್ದಿಯಾಗುತ್ತಾರೆ ಅಷ್ಟೆ. ಆದರೆ ಇಂತಹವರ ಆರ್ಭಟದಿಂದ ವಿಶಾಲ ವ್ಯಾಪ್ತಿಯ ಧರ್ಮಕ್ಕೆ ಯಾವುದೇ ಧಕ್ಕೆಯೂ ಆಗುವುದಿಲ್ಲ’ ಎಂದು ಆಧ್ಯಾತ್ಮಿಕ ಬರಹಗಾರ್ತಿ ವೀಣಾ ಬನ್ನಂಜೆ ಹೇಳಿದರು.

  ಆಳ್ವಾಸ್ ನುಡಿಸಿರಿಯಲ್ಲಿ ನಡೆದ `ಧಾರ್ಮಿಕ ಬಹುತ್ವ-ಸಹಬಾಳ್ವೆಯ ನೆಲೆ’ ವಿಚಾರಗೋಷ್ಠಿಯಲ್ಲಿ ಅನುಭಾವದ ದೃಷ್ಟಿಯ ಬಗ್ಗೆ ಅವರು ತಮ್ಮ ವಿಚಾರ ಮಂಡಿಸಿದರು. ನಮಗೆ ದಕ್ಕುವ ಇಂದ್ರಿಯಾತೀತ ಅನುಭವವೇ ಅನುಭಾವ. ಅನುಭವಿಸದಿದ್ದರೆ ಅನುಭಾವ ನಮ್ಮ ಸ್ಪರ್ಶಕ್ಕೂ ಬರಲಿಕ್ಕಿಲ್ಲ. ಅನುಭಾವಿ ಪ್ರತಿ ಅಣುವನ್ನೂ ಪರಿಗಣಿಸುತ್ತಾನೆ. ಅಕ್ಕಮಹಾದೇವಿ, ಬುದ್ಧನಂತಹವರು ಅನುಭಾವದ ಜೀವನ ನಡೆಸಿದರು. ಧರ್ಮದ ಶ್ರೇಷ್ಠತೆಯನ್ನು ಅವರು ಎತ್ತಿಹಿಡಿದರು. ಆದರೆ ಇಂತಹ ದೇಶದಲ್ಲಿ ಇಂದು ಮತೀಯವಾದಗಳು ಹೆಚ್ಚುತ್ತಿವೆ. ಇಂತಹ ವ್ಯವಸ್ಥೆಯನ್ನು ಬದಲಾಯಿಸಬೇಕೆಂದರೆ  ಯಾವುದೇ ಪರ್ಯಾಯವನ್ನು ನೀಡದ ಅನುಭಾವಿ ಮಾರ್ಗವೇ ಆಯ್ಕೆಗೆ ಸೂಕ್ತವೆನಿಸುತ್ತದೆ ಎಂದು ಅವರು ಪ್ರತಿಪಾದಿಸಿದರು.

ಧರ್ಮ ಪರಂಪರೆಯನ್ನು ವಿಶ್ಲೇಷಿಸಿದ ವೀಣಾ ಬನ್ನಂಜೆ, ನಮ್ಮಲ್ಲಿ ಧಾರ್ಮಿಕಧಾರೆ, ಸಮಾನಾಂತರ ಧಾರೆ ಹಾಗೂ ಅನುಭಾವದ ಧಾರೆ ಎಂಬ ಪ್ರತ್ಯೇಕ ವಿಚಾರಗಳಿವೆ. ಶಂಕರಾಚಾರ್ಯ, ರಾಮಾನುಜರು ಹಾಗೂ ಬುದ್ಧ ಇವರೆಲ್ಲ ಪ್ರಧಾನ ಧರ್ಮಕ್ಕೆ ತಮ್ಮ ಕೊಡುಗೆಗಳನ್ನು ಕೊಟ್ಟಿದ್ದಾರೆ. ಬಸವಣ್ಣ ಇವರೆಲ್ಲರನ್ನು ಮೀರಿ ನಿಂತು ವೈದಿಕ ಧರ್ಮದ ಕಟ್ಟುನಿಟ್ಟುಗಳಿಗೆ , ಮಡಿವಂತಿಕೆಗಳಿಗೆ ವಿರುದ್ಧವಾಗಿ ಹೊಸ ಆಚರಣೆಗಳನ್ನು ಸಮಾನಾಂತರ ಧಾರೆಗೆ ನೀಡಿದರು. ನಂತರ ಬಂದ ಮಧ್ವಾಚಾರ್ಯರು ಅದಾಗಲೇ ಬಂದಿದ್ದ ಅದ್ವೈತ ಸಿದ್ಧಾಂತ ಹಾಗೂ ಬಸವಣ್ಣನ ವಿಚಾರಧಾರೆಗಳಿಗೆ ಸಂಪೂರ್ಣ ವಿರುದ್ಧವಾದ ದ್ವೈತ ಪರಂಪರೆಯನ್ನು ಪ್ರಚುರಪಡಿಸಿದರು. ಈ ಎರಡೂ ಧರ್ಮಧಾರೆಗಳಿಗಿಂತ ವಿಭಿನ್ನವಾದದ್ದು ಅನುಭಾವದ ಧಾರೆ. ಅನುಭವವನ್ನು ಪಡೆದು ಅದನ್ನು ಅಳವಡಿಸಿಕೊಳ್ಳುವುದು, ಅದರಂತೆ ನಡೆಯುವುದು ತುಂಬಾ ಕಷ್ಟ ಎಂದು ಅಭಿಪ್ರಾಯಪಟ್ಟರು.

   ಅನುಭಾವದ ಜೀವನ ನಡೆಸುವುದು ತುಂಬಾ ಕಷ್ಟ. ಅನುಸಂಧಾನ ಇದ್ದಾಗ ಮಾತ್ರ ಅನುಭಾವ ಸಾಧ್ಯ. ಬುದ್ಧ, ಅಕ್ಕಮಹಾದೇವಿಯರನ್ನು ಶ್ರೇಷ್ಠ ಉದಾಹರಣೆಗಳಾಗಿ ನೀಡುತ್ತಾರೆಯೇ ಹೊರತು ಅವರಂತೆ ಬದುಕಿ ತೋರಿಸಲು ಯಾರಿಗೂ ಸಾಧ್ಯವಿಲ್ಲ. ಯಾವಾಗ ಶ್ರೇಷ್ಠವ್ಯಕ್ತಿಗಳನ್ನು ಅನುಸರಿಸಲು ಸಾಧ್ಯವಿಲ್ಲವೋ ಆವಾಗ ನಾವು ಅವರನ್ನು ದೇವರನ್ನಾಗಿ ಮಾಡುತ್ತೇವೆ. ಇದು ನಮ್ಮ ಮುಂದಿರುವ ಪರಿಹಾಸ್ಯ ಎಂದು ವೀಣಾ ಬನ್ನಂಜೆ ಹೇಳಿದರು.

  ವಿಚಾರಗೋಷ್ಠಿಯಲ್ಲಿ ನುಡಿಸಿರಿ ಸಮ್ಮೇಳನಾಧ್ಯಕ್ಷ ಡಾ.ನಾಗತಿಹಳ್ಳಿ ಚಂದ್ರಶೇಖರ್, ಸಾಹಿತಿ ಡಾ.ನಾ.ದಾ. ಶೆಟ್ಟಿ ಉಪಸ್ಥಿತರಿದ್ದರು.

ಜ್ಞಾನದ ಹಸಿವಿಗೆ ಪುಸ್ತಕಗಳೇ ಆಹಾರ- ಅಪ್ಪಾ ಸಾಹೇಬ ಅಲಿಬಾದಿ

ಮೂಡಬಿದಿರೆ ಡಿ. 2: ಜನರು ಪುಸ್ತಕಗಳನ್ನು ಓದುವ ಹವ್ಯಾಸವನ್ನು ರೂಡಿಸಿಕೊಳ್ಳಬೇಕು. ಜ್ಞಾನದ ಹಸಿವಿಗೆ ಪುಸ್ತಕಗಳೇ ಆಹಾರ ಎಂದು ಕವಿ ಅಪ್ಪಾ ಸಾಹೇಬ ಅಲಿಬಾದಿ, ಅಥಣಿ ಹೇಳಿದರು.

