ಆಳ್ವಾಸ್ ಪ್ರಗತಿ  ಉದ್ಯೋಗ ಮೇಳಕ್ಕೆ ಚಾಲನೆ: ಒಂದೇ ಸೂರಿನಡಿ 12 ಸಾವಿರಕ್ಕೂ ಅಧಿಕ ಉದ್ಯೋಗಾವಕಾಶ

Spread the love

ಆಳ್ವಾಸ್ ಪ್ರಗತಿ  ಉದ್ಯೋಗ ಮೇಳಕ್ಕೆ ಚಾಲನೆ: ಒಂದೇ ಸೂರಿನಡಿ 12 ಸಾವಿರಕ್ಕೂ ಅಧಿಕ ಉದ್ಯೋಗಾವಕಾಶ

ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ 12ನೇ ಆವೃತ್ತಿಯ ಆಳ್ವಾಸ್ ಪ್ರಗತಿ ಬೃಹತ್ ಉದ್ಯೋಗ ಮೇಳಕ್ಕೆ ವಿದ್ಯಾಗಿರಿಯ ಶ್ರೀಮತಿ ಸುಂದರಿ ಆನಂದ ಆಳ್ವ ಕ್ಯಾಂಪಸ್‍ನಲ್ಲಿ ಶುಕ್ರವಾರ ಚಾಲನೆ ನೀಡಲಾಯಿತು.

ಪ್ರಸ್ತಾವಿಕವಾಗಿ ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ್ ಆಳ್ವ, ಪ್ರತಿವರ್ಷ ಕೋಟ್ಯಾಂತರ ವಿದ್ಯಾರ್ಥಿಗಳು ತಮ್ಮ ಶಿಕ್ಷಣವನ್ನು ಪೂರೈಸಿ ಉದ್ಯೋಗ ಆರಿಸಲು ಮುಂದಾಗುತ್ತಾರೆ. ಅಂತಹವರಿಗೆ ನೆರವಾಗುವುದೇ ಆಳ್ವಾಸ್ ಪ್ರಗತಿಯ ಉದ್ದೇಶ. ಪ್ರತಿಯೊಬ್ಬ ವಿದ್ಯಾರ್ಥಿಯೂ ಸವಕಲು ನಾಣ್ಯಗಳಾಗದೇ, ಚಲಾವಣೆಯಲ್ಲಿರುವ ನಾಣ್ಯಗಳಾಗಬೇಕು. ಆಗ ವಿದ್ಯಾರ್ಹತೆಗೆ ತಕ್ಕ ಉದ್ಯೋಗ ಸಿಗುವುದೂ ಸುಲಭವಾಗುತ್ತದೆ. ಪ್ರತಿಯೊಬ್ಬರಿಗೂ ಉತ್ತಮ ಉದ್ಯೋಗ ಲಭಿಸಿ, ಆ ಸಂಪತ್ತಿನ ಒಂದಷ್ಟು ಭಾಗವನ್ನು ಸಮಾಜಕ್ಕೆ ಅರ್ಪಿಸುವಂತಾಗಬೇಕು ಎಂದರು.

ದೇಶದಲ್ಲಿ 30 ಲಕ್ಷಕ್ಕೂ ಅಧಿಕ ಸರ್ಕಾರಿ ಮತ್ತು 17 ಲಕ್ಷಕ್ಕೂ ಅಧಿಕ ಖಾಸಗಿ ಕಂಪನಿಗಳಲ್ಲಿ ಉದ್ಯೋಗಾವಕಾಶಗಳು ಇದ್ದರೂ, ಅವುಗಳ ಬಗೆಗಿನ ಸರಿಯಾದ ತಿಳುವಳಿಕೆ ಮತ್ತು ಉದ್ಯೋಗ ಪಡೆಯಲು ಬೇಕಾದ ತಯಾರಿಯಿಲ್ಲದ ಕಾರಣ ಹಾಗೂ ಕೌಶಲ್ಯಗಳ ಕೊರತೆಯಿಂದ ಯುವಜನತೆ ನಿರುದ್ಯೋಗಿಗಳಾಗಿಯೇ ಉಳಿಯುತ್ತಿದ್ದಾರೆ. ಕೇವಲ 5% ಜನರು ಮಾತ್ರವೆ ಸ್ವ – ಉದ್ಯಮದಲ್ಲಿ ತೊಡಗುತ್ತಾರೆ. ದೇಶದಲ್ಲಿ ಉದ್ಯೋಗಾಕಾಂಕ್ಷಿಗಳಿಗೆ ಸಾಕಷ್ಟು ಅವಕಾಶಗಳಿದ್ದರೂ, ಕೆಲಸ ಹುಡುಕುವ ಹಾಗೂ ಸಂದರ್ಶನಗಳನ್ನು ಎದುರಿಸುವ ಛಲ ಹೆಚ್ಚಾಗಬೇಕಾಗಿದೆ. ಆಳ್ವಾಸ್ ಪ್ರಗತಿಯಂತಹ ಉದ್ಯೋಗ ಮೇಳ ಏಕಕಾಲಕ್ಕೆ ನೂರಾರು ಕಂಪೆನಿಗಳನ್ನು ಒಂದೇ ಕಡೆ ಸೇರಿಸಿ, ಅಭ್ಯರ್ಥಿಗಳಿಗೆ ಸರಿಯಾದ ಮಾರ್ಗದರ್ಶನವನ್ನು ನೀಡುವ ಮೂಲಕ ನಿರುದ್ಯೋಗ ಸಮಸ್ಯೆಯನ್ನು ನಿವಾರಿಸುವ ಕೆಲಸ ಮಾಡುತ್ತಿದೆ ಎಂದರು.

