
ಇಂದು ಹಿಮವದ್ ಗೋಪಾಲಸ್ವಾಮಿ ರಥೋತ್ಸವ
ಚಾಮರಾಜನಗರ: ಗುಂಡ್ಲುಪೇಟೆ ತಾಲೂಕಿನ ಶ್ರೀ ಹಿಮವದ್ ಗೋಪಾಲಸ್ವಾಮಿಯವರ ಬ್ರಹ್ಮ ರಥೋತ್ಸವವು ಮಾರ್ಚ್ 18ರಂದು ನಡೆಯಲಿದ್ದು, ಈ ಸಂಬಂಧ ಮಾರ್ಚ್ 16ರಿಂದಲೇ 21ರವರೆಗೆ ದೇವಾಲಯದಲ್ಲಿ ವಿವಿಧ ಪೂಜಾ ಕೈಂಕರ್ಯಗಳು ನಡೆಯಲಿವೆ.
ಮಾರ್ಚ್ 16ರಂದು ಬೆಳಿಗ್ಗೆ ಉತ್ಸವ, ಪಷ್ಪಬಲಿ, ಧ್ವಜಾರೋಹಣ, ಸಂಜೆ ಭೇರಿತಾಡನ ಯಾಗಶಾಲಾ ಪ್ರವೇಶ ನಡೆದಿದ್ದು, 17ರಂದು ಬೆಳಿಗ್ಗೆ ಶ್ರೀಯವರ ಉತ್ಸವ, ಸಂಜೆ 4ಗಂಟೆಗೆ ಕಾಶಿಯಾತ್ರಾ ಉತ್ಸವ, ಸಂಬಂಧ ಮಾಲಾಪೂರ್ವಕ ಶ್ರೀ ರುಕ್ಮಿಣಿ ಸತ್ಯಭಾಮ ಸಹಿತ ಶ್ರೀ ಹಿಮವದ್ ಗೋಪಾಲಸ್ವಾಮಿಯವರ ದಿವ್ಯಕಲ್ಯಾಣೋತ್ಸವ, 18ರಂದು ಬೆಳಿಗ್ಗೆ ಡೋಲಾಯಮಾನಂ, ಗೋವಿಂದಂ ಮಂಚಸ್ಥಂ ಮಧುಸೂಧನಂ ರಥಸ್ಥಂ ಕೇಶವಂಷ್ಠ್ವಾಪುನರ್ಜನ್ಮ ನವಿದ್ಯತೇ ಎಂಬ ಮರ್ಯಾದೆಯಂತೆ ಶ್ರೀಯವರ ದಿವ್ಯ ಬ್ರಹ್ಮ ರಥೋತ್ಸವ ನಡೆಯಲಿದ್ದು, ಸಂಜೆ ಶಾಂತ್ಯುತ್ಸವ ಜರುಗಲಿದೆ.
ಮಾರ್ಚ್ 19ರಂದು ಬೆಳಿಗ್ಗೆ ಉತ್ಸವ ಕೈಂಕರ್ಯ ಮತ್ತು ಬೆಳ್ಳಿ ಗರುಡೋತ್ಸವ ಸಂಜೆ ಡೋಲೋತ್ಸವ ಶಯನೋತ್ಸವ, 20೦ರಂದು ಸಂಧಾನ ಲೀಲೋತ್ಸವ, ಅವಭೃತ ಸ್ನಾನ ಸಂಜೆ ಉತ್ಸವ, ಫಣಿಮಾಲಾ ಪ್ರಬಂಧಸೇವೆ, ಪೂರ್ಣಾಹುತಿ, 21ರಂದು ಬೆಳಿಗ್ಗೆ ಮಹಾಭಿಷೇಕ, ಮಹಾಮಂಗಳಾರತಿ, ದ್ವಾದಶಾರಾಧನಾ, ಪುಷ್ಪಯಾಗ ಧ್ವಜಾರೋಹಣ, ಉಧ್ವಾಸನ ಪ್ರಬಂಧ ಸೇವೆ ಸೇತೂ ಸೇವೆ ಮೂಕಬಲಿ ಕಾರ್ಯಕ್ರಮಗಳು ನಡೆಯಲಿವೆ.
ಗುಂಡ್ಲುಪೇಟೆ ತಾಲೂಕು ಶ್ರೀ ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಮಾರ್ಚ್ 18ರಂದು ನಡೆಯಲಿರುವ ರಥೋತ್ಸವದಲ್ಲಿ ಪಾಲ್ಗೊಂಡು ದೇವರ ದರ್ಶನಕ್ಕೆ ಆಗಮಿಸುವ ಭಕ್ತಾದಿಗಳಿಗೆ ಅರಣ್ಯ ಇಲಾಖೆಯ ಚೆಕ್‌ಪೋಸ್ಟ್ ಮೈದಾನದಿಂದ ಕೆ.ಎಸ್.ಆರ್.ಟಿ.ಸಿ ವಾಹನಗಳ ವ್ಯವಸ್ಥೆ ಮಾಡಲಾಗಿದೆ.
ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಮಾರ್ಚ್ 18ರಂದು ನಡೆಯಲಿರುವ ರಥೋತ್ಸವಕ್ಕೆ ದ್ವಿಚಕ್ರ, ನಾಲ್ಕು ಚಕ್ರ, ಮಿನಿ ವಾಹನ ಮತ್ತು ಇತರೆ ವಾಹನಗಳಲ್ಲಿ ಬರುವ ಭಕ್ತಾದಿಗಳು ಅರಣ್ಯ ಇಲಾಖೆಯ ಚೆಕ್‌ಪೋಸ್ಟ್ ಮೈದಾನದಲ್ಲಿ ನಿಲುಗಡೆ ಮಾಡಬೇಕು. ನಂತರ ಅಲ್ಲಿಂದ ಕೆ.ಎಸ್.ಆರ್.ಟಿ.ಸಿ ವಾಹನಗಳಲ್ಲಿ ನಿಗದಿಪಡಿಸಿರುವ ದರ ಪಾವತಿಸಿ ಹಿಮವದ್ ಗೋಪಾಲಸ್ವಾಮಿ ಬೆಟ್ಟದ ರಥೋತ್ಸವ ಹಾಗೂ ದರ್ಶನಕ್ಕೆ ಹೋಗಿ ಬರುವ ವ್ಯವಸ್ಥೆ ಮಾಡಲಾಗಿದೆ. ಭಕ್ತಾಧಿಗಳು ಮತ್ತು ಸಾರ್ವಜನಿಕರು ಸಹಕರಿಸಬೇಕೆಂದು ಗುಂಡ್ಲುಪೇಟೆ ತಹಶೀಲ್ದಾರ್ ತಿಳಿಸಿದ್ದಾರೆ.