ಉಡುಪಿಯಲ್ಲಿ ಉಸಿರಾಡುವಾಗ ಮಾಸ್ಕ್ ಧರಿಸುವ ಸ್ಥಿತಿ ನಿರ್ಮಾಣವಾಗಿದೆ: ವಾಯು ಮಾಲಿನ್ಯ ಕುರಿತು ಪ್ರೇಮಾನಂದ ಕಲ್ಮಾಡಿ ಕಳವಳ
ಉಡುಪಿ: ಸುಂದರ ಕರಾವಳಿ ಪಟ್ಟಣವಾದ ಉಡುಪಿಯ ವಾಯುಗುಣ ಗುಣಮಟ್ಟ ಕ್ಷೀಣಿಸುತ್ತಿದ್ದು, ಮಾಲಿನ್ಯ ಮಟ್ಟ 80 ಕ್ಕೆ ಕುಸಿತ ಕಾಣುತ್ತಿದೆ. ಇದೇ ರೀತಿ ಮುಂದುವರಿದರೆ ಮಾಸ್ಕ್ ಬಳಸುವುದು ನಮ್ಮ ದೈನಂದಿನ ಅಸ್ತಿತ್ವದ ಭಾಗವಾಗಬಹುದು ಎಂದು ಪ್ರೇಮಾನಂದ ಕಲ್ಮಾಡಿ ಕಳವಳ ವ್ಯಕ್ತಪಡಿಸಿದರು.

ಅವರು ಜಮಾಅತೆ ಇಸ್ಲಾಮಿ ಹಿಂದ್ ಉಡುಪಿ ಜಿಲ್ಲೆ ಆಯೋಜಿಸಿದ “ಪರಿಸರ ಉಳಿಸಿ, ಉಡುಪಿ ಬೆಳೆಸಿ” ಎಂಬ ವಿಷಯದ ಕುರಿತು ದುಂಡು ಮೇಜಿನ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮುಂದುವರಿದು ಮಾತನಾಡಿದ ಅವರು, ಹೆಚ್ಚುತ್ತಿರುವ ಮಾಲಿನ್ಯ, ಅಂತರ್ಜಾಲ ಕುಸಿತ, ಹೆಚ್ಚುತ್ತಿರುವ ತ್ಯಾಜ್ಯ ಮತ್ತು ಮೀನು ಇಳುವರಿ ಕುಸಿಯುತ್ತಿರುವ ಬಗ್ಗೆ ಎಚ್ಚರಿಸಿದರು. ರೆಸಾರ್ಟ್ಗಳ ಅನಿಯಂತ್ರಿತ ಬೆಳವಣಿಯು ಪರಿಸರ ವ್ಯವಸ್ಥೆಗೆ ಸಮಸ್ಯೆ ಉಂಟುಮಾಡುತ್ತಿದೆ. CRZ-3 ರಿಂದ CRZ-2 ಗೆ ಬದಲಾಯಿಸುವ ಮಾನದಂಡಗಳು ಸಮುದ್ರ ಪರಿಸರ ವ್ಯವಸ್ಥೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಿವೆ. ಬಾವಿಗಳಿಂದ ಬರುವ ಸಿಹಿನೀರು ಉಪ್ಪುನೀರಿನ ಶೋಧನೆಗೆ ಒಡ್ಡಿಕೊಳ್ಳುತ್ತದೆ. ಇದು ಮುಂದೆ ಕುಡಿಯುವ ನೀರು ಕೂಡ ಕುಡಿಯಲು ಅನರ್ಹವಾಗಲು ಕಾರಣವಾಗಬಹುದು. ಕೊಡಚಾದ್ರಿ ಕೇಬಲ್ ಕಾರುಗಳಂತಹ ಅನೇಕ ಯೋಜನೆಗಳನ್ನು ಅವರು ಈ ಸಂದರ್ಭದಲ್ಲಿ ಪಟ್ಟಿ ಮಾಡಿ ಅದರ ದುಷ್ಪರಿಣಾಮದ ಕುರಿತು ಬೆಳಕು ಚೆಲ್ಲಿದರು. ಇದು ಪರಿಸರ ಸುಸ್ಥಿರತೆಗೆ ಹೊಂದಿಕೆಯಾಗುವುದಿಲ್ಲ. ದೀರ್ಘಕಾಲೀನ ಹಾನಿಯನ್ನುಂಟುಮಾಡುತ್ತದೆ. ಪಂಚಾಯತ್ನಿಂದ ಪುರಸಭೆ ಮಟ್ಟದವರೆಗಿನ ಕ್ರಿಯಾ ಯೋಜನೆಯಲ್ಲಿ ಬೇರೂರಿರುವ ಸುಸ್ಥಿರ ಉಡುಪಿಗಾಗಿ ಸೂಕ್ಷ್ಮತೆಯನ್ನು ಅಭಿವೃದ್ಧಿಪಡಿಸಲು ಮತ್ತು ಪರಿಸರಕ್ಕೆ ಪೂರಕವಾದ ಯೋಜನೆಗಳನ್ನು ರೂಪಿಸಲು ಸಭಿಕರನ್ನು ಪ್ರೇರೇಪಿಸಿದರು.
