ಇಂದು ಚುನಾವಣಾ ಪ್ರಚಾರಕ್ಕೆ ರಾಜ್ಯಕ್ಕೆ ಪ್ರಿಯಾಂಕ ಗಾಂಧಿ ಎಂಟ್ರಿ!

Spread the love

ಇಂದು ಚುನಾವಣಾ ಪ್ರಚಾರಕ್ಕೆ ರಾಜ್ಯಕ್ಕೆ ಪ್ರಿಯಾಂಕ ಗಾಂಧಿ ಎಂಟ್ರಿ!

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣಾ ಅಖಾಡಕ್ಕೆ ಮಂಗಳವಾರ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಪ್ರವೇಶ ಮಾಡಲಿದ್ದು, ಮಂಗಳವಾರ ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಯ ವಿವಿಧ ಕ್ಷೇತ್ರಗಳಲ್ಲಿ ಅಬ್ಬರದ ಪ್ರಚಾರ ನಡೆಸಲಿದ್ದಾರೆ.

ಭಾನುವಾರ ಹಾಗೂ ಸೋಮವಾರ ಪ್ರಿಯಾಂಕಾ ಗಾಂಧಿ ಅವರ ಸಹೋದರ ರಾಹುಲ್‌ಗಾಂಧಿ ಅವರು ಉತ್ತರ ಕರ್ನಾಟಕ ಭಾಗದಲ್ಲಿ ಪ್ರಚಾರ ನಡೆಸಿದ್ದರು. ಸೋಮವಾರ ರಾತ್ರಿ ರಾಹುಲ್‌ಗಾಂಧಿ ಅವರು ದೆಹಲಿಗೆ ವಾಪಸಾದ ಬೆನ್ನಲ್ಲೇ ಪ್ರಿಯಾಂಕಾ ಗಾಂಧಿ ಅವರು ಮಂಗಳವಾರ ರಾಜ್ಯ ಪ್ರವೇಶ ಮಾಡಲಿದ್ದಾರೆ.

ಮಂಗಳವಾರ ಮಧ್ಯಾಹ್ನ ಮೈಸೂರಿನ ಟಿ.ನರಸೀಪುರ ಕ್ಷೇತ್ರದ ಯಳವರ ಹುಂಡಿಯಲ್ಲಿ ನಡೆಯಲಿರುವ ಸಾರ್ವಜನಿಕ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಬಳಿಕ ಮಧ್ಯಾಹ್ನ 3 ಗಂಟೆಗೆ ಚಾಮರಾಜನಗರ ಜಿಲ್ಲೆಯ ಹನೂರು ಪಟ್ಟಣದ ಗೌರಿಶಂಕರ ಹಾಲ್‌ನಲ್ಲಿ ಮಹಿಳೆಯರೊಂದಿಗೆ ಸಂವಾದ ನಡೆಸಲಿದ್ದಾರೆ.

ನಂತರ ಮೈಸೂರು ಜಿಲ್ಲೆಯ ಕೃಷ್ಣರಾಜನಗರ ಕ್ಷೇತ್ರದಲ್ಲಿ ಬೃಹತ್‌ ರಾರ‍ಯಲಿ ನಡೆಸಲಿದ್ದಾರೆ. ತೋಪಮ್ಮ ದೇವಾಲಯದಿಂದ ಅಂಬೇಡ್ಕರ್‌ ಪ್ರತಿಮೆ ಮೂಲಕ ಪುರಸಭೆ ಕಚೇರಿವರೆಗೆ ಬೃಹತ್‌ ರಾರ‍ಯಲಿ ನಡೆಸುವ ಮೂಲಕ ಶಕ್ತಿ ಪ್ರದರ್ಶನ ನಡೆಸಲಿದ್ದಾರೆ ಎಂದು ಕಾಂಗ್ರೆಸ್‌ ಮೂಲಗಳು ತಿಳಿಸಿವೆ.

10 ದಿನ 30 ಕ್ಷೇತ್ರಗಳಲ್ಲಿ ಪ್ರಿಯಾಂಕಾ-ರಾಗಾ ಪ್ರಚಾರ!

