
ಇನ್ನೊಂದು ವಾರದಲ್ಲಿ ಚಿರತೆ ಕಾರ್ಯಪಡೆ ಕಾರ್ಯಾರಂಭ
ಮೈಸೂರು: ಚಿರತೆ ಸೆರೆ ಕಾರ್ಯಾಚರಣೆಗೆ ರಚಿಸಲಾದ ಕಾರ್ಯಪಡೆ ಮುಂದಿನ ವಾರದಿಂದ ಕಾರ್ಯಾರಂಭ ಮಾಡಲಿದೆ ಎಂದು ಡಿಸಿಎಫ್ ಡಾ.ಬಸವರಾಜು ತಿಳಿಸಿದರು.
ಅಶೋಕಪುರಂನ ಅರಣ್ಯ ಭವನದ ಕಚೇರಿಯಲ್ಲಿ ಪ್ರಾಣಿ ಮತ್ತು ಮಾನವ ಸಂಘರ್ಷದ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರು ವೃತ್ತದ ಅರಣ್ಯ ಸಂರಕ್ಷಣಾಧಿಕಾರಿಗಳ ಮಾರ್ಗದರ್ಶನದಲ್ಲಿ ಈ ಕಾರ್ಯಪಡೆ ಕಾರ್ಯನಿರ್ವಹಿಸಲಿದೆ. ಆನೆ ಟಾಸ್ಕ್ ಫೋರ್ಸ್ ಮಾದರಿಯಲ್ಲಿ ಚಿರತೆ ಕಾರ್ಯಪಡೆ ರಚಿಸಲಾಗಿದೆ. ಎಸಿಎಫ್, ಆರ್‌ಎಫ್‌ಒ ಶ್ರೇಣಿಯ ಅಧಿಕಾರಿಗಳನ್ನು ಸರ್ಕಾರ ನಿಯೋಜಿಸಬೇಕಿದೆ. ಗುತ್ತಿಗೆ ಆಧಾರದಲ್ಲಿ 40 ಮಂದಿ ಸಿಬ್ಬಂದಿ ನೇಮಿಸಿಕೊಳ್ಳಲಾಗಿದೆ ಎಂದರು.
ಮೈಸೂರು ಅರಣ್ಯ ವೃತ್ತ ವ್ಯಾಪ್ತಿಯ ಟಿ.ನರಸೀಪುರ, ಮೈಸೂರು, ಕೆ.ಆರ್.ಪೇಟೆ ಮತ್ತು ಮಂಡ್ಯ ತಾಲೂಕುಗಳಲ್ಲಿ ಬೇಸ್ ಕ್ಯಾಂಪ್ ಇದೆ. ಪ್ರತಿ ತಂಡವೂ ಚಿರತೆ ಹಾವಳಿ ಇರುವ ಗ್ರಾಮಗಳಲ್ಲಿ ಗಸ್ತು ತಿರುಗುವುದು, ಜನವಸತಿ, ಕಬ್ಬು ಬೆಳೆ ಇರುವ ಪ್ರದೇಶಗಳಲ್ಲಿ ಚಿರತೆ ಇರುವಿಕೆ ಪತ್ತೆ ಹಚ್ಚಿ ಮುಂದಿನ ಕ್ರಮಕೈಗೊಳ್ಳಲಿದೆ ಎಂದರು.
ಚಿರತೆ ಮೊದಲಿಂದಲೂ ಜನವಸತಿ ಪ್ರದೇಶದಲ್ಲಿ ಬದುಕುತ್ತಿತ್ತು. ಈಗ ಹದ್ದುಗಳ ಸಂಖ್ಯೆ ಕಡಿಮೆಯಾಗಿ ನಾಯಿಗಳ ಸಂಖ್ಯೆ ಹೆಚ್ಚಾಗಿದೆ. ನಾಯಿಗಳನ್ನು ತಿನ್ನಲು ಚಿರತೆಗಳು ಬರುತ್ತಿವೆ. ಆಹಾರ ಸರಪಳಿಯಲ್ಲಿ ವ್ಯತ್ಯಾಸವಾದರೆ ಮನುಷ್ಯರು ತೊಂದರೆ ಅನುಭವಿಸಬೇಕಾಗುತ್ತದೆ. ಕಳೆದ ಮೂರು ವರ್ಷಗಳಲ್ಲಿ 65 ಚಿರತೆ ಸೆರೆ ಹಿಡಿಯಲಾಗಿದೆ. ಜನವರಿ ತಿಂಗಳಲ್ಲಿ 4 ಚಿರತೆ ಸೆರೆ ಹಿಡಿದು ಚಿಪ್ ಅಳವಡಿಸಲಾಗಿದೆ. ಪ್ರಸ್ತುತ 20 ಬೋನ್‌ಗಳಿದ್ದು, ಹೊಸದಾಗಿ 30 ಬೋನ್ ಖರೀದಿ ಮಾಡುತ್ತೇವೆ. ತಿ.ನರಸೀಪುರದಲ್ಲಿ ಚಿರತೆ ದಾಳಿಯಿಂದ ನಾಲ್ವರು ಮೃತಪಟ್ಟ ಬಳಿಕ ಜನರು ಭಯಭೀತರಾಗಿದ್ದಾರೆ. ಭಯ ನಿವಾರಣೆಗೆ ಹಲವು ಕ್ರಮ ಕೈಗೊಳ್ಳಲಾಗಿದೆ. ಶಾಲಾ ಮಕ್ಕಳಿಗೆ ಅರಿವು, ಚಿರತೆ ಪತ್ತೆಯಾದಾಗ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬುದರ ಕುರಿತ ಭಿತ್ತಿಪತ್ರ ಹಂಚಲಾಗುತ್ತದೆ ಎಂದು ವಿವರಿಸಿದರು.
ಟಿ.ನರಸೀಪುರ ತಾಲೂಕಿನಲ್ಲಿ ಚಿರತೆಯಿಂದ ನಾಲ್ವರು ಮೃತಪಟ್ಟಿರುವ ಬಗ್ಗೆ ದೃಢೀಕರಿಸಲು ಕೆಲವು ಮಾದರಿಯನ್ನು ಎಫ್‌ಎಸ್‌ಎಲ್‌ಗೆ ಕಳುಹಿಸಲಾಗಿದ್ದು, ಮೂರರಿಂದ ನಾಲ್ಕು ದಿನಗಳಲ್ಲಿ ವರದಿ ಬರಲಿದೆ. 11 ವರ್ಷದ ಜಯಂತ್ ಬಾಲಕನ ಮೃತದೇಹ ಪತ್ತೆಯಾದ ಸ್ಥಳದಲ್ಲಿ ಚಿರತೆ ಕಾಣಿಸಿಕೊಂಡಿತ್ತು. ಆದರೆ, ಚಿರತೆ, ಹುಲಿ ತಲೆ ತಿನ್ನುವುದಿಲ್ಲ. ಈ ಪ್ರಕರಣಗಳಲ್ಲಿ ಚಿರತೆ ಬಹಳ ಅಸಾಮಾನ್ಯವಾಗಿ ವರ್ತಿಸಿದೆ. ಮೇಘನಾ, ಸಿದ್ದಮ್ಮನ ಶವ ಸಿಕ್ಕ ಸ್ಥಳದಲ್ಲಿ ಸಿಕ್ಕ ಮಲದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಿದ್ದೇವೆ ಎಂದು ತಿಳಿಸಿದರು.