ಆಳ್ವಾಸ್ ನುಡಿಸಿರಿ-2017ರ ಪ್ರಯುಕ್ತ ರತ್ನಾಕರವರ್ಣಿ ವೇದಿಕೆಯಲ್ಲಿ ಆಯೋಜಿಸಿದ್ದ ಕವಿಸಮಯ-ಕವಿನಮನ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಯಾಗಿ ಮಾತನಾಡಿದರು.

ಹಿಂದಿನ ಕಾಲದಲ್ಲಿ ಜನರಿಗೆ ಪುಸ್ತಕಗಳೇ ಮನರಂಜನಾಮಾಧ್ಯಮಗಳಾಗಿದ್ದವು. ಆದರೆ ಈ ಎಲೆಕ್ಟ್ರನಿಕ್ ಯುಗದಲ್ಲಿ ಕೇವಲ ಟಿ.ವಿ., ಮೊಬೈಲ್‍ಗಳಿಗೆ ಜನ ಮಾರುಹೋಗುತ್ತಿದ್ದಾರೆ. ಪುಸ್ತಕ ಪ್ರೀತಿ ಕಡಿಮೆಯಾಗಿದೆ ಎಂದು ಹೇಳಿದರು.

ಪುಸ್ತಕವನ್ನು ತಲೆ ತಗ್ಗಿಸಿ ಓದಿದರೆ ಮುಂದೆ ಅದು ತಲೆಯೆತ್ತಿ ನಿಲ್ಲುವಂತೆ ಮಾಡುತ್ತದೆ. ಓದುವಿಕೆಯಿಂದ ನಮ್ಮ ಬೌದ್ಧಿಕ ಮಟ್ಟ ಹೆಚ್ಚುತ್ತದೆ. ಆದರೆ ಮೊಬೈಲ್ ಎಂಬ ಮಾಯಜಾಲದೊಳಗೆ ಸಿಕ್ಕ ವ್ಯಕ್ತಿ ಅದರಿಂದ ಹೊರಬಂದು ಸಾಧನೆಯ ಹಾದಿಯಲ್ಲಿ ಸಾಗುವುದು ಕಷ್ಟಸಾಧ್ಯ ಎಂದು ಅಭಿಪ್ರಾಯಪಟ್ಟರು.

ರೈತರ ಬಗ್ಗೆ ಮಾತನಾಡುತ್ತಾ, ರೈತರು ಸಂಕಷ್ಟದಲ್ಲಿದ್ದಾರೆ. ಅವರ ಮೊರೆ ಕೇಳುವವರಿಲ್ಲ. ನಾನು ರೈತರ ಕಷ್ಟವನ್ನು ಹತ್ತಿರದಿಂದ ಬಲ್ಲವನಾಗಿದ್ದೇನೆ. ಅನುಭವಿಸಿದ್ದೇನೆ. ರೈತರ ಆತ್ಮಹತ್ಯೆಯ ಪ್ರಮಾಣದಲ್ಲಿ ಕರ್ನಾಟಕಕ್ಕೆ ಎರಡನೇ ಸ್ಥಾನ ಇದೆ ಎಂದಾದರೆ ರೈತರ ಬದುಕು ಎಷ್ಟು ದುಸ್ತರವಾಗಿದೆ ನೀವೆ ಯೋಚಿಸಿ ಎಂದರು.

ಕಾರ್ಯಕ್ರಮದಲ್ಲಿ ರೈತರ ನೋವಿನ ಕುರಿತಾಗಿ ಅಪ್ಪಾ ಸಾಹೇಬ ಅಲಿಬಾದಿ ಬರೆದ ಹಾಡನ್ನು ಹಿನ್ನೆಲೆಗಾಯಕ ರವೀಂದ್ರ ಪ್ರಭು ಹಾಡಿದರು.

ತಾಯಿ ಸಾಕುವವರೂ ಸಮಾಜಕ್ಕೆ ಬೇಕು : ಪ್ರೊ. ಎಚ್. ರಮೇಶ್ ಕೆದಿಲಾಯ

“ತಾಯಿ ಸಾಕುವವರೂ ಬೇಕಲ್ಲ, ನಮಗೆ ನಿಮಗೆ ಈ ಸಮಾಜಕ್ಕೆ” ಎಂಬ ಒಂದು ವಾಕ್ಯಕ್ಕೆ ಸಿಡಿದ ಚಪ್ಪಾಳೆಗಳು ಅವರ ಮಾತುಗಳು ಜನರ ಮನಸ್ಸಿಗೆ ನಾಟಿತೆಂಬುವುದಕ್ಕೆ ಸಾಕ್ಷಿಯಾಗಿತ್ತು. ಆಳ್ವಾಸ್ ನುಡಿಸಿರಿ 2017ರ ಕವಿನಮನ ಕಾರ್ಯಕ್ರಮದಲ್ಲಿ ಪ್ರೊ. ಎಚ್. ರಮೇಶ್ ಕೆದಿಲಾಯ ಅವರ ‘ನಾಯಿ ಸಾಕುತ್ತಾರೆ’ ಎಂಬ ಕವನ ವಾಚನಕ್ಕೆ ಸಿಕ್ಕ ಪ್ರತಿಕ್ರಿಯೆ ಹೀಗಿತ್ತು.

“ಅಕಾಲದಲ್ಲಿ ಅಂಧನಾದ ವ್ಯಕ್ತಿಗೆ ಎರಡು ರೀತಿಯ ಜನರು ನೆನಪಿರುತ್ತಾರೆ. ಒಂದು ಮುಖವಿರುವವರು ಅಂದರೆ ದೃಷ್ಟಿ ಇದ್ದಾಗ ಕಂಡ ಮುಖಗಳು, ಮತ್ತೊಂದು ಮುಖವಿಲ್ಲದವರು, ಆತ ಅಂಧನಾದ ಮೇಲೆ ಸಂಧಿಸಿದ ವ್ಯಕ್ತಿಗಳು. ಆದರೆ ನಮ್ಮೆಲ್ಲರಿಗೂ ಕಣ್ಣಿದ್ದೂ ಮುಖವಿಲ್ಲದವರ ಸಂಖ್ಯೆ ಹೆಚ್ಚುತ್ತಿದೆ. ನಮ್ಮ ತಂದೆ-ತಾಯಿ, ಬಂಧು-ಬಳಗದವರೇ ನಮಗೆ ಕಾಣದಾಗಿದ್ದಾರೆ” ಎಂದು ಅಭಿಪ್ರಾಯಪಟ್ಟರು.

“ಒಬ್ಬರ ಒಳ್ಳೆಯ ಕೆಲಸವನ್ನು ಮೆಚ್ಚುವಂತಹ ಅಂತರಾತ್ಮವನ್ನು ನಾವಿಂದು ಕಳೆದುಕೊಳ್ಳುತ್ತಿದ್ದೇವೆ. ಧರ್ಮಕ್ಕೆ ಖುಷಿ ಹಂಚುವುದಕ್ಕೂ ಹಿಂಜರಿಯುತ್ತಿದ್ದೇವೆ. ಈ ಮನೋಭಾವವನ್ನು ಬದಲಿಸುವ ಕಾರ್ಯದಲ್ಲಿ ಕಾವ್ಯ ಮುನ್ನಡೆಯಬೇಕು. ಕಾರಣ ಅನುಭವ ಅಂತರಾತ್ಮ ಮುಟ್ಟಿದಾಗಲೇ ಕಾವ್ಯ ಸೃಜಿಸುವುದಕ್ಕೆ ಸಾಧ್ಯ” ಎಂದವರು ಪ್ರತಿಪಾದಿಸಿದರು.

