ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನದ ಪುನರ್ ಪ್ರತಿಷ್ಟೆ, ಬ್ರಹ್ಮಕಲಶೋತ್ಸವ – ಬೃಹತ್‌ ಹೊರೆಕಾಣಿಕೆ ಸಮರ್ಪಣೆ

Spread the love

ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನದ ಪುನರ್ ಪ್ರತಿಷ್ಟೆ, ಬ್ರಹ್ಮಕಲಶೋತ್ಸವ – ಬೃಹತ್‌ ಹೊರೆಕಾಣಿಕೆ ಸಮರ್ಪಣೆ

ಉಡುಪಿ: ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನದ ಪುನರ್ ಪ್ರತಿಷ್ಟೆ, ಬ್ರಹ್ಮಕಲಶೋತ್ಸವ, ಚತುಃಪವಿತ್ರ ನಾಗಬ್ರಹ್ಮಮಂಡಲೋತ್ಸವಕ್ಕೆ ಪೂರ್ವಭಾವಿಯಾಗಿ ಮೊಗವೀರ ಸಮಾಜದ ಸಮಸ್ತ ಕುಲಭಾಂದವರ ವತಿಯಿಂದ ಬೃಹತ್ ಹೊರೆಕಾಣಿಕೆ ಸಮರ್ಪಣೆ ಶುಕ್ರವಾರ ಜರುಗಿತು.

ಕಾಸಗೋಡು ಜಿಲ್ಲೆಯ ಉಪ್ಪಳದಿಂದ ಮೊದಲ್ಗೊಂಡು ದಕ್ಷಿಣ ಕನ್ನಡ ಜಿಲ್ಲೆಯ ಮೂಲಕ ಆಗಮಿಸಿದ ದಕ್ಷಿಣ ವಿಭಾಗದ ಹೊರೆಕಾಣಿಕೆ ಮೆರವಣಿಗೆಯನ್ನು ಎರ್ಮಾಳ್ ನಲ್ಲಿ, ಉತ್ತರದ ಶಿರೂರು ಗಡಿಭಾಗದಿಂದ ಮೊದಲ್ಗೊಂಡು ಆಗಮಿಸಿದ ಉಡುಪಿ ಜಿಲ್ಲೆಯ ಹೊರೆ ಕಾಣಿಕೆ ಮೆರವಣಿಗೆಗೆ ಮುಳೂರಿನಲ್ಲಿ ಚಾಲನೆ ನೀಡಲಾಯಿತು.

ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಮತ್ತು ಬ್ರಹ್ಮಕಲಶ‌ ಸಮಿತಿ ಅಧ್ಯಕ್ಷ ನಾಡೋಜ ಡಾ. ಜಿ. ಶಂಕರ್, ಉಡುಪಿ ಶಾಸಕ ರಘುಪತಿ ಭಟ್‌, ಕಾಪು ಶಾಸಕ ಲಾಲಾಜಿ ಆರ್‌ ಮೆಂಡನ್‌, ಮಾಜಿ ಸಚಿವ ಪ್ರಮೋದ್‌ ಮಧ್ವರಾಜ್‌, ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್‌ ನಾಯಕ್‌, ರಾಜ್ಯ ಬಿಜೆಪಿ ಉಪಾಧ್ಯಕ್ಷೆ ನಯನಾ ಗಣೇಶ್‌, ಸಹಿತ ದ.ಕ. ಮೊಗವೀರ ಮಹಾಜನ ಸಂಘ, ಜೀರ್ಣೋದ್ಧಾರ ಸಮಿತಿ, ಕ್ಷೇತ್ರಾಡಳಿತ ಸಮಿತಿ, ಬ್ರಹ್ಮಕಲಶ ಸಮಿತಿಯ ಪದಾಧಿಕಾರಿಗಳು ಮತ್ತು ಪ್ರಮುಖರು ಹಾಗೂ ಗಣ್ಯರು ಹೊರೆಕಾಣಿಕೆ ಮೆರವಣಿಗೆಗೆ ಚಾಲನೆ ನೀಡಿದರು.

