
ಉಕ್ರೇನಿಯನ್ನರು ಭಾರತೀಯರನ್ನು ಕೆಟ್ಟದಾಗಿ ನಡೆಸಿಕೊಳ್ಳುತಿದ್ದಾರೆ – ಪರ್ಕಳ ವಿದ್ಯಾರ್ಥಿ ನಿಯಮ್ ರಾಘವೇಂದ್ರ ಬೇಸರ
ಉಡುಪಿ: ಉಕ್ರೇನ್ ನಲ್ಲಿ ಭಾರತೀಯರನ್ನು ವಿಪರೀತ ಕೆಟ್ಟದಾಗಿ ನಡೆಸುಕೊಳ್ಳುವುದಲ್ಲದೆ, ಭಾರತೀಯರಿಗೆ ರೈಲುಗಳಿಗೆ ಹತ್ತಲೂ ಕೂಡ ಬಿಡುತ್ತಿಲ್ಲ ತುಂಬಾ ಚಿತ್ರಹಿಂಸೆ ನೀಡುತ್ತಿದ್ದಾರೆ ಎಂದು ನಿಯಮ್, ಉಕ್ರೇನ್ ನ ವಿನ್ನಯ್ಟ್ಸಿಯಾ ನ್ಯಾಷನಲ್ ಮೆಡಿಕಲ್ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿ ಸದ್ಯ ದೆಹಲಿಗೆ ವಾಪಾಸಾಗಿರುವ ಪರ್ಕಳದ ನಿವಾಸಿ ನಿಯಮ್ ರಾಘವೇಂದ್ರ ಹೇಳಿದ್ದಾರೆ.
ಗುರುವಾರ ಮುಂಜಾನೆ 6.30ಕ್ಕೆ ಮುಂಬೈ ತಲುಪಿದ ನಿಯಮ್, ನಂತರ ದೆಹಲಿಯಲ್ಲಿರುವ ಹೆತ್ತವರ ಬಳಿಗೆ ತೆರಳಿರುವ ನಿಯಮ್ ಮ್ಯಾಂಗಲೋರಿಯನ್ ಪ್ರತಿನಿಧಿಯೊಂದಿಗೆ ಮಾತನಾಡಿದ್ದು, ಉಕ್ರೇನ್ ನಲ್ಲಿ ಎಲ್ಲಿಗೆ ಹೋದರೂ ಮೊದಲು ಅಲ್ಲಿಯ ಜನರಿಗೆ ಆದ್ಯತೆ ನೀಡುವುದಲ್ಲದೆ ಭಾರತೀಯರೊಂದಿಗೆ ಕೆಟ್ಟದಾಗಿ ವರ್ತಿಸುತ್ತಾರೆ. ಕಾರ್ಖೀವ್, ಕೀವ್ ನಗರಗಳಲ್ಲಿರುವ ಭಾರತೀಯರಿಗೆ ತುಂಬಾನೇ ಕಷ್ಟ ಕೊಟ್ಟಿದ್ದಾರೆ. ನಾನು 12 ಕಿಮಿ ನಡೆದುಕೊಂಡೆ ಪ್ರಯಾಣ ಮಾಡಿದ್ದು ಇನ್ನು ಕೆಲವರು 30-40 ಕಿಮೀ ನಡೆದುಕೊಂಡು ಬಂದಿದ್ದಾರೆ. ಅಲ್ಲದೆ ಉಕ್ರೇನ್ ನಲ್ಲಿ ತಿನ್ನಲು ಆಹಾರ ಕೂಡ ಸಮಸ್ಯೆ ಆಗಿದ್ದು ರೋಮಾನಿಯಕ್ಕೆ ಬಂದ ಮೇಲೆ ನಮಗೆ ಆಹಾರ ಮತ್ತು ನೀರು ಸಿಕ್ಕಿದೆ ಎಂದು ನಿಯಮ್ ಹೇಳಿದರು.