“ನಾಯಿ ಸಾಕುವ ವ್ಯವಧಾನವಿರುವ ಇಂದಿನ ಯುವಜನತೆಗೆ, ತನ್ನ ತಾಯಿಯನ್ನು ನೋಡಿಕೊಳ್ಳುವುದು ಕಷ್ಟವಾಗುತ್ತಿದೆ. ಒಂದು ಶ್ವಾನದ ಬಗೆಗಿರುವ ಆಸ್ಥೆ ಕೂಡ ತನ್ನ ಹೆತ್ತವರ ವಿಷಯದಲ್ಲಿ ಇಲ್ಲವಾಗುತ್ತಿದೆ. ಅವರು ಅಪೇಕ್ಷಿಸುವ ಎರಡು ಪ್ರೀತಿಯ ಮಾತು ಸಹ ಅವರ ಪಾಲಿಗೆ ಭಾರವಾಗುತ್ತಿದೆ” ಎಂದು ವಿಡಂಬನಾತ್ಮವಾಗಿ ಇಂದಿನ ಸಂಬಂಧಗಳ ಪರಿಸ್ಥಿಯನ್ನು ತಮ್ಮ ಕವನದ ಮುಖೇನ ವಾಚಿಸಿದರು.

ಪ್ರೊ. ಎಚ್. ರಮೇಶ್‍ರ “ನಾಯಿ ಸಾಕುತಾರೆ” ಕವನವನ್ನು ಎಮ್.ಎಸ್.ಗಿರಿಧರ್ ರಾಗ ಸಂಯೋಜನೆಯಲ್ಲಿ ಸಂಗೀತ ಬಾಲಕೃಷ್ಣ ಗಾಯನ ಪ್ರಸ್ತುತಪಡಿಸಿದರು. ಅದಕ್ಕೆ ಬಾಗೋರು ಮಾರ್ಕಂಡೇಯ ತಮ್ಮ ಕುಂಚದ ಮೂಲಕ ಚಿತ್ರ ರೂಪ ನೀಡಿದರು.

ಕಾರ್ಯಕ್ರಮದಲ್ಲಿ ಆಳ್ವಾಸ್ ನುಡಿಸಿರಿಯ ಸರ್ವಾಧ್ಯಕ್ಷರಾದ ಟಾ.ನಾಗತಿಹಳ್ಳಿ ಚಂದ್ರಶೇಖರ್, ನುಡಿಸಿರಿಯ ಉಪಾಧ್ಯಕ್ಷರಲ್ಲೊಬ್ಬರಾದ ಡಾ.ಜಯಪ್ರಕಾಶ್ ಮಾವಿನಕುಳಿ ಉಪಸ್ಥಿತರಿದ್ದರು.

ಕವಿಸಮಯ-ಕವಿನಮನ : ಡಾ. ಲತಾ ಗುತ್ತಿ

  ಕಾವ್ಯವು ಸಾಹಿತ್ಯದ ಕೇಂದ್ರ ಹಾಗೂ ಸಮಸ್ತವಾಗಿದೆ. ಹಿಂದೆ ಕವಿಗಳು ತಮ್ಮ ಕಾವ್ಯದಲ್ಲಿ ಪುರಾಣ, ಇತಿಹಾಸವನ್ನು ಬಳಸುತ್ತಿದ್ದರು. ಕಾವ್ಯದ ಮೂಲಕ ಕಥೆ, ನಾಟಕ ಮಾಡುತ್ತಿದ್ದರು. ಕಥೆ, ಕಾದಂಬರಿ, ನಾಟಕಗಳಿಗಿಂತ ಕಾವ್ಯವೇ ಆಸಕ್ತಿದಾಯಕವಾದದ್ದು ಎಂದು ಡಾ.ಲತಾ ಗುತ್ತಿ ಹೇಳಿದರು.

ಇವರು ಆಳ್ವಾಸ್ ನುಡಿಸಿರಿಯಲ್ಲಿ ಆಯೋಜಿಸಿದ್ದ ಕವಿಸಮಯ-ಕವಿನಮನ ಎಂಬ ಕಾರ್ಯಕ್ರಮದಲ್ಲಿ ಕವನ ವಾಚಿಸಿ ಮಾತನಾಡಿದರು.

ಭಾರತದ ಮಹಾಕಾವ್ಯಗಳು ಮಾತ್ರವಲ್ಲದೆ ವಿದೇಶಗಳ ಮಹಾಕಾವ್ಯಗಳೂ ಸಹ ಬಹಳ ಹಿಂದಿನ ಇತಿಹಾಸ ಹೊಂದಿದೆ, ಅವುಗಳೂ ಸಹ ನಮ್ಮ ಕಾವ್ಯಗಳಷ್ಟೇ ಪ್ರಸಿದ್ಧವಾಗಿದೆ. ಗ್ರೀಕ್‍ನ ಮಹಾಕಾವ್ಯಗಳಾದ ಇಲಿಯಡ್-ಒಡಿಸ್ಸಿಗಳಿಗೆ ಮೂರುಸಾವಿರ ವರ್ಷಗಳ ಇತಿಹಾಸವಿದೆ ಹಾಗೂ ಗಝಲ್, ಸೂಫಿಗಳಿಗೂ ಸಾವಿರಾರು ವರ್ಷಗಳ ಇತಿಹಾಸವಿದೆ ಎಂದು ಹೇಳಿದರು.

20ನೇ ಶತಮಾನದಲ್ಲಿ ನವೋದಯ, ನವ್ಯ, ಬಂಡಾಯ ಹೀಗೆ ಅನೇಕ ಪ್ರಭೇದದ ಕಾವ್ಯಗಳು ರೂಪುಗೊಂಡಿತ್ತು. ಇವೆಲ್ಲಾ ಒಂದೊಂದು ಕಾಲಘಟ್ಟದಲ್ಲಿ ಬಂದು ಹೋಗುತ್ತದೆ. ಆದರೆ ಪ್ರೀತಿ-ಪ್ರೇಮದ ಬಗ್ಗೆ ಇರುವ ಕಾವ್ಯಗಳು ಹಿಂದಿನಿಂದಲೂ ನಿರಂತರವಾಗಿದೆ. ಕಥೆ, ಕಾದಂಬರಿಗಳಿಗೆ ಕೇವಲ 120 ವರ್ಷ ಇತಿಹಾಸವಿದೆ ಆದರೆ ಕಾವ್ಯಗಳಿಗೆ ಸಾವಿರಾರು ವರ್ಷ ಇತಿಹಾಸವಿರುವುದರಿಂದ ಕಾವ್ಯವು ನನ್ನನ್ನು ಆಕರ್ಷಿಸಿತು. ಹಳೆಗನ್ನಡದ ಕಾವ್ಯಗಳು ನನಗೆ ಖುಷಿ ನೀಡುತ್ತದೆ ಎಂದು ಕಾವ್ಯದ ಬಗೆಗಿನ ತಮ್ಮ ಆಸಕ್ತಿಗೆ ಕಾರಣವನ್ನು ತಿಳಿಸಿದರು.

