ಇರ್ಪು ಜಲಪಾತ ವೀಕ್ಷಣೆಗೆ ಸಕಾಲ

Spread the love

ಇರ್ಪು ಜಲಪಾತ ವೀಕ್ಷಣೆಗೆ ಸಕಾಲ

ಕೊಡಗಿನ ಜಲಪಾತಗಳಲ್ಲೊಂದಾದ ಇರ್ಪು ಜಲಪಾತವನ್ನು ವೀಕ್ಷಿಸಲು ಇದು ಸಕಾಲವಾಗಿದೆ. ಮಳೆಗೆ ವಿರಾಮ ಬಿದ್ದಿರುವುದರಿಂದ ನಿಸರ್ಗ ಸುಂದರ ತಾಣದೊಳಗೆ ನೆಲೆನಿಂತಿರುವ ಜಲಪಾತ ಪ್ರಶಾಂತವಾಗಿ ಎಲ್ಲರನ್ನು ಸೆಳೆಯುತ್ತಿದೆ.

ಇರ್ಪು ಕ್ಷೇತ್ರದ ರಾಮೇಶ್ವರ ದೇವಾಲಯಕ್ಕೆ ಒಂದು ಕಿ.ಮೀ. ದೂರದಲ್ಲಿರುವ ಈ ಜಲಪಾತ ತನ್ನ ಮೋಹಕತೆ, ಕುಲುಕುಲು ಸೌಂದರ್ಯ, ವಯ್ಯಾರದ ನಾಟ್ಯ, ಜುಳುಜುಳು ನಿನಾದದೊಂದಿಗೆ ಸುಮಾರು ಎಪ್ಪತ್ತು ಅಡಿಯಷ್ಟು ಎತ್ತರದಿಂದ ಧುಮುಕಿ, ಅಲ್ಲಿಂದ ಮತ್ತೆ ನೂರು ಅಡಿಯಷ್ಟು ಕೆಳಕ್ಕೆ ಜಿಗಿಯುತ್ತಾ, ಮತ್ತೆ ಅಂಕುಡೊಂಕಾಗಿ ಹರಿದು ಚಿಕ್ಕಾತಿ ಚಿಕ್ಕ ಜಲಧಾರೆಗಳನ್ನು ಸೃಷ್ಟಿಸಿದೆ. ಸುಮಾರು ಇನ್ನೂರು ಅಡಿಯಷ್ಟು ಎತ್ತರದಿಂದ ಪ್ರಮುಖವಾಗಿ ಎರಡು ಹಂತಗಳಲ್ಲಿ ಧುಮುಕಿ ಹರಿಯುತ್ತದೆ. ಈ ಸುಂದರ ದೃಶ್ಯ ಮನಮೋಹಕವಾಗಿರುತ್ತದೆ.

ಸಾಮಾನ್ಯವಾಗಿ ಎಲ್ಲ ಜಲಧಾರೆಗಳು ತನ್ನ ಪಾಡಿಗೆ ಧುಮ್ಮಿಕ್ಕಿ ಹರಿಯುವ ನದಿಯಿಂದ ಸೃಷ್ಟಿಯಾಗಿರುತ್ತವೆ. ಆದರೆ ಈ ಜಲಧಾರೆ ಹುಟ್ಟಿನ ಹಿಂದೆ ರಾಮಾಯಣದ ನಂಟಿದೆ. ಅದೇನೆಂದರೆ, ಸೀತೆಯನ್ನು ಅರಸುತ್ತಾ ಹೊರಟ ರಾಮಲಕ್ಷ್ಮಣರು ಬ್ರಹ್ಮಗಿರಿಯ ತಪ್ಪಲಿಗೆ ಬರುತ್ತಾರೆ. ಈ ಬೆಟ್ಟ ದಾಟಿದರೆ ಕೇರಳ ಸೀಮೆ ಎಲ್ಲರೂ ಬೆಟ್ಟಗುಡ್ಡಗಳನ್ನು ದಾಟಿ ಶ್ರೀರಾಮ ಸೇರಿದಂತೆ ವಾನರರು ನಡೆಯುತ್ತಿದ್ದರೆ ಕೋಪಗೊಂಡ ಲಕ್ಷ್ಮಣ ಮುಂದಕ್ಕೆ ಹೆಜ್ಜೆಯಿರಿಸದೆ ಅಲ್ಲಿಯೇ ಕುಳಿತುಕೊಂಡನಂತೆ. ಎಂದೂ ರಾಮನಿಗೆ ಎದುರಾಡದ ಲಕ್ಷ್ಮಣ ಅಂದು ಕೋಪಗೊಂಡು ಕುಳಿತದ್ದೇ ಮಲಯಾಳದಲ್ಲಿ ಇರಿಕ್ಕನ್ (ಕುಳಿತುಕೊಳ್ಳುವುದು) ಪದದಿಂದ ಇರ್ಪು ಹುಟ್ಟಿತೆಂದು ಹೇಳಲಾಗುತ್ತಿದೆ.

