ಉಡುಪಿಯಲ್ಲಿ ಕೃಷ್ಣಾಷ್ಟಮಿ ಸಂಭ್ರಮ; ಕೃಷ್ಣ ವೇಷಧಾರಿ ಪುಟಾಣಿಗಳ ಕಲರವ

Spread the love

ಉಡುಪಿಯಲ್ಲಿ ಕೃಷ್ಣಾಷ್ಟಮಿ ಸಂಭ್ರಮ; ಕೃಷ್ಣ ವೇಷಧಾರಿ ಪುಟಾಣಿಗಳ ಕಲರವ

ಉಡುಪಿ: ಎರಡು ವರ್ಷಗಳ ಕೊರೋನಾ ಆತಂಕ ಮುಗಿದು ಈ ಬಾರಿ ಉಡುಪಿಯ ಶ್ರೀ ಕೃಷ್ಣಮಠದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಸಂಭ್ರದಿಂದ ಶುಕ್ರವಾರ ಆರಂಭಗೊಂಡಿದೆ.

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಧಾರ್ಮಿಕ ಆಚರಣೆಗಳು ಪರ್ಯಾಯ ಕೃಷ್ಣಾಪುರ ಮಠಾಧೀಶರಾದ ಶ್ರೀ ವಿದ್ಯಾಸಾಗರ ತೀರ್ಥ ಸ್ವಾಮೀಜಿ ನೇತೃತ್ವದಲ್ಲಿ ನಡೆದವು. ಶುಕ್ರವಾರ ಬೆಳಿಗ್ಗೆ ಶ್ರೀ ಕೃಷ್ಣ ಮಠದಲ್ಲಿ, ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಕಾಣಿಯೂರು ಮಠಾಧೀಶರಾದ ಶ್ರೀವಿದ್ಯಾವಲ್ಲಭ ತೀರ್ಥ ಶ್ರೀಪಾದರು ಶ್ರೀ ಕೃಷ್ಣ ದೇವರಿಗೆ ಕಾಣಿಯೂರು ಮಠಾಧೀಶರು “ಯಶೋದಾ ಕೃಷ್ಣ” ವಿಶೇಷ ಅಲಂಕಾರ ಮಾಡಿ, ಪರ್ಯಾಯ ಕೃಷ್ಣಾಪುರ ಮಠಾಧೀಶರಾದ ಶ್ರೀವಿದ್ಯಾಸಾಗರತೀರ್ಥ ಶ್ರೀಪಾದರು ಮಹಾಪೂಜೆ ನೆರವೇರಿಸಿದರು.

ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಶುಕ್ರವಾರ ಆಯೋಜಿಸಲಾದ ಕೃಷ್ಣವೇಷ ಸ್ಪರ್ಧೆಯಿಂದಾಗಿ ಮಠದ ಪರಿಸರದಲ್ಲಿ ಕೃಷ್ಣ ವೇಷಧಾರಿ ಪುಟಾಣಿಗಳ ಕಲರವ ಗಮನ ಸೆಳೆಯಿತು.

ಮಧ್ವಾಂಗಣದಲ್ಲಿ ನಡೆದ 3 ವರ್ಷದೊಳಗಿನ ಮಕ್ಕಳಿಗೆ ಮುದ್ದುಕೃಷ್ಣ ಸ್ಪರ್ಧೆ ಯಲ್ಲಿ 140ಕ್ಕೂ ಅಧಿಕ ಮಕ್ಕಳು ನೋಂದಣಿ ಮಾಡಿಕೊಂಡಿದ್ದರೆ, ಭೋಜನ ಶಾಲೆ ಮಾಳಿಗೆಯಲ್ಲಿ ನಡೆದ 4 ರಿಂದ 6 ವರ್ಷ ಮಕ್ಕಳ ಬಾಲಕೃಷ್ಣ ಸ್ಪರ್ಧೆಯಲ್ಲಿ 100 ಕ್ಕೂ ಅಧಿಕ ಮಕ್ಕಳು ಭಾಗವಹಿಸಿದ್ದರು.

ಅನ್ನಬ್ರಹ್ಮದಲ್ಲಿ ನಡೆದ 7ರಿಂದ 10 ವರ್ಷದೊಳಗಿನ ಮಕ್ಕಳ ಕಿಶೋರ ಕೃಷ್ಣ ಸ್ಪರ್ಧೆಯಲ್ಲಿ ೮೦ಕ್ಕೂ ಅಧಿಕ ಮಕ್ಕಳು ಪಾಲ್ಗೊಂಡಿದ್ದರು. ಸ್ಪರ್ಧೆಯಲ್ಲಿ ಭಾಗವಹಿಸಿದ ಮಕ್ಕಳಿಗೆ ಪ್ರಮಾಣ ಪತ್ರ ಹಾಗೂ ಕೃಷ್ಣ ಪ್ರಸಾದ ವಿತರಿಸಲಾಯಿತು.
ಶ್ರೀ