ಹಿಂದೆ ರಾಜರು ಇಂತಹ ಕಲೆಗಳಿಗೆ ಪ್ರೋತ್ಸಾಹ, ಆಶ್ರಯ ನೀಡುತ್ತಿದ್ದರು, ಈಗ ಸರ್ಕಾರ ಸಂಘ-ಸಂಸ್ಥೆಗಳು ನೀಡುತ್ತಿವೆ. ಇಲ್ಲಿ ಡಾ.ಮೋಹನ್ ಆಳ್ವರು ನುಡಿಸಿರಿಯಲ್ಲಿ ಕವಿಸಮಯ-ಕವಿನಮನ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವುದರ ಮೂಲಕ ಇನ್ನೂ ಅಚ್ಚುಕಟ್ಟಾಗಿ ಕಲೆಗೆ ಆಶ್ರಯ, ಪ್ರೋತ್ಸಾಹ ನೀಡುತ್ತಿದ್ದಾರೆ. ಈ ನುಡಿಸಿರಿಯ ಹಾಗೂ ಕವಿಸಮಯ-ಕವಿನಮನ ಕಾರ್ಯಕ್ರಮದ ಪರಿಕಲ್ಪನೆಯು ಸುಂದರವಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಬಾಲಚಂದ್ರರವರ ಸಂಗೀತಕ್ಕೆ ಬಾರ್ಕೂರು ಮಾರ್ಕಂಡೇಯರವರು ತಮ್ಮ ಕೈಚಳಕದಿಂದ ಚಿತ್ರ ಬಿಡಿಸುವುದರ ಮೂಲಕ ಸಂಗೀತಕ್ಕೆ ಜೀವ ತುಂಬಿದರು.

ಕಾರ್ಯಕ್ರಮದಲ್ಲಿ ಆಳ್ವಾಸ್ ನುಡಿಸಿರಿಯ ಸಮ್ಮೇಳನಾಧ್ಯಕ್ಷರಾದ ಡಾ. ನಾಗತೀಹಳ್ಳಿ ಚಂದ್ರಶೇಖರ್, ಆಳ್ವಾಸ್ ನುಡಿಸಿರಿಯ ಸ್ವಾಗತ ಸಮಿತಿಯ ಉಪಾಧ್ಯಕ್ಷ ಡಾ.ನಾ. ದಾಮೋದರ್ ಶೆಟ್ಟಿ ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು. ಆಳ್ವಾಸ್ ಪದವಿಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕಿ ದಿವ್ಯಶ್ರೀ ದೆಂಬಳ ಕಾರ್ಯಕ್ರಮವನ್ನು ನಿರೂಪಿಸಿದರು.

`ಸತ್ಯವನ್ನು ಉತ್ಪಾದಿಸುತ್ತಿರುವ ಮಾಧ್ಯಮಗಳು ಸ್ವವಿಮರ್ಶೆ ಮಾಡಿಕೊಳ್ಳಬೇಕು’

 

ಮೂಡುಬಿದಿರೆ: ಆಳ್ವಾಸ್ ನುಡಿಸಿರಿ 2017 ರ ಎರಡನೇ ದಿನದ ವಿಶೇಷ ವಿಚಾರ ಗೋಷ್ಠಿಯು ಶನಿವಾರ ಕಾಲೇಜಿನ ರತ್ನಾಕರ ವರ್ಣಿ ವೇದಿಕೆಯಲ್ಲಿ ಜರುಗಿತು. “ಮಾಧ್ಯಮ-ಸ್ವವಿಮರ್ಶೆಯ ನೆಲೆ” ವಿಚಾರದಡಿ ಮಾಧ್ಯಮದ ಮೂರು ಪ್ರಧಾನ ಆಯಾಮಗಳಾದ ಸಾಮಾಜಿಕ ಜಾಲತಾಣ, ಪತ್ರಿಕಾ ರಂಗ ಹಾಗು ದೃಶ್ಯ ಮಾಧ್ಯಮಗಳ ಕುರಿತು ಚರ್ಚೆ ನಡೆಯಿತು.

ದೃಶ್ಯ ಮಾಧ್ಯಮಗಳ ಬಗ್ಗೆ ತುಮಕೂರು ವಿವಿಯ ಪ್ರಾಧ್ಯಾಪಕ ಡಾ. ನಿತ್ಯಾನಂದ ಶೆಟ್ಟಿ ಪ್ರಚಲಿತ ಉದಾಹರಣೆಗಳನ್ನು ನೀಡಿ “ಮಾಧ್ಯಮಗಳಿಗೆ ಸ್ವವಿಮರ್ಶೆಯ” ಅವಶ್ಯಕತೆಯ ಕುರಿತು ಮಾತನಾಡಿದರು. “ದೃಶ್ಯ ಮಾಧ್ಯಮ ಉಳಿದ ಮಾಧ್ಯಮಗಳಿಗಿಂತ ದೊಡ್ಡ ವ್ಯಾಪ್ತಿ ಹೊಂದಿದ್ದು ಪ್ರಸ್ತುತ ಸಮಾಜಕ್ಕೆ ಬುದ್ಧಿ ಹೇಳುವೆನೆಂಬ ಸರ್ವಜ್ಞಪೀಠದಲ್ಲಿ ಕುಳಿತು ಗರ್ವದಿಂದ ಬೀಗುತ್ತಿವೆ. ಚಿಂತನೆಗಳ ಪ್ರತಿಪಾದನೆ ಮಾಡಬೇಕಿದ್ದ ದೃಶ್ಯ ಮಾಧ್ಯಮಗಳು ಇಂದು ದಿಕ್ಕು ತಪ್ಪುತ್ತಿವೆ. ಇಂದಿನ ನಮ್ಮ ಮಾಧ್ಯಮಗಳು ಸತ್ಯ ತಿರುಚಿ ತನ್ನ ವಾಸ್ತವತೆಗೆ ತಕ್ಕಂತೆ ಅದನ್ನು ಪರಿವರ್ತಿಸಿಕೊಳ್ಳುವುದನ್ನು ರೂಢಿಸಿಕೊಳ್ಳುತ್ತಿವೆ. ಇಲ್ಲಿ ಸತ್ಯದ ಉತ್ಪಾದನೆ ಹಾಗೂ ಒಪ್ಪಿಗೆ, ಅಭಿಪ್ರಾಯದ ಉತ್ಪಾದನೆ ನಡೆಯುತ್ತಿದೆ. ಕಣ್ಣಾರೆ ನೋಡಿದ್ದು ಮಾತ್ರ ಸತ್ಯ ಎನ್ನುವ ಸುಳ್ಳನ್ನು ಸಮಾಜಕ್ಕೆ ಕಟ್ಟಿಕೊಡುವಂತಾಗಿವೆ.” ಎಂದು ಅವರು ಅಭಿಪ್ರಾಯಪಟ್ಟರು.

ದೃಶ್ಯಮಾಧ್ಯಮದ ಕಾರ್ಯವೈಖರಿಗಳನ್ನು ಗಮನಿಸಿ ಅವರು “ಮಾಧ್ಯಮಗಳು ವಿಷಯಗಳನ್ನು ವೈಭವೀಕರಿಸುವುದು ಅವನ್ನು ಸ್ವಹಿತಾಸಕ್ತಿಗಾಗಿ ಬಳಸಿಕೊಳ್ಳುವುದರ ಸ್ವವಿಮರ್ಶೆ ನಡೆಯಬೇಕಿದೆ. ಮಾಧ್ಯಮಗಳು ನೋಟ್ ಬ್ಯಾನ್, ವೈದ್ಯ ಮುಷ್ಕರ ಮುಂತಾದವುಗಳಿಂದ ಸಂಭವಿಸಿದ ನಷ್ಟಗಳ ಹೊಣೆಯನ್ನು ಸರ್ಕಾರದ ಮೇಲೆ ಹೊರಿಸುತ್ತಿವೆ, ಆದರೆ ಯು.ಆರ್. ಅನಂತಮೂರ್ತಿ ಅವರ ವಿವಾದಾತ್ಮಕ ಹೇಳಿಕೆಯ ಅರಿವೂ ಇಲ್ಲದ ಜನರಿಗೆ ಅದು ತಲುಪುವಂತೆ ಮಾಡಿ ಜೀವನದ ಮುಸ್ಸಂಜೆಯ ಘಟ್ಟದಲ್ಲಿ ನಿಂತಿದ್ದ ಅವರ ನೆಮ್ಮದಿಯನ್ನು ಹಾಳು ಮಾಡಿದವು, ಇಂಗ್ಲೆಂಡಿನ ರಾಣಿ ಡಯಾನಾ ಮಾಧ್ಯಮಗಳ ಭಯದಿಂದ ಅಪಘಾತದಲ್ಲಿ ಸಾವನ್ನಪ್ಪುವಂತೆ ಮಾಡಿದವು. ಈ ದುರಂತಗಳ ಹೊಣೆಯನ್ನೇಕೆ ಮಾಧ್ಯಮಗಳು ಹೊರುವುದಿಲ್ಲ” ಎಂದು ಪ್ರಶ್ನಿಸಿದರು. ಮಾಧ್ಯಮಗಳ ಉತ್ತರದಾಯಿತ್ವದ ಬಗ್ಗೆ ಪ್ರಶ್ನಿಸಿದ ಅವರು ಮಾಜಿ ಶಾಸಕರೊಬ್ಬರ ಪತ್ನಿಯ ತೇಜೋವಧೆಯ ಅಭಿಯಾನ ಕೈಗೊಂಡ ದೃಶ್ಯ ಮಾಧ್ಯಮಗಳು ಅವರ  ಆತ್ಮಹತ್ಯೆಯ ನಂತರವೇ ತೃಪ್ತಿಪಟ್ಟವು. ಅದು ಆತ್ಮಹತ್ಯೆಯಲ್ಲ ಮಾಧ್ಯಮಗಳಿಂದಾದ ಕೊಲೆ. ಮಾಧ್ಯಮಗಳನ್ನು ನಿಯಂತ್ರಿಸಿ ವಿಮರ್ಶಿಸಲೂ ಒಂದು ಗಟ್ಟಿ ಬೇರು ಬೇಕಿದೆ” ಎಂದು ಅವರು ಪ್ರತಿಪಾದಿಸಿದರು.