ಉಕ್ರೇನ್ ನ ವಿನ್ನಯ್ಟ್ಸಿಯಾ ನ್ಯಾಷನಲ್ ಮೆಡಿಕಲ್ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿಯಾಗಿರುವ ನಾನು ಅಲ್ಲಿಂದ ಹೊರಡುವಾಗ ನನ್ನ ಎಲ್ಲಾ ಬಟ್ಟೆ ಬರೆ ಪುಸ್ತಕಗಳನ್ನು ಅಲ್ಲಿ ಬಿಟ್ಟಿದ್ದು ಕೇಲೆ ಅಗತ್ಯದ ದಾಖಲೆಗಳನ್ನಷ್ಟೇ ತಂದಿದ್ದೇನೆ. ಹೆಚ್ಚು ಲಗೇಜ್ ತಂದವರು ಅದನ್ನು ರಾತ್ರಿಯಿಡೀ ನಡೆದುಕೊಂಡು ಬರುವಾಗ ಹೊರಲಾಗದೇ ಭಾರವಾಗಿ ಅಲ್ಲಿಯೇ ರಸ್ತೆಯಲ್ಲಿ ಬಿಟ್ಟು ಬಂದಿದ್ದಾರೆ. ನನ್ನದು ಮೊದಲ ಸೆಮಿಸ್ಟರ್ ಆಗಿದ್ದು, 4ನೇ ಮತ್ತು 5 ನೇ ವರ್ಷದ ಎಮ್ ಬಿ ಬಿಎಸ್ ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕೆ ಮುಂದೆ ಬಹಳ ತೊಂದರೆಯಾಗಲಿದೆ. ನಮಗೆ ಮೇ ತಿಂಗಳ ಬಳಿಕ ಆನ್ ಲೈನ್ ಕ್ಲಾಸ್ ಆರಂಭಿಸುವುದಾಗಿ ವಿವಿ ಹೇಳಿದೆ ಆದರೆ ಮುಂದಿನ ಸ್ಥಿತಿ ಏನು ಎನ್ನುವುದು ತಿಳಿಯುತ್ತಿಲ್ಲ ಎಂದರು.
ನಿಯಮ್ ಅವರ ತಂದೆ ರಾಘವೇಂದ್ರ ಮೂಲತಃ ಉಡುಪಿ ಸಮೀಪದ ಪರ್ಕಳದ ನಿವಾಸಿ, ದೆಹಲಿಯ ಕರ್ನಾಟಕ ಭವನದ ವ್ಯವಸ್ಥಾಪಕರಾಗಿದ್ದಾರೆ ಸೇವೆ ಸಲ್ಲಿಸುತ್ತಿದ್ದಾರೆ. ಅಲ್ಲದೆ ಉಕ್ರೇಕ್ ನಿಂದ ಭಾರತಕ್ಕೆ ಆಗಮಿಸುವವರಿಗೆ ದೆಹಲಿಯಲ್ಲಿ ಅಗತ್ಯವಿರುವ ಸಹಕಾರ ನೀಡುವು ಮೂಲಕ ಮಾನವೀಯತೆ ಮೆರೆಯುತ್ತಿದ್ದಾರೆ.
ನಿಯಮ್ ರಾಘವೇಂದ್ರ ಅವರೊಂದಿಗೆ ಬೈಂದೂರು ತಾಲೂಕು ನಾವುಂದದ ಜಗದೀಶ್ ಪೂಜಾರಿ ಅವರ ಪುತ್ರಿ ಅಂಕಿತ ಜಗದೀಶ್ ಪೂಜಾರಿ ಕೂಡ ನವದೆಹಲಿ ತಲುಪಿದ್ದು, ಬ್ರಹ್ಮಾವರದ ರೋಹನ್ ಧನಂಜಯ ಬಗ್ಲಿ ಅವರು ಶುಕ್ರವಾರ ಬೆಳಿಗ್ಗೆ ದೆಹಲಿ ತಲುಪುವ ನಿರೀಕ್ಷೆ ಇದ್ದು ಅಲ್ಲಿಂದ ನೇರವಾಗಿ ವಿಮಾನದ ಮೂಲಕ ಮಂಗಳೂರಿಗೆ ಆಗಮಿಸಲಿದ್ದಾರೆ.
ಕೆಮ್ಮಣ್ಣುವಿನ ಗ್ಲೆನ್ ವಿಲ್ ಫೆರ್ನಾಂಡಿಸ್ ಭಾರತೀಯ ದೂತವಾಸದ ನಿರ್ದೇಶನದಂತೆ ಅವರಿದ್ದ ಖಾರ್ಕಿವ್ ನಗರದ ಸಮೀಪದ ಮತ್ತೊಂದು ಪಟ್ಟಣದಲ್ಲಿದ್ದಾರೆ ಎಂದು ಉಡುಪಿ ಜಿಲ್ಲಾಡಳಿತಕ್ಕೆ ಮಾಹಿತಿ ಬಂದಿದೆ. ಕಲ್ಯಾಣಪುರದ ಅನಿಫ್ರೆಡ್ ರಿಡ್ಲೆ ಡಿಸೋಜಾ ಖಾರ್ಕೀವ್ ನಗರದಿಂದ ರೈಲಿನಲ್ಲಿ ಪೊಲೇಂಡ್ ಗಡಿಯಲ್ಲಿರುವ ಲೈವ್ ನಗರಕ್ಕೆ ಪ್ರಯಾಣಿಸಿದ್ದಾರೆ ಎಂಬ ಮಾಹಿತಿ ಬಂದಿದೆ