ಕಾರ್ಯಕ್ರಮದ ಸಂಚಾಲಕರಾದ ನಿಹಾಲ್ ಕಿದಿಯೂರು ಮಾತನಾಡಿ,” ಠಾಗೋರ್ ಅವರು ತಿಳಿಸಿದಂತೆ ವಸಹಾತುಶಾಹಿ ಭಾರತದಲ್ಲಿ ನೀರಿನ ಬಿಕ್ಕಟ್ಟು ಕೇವಲ ನೀರಿನ ಬಿಕ್ಕಟ್ಟಾಗಿ ಉಳಿದಿಲ್ಲ ಅದೊಂದು ಮನಸ್ಥಿತಿಯ ಬಿಕ್ಕಟ್ಟಾಗಿದೆ. ಇಂದು ಸಮಾಜ ತನ್ನ ಜವಾಬ್ದಾರಿಯನ್ನು ಸರಕಾರ, ಸಂಸ್ಥೆ ಅಥವಾ ಬಾಹ್ಯ ವ್ಯವಸ್ಥೆಯ ಮೇಲೆ ಹೊರಿಸಲು ಮುಂದಾಗುತ್ತದೆ. ಸಮಾಜವು ಸ್ವತಃ ಸಮಸ್ಯೆಯನ್ನು ಪರಿಹರಿಸಲು ಮುಂದಾದಾಗ ನಮ್ಮ ನೆರೆಹೊರೆ ಸ್ವಸ್ಥವಾಗಿರಲು ಸಾಧ್ಯವಾಗುತ್ತದೆ. ಆ ಹಿನ್ನಲೆಯಲ್ಲಿ ಮುಂದಿನ ದಿನಗಳಲ್ಲಿ ಪರಿಸರ ಸಂರಕ್ಷಣೆಯ ಕುರಿತು ನಾವೆಲ್ಲರೂ ಸೇರಿ ಸಂರಕ್ಷಿಸುವ ಹೊಣೆ ಹೊತ್ತು ಕೊಳ್ಳೋಣ. ಅದಕ್ಕಾಗಿ ಗ್ರಾಮ ಮಟ್ಟದಲ್ಲಿ ಕೆಲವೊಂದು ಕಾರ್ಯಕ್ರಮ ಹಾಕಿಕೊಳ್ಳೋಣ” ಎಂದರು.
ಡಾ.ಅಬ್ದುಲ್ ಅಝೀಜ್ ಉಡುಪಿಯ ಪರಿಸರಕ್ಕೆ ಸಂಬಂಧಿಸಿದಂತೆ ತಮ್ಮ ವಿಚಾರ ಮಂಡಿಸಿದರು. ಕಾರ್ಯಕ್ರಮದಲ್ಲಿ ಉಡುಪಿಯಲ್ಲಿ ಮಾನವೀಯ ಸೇವೆಗೈಯುತ್ತಿರುವ ನಿತ್ಯನಂದಾ ಒಳಕಾಡು, ಸಂತೋಷ್ ಕೆಮ್ಮಣ್ಣು, ನಮನ ಶ್ರೀ ಅವರನ್ನು ಸನ್ಮಾನಿಸಲಾಯಿತು.
ಜಮಾತೆ ಇಸ್ಲಾಮಿ ಹಿಂದ್ ಅವರ ರಾಷ್ಟ್ರೀಯ ಮಟ್ಟದ ಆದರ್ಶ ನೆರೆಹೊರೆ ಅಭಿಯಾನದ ಭಾಗವಾಗಿ ಈ ಚರ್ಚೆ ನಡೆಯಿತು. ಕಾರ್ಯಕ್ರಮದಲ್ಲಿ ಸಾಮಾಜಿಕ ಕಾರ್ಯಕರ್ತ ಮೋಹನ್ ಕುಮಾರ್, ಸಂವರ್ತ್ ಸಾಹೀಲ್, ಸಾಲಿಡಾರಿಟಿಯ ಅಫ್ವಾನ್ ಹೂಡೆ, ಇದ್ರಿಸ್ ಹೂಡೆ, ಸಿರಾಜ್ ಮಲ್ಪೆ, ನಿಸಾರ್ ಉಡುಪಿ, ಅನ್ವರ್ ಅಲಿ ಕಾಪು, ಸಮೀರ್ ತೀರ್ಥಹಳ್ಳಿ, ಎಪಿಸಿಆರ್ ರಾಜ್ಯ ಕಾರ್ಯದರ್ಶಿ ಹುಸೇನ್ ಕೋಡಿಬೆಂಗ್ರೆ ಉಪಸ್ಥಿತರಿದ್ದರು.