ಪತ್ರಿಕಾ ಮಾಧ್ಯಮದ ಕುರಿತು ವಿಚಾರ ಮಂಡಿಸಿದ ಪರ್ತಕರ್ತ ಡಾ. ನಿರಂಜನ್ ವಾನಳ್ಳಿ ಪತ್ರಿಕೆಯ ಬದಲಾದ ಆಯಾಮದ ಕುರಿತು ಮಾತನಾಡುತ್ತಾ “ವಾಸ್ತವವಾಗಿ ಯಾವ ವಿಷಯ ಸಮಾಜಮುಖಿಯಲ್ಲವೋ ಅದು ಸುದ್ದಿಯಾಗಲಾರದು ಆದರೆ ಪ್ರಸಕ್ತ ಸನ್ನಿವೇಶ ಇದಕ್ಕೆ ವಿರುದ್ಧವಾಗಿದೆ. ಪತ್ರಿಕೆಗಳು ಸ್ಪರ್ಧೆಗಿಳಿದಿರುವ ಈ ಕಾಲದಲ್ಲಿ ಪತ್ರಿಕೆಯು ದುಡ್ಡು ಬಿತ್ತಿ ದುಡ್ಡು ಬೆಳೆವ ಮಾಧ್ಯಮವಾಗಿ ಮಾರ್ಪಾಡಾಗಿದೆ ಎನ್ನುವುದು ಆತಂಕಕರ. ಸ್ಪರ್ಧೆಯ ನಾಗಾಲೋಟದಲ್ಲಿ ನೈತಿಕತೆ ಕಳೆದುಕೊಳ್ಳುತ್ತಿರುವ ಪತ್ರಿಕೆಗಳು ಜನರ ವಾಣಿಯಾಗದೆ ಬಲಾಢ್ಯರ ಗದೆಯಾಗುತ್ತಿರುವುದು ವಿಷಾದನೀಯ. ಈ ನಿಟ್ಟಿನಲ್ಲಿ ಪತ್ರಿಕಾ ಮಾಧ್ಯಮದ ಕುರಿತೊಂದು ಚಿಂತನೆ ಹಾಗು ಸ್ವವಿಮರ್ಶೆ ಅತ್ಯಗತ್ಯ” ಎಂದರು.

ಸಾಮಾಜಿಕ ಜಾಲತಾಣ ಹಾಗು ಅಂತರ್ಜಾಲ ಮಾಧ್ಯಮದ ಕುರಿತು ಚರ್ಚಿಸಿದ  ಎನ್. ರವಿಶಂಕರ್ ” ಸತ್ಯವು ಇಂದು ಮಾಧ್ಯಮಗಳಿಂದ ಅರೆ ಸತ್ಯವಾಗುತ್ತಿವೆ. ಜನರ ಕೆಲಸ ಇಂದು ಬದಲಾಗಿ ಅವರು ಪತ್ರಿಕೆಯನ್ನು ವೀಕ್ಷಿಸಿ ದೂರದರ್ಶನವನ್ನು ಓದುವಂತಾಗಿದೆ. ಲೇಖಕ ರುಡ್ಯಾರ್ಡ್ ಕಿಪ್ಲಿಂಗ್ ಮಾತಿನಂತೆ ಭಾರತದ ಬಗ್ಗೆ ಏನೇ ಹೇಳಿದರು ಅದರ ವಿರುದ್ಧವೂ ನಿಜ ಎನ್ನುವಂತಾಗಿದೆ. ಅಂತರ್ಜಾಲ ಹಾಗು ನವೀನ ಮಾಧ್ಯಮಗಳ ಪ್ರಭಾವ ಎಷ್ಟಿದೆ ಎಂದರೆ ಪ್ರವಾಹದಂಥಾ ಸಂಕಷ್ಟಗಳ ಸ್ಥಿತಿಯಲ್ಲೂ ಜನರು ಮೂಲಭೂತವಾದ ನೀರು ಆಹಾರಗಳ ಪೂರೈಕೆಗೆ ಬೇಡುವ ಮೊದಲು ಬ್ಯಾಟರಿ, ವಿದ್ಯುತ್ ಪೂರೈಕೆಗೆ ಹಾತೊರೆಯುವುದು ಸಾಬೀತಾಗಿದೆ. ಅಲ್ಲಿಗೆ ಜನರು ತಮ್ಮ  ಕಷ್ಟಗಳನ್ನು ಪರಿಹರಿಸಿಕೊಳ್ಳುವ ಬದಲು ಕಷ್ಟಗಳನ್ನು ಬಿತ್ತರಿಸುವುದಕ್ಕೇ ಹೆಚ್ಚು ಒತ್ತು ನೀಡುವಂತಾಗಿದೆ. ನೈತಿಕತೆಯ ತಳಹದಿ ತಪ್ಪುತ್ತಿರುವ ಈ ಘಟ್ಟದಲ್ಲಾದರೂ ಮಾಧ್ಯಮದ ಸ್ವವಿಮರ್ಶೆಯ ಅಗತ್ಯವಿದೆ” ಎಂದು ತಮ್ಮ ವಿಚಾರ ಮಂಡಿಸಿದರು.

ಈ ಸಂದರ್ಭದಲ್ಲಿ ಆಳ್ವಾಸ್ ನುಡಿಸಿರಿ 2017 ರ ಆಧ್ಯಕ್ಞ, ನಾಗತಿಹಳ್ಳಿ ಚಂದ್ರಶೇಖರ್, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ, ಎಮ್ ಮೋಹನ್ ಆಳ್ವ, ಸಾಹಿತಿ ಡಾ.ನಾ.ದಾ.ಶೆಟ್ಟಿ ಉಪಸ್ಥಿತರಿದ್ದರು.

ಮಲೆನಾಡ ಮಲ್ಲಿಗೆ ಸಾಹಿತ್ಯಗಾರ್ತಿ ಎಂ.ಕೆ ಇಂದಿರಾ – ಭುವನೇಶ್ವರಿ ಹೆಗಡೆ

ಮೂಡುಬಿದಿರೆ,ಡಿ.02:  ಮಲೆನಾಡಿನ ದಟ್ಟ ಅನುಭವಕ್ಕೆ ತೆರದುಕೊಳ್ಳುತ್ತಾ ಪ್ರಕೃತಿ ಸೌದಂರ್ಯದ ಜೊತೆ ಅಲ್ಲಿಯ ಜನರ ನೋವು ನಲಿವುಗಳನ್ನು ಸೂಕ್ಷ್ಮವಾಗಿ ಗ್ರಹಿಸಿ ದಾಖಲಿಸಿಕೊಳ್ಳುತ್ತಿದ್ದ ಎಂ.ಕೆ.ಇಂದಿರಾ ಕನ್ನಡ ಮಲೆನಾಡ ಮಲ್ಲಿಗೆ ಎಂದು ಲೇಖಕಿ ಮಂಗಳೂರಿನ ಭುವನೇಶ್ವರಿ ಹೆಗಡೆ ಹೇಳಿದರು.

