
ಈ ಬಾರಿ ಬಿಜೆಪಿ 40 ಸ್ಥಾನಗಳಿಗೆ ಕುಸಿತ: ಸುರ್ಜೇವಾಲ ಭವಿಷ್ಯ
ಮೈಸೂರು: ಬಿಜೆಪಿ ಸರ್ಕಾರ ಮೀಸಲಾತಿ ವಿಚಾರವಾಗಿ ನಡೆಸಿದ ಮೋಸದಾಟ ಬಯಲಾಗಿರುವುದರಿಂದ ಈ ಬಾರಿಯ ಚುನಾವಣೆಯಲ್ಲಿ 40ಪರ್ಸೆಂಟ್ ಬಿಜೆಪಿ ಸರ್ಕಾರ 40 ಸ್ಥಾನಗಳಿಗೆ ಕುಸಿಯಲಿದೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಭವಿಷ್ಯ ನುಡಿದಿದ್ದಾರೆ.
ಕೆಪಿಸಿಸಿ ಅಧಕ್ಷ ಡಿ.ಕೆ.ಶಿವಕುಮಾರ್ ಅವರೊಂದಿಗೆ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಡಬಲ್ ಎಂಜಿನ್ ಸರ್ಕಾರ ರಾಜ್ಯದ ಜನತೆಗೆ ದ್ರೋಹವೆಸಗಿದ್ದು, ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯಕ್ಕೆ ಮೀಸಲಾತಿ ನೀಡಿದ್ದೇವೆ ಎಂಬ ಸುಳ್ಳು ಸುಪ್ರೀಂ ಕೋರ್ಟ್‌ನಲ್ಲಿ ಬಯಲಾಗಿದೆ. ಮೀಸಲಾತಿ ವಿಚಾರವಾಗಿ ಸರ್ಕಾರ ನೀಡಿರುವ ಎಲ್ಲಾ ಭರವಸೆಗಳು ಹುಸಿಯಾಗಲಿವೆ. ಇದರಿಂದ ಲಿಂಗಾಯತರ ಮೀಸಲಾತಿ ವರ್ಗೀಕರಣ 2ಡಿಯಿಂದ 3ಬಿಗೆ ಮರಳಿದೆ. ಲಿಂಗಾಯತರಿಗೆ ನೀಡಲಾಗಿದ್ದ ಶೇ.2ರಷ್ಟು ಹೆಚ್ಚುವರಿ ಮೀಸಲಾತಿ ಹಿಂಪಡೆದಂತಾಗಿದೆ. ಒಕ್ಕಲಿಗರ ಮೀಸಲಾತಿ ವರ್ಗೀಕರಣ 2ಸಿಯಿಂದ 3ಎಗೆ ಮರಳಲಿದೆ. ಒಕ್ಕಲಿಗರಿಗೆ ನೀಡಲಾಗಿದ್ದ ಶೇ.2ರಷ್ಟು ಹೆಚ್ಚುವರಿ ಮೀಸಲಾತಿ ಹಿಂಪಡೆದಂತಾಗಲಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡದ ಸಮುದಾಯಗಳ ಮೀಸಲಾತಿ ಹೆಚ್ಚಳವನ್ನು ಕೇಂದ್ರ ಸರ್ಕಾರ ಮಾ.14, 2023ರಂದು ಸಂಸತ್ತಿನಲ್ಲಿ ನಿರಾಕರಿಸಿದೆ. ಒಟ್ಟಾರೆ ಇದೆಲ್ಲದರ ಫಲ ಯಾರಿಗೂ, ಯಾವುದೇ ಮೀಸಲಾತಿ ಸಿಗದಂತಾಗಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಒಕ್ಕಲಿಗ, ಲಿಂಗಾಯತರಿಗೆ ಮೀಸಲಾತಿ ನೀಡಿzವೆ ಎಂದು ಹೇಳಿಕೊಂಡ ಬಿಜೆಪಿ ಸರ್ಕಾರದ ವಿರುದ್ಧ ತರಾಟೆ ತೆಗೆದುಕೊಂಡ ಸುರ್ಜೇವಾಲ, ಒಕ್ಕಲಿಗರು, ಲಿಂಗಾಯತರು, ಪರಿಶಿಷ್ಟ ಜಾತಿ ಮತ್ತು ಪಂಗಡದ ಸಮುದಾಯಗಳಿಗೆ ಸುಳ್ಳಿನ ಮೀಸಲಾತಿ ಘೋಷಿಸಿ ಮೋಸ ಮಾಡಿದ್ದು ಯಾಕೆ?, ಸರ್ಕಾರ ತನ್ನ ಮೀಸಲಾತಿ ಹೆಚ್ಚಳ ಆದೇಶವನ್ನು ಸುಪ್ರೀಂ ಕೋರ್ಟ್‌ನಲ್ಲಿ ಸಮರ್ಥಿಸಿಕೊಳ್ಳುತ್ತಿಲ್ಲ ಯಾಕೆ?, ಮೀಸಲಾತಿ ಪ್ರಕರಣದಲ್ಲಿ ಮೋದಿ ಹಾಗೂ ಬೊಮ್ಮಾಯಿ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಏಕೆ ಅಫಿಡವಿಟ್ ಸಲ್ಲಿಸಿಲ್ಲ?, ಮಾರ್ಚ್ 14, 2023ರಂದು ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಮೀಸಲಾತಿ ಹೆಚ್ಚಳವನ್ನು ಏಕೆ ನಿರಾಕರಿಸಿತು?, ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಮೀಸಲಾತಿ ಹೆಚ್ಚಳ ಕಾನೂನನ್ನು ಸಂವಿಧಾನದ 9ನೇ ಶೆಡ್ಯೂಲ್‌ನಲ್ಲಿ ಏಕೆ ಸೇರಿಸಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿ, ಬಿಜೆಪಿ ವಿಶ್ವಾಸ ದ್ರೋಹಿ ಪಕ್ಷವಾಗಿದ್ದು, ಡಬಲ್ ಎಂಜಿನ್ ಸರ್ಕಾರದ ಮೀಸಲಾತಿಯ ಮೋಸದಾಟ ಸುಪ್ರೀಂ ಕೋರ್ಟ್‌ನಲ್ಲಿ ತಿಳಿದಿದೆ. ಚುನಾವಣೆ ವೇಳೆ ಜೇನುಗೂಡಿಗೆ ಕೈ ಹಾಕಿ ಮೋಸ ಮಾಡಿzರೆ. ಮೃತ್ಯುಂಜಯ ಸ್ವಾಮೀಜಿಗಳು ಹೇಳಿದಂತೆ ತಲೆ ಮೇಲೆ ತುಪ್ಪ ಇಟ್ಟಿದ್ದಾರೆ ಎಂದು ಕಿಡಿಕಾರಿದರು.
ಸವದಿ ಹಾಗೂ ಜಗದೀಶ್ ಶೆಟ್ಟರ್ ಅವರನ್ನು ಬಿಜೆಪಿ ಸೋಲಿಸುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಸೋಲಿಸುವುದು ಬಿಡುವುದು ಆಮೇಲೆ, ಮೊದಲು ಬಿಜೆಪಿ ಸರ್ಕಾರದ ಸಾಧನೆ ಏನುಂಬುದನ್ನು ಹೇಳಲಿ. ಮಿಸ್ಟರ್ ಯಡಿಯೂರಪ್ಪ ರಾಜ್ಯಕ್ಕೆ ನಿಮ್ಮ ಕೊಡುಗೆ ಏನು ಹೇಳಿ ಎಂದು ಪ್ರಶ್ನಿಸಿದರು.