ಆಸ್ಪತ್ರೆಗಳು ಸುಲಭ ದರದಲ್ಲಿ ಚಿಕಿತ್ಸೆ ನೀಡಬೇಕು: ಸಿಎಂ ಬೊಮ್ಮಾಯಿ

Spread the love

ಆಸ್ಪತ್ರೆಗಳು ಸುಲಭ ದರದಲ್ಲಿ ಚಿಕಿತ್ಸೆ ನೀಡಬೇಕು: ಸಿಎಂ ಬೊಮ್ಮಾಯಿ

ಮೈಸೂರು: ಇಂದು ಔಷಧಗಳು ಸಾಮಾನ್ಯರಿಗೆ ನಿಲುಕದಷ್ಟು ದುಬಾರಿಯಾಗಿವೆ. ಹೀಗಾಗಿ ಸಂಶೋಧಕರು, ಆಸ್ಪತ್ರೆಗಳು, ಖಾಸಗಿ ಕಂಪನಿಗಳು, ವೈದ್ಯರು ಸುಲಭ ದರದಲ್ಲಿ ಚಿಕಿತ್ಸೆ ನೀಡಲು ಪ್ರಯತ್ನಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕರೆ ನೀಡಿದರು.

ನಗರದ ಜೆಕೆ ಮೈದಾನದ ಎಂಎಂಸಿ ಸಭಾಂಗಣದಲ್ಲಿ ವೈದ್ಯಕೀಯ ಶಿಕ್ಷಣ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿವಿಧ ಕಟ್ಟಡಗಳ ಉದ್ಘಾಟನೆ ಹಾಗೂ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ೪೧ ಐಸಿಯು ಬೆಡ್ ಉದ್ಘಾಟಿಸಿ ಮಾತನಾಡಿದ ಅವರು, ಆಧುನಿಕ ಚಿಕಿತ್ಸೆಯಲ್ಲಿ ದೊಡ್ಡ ಬದಲಾವಣೆಯಾಗುತ್ತಿದೆ. ತಂತ್ರಜ್ಞಾನ, ಸಂಶೋಧನೆಗಳು ಮಹತ್ವದ ಪಾತ್ರ ವಹಿಸುತ್ತಿವೆ. ಆದರೆ, ಇಂದಿಗೂ ಗ್ರಾಮೀಣ ಭಾಗದವರಿಗೆ ಸೂಕ್ತ ಚಿಕಿತ್ಸೆ ಸಿಗುತ್ತಿಲ್ಲ. ದುಬಾರಿ ಬೆಲೆ ತೆತ್ತು ಚಿಕಿತ್ಸೆ ಪಡೆಯಲು ಅವರಿಂದ ಸಾಧ್ಯವಾಗುತ್ತಿಲ್ಲ. ದುಬಾರಿ ಔಷಧಗಳಿಂದ ಕೇವಲ ಉಳ್ಳವರಿಗೆ ಮಾತ್ರ ಅನುಕೂಲವಾಗುತ್ತದೆ. ಹೀಗಾಗಿ ದುಡಿಯುವ ವರ್ಗಕ್ಕೆ ಅನುಕೂಲವಾಗುವಂತೆ ಔಷಧ ತಯಾರಿಸಬೇಕು. ದುಡಿಯುವ ವರ್ಗದ ಆರೋಗ್ಯ ಕಾಪಾಡಿದರೆ ದೇಶದ ಆರೋಗ್ಯ ಕಾಪಾಡಿದಂತೆ ಎಂದರು.

ನಾವು ತಯಾರಿಸುವ ಔಷಧ ಮೆಡಿಕಲ್ ಶಾಪ್‌ಗಳಲ್ಲಿ ಇಡುವಂತಿರಬಾರದು. ಬಡವರಿಗೆ ಸುಲಭವಾಗಿ ಸಿಗುವಂತಿರಬೇಕು. ಇದು 21ನೇ ಶತಮಾನದ ದೊಡ್ಡ ಸವಾಲು ಎಂದರು.