ಕೃಷ್ಣಜನ್ಮಾಷ್ಟಮಿ ಸಂಭ್ರಮ ವಿವಿಧ ವೇಷಧಾರಿಗಳು ಕಣ್ಮನ ಸೆಳೆಯುತ್ತಿದ್ದು, ರಥಬೀದಿ ಸೇರಿದಂತೆ ನಗರದಲ್ಲೆಡೆ ಬಾಲಕೃಷ್ಣರ, ಯಕ್ಷ, ಹುಲಿವೇಷ ಸೇರಿದಂತೆ ವಿವಿಧ ಬಗೆಯ ವೇಷಧಾರಿಗಳು ಗಮನ ಸೆಳೆಯುತ್ತಿದ್ದಾರೆ. ನಗರದ ಬೀದಿಗಳಲ್ಲಿ ಪ್ರಮುಖ ಹುಲಿವೇಷ ತಂಡಗಳು, ಯಕ್ಷಗಾನದ ವಿವಿಧ ವೇಷಗಳು, ರಕ್ಕಸ ವೇಷಗಳು, ಟ್ಯಾಬ್ಲೋ ತಂಡಗಳು ಎಲ್ಲೆಡೆ ಕಾಣಸಿಗುತ್ತಿವೆ. ನಗರದೆಲ್ಲೆಡೆ ಸುಮಾರು 30 ಕ್ಕೂ ಹೆಚ್ಚು ಹುಲಿವೇಷಧಾರಿಗಳ ತಂಡಗಳು ಕಂಡುಬಂದಿವೆ.

ಆ. 20 ರಂದು ರಥಬೀದಿಯಲ್ಲಿ ಶ್ರೀಕೃಷ್ಣಲೀಲೋತ್ಸವ (ವಿಟ್ಲಪಿಂಡಿ) ಉತ್ಸವ ಸಂಭ್ರಮದಿಂದ ನಡೆಯಲಿದೆ. ಬೆಳಗ್ಗೆ 10.30ರಿಂದಲೇ ಅನ್ನ ಸಂತರ್ಪಣೆ ಆರಂಭಗೊಳ್ಳಲಿದ್ದು, ಸಾವಿರಾರು ಭಕ್ತರಿಗೆ ಕೃಷ್ಣ ಪ್ರಸಾದ ವಿತರಣೆಗೆ ತಯಾರಿ ನಡೆದಿದೆ. ಮಧ್ಯಾಹ್ನ 3ಕ್ಕೆ ರಥಬೀದಿಯಲ್ಲಿ ಸ್ವರ್ಣರಥದಲ್ಲಿ ಕೃಷ್ಣನ ಮೃಣ್ಮಯ ಮೂರ್ತಿ ಮತ್ತು ಅನಂತೇಶ್ವರ ಚಂದ್ರಮೌಳೀಶ್ವರ ವಿಗ್ರಹಗಳನ್ನು ನವರತ್ನ ರಥದಲ್ಲಿ ಪ್ರತಿಷ್ಠಾಪಿಸಿ ಮೆರವಣಿಗೆ ನಡೆಸಲಾಗುತ್ತದೆ. ಮೆರವಣಿಗೆ ಸಂದರ್ಭ ರಥಬೀದಿ ಸುತ್ತಲೂ ಅಳವಡಿಸಿರುವ 13 ತ್ರಿಕೋನಾಕೃತಿಯ ಗುರ್ಜಿಗಳಿಗೆ ನೇತು ಹಾಕಿರುವ ಮೊಸರು ಕುಡಿಕೆಯನ್ನು ಕೃಷ್ಣಮಠದ ಗೋವಳರು ಒಡೆಯುತ್ತಾರೆ. ಪರ್ಯಾಯ ಶ್ರೀಪಾದರು ಚಕ್ಕುಲಿ ಉಂಡೆ ಪ್ರಸಾದವನ್ನು ರಥದ ಮೆರವಣಿಗೆ ವೇಳೆ ಭಕ್ತರಿಗೆ ವಿತರಿಸುತ್ತಾರೆ. ಅನಂತರ ಮೃಣ್ಮಯ ಮೂರ್ತಿಯನ್ನು ಸಾಂಪ್ರದಾಯಿಕವಾಗಿ ಮಧ್ವ ಸರೋವರದಲ್ಲಿ ಜಲಸ್ತಂಭನ ಮಾಡಲಾಗುತ್ತದೆ.

ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಉಡುಪಿಯ ರಥಬೀದಿ, ಕೃಷ್ಣ ಮಠ ಪರಿಸರ ಮತ್ತು ನಗರದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸಲಾಗಿದೆ. ಜಿಲ್ಲಾಡಳಿತ ಮತ್ತು ಮಠದ ಆಡಳಿತದೊಂದಿಗೆ ಚರ್ಚಿಸಿ ಭದ್ರತೆಯನ್ನು ಒದಗಿಸಲಾಗಿದೆ. ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಅಕ್ಷಯ್ ಹಾಕೆ ಮಾರ್ಗದರ್ಶನಲ್ಲಿ 1 ಡಿವೈಎಸ್ಲಿ, 4 ಸಿ.ಪಿ.ಐ, 12 ಪಿ.ಎಸ್.ಐ, 26 ಎ.ಎಸ್.ಐ, 200 ಸಿಬ್ಬಂದಿಗಳು, 3 ಡಿ.ಎ.ಆರ್ ತಂಡವನ್ನು ಭದ್ರತೆಗೆ ನೇಮಿಸಲಾಗಿದೆ. ರಥಬೀದಿಯಲ್ಲಿ ಸಹಾಯವಾಣಿಯನ್ನು ತೆರೆಯಲಾಗಿದ್ದು, ಸಿಸಿಟಿವಿ ಕಣ್ಗಾವಲಿರಿಸಲಾಗಿದೆ. ರಥಬೀದಿಯನ್ನು ಸಂಪರ್ಕಿಸಿ 8 ಗೇಟುಗಳನ್ನು ನಿಗಾ ಇಡಲಾಗಿದೆ.


Spread the love