ಇ-ವ್ಯವಹಾರದ ಕುರಿತು ನಿಗಾ ವಹಿಸುವುದು ಅಗತ್ಯ

Spread the love

ಇ-ವ್ಯವಹಾರದ ಕುರಿತು ನಿಗಾ ವಹಿಸುವುದು ಅಗತ್ಯ

ಮೈಸೂರು: ಗ್ರಾಹಕರು ಮತ್ತು ವರ್ತಕರ ನಡುವಿನ ಮಧವರ್ತಿಯಾಗಿ ಕಾರ್ಯನಿರ್ವಹಿಸುವ ಆನ್‌ಲೈನ್ ವ್ಯವಸ್ಥೆಯಿಂದ ಎಡವಟ್ಟುಗಳು ಆಗಬಹುದು. ಹಾಗಾಗಿ ಗ್ರಾಹಕರು ಮೈ ಮರೆಯದೆ ಇ-ವ್ಯವಹಾರದ ಕುರಿತು ಹೆಚ್ಚಿನ ನಿಗಾ ವಹಿಸಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ದೇವರಾಜ ಭೂತೆ ಹೇಳಿದರು.

ಕುವೆಂಪುನಗರದಲ್ಲಿರುವ ಜೆಎಸ್‌ಎಸ್ ಕಾನೂನು ಕಾಲೇಜಿನಲ್ಲಿ ಜಿಲ್ಲಾಡಳಿತ, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ವತಿಯಿಂದ ಆಯೋಜಿಸಿದ್ದ ವಿಶ್ವ ಗ್ರಾಹಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ತಂತ್ರಜ್ಞಾನ ಬೆಳೆದಂತೆ ಬದುಕು ಸರಳವಾಗುತ್ತಿದೆ. ಗ್ರಾಹಕರು ಇ-ವ್ಯವಹಾರ ನಡೆಸುವಾಗ ಎಚ್ಚರಿಕೆಯಿಂದ ಇರಬೇಕು ಎಂದರು.

ದಿನಸಿ ಅಂಗಡಿ, ಮಾರುಕಟ್ಟೆ ಸೇರಿದಂತೆ ಇನ್ನಿತರ ಕಡೆ ನಾವೇ ಖುದ್ದಾಗಿ ಭೇಟಿ ನೀಡಿ ವಸ್ತುಗಳನ್ನು ಪರಿಶೀಲಿಸಿ ಖರೀದಿ ಮಾಡುತ್ತೇವೆ. ಆದರೆ, ಆನ್‌ಲೈನ್ ವ್ಯವಹಾರದಲ್ಲಿ ಇದು ಸಾಧವಿಲ್ಲ. ಚಿತ್ರ ನೋಡಿ ವಸ್ತುವನ್ನು ಕೊಳ್ಳಬೇಕಾಗುತ್ತದೆ. ಅಂತಹ ಸಂದರ್ಭದಲ್ಲಿ ಕಳಪೆ ವಸ್ತುಗಳು ನೀಡಿ ಮೋಸ ಮಾಡುವ ಸಾಧತೆ ಇರುತ್ತದೆ. ಆಗ ಗ್ರಾಹಕರು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ನೀಡಿ ಪರಿಹಾರ ಪಡೆದುಕೊಳ್ಳಬೇಕು ಎಂದು ಸೂಚಿಸಿದರು.

