
ಇವಿಎಂ ಕಂಟ್ರೋಲ್ ಯೂನಿಟ್ ಧ್ವಂಸ
ಮೈಸೂರು: ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಹೂಟಗಳ್ಳಿ ಸರ್ಕಾರಿ ಪ್ರೌಢ ಶಾಲೆ ಮತಗಟ್ಟೆಗೆ ಮತ ಚಲಾಯಿಸಲು ಬಂದಿದ್ದ ವ್ಯಕ್ತಿ ಇವಿಎಂ ಕಂಟ್ರೋಲ್ ಯೂನಿಟ್ ಒಡೆದು ಹಾಕಿದ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.
ಹೂಟಗಳ್ಳಿ ನಿವಾಸಿ ಶಿವಮೂರ್ತಿ ಎಂಬುವರು ಮೇ 10ರ ಬುಧವಾರ ಸಂಜೆ 4.15ರ ಸುಮಾರಿಗೆ ಮತ ಚಲಾಯಿಸಲು ಬಂದಿದ್ದರು. ಗುರುತಿನ ಚೀಟಿ ಸಿಬ್ಬಂದಿಗೆ ನೀಡಿದ ನಂತರ ಏಕಾಏಕಿ ವಿದ್ಯುನ್ಮಾನ ಮತಯಂತ್ರದ ಕಂಟ್ರೋಲ್ ಯೂನಿಟ್ ಅನ್ನು ಎರಡು ಬಾರಿ ನೆಲಕ್ಕೆ ಹಾಕಿ ಒಡೆದಿದ್ದಾರೆ. ಈ ವೇಳೆ ಅಲ್ಲಿದ್ದ ಚುನಾವಣಾ ಅಧಿಕಾರಿ ಹಾಗೂ ಪೊಲೀಸರು ಆರೋಪಿಯನ್ನು ತಡೆದು ವಶಕ್ಕೆ ಪಡೆದರು.
ಮತಗಟ್ಟೆ ಅಧಿಕಾರಿ ಎಂ.ಜಿ.ಕುಮಾರ ಅವರು ನೀಡಿದ ದೂರಿನ ಮೇಲೆ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮತಗಟ್ಟೆಯಲ್ಲಿ 912ಮತದಾರರು ಇದ್ದು, ಆ ವೇಳೆ 553 ಮಂದಿ ಮತ ಚಲಾಯಿಸಿದ್ದರು. ಹೊಸ ಕಂಟ್ರೋಲ್ ಯೂನಿಟ್ ಅಳವಡಿಸಿ ಮತದಾನ ಪ್ರಕ್ರಿಯೆ ಪೂರ್ಣಗೊಳಿಸಲಾಯಿತು ಎಂದು ಚುನಾವಣಾಧಿಕಾರಿ ತಿಳಿಸಿದರು.
ಆರೋಪಿ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದಾರೆ. ಈ ಹಿಂದೆ ಹಲವು ಬಾರಿ ಸಾರ್ವಜನಿಕರೊಂದಿಗೆ ಅನುಚಿತವಾಗಿ ವರ್ತಿಸಿದ್ದು, ತಿಳಿ ಹೇಳಿದ್ದೆವು. ಅವರನ್ನು ವಶಕ್ಕೆ ಪಡೆದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗಿದೆ ಎಂದು ವಿಜಯನಗರ ಪೊಲೀಸರು ಮಾಹಿತಿ ನೀಡಿದ್ದಾರೆ.