ಕೆಲಕಾಲದ ನಂತರ ಶಾಂತಗೊಂಡ ಲಕ್ಷ್ಮಣ ತನ್ನ ವರ್ತನೆಗೆ ನಾಚಿ ಅಣ್ಣ ಶ್ರೀರಾಮನನ್ನು ನೋಯಿಸಿದ್ದಕ್ಕಾಗಿ ಅಗ್ನಿಕುಂಡ ನಿರ್ಮಿಸಿ ಅದರಲ್ಲಿ ಆತ್ಮಾಹುತಿ ಮಾಡಲು ನಿರ್ಧರಿಸಿದನಂತೆ. ಇದನ್ನು ಕಂಡ ರಾಮ ಭಯಗೊಂಡು ಲಕ್ಷ್ಮಣನನ್ನು ಸಮಾಧಾನಗೊಳಿಸಿ ಆತನ ತಪ್ಪನ್ನು ಕ್ಷಮಿಸಿದ. ಇದರಿಂದ ಸಂತೋಷಗೊಂಡ ಲಕ್ಷ್ಮಣ ತಾನು ನಿರ್ಮಿಸಿದ ಅಗ್ನಿಕುಂಡವನ್ನು ಆರಿಸಲು(ನಂದಿಸಲು) ಬಾಣಬಿಟ್ಟನಂತೆ ಹಾಗೆ ಬಿಟ್ಟ ಬಾಣ ಜಲಧಾರೆಯನ್ನು ಸೃಷ್ಟಿಸಿ ಅಗ್ನಿಕುಂಡವನ್ನು ನಂದಿಸಿತಂತೆ. ಈ ರೀತಿ ಸೃಷ್ಟಿಯಾದ ಜಲಧಾರೆಯನ್ನು ರಾಮನೇ ಲಕ್ಷ್ಮಣತೀರ್ಥವೆಂದು ಹೆಸರಿಸಿ ಎಲ್ಲರೂ ಕುಡಿದು ಸಂತುಷ್ಟಗೊಂಡರಂತೆ. ಆ ಲಕ್ಷ್ಮಣತೀರ್ಥನದಿಯಿಂದ ಸೃಷ್ಠಿಯಾದ ಜಲಧಾರೆಯೇ ಇರ್ಪು ಜಲಪಾತವಾಗಿದೆ. ಹೀಗಾಗಿ ಈ ಜಲಧಾರೆಗೆ ತಲೆಕೊಟ್ಟು ಮೀಯುವುದರಿಂದ ಪಾಪ ಕಳೆಯುತ್ತದೆ ಎಂಬ ನಂಬಿಕೆಯೂ ಜನರಲ್ಲಿದೆ.

ಮಡಿಕೇರಿಯಿಂದ 85ಕಿ.ಮೀ. ದೂರದಲ್ಲಿರುವ ಮತ್ತು ವೀರಾಜಪೇಟೆ ತಾಲೂಕಿಗೆ ಸೇರಿರುವ ಇರ್ಪು ಜಲಪಾತವನ್ನು ನೋಡಲು ಮಡಿಕೇರಿ ಮೂರ್ನಾಡು, ವೀರಾಜಪೇಟೆ, ಗೋಣಿಕೊಪ್ಪ, ಶ್ರೀಮಂಗಲ ಮೂಲಕ ಹಾಗೂ ಮೈಸೂರಿನಿಂದ ಹುಣಸೂರು, ಪಂಚವಳ್ಳಿ, ಗೋಣಿಕೊಪ್ಪ ಮೂಲಕ ಅಥವಾ ಹುಣಸೂರು ನಾಗರಹೊಳೆ ಕುಟ್ಟ ಮೂಲಕವೂ ತೆರಳಬಹುದು. ಬೆಳಿಗ್ಗೆ ಹಾಗೂ ಮಧ್ಯಾಹ್ನ ಗೋಣಿಕೊಪ್ಪಲಿನಿಂದ ಬಸ್ಸು ವ್ಯವಸ್ಥೆಯಿದೆ. ಉಳಿದಂತೆ ಕುಟ್ಟಕ್ಕೆ ತೆರಳುವ ಬಸ್ಸಿನಲ್ಲಿ ಶ್ರೀಮಂಗಲ ಹಾಗೂ ಕುಟ್ಟದ ನಡುವೆ ಸಿಗುವ ಕಾಕೂರು ಅಥವಾ ಕಾಯಿಮಾನಿಯಲ್ಲಿಳಿದು ಅಲ್ಲಿಂದ ನಡೆದುಕೊಂಡು ಹೋಗಬಹುದಾಗಿದೆ. ಅಥವಾ ಶ್ರೀಮಂಗಲಕ್ಕೆ ತೆರಳಿ ಅಲ್ಲಿಂದ ಬಾಡಿಗೆ ವಾಹನಗಳಲ್ಲಿಯೂ ತೆರಳಬಹುದಾಗಿದೆ.


Spread the love

Leave a Reply

Please enter your comment!
Please enter your name here