ಆನ್‌ಲೈನ್ ವ್ಯಾಪಾರದಲ್ಲಿ ಗ್ರಾಹಕರಿಗೆ ಮೋಸ, ವಂಚನೆಯೂ ಆಗಬಹುದು. ಆದ್ದರಿಂದ ಇ-ವ್ಯವಹಾರದ ಕುರಿತು ಹೆಚ್ಚಿನ ನಿಗಾ ವಹಿಸಬೇಕು. ಖರೀದಿ ಮಾಡಿದ ವಸ್ತುಗಳ ಕುರಿತು ಗ್ರಾಹಕರು ಮೋಸಕ್ಕೆ ಒಳಗಾದರೂ ಬಹಳಷ್ಟು ಜನರು ದೂರು ನೀಡದೆ ಸುಮ್ಮನಾಗಿ ಬಿಡುತ್ತಾರೆ. ಕೆಲವರಿಗೆ ಜಾಗೃತಿವಿದ್ದರೂ ದೂರು ನೀಡಲು ಹಿಂಜರಿಯುತ್ತಾರೆ. ಇದು ಸರಿಯಲ್ಲ. 10 ರೂ. ವಸ್ತುವಾದರೂ ಸರಿಯೇ. ಆ ಕುರಿತು ದೂರು ನೀಡಿ ಪರಿಹಾರ ಪಡೆದುಕೊಳ್ಳಬೇಕು. ಇದು ಪ್ರತಿಯೊಬ್ಬ ಗ್ರಾಹಕರ ಹಕ್ಕು ಎಂದರು.

ಗ್ರಾಹಕರ ಸುರಕ್ಷತೆ ಕಾಯಿದೆಯ ಪ್ರಕಾರ ಗ್ರಾಹಕರಾಗಿ ಯಾವುದೇ ವಸ್ತು ಖರೀದಿಸುವಾಗ ವಸ್ತುವಿನ ಗುಣಮಟ್ಟ, ಸುರಕ್ಷತೆ, ವಸ್ತುವಿನ ಉತ್ಪಾದನೆ ಮತ್ತು ಅದರ ಕೊನೆಯ ಅವಧಿಯನ್ನು ಪರಿಶೀಲಿಸಬೇಕು. ದೇಶದ ಪ್ರತಿಯೊಬ್ಬ ನಾಗರಿಕರು ಗ್ರಾಹಕರೇ. ಉನ್ನತ ಸ್ಥಾನದಲ್ಲಿರುವ ವ್ಯಕ್ತಿಯಾಗಲಿ, ಕೆಳ ಹಂತ ಕಾರ್ಮಿಕರೇ ಆಗಿರಲಿ. ಪ್ರತಿಯೊಬ್ಬರು ಗ್ರಾಹಕರ ಹಕ್ಕು, ಅಧಿಕಾರಿ, ಹೊಣೆಗಾರಿಕೆಯನ್ನು ಅರಿತುಕೊಳ್ಳಬೇಕು ಎಂದು ಹೇಳಿದರು.

ಆಹಾರ ಇಲಾಖೆಯ ಜಂಟಿ ನಿರ್ದೇಶಕಿ ಕುಮುದಾ ಶರತ್ ಮಾತನಾಡಿ, ಗ್ರಾಹಕರಿಗೆ ಅರಿವು ಮೂಡಿಸಲು ಅನೇಕ ಕಾರ್ಯಕ್ರಮ ರೂಪಿಸಲಾಗಿದೆ. ನೃತ್ಯರೂಪಕ, ಬೀದಿನಾಟಕವನ್ನು ಚಿಕ್ಕಗಡಿಯಾರ, ಜೆಎಸ್‌ಎಸ್ ಆಸ್ಪತ್ರೆ, ಹೂಟಗಳ್ಳಿ, ಮರುಣ ನಾಡ ಕಚೇರಿಯಲ್ಲಿ ಆಯೋಜಿಸಲಾಗಿದೆ ಎಂದರು.

ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧಕ್ಷೆ ಎಂ.ಕೆ.ನವೀನ್‌ಕುಮಾರಿ, ಸದಸ್ಯ ಮಾರುತಿ ಎಚ್.ವಡ್ಡರ್, ಕಾಲೇಜಿನ ಮುಖ್ಯಕಾರ್ಯನಿರ್ವಾಹಕ ಕೆ.ಎಸ್.ಸುರೇಶ್, ಪ್ರಾಂಶುಪಾಲ ಡಾ.ಎಸ್. ನಟರಾಜು ಪಾಲ್ಗೊಂಡಿದ್ದರು.


Spread the love

Leave a Reply

Please enter your comment!
Please enter your name here