ಮೂಡುಬಿದಿರೆಯಲ್ಲಿ ‘ಆಳ್ವಾಸ್ ನುಡಿಸಿರಿ 2017’ ಇದರ ಪ್ರಯುಕ್ತ ರತ್ನಾಕರವರ್ಣಿ ವೇದಿಕೆಯಲ್ಲಿ ನಡೆದ ಶತಮಾನದ ನಮನ ಕಾರ್ಯಕ್ರಮದಲ್ಲಿ ಶ್ರೇಷ್ಠ ಸಾಹಿತ್ಯಗಾರ್ತಿ ಎಂ.ಕೆ. ಇಂದಿರಾ ಅವರ ಕುರಿತು ಮಾತಾನಾಡಿದರು.

ಕನ್ನಡ ಬಲ್ಲವರಿಗೆ  ಓದುವ ರುಚಿಯನ್ನು ಕಲಿಸಿಕೊಟ್ಟು ಅದರ ಸುಖಾಂತ್ಯವನ್ನು ತಿಳಿಸಿ ಅಕ್ಷರ ಪ್ರೀತಿಯನ್ನು ಸೃಜನಶೀಲ ಬರವಣಿಗೆಗಳಲ್ಲಿ ಕೊಡುವುದಕ್ಕೆ ಸಾಧ್ಯವಿದೆ ಎಂಬುದನ್ನು ಪ್ರಚುರಪಡಿಸಿದವರು.  ಸದ್ದುಗದ್ದಲವಿಲ್ಲದ  ನೇಪಥ್ಯಕ್ಕೆ ಸರಿಯದೆ ತಮ್ಮ ಬರವಣಿಗೆಗಳ ಮೂಲಕ ಜನರ ನಡುವೆ ಜೀವಂತವಿರುವ ಸಜ್ಜನ ಸಾಹಿತಿ ಎಂ.ಕೆ. ಇಂದಿರಾ ಎಂದು ಹೇಳಿದರು.

ಮಲೆನಾಡಿನ ಜೀವಸೆಳೆಗಳಾದ ನದಿ ಬೆಟ್ಟಗಳನ್ನು, ಪ್ರಕೃತಿಯ ಇಂಪುಕಂಪುಗಳನ್ನು ತನ್ನ ಸಾಹಿತ್ಯ ಕೃತಿಗಳಲ್ಲಿ ಕಥೆ ಕಾದಂಬರಿಗಳನ್ನು ಇವರು ಕಟ್ಟಿಕೊಟ್ಟಿದ್ದಾರೆ. ಕೇವಲ ಏಳನೇ ತರಗತಿಯವರೆಗೆ ಮಾತ್ರ ಕಲಿಲು ಸಾಧ್ಯವಾದ ಇಂದಿರಾ ಅವರ ಲೇಖನಗಳು ವಿಶ್ವವಿದ್ಯಾನಿಲಯ ಮಟ್ಟದಲ್ಲಿ ಪ್ರಕಟವಾಗಿದೆ. ಕಾದಂಬರಿಗಳಿಂದ ಅಪಾರ ಕೀರ್ತಿಯನ್ನು ಪಡೆದಿದ್ದಾರೆ.

ಕಾದಂಬರಿಗಳ ಮೂಲಕವೇ ಮಲೆನಾಡನ್ನೇ ಒಂದು ಸ್ಥಾಯಿ ಪಾತ್ರದಂತೆ ಚಿತ್ರಿಸಿ ಮಲೆನಾಡಿಗರ ಜೀವನ ಪದ್ಧತಿಯ ಮೇಲೆ ಬೆಳಕು ಚೆಲ್ಲಿದ್ದಾರೆ. ಮೂಲದಲ್ಲಿ ನಡೆದ ನೈಜ ಜೀವನದ ಘಟನೆಗಳು ಕಥೆಯಾಗಿ ಬರೆಯುತ್ತಿದ್ದರು. ಮನಸ್ಸು ಮತ್ತು ಹೃದಯ ತಟ್ಟುವಂತಹ ಬರವಣಿಗೆಗಳನ್ನು ನೀಡುತ್ತಿದ್ದ ಇಂದಿರಾ ಅಪ್ಪಟ್ಟ ಮಲೆನಾಡ ಪ್ರತಿಭೆ ಎಂದು ಹೇಳಿದರು.

ನಗರವಾಸಿಗಳು ಅನುಭವಿಸುವ ಆಧುನಿಕ ಸಮಸ್ಯೆಗಳಿಗೆ ಇಂದಿರಾ ಅವರ ಕೃತಿಗಳಲ್ಲಿ  ಪರೋಕ್ಷವಾದ ಪರಿಹಾರಗಳನ್ನು ಕಾಣಬಹುದಾಗಿದೆ. ಬಾಲ್ಯವಿವಾಹವನ್ನು ಅನುಭವಿಸಿದ ಇವರು ಸರಳ ಸಂಪ್ರದಾಯ, ಎತ್ತರದವಾದ ನಿಲುವು ಇಂದಿರಾ ಅವರದ್ದಾಗಿತ್ತು ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಸಮ್ಮೇಳನಾಧ್ಯಕ್ಷ ಡಾ. ನಾಗತಿಹಳ್ಳಿ ಚಂದ್ರಶೇಖರ್ ಮತ್ತು ನಾಗರಾಜ ಶೆಟ್ಟಿ ಉಪಸ್ಥಿತರಿದ್ದರು.

 ಕಲಾಭಿರುಚಿ ಮನುಷ್ಯ ಜೀವನಕ್ಕೆ ಭಾವಪರ್ವ       

“ಯಾವುದು ಪಂಚೇಂದ್ರೀಯಗಳಿಗೆ ಮಾತ್ರ ಸಂತೋಷವನ್ನು ನೀಡುತ್ತದೋ ಅದು ರುಚಿಯೆನಿಸಿಕೊಳ್ಳುತ್ತದೆ. ಅದು ಸಾಮಾಜಿಕ ಕಳಕಳಿಗೆ ಸಂಬಂಧ ಪಟ್ಟಾಗ ಹಾಗೂ

ಪಂಚೇಂದ್ರೀಯಗಳನ್ನು ಮೀರಿ ಆನಂದ ದೊರಕುವ ರುಚಿಯು ಅಭಿರುಚಿ. ಈ ಆನಂದ ಘನವು ಕಲಾಭಿರುಚಿಯಿಂದ ಸಿಗುತ್ತದೆ. ಆನಂದವು ವಿಶ್ರಾಂತ ಸ್ಥಿತಿಯಲ್ಲಿ ಮತ್ತೆ-ಮತ್ತೆ ಮರುಕಳಿಸುವುದು ಕಲೆಯಿಂದ ಮಾತ್ರ ಸಾಧ್ಯ. ಕಲೆಯನ್ನು  ತಟಸ್ಥವಾಗಿ ಆನಂದಿಸುವ ಹಾಗೂ ಕಲೆಯಲ್ಲಿ ತನ್ನನ್ನು ತಾನು ಸಕ್ರಿಯವಾಗಿ ತೊಡಗಿಸಿಕೊಳ್ಳುವ ಗುಣವಿದ್ದಾಗ ಅದು ಕಲಾಭಿರುಚಿಯೆನಿಸಿಕೊಳ್ಳುತ್ತದೆ. ಕಲೆಯನ್ನು ಅರ್ಥ ಮಾಡಿಕೊಳ್ಳಲು ಹೋದರೆ ಅದು ವ್ಯರ್ಥ. ಅದು ಅನುಭವಕ್ಕೆ ಬರುವಂಥದ್ದು. ಬದುಕು ಬೇಕು ಎಂದೆನಿಸುವುದು ಕಲಾಭಿರುಚಿಯಿಂದ” ಎಂದು ಎ.ಅನಂತಪುರ ಈಶ್ವರಯ್ಯ ಹೇಳಿದರು.