ಈ ಬಾರಿಯ ಆಳ್ವಾಸ್ ಪ್ರಗತಿಯಲ್ಲಿ 12,000ಕ್ಕೂ ಅಧಿಕ ಹುದ್ದೆಗಳಿಗೆ ಅವಕಾಶವಿದ್ದು, ಮ್ಯಾನುಫ್ಯಾಕ್ಚರಿಂಗ್, ಐಟಿ-ಐಟಿಇಎಸ್, ಸೇಲ್ಸ್, ರಿಟೈಲ್ ಬ್ಯಾಂಕಿಂಗ್ ಮತ್ತು ಹಣಕಾಸು, ಹೆಲ್ತ್‍ಕೇರ್, ಟೆಲಿಕಾಂ, ಮಾಧ್ಯಮ ಮತ್ತು ಶಿಕ್ಷಣ ಅಲ್ಲದೇ ಎನ್‍ಜಿಓಗಳನ್ನು ಪ್ರತಿನಿಧಿಸುವ 200ಕ್ಕೂ ಅಧಿಕ ಉನ್ನತ ಕಂಪೆನಿಗಳು ನೇಮಕಾತಿ ನಡೆಸಲಿವೆ ಎಂದು ತಿಳಿಸಿದರು.

ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮೂಲ್ಕಿ ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ಶಾಸಕ ಉಮಾನಾಥ ಕೋಟ್ಯಾನ್, ಆಳ್ವಾಸ್‍ನಂತಹ ವಿದ್ಯಾಸಂಸ್ಥೆ ನನ್ನ ಕ್ಷೇತ್ರದಲ್ಲಿ ಇರುವುದೇ ಹೆಮ್ಮೆಯ ಸಂಗತಿ. ಇಲ್ಲಿ ಆಯೋಜನೆ ಆಗುವ ಎಲ್ಲಾ ಕಾರ್ಯಕ್ರಮಗಳೂ ಅರ್ಥಪೂರ್ಣವಾಗಿರುತ್ತದೆ. ಆಳ್ವಾಸ್ ಪ್ರಗತಿ ಉದ್ಯೋಗ ಮೇಳವು ನೂರಾರು ಕಂಪನಿಗಳನ್ನು ಒಂದೇ ಸೂರಿನಡಿ ತಂದು, ವಿವಿಧ ಕಾಲೇಜುಗಳಲ್ಲಿ ಪದವಿ ಪೂರೈಸಿ ಉದ್ಯೋಗ ಹುಡುಕಾಟದಲ್ಲಿರುವವರಿಗೆ ಅವಕಾಶ ಮಾಡಿಕೊಟ್ಟಿದೆ. ಒಬ್ಬರಿಗೆ ಉದ್ಯೋಗ ದೊರಕಿಸಿ ಕೊಡುವುದು ಎಂದರೆ ಒಂದು ಮನೆಗೆ ಅನ್ನ ಕೊಟ್ಟ ತೃಪ್ತಿ ಸಿಗಲಿದೆ ಎಂದರು.

ಈ ಸಂದರ್ಭ, ಯಶಸ್ವಿ ಉದ್ಯಮಿಗಳಾದ ಎಕ್ಸ್‍ಪರ್ಟೈಸ್ ಕಂಪನಿ ಸಿಇಒ ಮೊಹಮ್ಮದ್ ಅಶ್ರಫ್, ಇಂಡೋ ಮಿಮ್ ಪ್ರೈ. ಲಿ. ನ ಪ್ರಧಾನ ಎಚ್‍ಆರ್ ವೆಂಕಟರಮಣ ಪಿ ಹಾಗೂ ಮಶ್ರೆಕ್ ಗ್ಲೋಬಲ್ ನೆಟ್ವರ್ಕ್ ಸಂಸ್ಥೆಯ ಗ್ರೂಪ್ ರಿಯಲ್ ಎಸ್ಟೇಟ್ ಮತ್ತು ಫೆಸಿಲಿಟಿ ಮ್ಯಾನೇಜ್ಮೆಂಟ್ ವಿಭಾಗದ ಮುಖ್ಯಸ್ಥ ಜಯರಾಮ್ ಅವರನ್ನು ಸನ್ಮಾನಿಸಲಾಯಿತು.

ಆಳ್ವಾಸ್ ಪದವಿಪೂರ್ವ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ವೇಣುಗೋಪಾಲ ಶೆಟ್ಟಿ ಕಾರ್ಯಕ್ರಮವನ್ನು ನಿರೂಪಿಸಿದರು.


Spread the love