ಆ.13 ಹಾಗೂ 14: 75ನೇ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಕಾಪು ಬ್ಲಾಕ್ ಕಾಂಗ್ರೆಸ್ ನಿಂದ ಬೃಹತ್ ತಿರಂಗ ರ‍್ಯಾಲಿ

Spread the love

ಆ.13 ಹಾಗೂ 14: 75ನೇ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಕಾಪು ಬ್ಲಾಕ್ ಕಾಂಗ್ರೆಸ್ ನಿಂದ ಬೃಹತ್ ತಿರಂಗ ರ‍್ಯಾಲಿ

ಉಡುಪಿ: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂಭ್ರಮಾಚರಣೆ, ಸ್ವಾತಂತ್ರ್ಯಕ್ಕಾಗಿ ಹೋರಾಡಿ ಮಡಿದವರ ಸ್ಮರಣೆ ಮಾಡಲು ಆ.13 ಹಾಗೂ 14ರಂದು ಬೈಕ್ ರ‍್ಯಾಲಿ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಸಚಿವ ವಿನಯ ಕುಮಾರ ಸೊರಕೆ ಹೇಳಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೆಪಿಸಿಸಿ ಸೂಚನೆಯಂತೆ ಆ.5ರಿಂದ 10ರವರೆಗೆ ಜಿಲ್ಲೆಯಾದ್ಯಂತ 75 ಕಿ.ಮೀ ಪಾದಯಾತ್ರೆಯನ್ನು ಯಶಸ್ವಿಯಾಗಿ ಮುಗಿಸಲಾಗಿದೆ.

ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ 15 ಕಿ.ಮೀ ಪಾದಯಾತ್ರೆ ಮಾಡಲಾಗಿದ್ದು, 78 ಕಿ.ಮೀ ಕ್ರಮಿಸಲಾಗಿದೆ. ಇದರ ಬೆನ್ನಲ್ಲೇ ಬೈಕ್ ರ‍್ಯಾಲಿ ಆಯೋಜಿಸಲಾಗಿದೆ ಎಂದು ವಿವರ ನೀಡಿದರು.

ಆ.13ರಂದು ಮಧ್ಯಾಹ್ನ 3ಕ್ಕೆ ಕಾಪು ತಾಲ್ಲೂಕಿನ ಹೆಜಮಾಡಿಯಲ್ಲಿ ಆರಂಭವಾಗಲಿರುವ ಬೈಕ್ ರ‍್ಯಾಲಿ ಉದ್ಯಾವರದಲ್ಲಿ ಸಮಾಪನಗೊಳ್ಳಲಿದೆ. ಆ.14ರಂದು ಕುಕ್ಕೆಹಳ್ಳಿಯಲ್ಲಿ ಆರಂಭವಾಗುವ ರ‍್ಯಾಲಿ ಪೆರ್ಡೂರು ಮಾರ್ಗವಾಗಿ, ಭೈರಂಪಳ್ಳಿ, ಬೊಮ್ಮರಬೆಟ್ಟು, ಪರ್ಕಳ, ಆತ್ರಾಡಿ, ಬಡಗಬೆಟ್ಟು ಮೂಲಕ ಅಲೆವೂರಿನಲ್ಲಿ ಸಮಾಪನಗೊಳ್ಳಲಿದೆ. 1000 ಮಂದಿ ರ‍್ಯಾಲಿಯಲ್ಲಿ ಹೆಸರು ನೋಂದಾಯಿಸಿಕೊಂಡಿದ್ದು 1500 ಮಂದಿ ಭಾಗವಹಿಸುವ ನಿರೀಕ್ಷೆ ಇದೆ ಎಂದರು.

ಬೈಕ್‌ ರ‍್ಯಾಲಿಯಲ್ಲಿ ಜಿಲ್ಲಾ ಕಾಂಗ್ರೆಸ್‌ ಉಸ್ತುವಾರಿ ಅಭಯ್ಚಂದ್ರ ಜೈನ್ ಭಾಗವಹಿಸಲಿದ್ದಾರೆ. ಮುಖಂಡರಾದ ಮಿಥುನ್ ರೈ ಹಾಗೂ ಐವನ್ ಡಿಸೋಜಾ ಅವರಿಗೆ ಭಾಗವಹಿಸಲು ಮನವಿ ಮಾಡಲಾಗಿದೆ. ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಮನೆ ಮನೆಯಲ್ಲಿ ರಾಷ್ಟ್ರಧ್ವಜಾರೋಹಣಕ್ಕೆ ಸಾರ್ವಜನಿಕರನ್ನು ಹುರಿದುಂಬಿಸಲಾಗುವುದು. ಸಂವಿಧಾನ, ಜಾತ್ಯತೀತತೆ, ಪ್ರಜಾಪ್ರಭುತ್ವದ ಮೌಲ್ಯಗಳನ್ನು ತಿಳಿಸಲಾಗುವುದು ಎಂದರು.

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್‌ ಮುಖಂಡರಾದ ಹರೀಶ್ ಕಿಣಿ, ಚರಣ್ ವಿಠ್ಠಲ್, ನವೀನ್ ಸಾಲಿಯಾನ್, ಸಂತೋಷ್ ಕುಲಾಲ್, ನಾಗೇಶ್ ಉದ್ಯಾವರ ಇದ್ದರು.


Spread the love