                ಆಳ್ವಾಸ್ ನುಡಿಸಿರಿಯಲ್ಲಿ ನಡೆದ ಕಲಾಭಿರುಚಿ ವಿಶೇಷೋಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. “ಅಭಿರುಚಿಯು ವಂಶ ಪಾರಂಪರ್ಯವಾಗಿ ಹಾಗೂ ಸ್ವಾರ್ಜಿತವಾಗಿ ಹುಟ್ಟಿಕೊಳ್ಳುತ್ತದೆ. ಮಕ್ಕಳನ್ನು ಸರಿದಾರಿಗೆ ತರಲು ಕೌಟುಂಬಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಪಾಠಗಳು ನೆರವಾಗುತ್ತವೆ. ಆದರೆ ಅವರಲ್ಲಿ ಭಾವುಕ ಮನಸ್ಸನ್ನು ಸೃಷ್ಟಿಸುವುದು ಕಲಾಪೋಷಣೆ ಆದಾಗ ಸಾಧ್ಯ. ಮಕ್ಕಳ ಮನಸ್ಸೆಂಬ ಮಣ್ಣನ್ನು ಹದಗೊಳಿಸಿ ಅದರಲ್ಲಿ ಮೌಲ್ಯವೆಂಬ ಬೀಜವನ್ನು ಬಿತ್ತಬೇಕು.” ಎಂದು ಅವರು ಹೇಳಿದರು.

                ಅನಂತಪುರ ಈಶ್ವರಯ್ಯ ಮೂಲತಃ ಕಾಸರಗೋಡಿನವರು. ಇವರು ಉದಯವಾಣಿಯಲ್ಲಿ ಮ್ಯಾಗಜಿನ್ ಹಾಗೂ ಹಿರಿಯ ಸಂಪಾದಕರಾಗಿ, ತುಷಾರ ಮಾಸ ಪತ್ರಿಕೆಯಲ್ಲಿ ಸ್ಥಾಪಕ ಸಂಪಾದಕರಾಗಿ ಹಾಗೂ ರಾಗಧನಶ್ರೀ ಪತ್ರಿಕೆಯ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದಾರೆ. ಪ್ರಮಾಣ, ಅವಸಾನ, ಸರಸ ಮೊದಲಾದ ಬರಹಗಳನ್ನು ಬರೆದಿದ್ದಾರೆ. ಇವರು ಆಳ್ವಾಸ್ ನುಡಿಸಿರಿ ರಾಜ್ಯಪ್ರಶಸ್ತಿ, ಶ್ರೀ ಕೃಷ್ಣಾನುಗ್ರಹ ಪ್ರಶಸ್ತಿ, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿ ಹೀಗೆ ಹತ್ತು ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಅವರು ಆಳ್ವಾಸ್ ಶಿಕ್ಷಣ ಸಂಸ್ಥೆಯು ಕಲೆಯನ್ನು ಪೋಷಿಸುತ್ತಿರುವ ಬಗ್ಗೆ ಹರ್ಷ ವ್ಯಕ್ತ ಪಡಿಸಿದರು.

ಶಿಕ್ಷಣ ಸಾಮಾಜಿಕ ಸಮಾನತೆಯ ಮೊದಲ ಹೆಜ್ಜೆ-ಪ್ರೋ. ನಿರಂಜನಾರಾಧ್ಯ ವಿ. ಪಿ.

ಮೂಡಬಿದಿರೆ ನ.2: ಶಿಕ್ಷಣ ಸಾಮಾಜಿಕ ಸಮಾನತೆಯ ಮೊದಲ ಹೆಜ್ಜೆ.  ಎಂದು ಪ್ರೋ. ನಿರಂಜನಾರಾಧ್ಯ ವಿ. ಪಿ. ಬೆಂಗಳೂರು ಹೇಳಿದರು.

ಆಳ್ವಾಸ್ ನುಡಿಸಿರಿ-2017ರ ಪ್ರಯುಕ್ತ ರತ್ನಾಕರವರ್ಣಿ ವೇದಿಕೆಯಲ್ಲಿ ಆಯೋಜಿಸಿದ್ದ ವಿಶೇಷೋಪನ್ಯಾಸ ಕಾರ್ಯಕ್ರಮದಲ್ಲಿ ‘ಶಾಲಾ ಶಿಕ್ಷಣದ ಸ್ಥಿತಿಗತಿ- ಸಾಧ್ಯತೆಗಳು ಮತ್ತು ಸವಾಲುಗಳು ಎಂಬ ವಿಷಯದ ಬಗ್ಗೆ ಬೆಳಕುಚೆಲ್ಲಿದರು.

ಶಿಕ್ಷಣಕ್ಕೂ ಸಮಾನತೆಗೂ ಅವಿನಭಾವ ಸಂಬಂಧವಿದೆ. ಸಂವಿಧಾನದ ಮೌಲ್ಯವನ್ನು ಸಾಕ್ಷೀಕರಿಸುವುದು, ಸಮಾನತೆ-ಸಾಮಾಜಿಕ ನ್ಯಾಯವನ್ನು ಸಾಕಾರಗೊಳಿಸುವುದು ಶಿಕ್ಷಣದ ಮೂಲಧ್ಯೇಯವಾಗಬೇಕು. ಆಗಮಾತ್ರ ಪ್ರಭುದ್ದ, ಪ್ರಜ್ಞಾವಂತ ಸಮಾಜವನ್ನು ಕಟ್ಟಲು ಸಾಧ್ಯ ಎಂದು ನುಡಿದರು.

ಶಿಕ್ಷಣ ಸಾಮಾಜಿಕ ಒಳಿತು, ಸಾಮಾಜಿಕ ಪರಿವರ್ತನೆಯ ಸಾಧನವಾಗಬೇಕಿತ್ತು. ಆದರೆ ಇಂದು ಖಾಸಗೀಕರಣ, ಆಂಗ್ಲಭಾಷೆಯ ವ್ಯಾಮೋಹದ ಕಾರಣಕ್ಕೆ ಶಿಕ್ಷಣ ವ್ಯಾಪಾರವಾಗಿ, ಉದ್ದಿಮೆಯಾಗಿ ಗುರುತಿಸಿಕೊಳ್ಳುತ್ತಿರುವುದು ಬೆಳೆಯುತ್ತಿರುವುದು ವಿಷಾಧನೀಯ ಎಂದರು.

ನಮ್ಮ ಶಿಕ್ಷಣವ್ಯವಸ್ಥೆ ಸಮಾನ ಶಿಕ್ಷಣವನ್ನು ಕೊಡುವಲ್ಲಿ ಸೋಲುತ್ತಿದೆ. ಆಕ್ಸ್‍ಫರ್ಡ್,ಕೇಂಬ್ರಿಡ್ಜ್, ಸಿ.ಬಿ.ಎಫ್.ಸಿ, ಆಂಗ್ಲಮಾಧ್ಯಮ, ಅನುದಾನಿತ ಶಾಲೆ, ಸರ್ಕಾರಿ ಹೀಗೆ ಹತ್ತಾರು ಮಾದರಿಯ ಶ್ರೇಣಿಕೃತ ಶಿಕ್ಷಣ ವ್ಯವಸ್ಥೆಯ ಪರಿಣಾಮವಾಗಿ ಸುವ್ಯವಸ್ಥಿತ ಸಮಾನ ಮಾದರಿಯ ಶಿಕ್ಷಣ ಸಿಗುತ್ತಿಲ್ಲ. ಇದು ಈ ಕಾಲದ ದುರ್ವಿಧಿ ಎಂದು ವಿಷಾಧ ವ್ಯಕ್ತಪಡಿಸಿದರು.

