
ಆವಿರ್ಭವ 2020-21 ಸೈನ್ಸ್ ಫೆಸ್ಟ್ನ ಸಮಾರೋಪ ಸಮಾರಂಭ
ಮೂಡಬಿದರೆ: `ವಿಜ್ಞಾನ ಕ್ಷೇತ್ರವು ತುಂಬಾ ವಿಶಾಲವಾಗಿದ್ದು, ವಿದ್ಯಾರ್ಥಿಗಳು ತಮ್ಮ ಯೋಚನಾ ವಿಧಾನವನ್ನು ಕೂಡ ವಿಸ್ತರಿಸಿಕೊಳ್ಳಬೇಕಿದೆ. ಇಂದಿನ ವಿದ್ಯಾರ್ಥಿಗಳು ಕೇವಲ ಇಂಜಿನಿಯರಿಂಗ್ ಹಾಗೂ ಮೆಡಿಕಲ್ ವಿಭಾಗಗಳಿಗೆ ತಮ್ಮನ್ನು ಸೀಮಿತಗೊಳಿಸಿಕೊಳ್ಳುತ್ತಿದ್ದಾರೆ. ಇವುಗಳಿಗೆ ಹೊರತಾದ ವಿಜ್ಞಾನದ ವಿವಿಧ ಕ್ಷೇತ್ರಗಳನ್ನು ವಿದ್ಯಾರ್ಥಿಗಳು ಆಯ್ದುಕೊಳ್ಳಬೇಕಿದೆ’ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮ್ಯಾನೇಜ್ಮೆಂಟ್ ಟ್ರಸ್ಟಿ ವಿವೇಕ್ ಆಳ್ವ ಹೇಳಿದರು.
ರಾಷ್ಟ್ರೀಯ ವಿಜ್ಞಾನದ ದಿನದ ಪ್ರಯುಕ್ತ ಆಳ್ವಾಸ್ ಪದವಿ ವಿಜ್ಞಾನ ವಿಭಾಗದಿಂದ ಆಯೋಜಿಸಲಾದ `ಆವಿರ್ಭವ 2020-21′ ಸೈನ್ಸ್ ಫೆಸ್ಟ್ನ ಸಮಾರೋಪ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿದರು. `ವಿದ್ಯಾರ್ಥಿಯಲ್ಲಿರುವ ಆಸಕ್ತಿ ಬದಲಾವಣೆಗಳನ್ನು ತರಬಲ್ಲದು. ವಿಜ್ಞಾನದ ಆವಿಷ್ಕಾರ, ಸಂಶೋಧನೆಗಳಲ್ಲಿ ಹೆಚ್ಚಿನ ಆಸಕ್ತಿ ತೋರಿಸುವ ಅವಶ್ಯಕತೆಯಿದೆ. ಸಂಶೋಧನಾಕ್ಷೇತ್ರದಲ್ಲಿ ಅಪಾರ ಅವಕಾಶಗಳಿದ್ದು, ಭಾರತಕ್ಕಾಗಿ ಕೆಲಸ ಮಾಡಬಲ್ಲ ನುರಿತ ವಿಜ್ಞಾನಿಗಳು ಬೇಕಾಗಿದ್ದಾರೆ ಎಂದರು.
ಆವಿರ್ಭವ ಸ್ಪರ್ಧೆಯ ವಿವಿಧ ಇವೆಂಟ್ಗಳಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳಿಗೆ ಸಮಾರೋಪ ಸಮಾರಂಭದಲ್ಲಿ ಬಹುಮಾನಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಆಳ್ವಾಸ್ ಪದವಿ ಕಾಲೇಜಿನ ಪ್ರಾಂಶುಪಾಲ ಡಾ ಕುರಿಯನ್,ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ, ವಿಜ್ಞಾನ ವಿಭಾಗದ ಡೀನ್ ರಮ್ಯ ರೈ, ವಿಜ್ಞಾನ ವಿಭಾಗದ ಸಂಯೋಜಕಿ ಚಂದ್ರಕಲಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ವಿದ್ಯಾರ್ಥಿನಿ ಪ್ರಾರ್ಥಾನಾ ನಿರೂಪಿಸಿ, ರೂಪ ಶೆಟ್ಟಿ ಸ್ವಾಗತಿಸಿ, ದೀಪ್ತಿ ವಂದಿಸಿದರು.