ಇಂಡಿಯಾ ಟುಡೇ ಸಮೀಕ್ಷೆ; ಆಳ್ವಾಸ್‍ಗೆ ಆಲ್ ಇಂಡಿಯಾ ರ್ಯಾಂಕಿಂಗ್ಸ್

Spread the love

ಇಂಡಿಯಾ ಟುಡೇ ಸಮೀಕ್ಷೆ; ಆಳ್ವಾಸ್‍ಗೆ ಆಲ್ ಇಂಡಿಯಾ ರ್ಯಾಂಕಿಂಗ್ಸ್

ಮೂಡುಬಿದಿರೆ: ಇಂಡಿಯಾ ಟುಡೇ ನಿಯತಕಾಲಿಕೆಯ 2022ನೇ ಸಾಲಿನ ಎಂಡಿಆರ್‍ಎ ಸಮೀಕ್ಷೆ ಪ್ರಕಟಗೊಂಡಿದ್ದು, ಆಳ್ವಾಸ್ ಕಾಲೇಜಿನ ವಿವಿಧ ವಿಭಾಗಗಳು ಅಖಿಲ ಭಾರತ ಮಟ್ಟದಲ್ಲಿ ಉತ್ತಮ ಶ್ರೇಣಿಗಳನ್ನು ಪಡೆದುಕೊಂಡಿವೆ. ಆಳ್ವಾಸ್ ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗಕ್ಕೆ 37ನೇ ರ್ಯಾಂಕ್, ಪದವಿ ವಿಜ್ಞಾನ ವಿಭಾಗಕ್ಕೆ 122ನೇ ರ್ಯಾಂಕ್, ಕಲಾ ವಿಭಾಗಕ್ಕೆ 123, ಬಿಸಿಎ 135, ಬಿಬಿಎ 147 ಹಾಗೂ ವಾಣಿಜ್ಯ ವಿಭಾಗವು 175ನೇ ರ್ಯಾಂಕ್ ಪಡೆದುಕೊಂಡಿವೆ.

ಕಡಿಮೆ ಶುಲ್ಕದಲ್ಲಿ ಗುಣಮಟ್ಟದ ಶಿಕ್ಷಣ, ಸಂಶೋಧನೆ, ಕಲಿಕೆಗೆ ಅಗತ್ಯವಿರುವ ಸೌಕರ್ಯಗಳು , ಸ್ವೀಕೃತ ಅರ್ಜಿಗಳ ಗುಣಮಟ್ಟ, ಉದ್ಯೋಗ ಭದ್ರತೆ, ವ್ಯಕ್ತಿತ್ವ ಹಾಗೂ ನಾಯಕತ್ವ ಕೌಶಲ್ಯ ಹಾಗೂ ವಿದ್ಯಾರ್ಥಿ ಸ್ನೇಹಿ ಕಲಿಕಾ ವಾತಾವರಣವನ್ನು ಗುರುತಿಸಿ ಈ ಶ್ರೇಣಿಗಳನ್ನು ನೀಡಲಾಗುತ್ತದೆ.

ಆಳ್ವಾಸ್ ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗವು ಕಡಿಮೆ ಶುಲ್ಕದಲ್ಲಿ ಗುಣಮಟ್ಟದ ಶಿಕ್ಷಣ ಒದಗಿಸುವ ಕೆಟಗರಿಯಲ್ಲಿ ಅಖಿಲ ಭಾರತ ಮಟ್ಟದ ಟಾಪ್ ಕಾಲೇಜುಗಳಲ್ಲಿ 10ನೇ ರ್ಯಾಂಕ್ ಗಳಿಸಿದೆ. ಕಳೆದ ಬಾರಿಯ ಆಲ್ ಇಂಡಿಯಾ ರ್ಯಾಂಕಿಂಗ್‍ನಲ್ಲಿ ಪತ್ರಿಕೋದ್ಯಮ ವಿಭಾಗಕ್ಕೆ 40ನೇ ರ್ಯಾಂಕ್ ಲಭಿಸಿದ್ದು, ಈ ಬಾರಿ 37ನೇ
ಶ್ರೇಯಾಂಕವನ್ನು ಪಡೆದು ಸಮೀಕ್ಷೆಯಲ್ಲಿ ತನ್ನ ಸ್ಥಾನವನ್ನು ಉತ್ತಮಪಡಿಸಿಕೊಂಡಿದೆ.

ಸಂಸ್ಥೆಯ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ, ಪ್ರಾಂಶುಪಾಲ ಡಾ. ಕುರಿಯನ್, ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ ಹರ್ಷ ವ್ಯಕ್ತಪಡಿಸಿದ್ದಾರೆ.


Spread the love