ವಿಧಾನಸಭೆ ಚುನಾವಣೆಗೆ ಕೇವಲ ಹದಿನೈದು ದಿನ ಮಾತ್ರ ಬಾಕಿ ಉಳಿದಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಅಬ್ಬರದ ಪ್ರಚಾರ ನಡೆಸಲು ಕಾಂಗ್ರೆಸ್‌ ರಣತಂತ್ರ ರೂಪಿಸಿದ್ದು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ವರಿಷ್ಠರಾದ ರಾಹುಲ್‌ ಗಾಂಧಿ, ಪ್ರಿಯಾಂಕಾ ಗಾಂಧಿ ಅವರು ತಲಾ ಹತ್ತು ದಿನ ರಾಜ್ಯದಲ್ಲಿ ಪ್ರಚಾರ ನಡೆಸಲಿದ್ದಾರೆ.

ಈ ನಾಯಕರು ನಿತ್ಯ ಮೂರು ಕ್ಷೇತ್ರಗಳಂತೆ ತಲಾ 30 ಕ್ಷೇತ್ರಗಳಲ್ಲಿ ಪ್ರಚಾರ ನಡೆಸುವರು. ರಾಜ್ಯ ನಾಯಕರಾದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ನಿತ್ಯ 4-5 ಕ್ಷೇತ್ರಗಳಂತೆ ಬಹಿರಂಗ ಪ್ರಚಾರ ಅಂತ್ಯವಾಗುವ ವೇಳೆಗೆ 70-75 ಕ್ಷೇತ್ರಗಳಲ್ಲಿ ಸಂಚರಿಸಲಿದ್ದಾರೆ. ಇದೇ ವೇಳೆ ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಅವರು 60-65 ಕ್ಷೇತ್ರಗಳಲ್ಲಿ ಮತಯಾಚನೆ ನಡೆಸಲು ಕಾಂಗ್ರೆಸ್‌ ವೇಳಾಪಟ್ಟಿಸಿದ್ಧಪಡಿಸಿದೆ ಎಂದು ತಿಳಿದುಬಂದಿದೆ.

ರಾಹುಲ್‌ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ  ಅವರು ಒಂದು ಬಾರಿ ರಾಜ್ಯಕ್ಕೆ ಭೇಟಿ ನೀಡಿದಾಗ ಸತತವಾಗಿ ಎರಡು ದಿನ ಪ್ರಚಾರ ನಡೆಸುವರು. ಈ ರೀತಿ ಅವರು ಐದು ಬಾರಿ ರಾಜ್ಯಕ್ಕೆ (ಅರ್ಥಾತ್‌ ಒಟ್ಟು 10 ದಿನ) ಆಗಮಿಸುವರು.

ಇನ್ನು ಚುನಾವಣಾ ಪ್ರಚಾರದ ವೇಳೆ ಯಾವುದೇ ಕಾರಣಕ್ಕೂ ರಾಷ್ಟ್ರೀಯ ವಿಚಾರಗಳನ್ನು ಪ್ರಸ್ತಾಪಿಸಬಾರದು. ರಾಜ್ಯದಲ್ಲಿನ ಭ್ರಷ್ಟಾಚಾರ, ದುರಾಡಳಿತ ಹಾಗೂ ಜನರ ಸಮಸ್ಯೆಗಳನ್ನು ಪ್ರಸ್ತಾಪಿಸಿ ಮತ ಯಾಚಿಸಬೇಕು. ಅನಗತ್ಯ ವಿಚಾರಗಳ ಬಗ್ಗೆ ಮಾತನಾಡುವ ಮೂಲಕ ಚುನಾವಣೆ ಹೊಸ್ತಿಲಲ್ಲಿ ವಿವಾದ ಸೃಷ್ಟಿಸಬಾರದು ಎಂದು ನಿರ್ಧರಿಸಿರುವುದಾಗಿ ಮೂಲಗಳು ತಿಳಿಸಿವೆ.


Spread the love