ಇಂಟಾಕ್ ಆಶ್ರಯದಲ್ಲಿ ಪ್ರವೀಣ್ ಭಾರ್ಗವ್ ಅವರಿಂದ ವನ್ಯಜೀವಿ ಸಂರಕ್ಷಣೆ ಕುರಿತು ಉಪನ್ಯಾಸ
ಮಂಗಳೂರು: ಭಾರತೀಯ ಕಲೆ ಮತ್ತು ಪರಂಪರೆ ಸಂಸ್ಥೆ ಇಂಟಾಕ್ನ ಮಂಗಳೂರು ಘಟಕವು “ಮಾನವ ಪ್ರಾಬಲ್ಯದ ಭೂದೃಶ್ಯದಲ್ಲಿ ವನ್ಯಜೀವಿ ಸಂರಕ್ಷಣೆ” ಕುರಿತು ಖ್ಯಾತ ವನ್ಯಜೀವಿ ಸಂರಕ್ಷಣಾವಾದಿ ಪ್ರವೀಣ್ ಭಾರ್ಗವ್ ಅವರ ವಿಶೇಷ ಉಪನ್ಯಾಸವನ್ನು ಬುಧವಾರ, ಅಕ್ಟೋಬರ್ 15, 2025 ರಂದು ನಗರದ ಕೊಡಿಯಾಲ್ಗುತ್ತು ಕಲಾಕೇಂದ್ರದಲ್ಲಿ ಆಯೋಜಿಸಿತು.
ಸರ್ಕಾರೇತರ ಸಂಸ್ಥೆ ವೈಲ್ಡ್ಲೈಫ್ ಫಸ್ಟ್ನ ವ್ಯವಸ್ಥಾಪಕ ಟ್ರಸ್ಟಿಯಾಗಿರುವ ಪ್ರವೀಣ್ ಭಾರ್ಗವ್, ದೇಶದ ಸಂರಕ್ಷಣಾ ನೀತಿ, ಕಾನೂನು ಮತ್ತು ವಕಾಲತ್ತು ಕ್ಷೇತ್ರಗಳಲ್ಲಿ ವ್ಯಾಪಕ ಅನುಭವ ಹೊಂದಿದ್ದಾರೆ. ಅವರು ರಾಷ್ಟಿçÃಯ ವನ್ಯಜೀವಿ ಮಂಡಳಿ, ಪರಿಸರ ಮತ್ತು ಅರಣ್ಯ ಸಚಿವಾಲಯ ಹಾಗೂ ರಾಷ್ಟಿçÃಯ ಹುಲಿ ಸಂರಕ್ಷಣಾ ಪ್ರಾಧಿಕಾರದ ವಿವಿಧ ತಜ್ಞ ಸಮಿತಿಗಳಲ್ಲಿಯೂ ಸೇವೆ ಸಲ್ಲಿಸಿದ್ದಾರೆ. ವನ್ಯಜೀವಿ ಕಾನೂನಿನ ಕುರಿತು ಎರಡು ಪುಸ್ತಕಗಳ ಲೇಖಕರಾದ ಅವರು ಸ್ಯಾಂಕ್ಚುರಿ ಪತ್ರಿಕೆಯ ವನ್ಯಜೀವಿ ಸೇವಾ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ.
ತಮ್ಮ ಉಪನ್ಯಾಸದಲ್ಲಿ ಭಾರ್ಗವ್ ಅವರು ದೇಶದ ವನ್ಯಜೀವಿ ಮತ್ತು ಅರಣ್ಯ ಸಂರಕ್ಷಣೆಯ ಪ್ರಸ್ತುತ ಸ್ಥಿತಿಯ ಕುರಿತು ಆಳವಾಗಿ ಮಾತನಾಡಿದರು. “ಇಂದು ಭಾರತದಲ್ಲಿ ಸುಮಾರು 4 ಲಕ್ಷ ಚದರ ಕಿಲೋಮೀಟರ್ ಭೂಭಾಗ, ಅಂದರೆ ದೇಶದ ಸುಮಾರು 12 ಶೇಕಡಾ ಪ್ರದೇಶ, ದಟ್ಟ ಅಥವಾ ಮಧ್ಯಮ ದಟ್ಟತೆಯ ಅರಣ್ಯಗಳನ್ನು ಹೊಂದಿವೆ. ಇದರಲ್ಲಿ ಕೇವಲ 1.67 ಲಕ್ಷ ಚದರ ಕಿಲೋಮೀಟರ್, ಅಂದರೆ 4 ಶೇಕಡಾ ಭಾಗ ಮಾತ್ರ ವನ್ಯಜೀವಿಗಳಿಗೆ ಮೀಸಲಾದ ಸಂರಕ್ಷಿತ ಪ್ರದೇಶಗಳಾಗಿವೆ,” ಎಂದು ಹೇಳಿದರು. ಪ್ರಮುಖ ವನ್ಯಜೀವಿಗಳ ಸಂಖ್ಯೆ ಕುರಿತು ಮಾತನಾಡಿದ ಅವರು, “ಭಾರತದಲ್ಲಿ ಪ್ರಸ್ತುತ ಸುಮಾರು 2,500–2,900 ಹುಲಿಗಳು, 3,000–4,000 ಸಿಂಗಳೀಕ ಕೋತಿಗಳು, 300–400 ಸಿಂಹಗಳು ಮತ್ತು 25,000–27,000 ಆನೆಗಳು ಇವೆ,” ಎಂದರು.
