ಉಡುಪಿಯಲ್ಲಿ ಬಾಗಲಕೋಟೆ ಮೂಲದ ದಂಪತಿಯ ಮಗು ಅಪಹರಣ – ಕುಮಟಾದಲ್ಲಿ ಮಗುವಿನ ರಕ್ಷಣೆ, ಆರೋಪಿ ವಶಕ್ಕೆ

Spread the love

ಉಡುಪಿಯಲ್ಲಿ ಬಾಗಲಕೋಟೆ ಮೂಲದ ದಂಪತಿಯ ಮಗು ಅಪಹರಣ – ಕುಮಟಾದಲ್ಲಿ ಮಗುವಿನ ರಕ್ಷಣೆ, ಆರೋಪಿ ವಶಕ್ಕೆ

ಉಡುಪಿ: ಕ್ಷಿಪ್ರ ಕಾರ್ಯಚರಣೆಯಲ್ಲಿ ಭಾನುವಾರ ಉಡುಪಿಯಿಂದ ಅಪಹರಣಗೊಂಡ ಬಾಗಲಕೋಟೆ ಮೂಲದ ದಂಪತಿಯ 2.4 ವರ್ಷದ ಮಗುವನ್ನು ರಕ್ಷಿಸಿ ಆರೋಪಿಯನ್ನು ವಶಕ್ಕೆ ಪಡೆಯುವಲ್ಲಿ ಉಡುಪಿ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ.

2.4 ವರ್ಷದ ಮಗು ಶಿವರಾಜು ಮತ್ತು ಆರೋಪಿ ಪರಶು ಎಂಬಾತನನ್ನು ಉತ್ತರಕನ್ನಡ ಜಿಲ್ಲೆಯ ಕುಮಟಾದಲ್ಲಿ ವಶಕ್ಕೆ ಪಡೆದಿದ್ದು ಉಡುಪಿಗೆ ಕರೆ ತಂದಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಮುದೋಳ ತಾಲೂಕಿನ ಭಾರತಿ ಮತ್ತು ಅರುಣ್ ದಂಪತಿಗೆ ಅವಳಿ-ಜವಳಿ ಮಕ್ಕಳಿದ್ದು, ಅದರಲ್ಲಿ ಧೀರಜ್ ಎಂಬ ಮಗುವನ್ನು ಊರಿನಲ್ಲೇ ಬಿಟ್ಟು ಶಿವರಾಜ್ ಎಂಬ ಮಗನೊಂದಿಗೆ ಇವರು ಎರಡು ತಿಂಗಳ ಹಿಂದೆ ಉಡುಪಿಗೆ ಬಂದಿದ್ದರು.

ಲಾಕ್‌ಡೌನ್‌ ಸಂದರ್ಭದಲ್ಲಿ ಈ ದಂಪತಿ ಮತ್ತು ಮಗು ಸೇರಿದಂತೆ ಹಲವು ಮಂದಿ ವಲಸ ಕಾರ್ಮಿಕರು ಕರಾವಳಿ ಬೈಪಾಸ್ ಬಳಿಯ ಶಡ್‌ನಲ್ಲಿ ಮಲಗುತ್ತಿದ್ದರು. ಇತ್ತೀಚೆಗೆ ಬಾಗಲಕೋಟೆಯ ಪರ್ಸು ಎಂದು ಹೇಳಿಕೊಂಡು ಬಂದ ವ್ಯಕ್ತಿಯೊಬ್ಬ ಈ ದಂಪತಿಗೆ ಪರಿಚಯವಾಗಿತ್ತು. ಭಾನುವಾರ ಬೆಳಗ್ಗೆ ಮಗುವನ್ನು ಚಹಾ ಕುಡಿಸಿಕೊಂಡು ಬರುತ್ತೇನೆ ಎಂದು ಮಗುವನ್ನು ಕರೆದುಕೊಂಡು ಹೋದವನು ವಾಪಸ್ ಬಂದಿಲ್ಲ. ಇದೇ ವ್ಯಕ್ತಿ ತನ್ನ ಮಗುವನ್ನು ಅಪಹರಿಸಿಕೊಂಡು ಹೋಗಿರಬಹುದೆಂದು ಭಾರತಿ-ಅರುಣ್ ದಂಪತಿ ಉಡುಪಿ ನಗರ ಠಾಣೆಗೆ ದೂರು ನೀಡಿದ್ದರು.

ದೂರಿನಂತೆ ಕಾರ್ಯಾಚರಣೆಗಿಳಿದ ಉಡುಪಿ ನಗರ ಠಾಣಾಧಿಕಾರಿ ಪ್ರಮೋದ್‌ ಕುಮಾರ್‌ ನೇತೃತ್ವದ ತಂಡ ಸಿಸಿ ಟಿವಿ ದ್ರಶ್ಯಾವಳಿಗಳನ್ನು ಆದರಿಸಿ ಪರಶು ರವಿವಾರ ಬೆಳಗ್ಗೆ ಕರಾವಳಿ ಬೈಪಾಸ್ ನಿಂದ ಸಿಟಿಬಸ್ ನಲ್ಲಿ ಪ್ರಯಾಣಿಸಿದ್ದು ಅದರಂತೆ ತನಿಖೆ ಚುರುಕುಗೊಳಿಸಿತು. ಬಳಿಕ ಆತ ಕೆಎಸ್‌ ಆರ್‌ ಟಿಸಿ ಬಸ್‌ ಮೂಲಕ ತೆರಳಿ ಮಗುವಿನೊಂದಿಗೆ ಭಟ್ಕಳದಲ್ಲಿ ಇಳಿದ ಬಗ್ಗೆ ಮಾಹಿತಿ ಪಡೆದು ಉತ್ತರಕನ್ನಡ ಜಿಲ್ಲೆಯ ಪೊಲೀಸರ ಸಹಾಯದೊಂದಿಗೆ ಭಾನುವಾರ ರಾತ್ರಿ ಕುಮಟಾ ಪೊಲೀಸರು ವಶಕ್ಕೆ ಪಡೆದಿದ್ದಾರೆ.


Spread the love