
ಈ ಬಾರಿ ಕಾಂಗ್ರೆಸ್ ಗೆಲ್ಲಿಸಿ ನನಗೆ ಶಕ್ತಿ ನೀಡಿ:ಡಿಕೆಶಿ
ರಾಮನಗರ: ಹಿಂದಿನ ಚುನಾವಣೆಗಳಲ್ಲಿ ಜೆಡಿಎಸ್ ಪಕ್ಷದವರಿಗೆ ಅವಕಾಶ ಕೊಟ್ಟಿದ್ದೀರಿ. ಈ ಬಾರಿ ಕಾಂಗ್ರೆಸ್ ಗೆಲ್ಲಿಸಿ ನನಗೆ ಶಕ್ತಿ ತುಂಬುವ ಮೂಲಕ ರಾಮನಗರದಲ್ಲಿ ಬದಲಾವಣೆ ತರಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮನವಿ ಮಾಡಿದರು.
ತಾಲ್ಲೂಕಿನ ಸುಗ್ಗನಹಳ್ಳಿ ಗ್ರಾಮದಲ್ಲಿ ನಡೆದ ಪ್ರಜಾದ್ವನಿ ಯಾತ್ರೆಯಲ್ಲಿ ಕಾಂಗ್ರೆಸ್ ಪಕ್ಷದ ಭರವಸೆಗಳ ಗ್ಯಾರಂಟಿ ಕಾರ್ಡ್ ವಿತರಿಸಿ ನಂತರ ಮಾತನಾಡಿದ ಅವರು, ಈ ಹಿಂದೆ ದೇವೇಗೌಡರಿಗೆ ಪ್ರಧಾನ ಮಂತ್ರಿ, ಕುಮಾರಸ್ವಾಮಿಗೆ ಮುಖ್ಯಮಂತ್ರಿ ಮತ್ತು ಅನಿತಾ ಕುಮಾರಸ್ವಾಮಿ ಅವರಿಗೆ ಶಾಸಕರನ್ನಾಗಿ ಮಾಡಿದ್ದೀರಿ. ಅದೆಲ್ಲವನ್ನು ನಾವು ಸ್ವೀಕರಿಸಿದ್ದೇವೆ. ಇದೀಗ ನನಗೊಂದು ಅವಕಾಶ ಕೊಡಿ. ನಮಗೆ ಅಧಿಕಾರ ಕೊಡುವುದು ನಿಮ್ಮ ಸೇವೆ ಮಾಡಲಿಕ್ಕೆ. ನಾನು ಕೆಲಸ ಮಾಡಲಿಲ್ಲವೆಂದರೇ ಕುತ್ತಿಗೆ ಪಟ್ಟಿ ಹಿಡಿದು ಕೇಳಿ ಎಂದು ಜನರ ಬಳಿ ಡಿಕೆಶಿ ನಿವೇದಿಸಿಕೊಂಡರು.
ಜಿಲ್ಲೆಯಲ್ಲಿ ಏನು ಅಭಿವೃದ್ಧಿ ಮಾಡಿದ್ದಾರೆ ಅಂತಾ ಜೆಡಿಎಸ್‌ನವರು ನಮಗೆ ಕೇಳುತ್ತಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಜೆಡಿಎಸ್‌ನವರು ಜನರಿಗೆ ಏನು ಸಹಾಯ ಮಾಡಿದ್ದಾರೆ? ಅಧಿಕಾರದಲ್ಲಿ ಇಲ್ಲಿದ್ದರೂ ನಾವು ಏನ್ ಮಾಡಿದ್ದೇವೆ ಅನ್ನೋದು ಜನರಿಗೆ ಗೊತ್ತಿದೆ. ಉಸ್ತುವಾರಿ ಮಂತ್ರಿ ಜಿಲ್ಲೆಯನ್ನು ಕ್ಲೀನ್ ಮಾಡ್ತೀನಿ ಅಂತಾ ಬಂದ್ರು, ಆದರೆ ಜಿಲ್ಲೆಯಲ್ಲಿ ಲಂಚ ಪಡೆಯೋದನ್ನ ನಿಲ್ಲಿಸಿದ್ದಾರಾ? ರಾಮನಗರ ಕ್ಷೇತ್ರದ ಜನರು ಬುದ್ಧಿವಂತರಿದ್ದೀರಿ, ಕೆಲಸ ಮಾಡುವವರಿಗೆ ಅವಕಾಶ ಕೊಡಿ ಎಂದರು.
ಕನಕಪುರದಲ್ಲಿ ೪ ಕೋಟಿ ರೂ ವೆಚ್ಚದಲ್ಲಿ ನರೇಗಾ ಕೆಲಸವನ್ನು ಮಾಡಿದ್ದೇವೆ. ವಸತಿ ಸಚಿವ ವಿ.ಸೋಮಣ್ಣನ ಕೈ ಕಾಲು ಹಿಡಿದು ಕನಕಪುರ ನಗರದಲ್ಲಿ ಎಲ್ಲಾ ವರ್ಗದ ಬಡವರಿಗೆ ನಿವೇಶನ ಕೊಡಿಸಿದ್ದೇನೆ. ಇದು ರಾಮನಗರದಲ್ಲಿ ಏಕೆ ಸಾಧ್ಯವಾಗಲಿಲ್ಲ? ಎಂದು ತಿರುಗೇಟು ನೀಡಿದರು. ಇನ್ನು ಮೂರು ತಿಂಗಳಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತದೆ. ಆಗ ಮತ್ತೆ ರೈತರಿಗೆ ಉಚಿತ ಟ್ರಾನ್‌ಫಾರ್‍ಮರ್ ಕೊಡುತ್ತೇವೆ. ಈಗ ಕೊಡುತ್ತಿರುವ ಗ್ಯಾರಂಟಿ ಕಾರ್ಡ್ ಅನುಷ್ಠಾನಕ್ಕೆ ತರುತ್ತೇವೆ ಎಂದು ಭರವಸೆ ನೀಡಿದರು.