ಉಡುಪಿಯಲ್ಲಿ ವೈಭವದಿಂದ ಸಂಪನ್ನಗೊಂಡ ವಿಟ್ಲಪಿಂಡಿ ಮಹೋತ್ಸವ

Spread the love

ಉಡುಪಿಯಲ್ಲಿ ವೈಭವದಿಂದ ಸಂಪನ್ನಗೊಂಡ ವಿಟ್ಲಪಿಂಡಿ ಮಹೋತ್ಸವ

ಉಡುಪಿ: ಕೃಷ್ಣ ಲಿಲೋತ್ಸವ, ವಿಟ್ಲಪಿಂಡಿ ಮಹೋತ್ಸವ ಸಾಂಪ್ರದಾಯಿಕ ವಿಧಿವಿಧಾನಗಳೊಂದಿಗೆ ಶ್ರೀ ಕೃಷ್ಣ ಮಠದ ರಥಬೀದಿಯಲ್ಲಿ ಮಂಗಳವಾರ ವಿಜೃಂಭಣೆಯಿಂದ ಸಂಪನ್ನಗೊಂಡಿತು. ಜಾನಪದ ಶೈಲಿಯಲ್ಲಿ ಅಲಂಕರಿಸಿದ್ದ ವಿಶಿಷ್ಠ ಪುಟ್ಟ ರಥದಲ್ಲಿ ಮೋಹಕ ಮೃಣ್ಮಯ ಕೃಷ್ಣನ ಮೂರ್ತಿಯನ್ನು ಪೂಜಿಸಿ ಮೆರವಣಿಗೆ ನಡೆಸಲಾಯಿತು.

ಕೋವಿಡ್‌ ಹಿನ್ನಲೆಯಲ್ಲಿ ಸಾರ್ವಜನಿಕರಿಗೆ ರಥಬೀದಿ ಪ್ರವೇಶ ನಿರಾಕರಿಸಿದ ಹಿನ್ನಲೆಯಲ್ಲಿ ಜನಜಂಗುಳಿ ಇಲ್ಲದಿರುವುದು ಈ ಬಾರಿಯ ವಿಶೇಷವಾಗಿತ್ತು.

ಚಿನ್ನದ ರಥದಲ್ಲಿ ಶ್ರೀಕೃಷ್ಣನ ಮೃತ್ತಿಕಾ ಮೂರ್ತಿಯ ಉತ್ಸವ ನಡೆಸಲಾಯಿತು. ಕೋವಿಡ್ ನಿರ್ಬಂಧದ ಹಿನ್ನೆಲೆಯಲ್ಲಿ ಕೃಷ್ಣ ಮಠದ ಮತ್ತು ಅಷ್ಟಮಠಗಳ ಸಿಬ್ಬಂದಿಗಳು, ಗೊಲ್ಲ ಸಮುದಾಯದವರು ಕೃಷ್ಣನ ಉತ್ಸವದಲ್ಲಿ ಪಾಲ್ಗೊಳ್ಳುವ ಅವಕಾಶ ಕೊಡಲಾಗಿತ್ತು.

ರಥಬೀದಿಯ ಎಲ್ಲ ಗೇಟುಗಳಲ್ಲೂ ಪೊಲೀಸರ ನಿಯೋಜನೆ ಮಾಡಿ, ಸಾರ್ವಜನಿಕರಿಗೆ ರಥಬೀದಿ ಪ್ರವೇಶ ನಿರ್ಬಂಧ ಹೇರಲಾಗಿತ್ತು. ಸಂಪ್ರದಾಯಕ್ಕೆ ಚ್ಯುತಿ ಬಾರದ ರೀತಿಯಲ್ಲಿ ಮೊಸರು ಕುಡಿಕೆ ಉತ್ಸವ ನಡೆಯಿತು.

ರಥಬೀದಿ ಉದ್ದಕ್ಕೂ ನಡೆಲಾಗಿದ್ದ  ಗುರ್ಜಿಗಳಲ್ಲಿ ಎತ್ತರದಲ್ಲಿ ಕಟ್ಟಿದ್ದ ಮೊಸರು ಕುಡಿಕೆಗಳನ್ನು ಗೋವಳರು ಒಂದೋಂದಾಗಿ ಒಡೆಯುತ್ತಾ ಸಾಗಿದರು. ಅಷ್ಟ ಮಠಗಳ ಬೀದಿಯಲ್ಲಿ ಶೋಭಾಯಾತ್ರೆ ನಡೆಸಿ ಬಂದ ಕೃಷ್ಣನ ಮೃಣ್ಮಯ ಮೂರ್ತಿಯನ್ನು ಮಧ್ವ ಸರೋವರದಲ್ಲಿ ವಿಸರ್ಜಿಸುವುದರೊಂದಿಗೆ ಕೃಷ್ಣ ಲೀಲೋತ್ಸವ ಸಂಪನನ್ನಗೊಂಡಿತು.


Spread the love