ದ. ಕ. ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್, ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ವಾಸುದೇವ ಸಾಲ್ಯಾನ್, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಗುಂಡು ಬಿ. ಅಮೀನ್, ಮೆರವಣಿಗೆಯ ಉಸ್ತುವಾರಿಗಳಾದ ಹರಿಯಪ್ಪ ಕೋಟ್ಯಾನ್, ಯಶ್ ಪಾಲ್ ಸುವರ್ಣ, ಕಿಶೋರ್ ಡಿ. ಸುವರ್ಣ, ಲಕ್ಷ್ಮಣ್ ಮೈಂದನ್, ರಮೇಶ್ ಕೋಟ್ಯಾನ್, ಸತೀಶ್ ಕುಂದರ್, ರತ್ನಾಕರ ಸಾಲ್ಯಾನ್, ರಾಮಚಂದ್ರ ಕುಂದರ್, ಶಿವರಾಮ ಕೆ.ಎಂ. ಸಹಿತ ಪ್ರಮುಖರ ನೇತೃತ್ವದಲ್ಲಿ ಹೊರೆ ಕಾಣಿಕೆ ಮೆರವಣಿಗೆಯು ವಿಜ್ರಂಭಣೆಯಿಂದ ನಡೆಯಿತು.

ಅಕ್ಕಿ ಮುಡಿ ಹೊತ್ತ ಮಹಿಳೆಯರು, ನಾಡಡೋಲು, ಬಿರುದಾವಳಿ, ಘಟೋದ್ಕಚ, ಸ್ವರ್ಣ ಕಲಶ, ಶಂಖ ನಾದ ಜಾಗಟೆ, ನಾಗಸ್ವರ, ಪೂರ್ಣಕುಂಭ, ಕೊಂಬು ಕಹಳೆ, ತಟ್ಟೀರಾಯ, ಮುಖವಾಡ, ಬ್ಯಾಂಡ್ ಸೆಟ್, ಕೀಲು ಕುದುರೆ, ಸ್ತಬ್ಧ ಚಿತ್ರ, ಕುಣಿತ ಚೆಂಡೆ, ಚೆಂಡೆ, ನಾಸಿಕ್ ಬ್ಯಾಂಡ್, ಪೇಟಧಾರಿ ಮಹಿಳೆಯರು ಮತ್ತು ಪುರುಷರು, ಹುಲಿ ವೇಷ, ಮರದ ಕಾಲು, ತಾಲೀಮು, ನಾಡದೋಣಿ, ಯಾಂತ್ರೀಕೃತ ದೋಣಿ, ಮಟ್ಟುಗುಳ್ಳ ಸಹಿತವಾಗಿ ಸಾವಿರಾರು ವಾಹನಗಳೊಂದಿಗೆ ಹದಿನೈದು ಸಾವಿರಕ್ಕೂ ಅಧಿಕ ಮಂದಿ ಮೆರವಣಿಗೆಯಲ್ಲಿ ಪಾಲ್ಗೊಂಡರು

ಬಳಿಕ ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರು ಶ್ರೀ ಲಕ್ಷ್ಮೀವರ ತೀರ್ಥ ಸರೋವರವನ್ನು ಉದ್ಘಾಟಿಸಿದರು. ಇದೇ ವೇಳೆ ನೂತನ ರಾಜಗೋಪುರ ಸಮರ್ಪಣೆ ಹಾಗೂ ಉಗ್ರಾಣ ಮಹೂರ್ತ ಜರುಗಿತು.

ಸಂಜೆ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರು ಕಿದೀಯೂರು ಹೋಟೆಲ್‌ ಇದರ ಭುವನೇಂದ್ರ ಕಿದಿಯೂರು, ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನ ಕುಂಭಾಶಿ ಇದರ ಅನುವಂಶಿಕ ಮೊಕ್ತೇಸರರಾದ ಶ್ರೀ ಸೂರ್ಯನಾರಾಯಣ ಉಪಾಧ್ಯಾಯ, ದಕ ಮತ್ತು ಉಡುಪಿ ಜಿಲ್ಲಾ ಮೀನು ಮಾರಾಟ ಫೆಡರೇಶನ್‌ ಇದರ ಅಧ್ಯಕ್ಷರಾದ ಯಶಪಾಲ್‌ ಸುವರ್ಣ ಹಾಗೂ ಇತರ ಗಣ್ಯರು ಭಾಗವಹಿಸಿದ್ದರು.

ಕಾರ್ಯ್ರಕಮದಲ್ಲಿ ಹೊರೆಕಾಣಿಕೆ ಸಮರ್ಪಣಾ ಕಾರ್ಯಕ್ರಮದಲ್ಲಿ ಸಹಕರಿಸಿದವರಿಗೆ ಗೌರವಾರ್ಪಣೆ ನಡೆಯಿತು. ಸಭಾ ಕಾರ್ಯಕ್ರಮದ ಬಳಿಕ ಮಹಾಲಕ್ಷ್ಮೀ ಯಕ್ಷಗಾನ ಕಲಾ ಸಂಘ ಉಚ್ಚಿಲ ಇವರಿಂದ ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮ ನಡೆಯಿತು.


Spread the love