ಅರಣ್ಯ ಪ್ರದೇಶಗಳ ವಿಭಜನೆಯೇ ಸಂರಕ್ಷಣೆಗೆ ಅತಿದೊಡ್ಡ ಅಡಚಣೆ ಎಂದು ಅವರು ಹೇಳಿದರು. “ಕಾನೂನು ರೂಪಿಸುವುದಕ್ಕಿಂತ ಅರಣ್ಯ ವಿಭಜನೆಯನ್ನು ತಡೆಯುವುದು ಅತಯಗತ್ಯ. ಪಶ್ಚಿಮ ಘಟ್ಟಗಳಾದ್ಯಂತ ಅಡ್ಡವಾಗಿ ಕತ್ತರಿಸುವ ಬೃಹತ್ ಮೂಲಸೌಕರ್ಯ ಯೋಜನೆಗಳು ಕಾಡುಪ್ರಾಣಿಗಳ ವಾಸಸ್ಥಳಗಳಿಗೆ ಭಾರೀ ಹಾನಿ ಮಾಡಿವೆ. ಅಸ್ತಿತ್ವದಲ್ಲಿರುವ ಮೂಲಸೌಕರ್ಯವನ್ನು ಸಮರ್ಪಕವಾಗಿ ಬಳಸಿದಲ್ಲಿ ಪರಿಸರ ಮತ್ತು ಆರ್ಥಿಕತೆ ಎರಡಕ್ಕೂ ಲಾಭವಾಗುತ್ತದೆ. ಇದು ಅಭಿವೃದ್ಧಿಗೆ ವಿರೋಧವಲ್ಲ, ಸಮತೋಲಿತ ಪರಿಹಾರಗಳನ್ನು ಕಂಡುಹಿಡಿಯುವ ವಿಚಾರ,” ಎಂದು ಅವರು ಹೇಳಿದರು.
ಅಕ್ರಮ ವನ್ಯಜೀವಿ ದಂಧೆಯು ಮಾದಕ ವಸ್ತುಗಳ ದಂಧೆಯ ನಂತರದ ಅತಿದೊಡ್ಡ ಅಕ್ರಮ ವ್ಯವಹಾರ ಎಂದು ಅವರು ಗಮನಸೆಳೆದರು. “ಇದನ್ನು ನಿಭಾಯಿಸಲು ವಿಶಿಷ್ಟ ಕಾರ್ಯಪಡೆಯ ಅಗತ್ಯವಿದೆ. ಆಶ್ಚರ್ಯಕರವೆಂದರೆ, ನಮ್ಮ ಅತ್ಯಂತ ಮಹತ್ವದ ನೈಸರ್ಗಿಕ ಸ್ವತ್ತು ಮತ್ತು ಜೀವನಾಡಿಯಾಗಿರುವ ನದಿಗಳನ್ನು ರಕ್ಷಿಸಲು ಭಾರತದಲ್ಲಿ ನಿರ್ದಿಷ್ಟವಾಗಿ ಯಾವುದೇ ಕಾನೂನು ಇಲ್ಲ. ಕೇವಲ ಮರಗಳನ್ನು ರಕ್ಷಿಸುವುದನ್ನು ಬಿಟ್ಟು, ಸಮಗ್ರ ಸಂರಕ್ಷಣಾ ಮಾದರಿಯ ದೃಷ್ಟಿಕೋನದಿಂದ ವನ್ಯಜೀವಿ ಸಂರಕ್ಷಣೆಯನ್ನು ನೋಡಬೇಕಾಗಿದೆ,” ಎಂದು ಅವರು ಹೇಳಿದರು.
ಇಂಟಾಕ್ ಮಂಗಳೂರು ಘಟಕದ ಸಹ-ಸಂಚಾಲಕರಾದ ವಾಸ್ತುಶಿಲ್ಪಿ ಮತ್ತು ಪರಿಸರ ಯೋಜಕ ನಿರೇನ್ ಜೈನ್ ಅತಿಥಿಯನ್ನು ಪರಿಚಯಿಸಿ ಕಾರ್ಯಕ್ರಮವನ್ನು ಸಂಯೋಜಿಸಿದರು. ಇಂಟಾಕ್ ಸಂಚಾಲಕ ಸುಭಾಸ್ ಬಸು ಸಮಾರೋಪ ಸಂದೇಶ ನೀಡಿದರು.