ಕರ್ನಾಟಕದಲ್ಲಿ ಶಾಲಾ ಶಿಕ್ಷಣ ಅತ್ಯಂತ ಅಪಾಯಕಾರಿ ಹಂತವನ್ನು ತಲುಪಿದೆ. ಸರ್ಕಾರಿ ಶಾಲೆಗಳ ಮೇಲೆ ಜನ ಭರವಸೆಯನ್ನು ಕಳೆದುಕೊಳ್ಳುತ್ತಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ಕಲಿತವರಿಗೆ ಭವಿಷ್ಯವಿಲ್ಲ. ಸರ್ಕಾರಿ ಶಾಲೆಗಳು ಗುಣಮಟ್ಟದ ಶಿಕ್ಷಣ ನೀಡುತ್ತಿಲ್ಲ ಎನ್ನುವ ಕೂಗು ಎಲ್ಲೆಡೆಯೂ ಕೇಳಿ ಬರುತ್ತಿದೆ. ಪರಿಣಾಮ ಶಾಲೆಗಳನ್ನು ಮುಚ್ಚುವ ಪರಿಸ್ಥಿತಿ ಬಂದಿದೆ. ಇದು ಕನ್ನಡದ ವಿನಾಶದ ಮುನ್ಸೂಚನೆಯಲ್ಲದೆ ಮತ್ತೇನು ಅಲ್ಲ ಎಂದು ಹೇಳಿದರು.

ಪ್ರಾಥಮಿಕ ಹಂತದಲ್ಲೇ ಪಾಶ್ಚಾತ್ಯ ಭಾಷೆ, ಸಂಸ್ಕøತಿಯ ಬಲವಂತದ ತುರುಕುವಿಕೆ ವಿದ್ಯಾರ್ಥಿಗಳಲ್ಲಿ ಕನ್ನಡದ ಕಲಿಕೆಯ ಅವಕಾಶವನ್ನು ಕಿತ್ತುಕೊಳ್ಳುತ್ತಿದೆ. ಕರ್ನಾಟಕದಲ್ಲಿ ಒಂದೆಡೆ ಆಂಗ್ಲಮಾಧ್ಯಮಗಳ ಸಂಖ್ಯೆ ಗಣನೀಯವಾಗಿ ಏರುತ್ತಿದ್ದಂತೆ, ಕನ್ನಡ ಶಾಲೆಗಳು ಬಾಗಿಲು ಮುಚ್ಚುತಿವೆ. 2010-11ರಲ್ಲಿ ಕರ್ನಾಟಕದಲ್ಲಿ 47,670 ಇದ್ದ ಸರ್ಕಾರಿ ಪ್ರಾಥಮಿಕ ಶಾಲೆಗಳ ಸಂಖ್ಯೆ 2016-17ಕ್ಕೆ ಬರುವಾಗ 43,895ಕ್ಕೆ ಇಳಿಕೆಯಾಗಿದೆ.  ಅದೇ 2010-11ರಲ್ಲಿ 10,205 ಇದ್ದ ಖಾಸಗಿ ಪ್ರಾಥಮಿಕ ಶಾಲೆಗಳು 2016-17ರಲ್ಲಿ 13,438ಕ್ಕೆ ಏರಿಕೆಯಾಗಿದೆ. ಹಾಗಾದರೆ ನಮ್ಮ ಸರ್ಕಾರ ಖಾಸಗೀಕರಣಕ್ಕೆ ಪ್ರೋತ್ಹಾಹ ನೀಡುತ್ತಿದೆಯಾ…? ಎಂಬ ಪ್ರಶ್ನೆ ಕಾಡುತ್ತಿದೆ ಎಂದರು.

ಖಾಸಗಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಸಿಗುತ್ತಿದೆ, ಸರ್ಕಾರಿ ಶಾಲೆಗಳು ಮೌಲ್ಯಯುತ ಶಿಕ್ಷಣ ನೀಡುವಲ್ಲಿ ಸೋಲುತ್ತಿವೆ ಎಂದಾದರೆ ಇದು ಸರ್ಕಾರ ಸಂವಿಧಾನಕ್ಕೆ ಎಸಗುತ್ತಿರುವ ಅಪಚಾರವಲ್ಲವೇ? ಹೀಗಾದಲ್ಲಿ ಸಮಾನ ಶಿಕ್ಷಣವನ್ನು ನಿರೀಕ್ಷಿಸುವುದಾದರೂ ಹೇಗೆ? ಎಂದು ಪ್ರಶ್ನೆಯೆತ್ತಿದರು.

ಸರ್ಕಾರಿ ಶಾಲೆಗಳು ಉಳಿಯಬೇಕಾದರೆ ಮೊದಲು ಕಲಿಕೆಗೆ ಪೂರಕವಾದ ಸೌಲಭ್ಯವನ್ನು ಒದಗಿಸಬೇಕಿದೆ. ಪ್ರತೀ ಶಾಲೆಗೂ ವ್ಯವಸ್ಥಿತ ಕಲಿಕಾ ಕೊಠಡಿ, ವೃತ್ತಿಪರ ನೈಪುಣ್ಯತೆ ಇರುವ ಶಿಕ್ಷಕವೃಂದ, ವಿದ್ಯುತ್, ಶುದ್ಧ ಕುಡಿಯುವ ನೀರು, ಆಟದ ಮೈದಾನ, ಗ್ರಂಥಾಲಯವನ್ನು ಒದಗಿಸಬೇಕು. ಆದರೆ ಕರ್ನಾಟಕದ ಶೇಕಡಾ 10ರಷ್ಟು ಪ್ರಾಥಮಿಕ ಶಾಲೆಗಳಲ್ಲಿ ಮಾತ್ರ ಸಂಪೂರ್ಣ ವ್ಯವಸ್ಥೆಯಿದೆ. ಇದು ಕರ್ನಾಟಕ ಶಿಕ್ಷಣ ವ್ಯವಸ್ಥೆಯ ವೈಫಲ್ಯಕ್ಕೆ ಪ್ರಮುಖ ಕಾರಣ ಎಂದು ಅಭಿಪ್ರಾಯಪಟ್ಟರು.

ಶಿಕ್ಷಣವೆಂದರೆ ಕೇವಲ ಮಾಹಿತಿ ಹಂಚಿಕೆಯಲ್ಲ. ಜ್ಞಾನದ ಆಕರವಾಗಬೇಕು. ಅಂಕವನ್ನೇ ಶಿಕ್ಷಣವೆನ್ನಲಾಗುವುದಿಲ್ಲ. ಮೌಲ್ಯಯುತ, ಗುಣಮಟ್ಟದ ಶಿಕ್ಷಣವೇ ನಿಜವಾದ ಶಿಕ್ಷಣ. ಅಂತಹ ಶಿಕ್ಷಣ ವ್ಯವಸ್ಥೆಯನ್ನು ಕರ್ನಾಟಕದಲ್ಲಿ ಅಳವಡಿಸಬೇಕು. ಆಗಮಾತ್ರ ಕನ್ನಡ ಶಾಲೆಗಳ ಉಳಿವು, ಕನ್ನಡ ಬಾಷೆಯ ಉಳಿವು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಸಮ್ಮೇಳನಾಧ್ಯಕ್ಷ್ಯ ಡಾ. ನಾಗತಿಹಳ್ಳಿ ಚಂದ್ರಶೇಖರ್, ಸ್ವಾಗತ ನಮಿತಿ ಅಧ್ಯಕ್ಷ ಡಾ. ಮೋಹನ ಆಳ್ವ ಉಪಸ್ಥಿತರಿದ್ದರು.

 


Spread the love

Exit mobile version