
“ಆ ತೊಂಭತ್ತು ದಿನಗಳು” ನೂರು ದಿನ ಯಶಸ್ವಿಯಾಗಿ ಮುನ್ನುಗ್ಗಲಿ: ನಟ, ನಿರ್ದೇಶಕ ರಿಷಬ್ ಶೆಟ್ಟಿ
ಕುಂದಾಪುರ: ಕುಂದಾಪುರದಲ್ಲಿ ಸಿನೆಮಾ ವೇದಿಕೆ ಸೃಷ್ಠಿಸಿ ಸ್ಥಳೀಯ ಪ್ರತಿಭೆಗಳ ಜೊತೆಗೆ ಒಂದೊಳ್ಳೆ ಸಿನೆಮಾ ಮಾಡಬಹುದು ಎನ್ನುವುದಕ್ಕೆ ಇನ್ನೊಂದು ಉದಾಹರಣೆ ಯಾಕೂಬ್ ಖಾದರ್ ಗುಲ್ವಾಡಿ ಅವರ ತಂಡ ಕಟ್ಟಿಕೊಟ್ಟಿರುವ ಸಿನೆಮಾ. ಖಂಡಿತವಾಗಿಯೂ “ಆ ತೊಂಭತ್ತು ದಿನಗಳು” ಸಿನೆಮಾ ಚಿತ್ರಮಂದಿಗಳಲ್ಲಿ ನೂರು ದಿನ ಯಶಸ್ವಿಯಾಗಿ ಮುನ್ನುಗ್ಗಲಿ ಎಂದು ನಟ, ನಿರ್ದೇಶಕ ರಿಷಬ್ ಶೆಟ್ಟಿ ಶುಭ ಹಾರೈಸಿದರು.
ಅವರು ಭಾನುವಾರ ಸಂಜೆ ಗುಲ್ವಾಡಿಯಲ್ಲಿ ಜರುಗಿದ ರೊನಾಲ್ಡ್ ಲೋಬೊ ಮತ್ತು ಯಾಕೂಬ್ ಖಾದರ್ ಗುಲ್ವಾಡಿ ಅವರ ನಿರ್ದೇಶನದ “ಆ ತೊಂಭತ್ತು ದಿನಗಳು” ಸಿನೆಮಾದ ಫಸ್ಟ್ ಲುಕ್ ಪೋಸ್ಟರ್, ಟ್ರೈಲರ್, ಹಾಡು ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಊರಲ್ಲಿ ರಾಜಕೀಯ, ಜಾತ್ರೆ ಮುಂತಾದ ಕಾರ್ಯಕ್ರಮಗಳು ನಡೆಯುತ್ತದೆ. ಆದರೆ ಇಷ್ಟು ದೊಡ್ಡ ಮಟ್ಟದಲ್ಲಿ ಸಿನೆಮಾ ಕಾರ್ಯಕ್ರಮ ನಡೆಯುತ್ತಿರುವುದು ಬಹುದೊಡ್ಡ ಖುಷಿ ಕೊಟ್ಟಿದೆ. ಗುಲ್ವಾಡಿ ಟಾಕೀಸ್ ಮೂಲಕ ಸ್ಥಳೀಯ ಪ್ರತಿಭೆಗಳಿಗೆ ವೇದಿಕೆ ಮಾಡಿಕೊಡುವ ಪ್ರಯತ್ನವೇ ಅದ್ಭುತವಾಗಿದೆ. ಸಿನೆಮಾದ ಟ್ರೈಲರ್ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಇಡೀ ಚಿತ್ರತಂಡಕ್ಕೆ ಶುಭವಾಗಲಿ. ಈ ಸಿನೆಮಾ ಖಂಡಿತವಾಗಿಯೂ ಯಶಸ್ವಿಯಾಗುತ್ತದೆ ಎಂದರು.
ಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆ ಮಾತನಾಡಿ, ಈ ಭಾಗಗಳಲ್ಲಿ ಸಾಕಷ್ಟು ಪ್ರತಿಭೆಗಳು ಅವಕಾಶಗಳಿಗಾಗಿ ಕಾಯುತ್ತಿದ್ದಾರೆ. ಆದರೆ ಅವರಿಗೆ ಸರಿಯಾದ ವೇದಿಕೆ ಸಿಗುತ್ತಿಲ್ಲ. ಆ ತೊಂಭತ್ತು ದಿನಗಳು ಸಿನೆಮಾದ ಮೂಲಕ ಪ್ರತಿಭೆಗಳಿಗೆ ಒಂದೊಳ್ಳೆ ವೇದಿಕೆ ಸಿಕ್ಕಿದೆ. ಈ ಸಿನೆಮಾ ನೀವು ಮಾತ್ರ ಚಿತ್ರಮಂದಿರಗಳಲ್ಲಿ ನೋಡದೇ ಉಳಿದವರೂ ನೋಡುವಂತೆ ಮಾಡಬೇಕು ಎಂದರು.
ನಾಡೋಜ ಜಿ. ಶಂಕರ್, ಸಹನಾ ಗ್ರೂಪ್ ನ ಸುರೆಂದ್ರ ಶೆಟ್ಟಿ, ಖ್ಯಾತ ನ್ಯಾಯವಾದಿ ರವಿಕಿರಣ್ ಮುರುಡೇಶ್ವರ, ಜಿಲ್ಲಾ ಆರೋಗ್ಯಾಧಿಕಾರಿ ನಾಗಭೂಷಣ್ ಉಡುಪ, ಬೈಕಾಡಿ ಸುಪ್ರಸಾದ್ ಶೆಟ್ಟಿ, ಜೋನ್ಸನ್ ಡಿʼಆಲ್ಮೇಡಾ ಗುಲ್ವಾಡಿ ಗ್ರಾ.ಪಂ ಅಧ್ಯಕ್ಷ ಸುದೀಶ್ ಶೆಟ್ಟಿ ಗುಲ್ವಾಡಿ, ಚಿಂತಕ ಎಎಸ್ಎನ್ ಹೆಬ್ಬಾರ್, ಸುಬ್ರಹ್ಮಣ್ಯ ಶೆಟ್ಟಿ, ನಿರ್ದೇಶಕರಾದ ರೊನಾಲ್ಡ್ ಲೋಬೊ ಹಾಗೂ ಯಾಕೂಬ್ ಖಾದರ್ ಗುಲ್ವಾಡಿ, ನಾಯಕ ನಟ ಹೃಥೀಕ್ ಮುರುಡೇಶ್ವರ, ಮೊದಲಾದವರು ಇದ್ದರು.