ವೈದ್ಯಕೀಯ ಕಾಲೇಜುಗಳು ಹೊಸ ಹೊಸ ಚಿಂತನೆಗಳು, ಆವಿಷ್ಕಾರ ಮಾಡಬೇಕು. ಅಸಹಾಯಕರಾಗಿ ಕೈಕಟ್ಟಿ ಕೂರಬಾರದು. ಸ್ವಂತ ಆರ್‌ಎನ್‌ಡಿ ಸೆಂಟರ್, ಇನ್‌ಕ್ಯುಬೇಸನ್ ಸೆಂಟರ್ ತೆರೆಯುವ ಮೂಲಕ ಜನರಿಗೆ ನೆರವಾಗಬೇಕು. ಮೈಸೂರು ಮೆಡಿಕಲ್ ಕಾಲೇಜು ನೂರು ವರ್ಷ ಪೂರೈಸಿದ್ದು, ದೇಶದಲ್ಲೇ ಅತ್ಯಾಧುನಿಕ ಸೆಂಟರ್ ಆಗಿ ಪರಿವರ್ತನೆ ಆಗಬೇಕು. ಇಲ್ಲಿ ಆರ್‌ಎನ್‌ಡಿ ಸೆಂಟರ್ ತೆರೆದರೆ ಅದಕ್ಕೆ ಬೇಕಾದ ಅನುದಾನವನ್ನು ಮುಂದಿನ ಬಜೆಟ್ ನೀಡುವುದಾಗಿ ಸಿಎಂ ಘೋಷಿಸಿದರು.

ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಮಾತನಾಡಿ, ಆರೋಗ್ಯ ಕ್ಷೇತ್ರದಲ್ಲಿ ಕರ್ನಾಟಕ ಮುಂದಿಡಿಯಿಟ್ಟಿದೆ. ಬೆಂಗಳೂರು ದೇಶದ ಮೊದಲ ಆರೋಗ್ಯ ನಗರ ಎಂಬ ಹೆಗ್ಗಳಿಕೆ ಪಡೆದುಕೊಂಡಿದ್ದು, ಬೆಂಗಳೂರು ಮಾತ್ರವಲ್ಲದೆ ರಾಜ್ಯವೇ ಆರೋಗ್ಯ ಕರ್ನಾಟಕವಾಗುತ್ತಿದೆ. ಕೋವಿಡ್ ಸಂದರ್ಭದಲ್ಲಿ ಗ್ರಾಮೀಣ ಭಾಗದಲ್ಲಿ ಚಿಕಿತ್ಸೆ ನೀಡಲು ಕಷ್ಟವಾದಾಗ ಗುಣಮಟ್ಟದ ಚಿಕಿತ್ಸೆ ಕಟ್ಟಕಡೆಯ ವ್ಯಕ್ತಿಗೂ ಸಿಗಲಿ ಎಂಬ ಕಾರಣಕ್ಕೆ ದೇಶದಲ್ಲೇ ಮೊದಲು ಆರಂಭಿಸಿದ್ದ ಟೆಲಿ ಐಸಿಯು ಇಂದು ದೇಶಕ್ಕೆ ಮಾದರಿಯಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಸಚಿವ ಗೋವಿಂದ ಕಾರಜೋಳ, ಶಾಸಕರಾದ ಎಸ್.ಎ.ರಾಮದಾಸ್, ಎಲ್.ನಾಗೇಂದ್ರ, ನಿಗಮ ಮಂಡಳಿ ಅಧ್ಯಕ್ಷರಾದ ಮಿರ್ಲೆ ಶ್ರೀನಿವಾಸ ಗೌಡ, ಎಂ.ಶಿವಕುಮಾರ್, ನಿಜಗುಣರಾಜು, ಮಹದೇವಯ್ಯ, ವೈದ್ಯಕೀಯ ಶಿಕ್ಷಣ ಇಲಾಖೆ ಕಾರ್ಯದರ್ಶಿ ನವೀನ್ ರಾಜ್‌ಸಿಂಗ್ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ, ಆರೋಗ್ಯ ಇಲಾಖೆ ಆಯುಕ್ತ ರಂದೀಪ್, ನಗರ ಪೊಲೀಸ್ ಆಯುಕ್ತ ರಮೇಶ್.ಬಿ ಸೇರಿದಂತೆ ಹಲವರು ಭಾಗವಹಿಸಿದ್ದರು.


Spread the love