ಉಡುಪಿಯಲ್ಲಿ ಸಂಭ್ರಮದಿಂದ ಸಂಪನ್ನಗೊಂಡ ವಿಟ್ಲಪಿಂಡಿ ಉತ್ಸವ

Spread the love

ಉಡುಪಿಯಲ್ಲಿ ಸಂಭ್ರಮದಿಂದ ಸಂಪನ್ನಗೊಂಡ ವಿಟ್ಲಪಿಂಡಿ ಉತ್ಸವ

ಉಡುಪಿ: ಕೃಷ್ಣನ ಜನ್ಮವನ್ನು ಸ್ಮರಿಸುವ, ಸಂಭ್ರಮಿಸುವ ವಿಟ್ಲಪಿಂಡಿ ಉತ್ಸವ ಶ್ರೀಕೃಷ್ಣ ಮಠದಲ್ಲಿ ಶನಿವಾರ ವೈಭವದಿಂದ ಸಂಪನ್ನಗೊಂಡಿತು.

ಉಡುಪಿಯ ರಥ ಬೀದಿ ಶನಿವಾರ ಜನರಿಂದ ತುಂಬಿ ಹೋಗಿತ್ತು. ವಿಟ್ಲಪಿಂಡಿ ಉತ್ಸವ ವೀಕ್ಷಿಸಲು ಜನರು ಬೆಳಗ್ಗೆಯಿಂದಲೇ ಕಾದು ಕುಳಿತಿದ್ದರು. ಮಧ್ಯಾಹ್ನದ ವೇಳೆಗೆ ರಥ ಬೀದಿಯಯಲ್ಲಿ ಸಂಭ್ರಮದಿಂದ ವಿಟ್ಲಪಿಂಡಿ ಉತ್ಸವ ಆರಂಭವಾಯಿತು. ಕೃಷ್ಣ ಜನ್ಮಾಷ್ಟಮಿ ಮರುದಿನ ಶ್ರೀ ಕೃಷ್ಣನ ಬಾಲಲೀಲೆಗಳನ್ನು ನೆನಪು ಮಾಡಿಕೊಳ್ಳುವ ಉದ್ದೇಶದಿಂದ ವಿಟ್ಲಪಿಂಡಿ ಉತ್ಸವ ಆಚರಿಸಲಾಗುತ್ತದೆ.

ಶನಿವಾರ ಮುಂಜಾವ ಶ್ರೀಕೃಷ್ಣ- ಮುಖ್ಯಪ್ರಾಣರಿಗೆ ಪರ್ಯಾಯ ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು ಪೂಜೆ ಸಲ್ಲಿಸಿದ ಬಳಿಕ ಸಾರ್ವಜನಿಕರಿಗೆ ಅನ್ನಸಂತರ್ಪಣೆ ನಡೆಯಿತು.

ಉಡುಪಿಯ ಅಷ್ಟಮಿ ಮಹೋತ್ಸವ ಜಗತ್ಪ್ರಸಿದ್ಧಿ ಪಡೆದಿದೆ. ಎರಡು ದಿನಗಳ ಕಾಲ ನಡೆಯುವ ಉತ್ಸವದಲ್ಲಿ ಕೃಷ್ಣದೇವರ ಮೆರವಣಿಗೆ ನಡೆಸಲಾಗುವ ವಿಟ್ಲಪಿಂಡಿ ಮಹೋತ್ಸವವೆಂದರೆ ವೈಭವದ ಹಬ್ಬ. ಇಂದು ಚಿನ್ನದ ರಥದಲ್ಲಿ ಕೃಷ್ಣದೇವರ ಮೆರವಣಿಗೆ ನಡೆಯಿತು. ಚಾತುರ್ಮಾಸ್ಯ ಕಾಲವಾದ ಕಾರಣ ಉತ್ಸವ ಮೂರ್ತಿಯನ್ನು ಹೊರ ತರುವಂತಿಲ್ಲ, ಹಾಗಾಗಿ ಅಷ್ಟಮಿಗೆಂದೇ ತಯಾರಿಸಲಾಗುವ ಮಣ್ಣಿನ ಮೂರ್ತಿಯನ್ನು ಚಿನ್ನದ ರಥದಲ್ಲಿಟ್ಟು ಅಷ್ಟಮಠಗಳ ಸುತ್ತಲೂ ರಥ ಬೀದಿಯಲ್ಲಿ ಕೊಂಡೊಯ್ಯಲಾಯಿತು. ಈ ವೇಳೆ ಸಾವಿರಾರು ಭಕ್ತರು ಭಾಗವಹಿಸಿದ್ದರು.

ಸಾಂಪ್ರದಾಯಿಕ ವೇಷದಾರಿ ಗೊಲ್ಲರು ಮೊಸರಿನ ಕುಡಿಕೆಗಳನ್ನು ಒಡೆಯುತ್ತಾ ಸಾಗಿದಂತೆ ಪ್ರದಕ್ಷಿಣಕಾರವಾಗಿ ಚಿನ್ನದ ರಥದಲ್ಲಿ ದೇವರ ಮೆರವಣಿಗೆ ನಡೆಯಿತು. ಪರ್ಯಾಯ ಕೃಷ್ಣಾಪುರ ಮಠದ ವಿದ್ಯಾಸಾಗರ ತೀರ್ಥ ಶ್ರೀಪಾದರು ಪೂಜೆ ನಡೆಸಿ, ಬಳಿಕ ರಥದ ಮುಂದೆ ಭಕ್ತರೊಡನೆ ಸಾಗಿ ಬಂದರು. ಹುಲಿ ವೇಷ ಸೇರಿದಂತೆ ಬಗೆ ಬಗೆಯ ವೇಷಧಾರಿಗಳು ಶ್ರೀ ಕೃಷ್ಣನ ಲೀಲೋತ್ಸವಕ್ಕೆ ಸಾಕ್ಷಿಯಾದರು. ಎಂಟು ಮಠಗಳ ಅಂಗಳದಲ್ಲಿ ನಿಂತ ಭಕ್ತರು ಕೃಷ್ಣ ಜಪ ಮಾಡುತ್ತಾ ಚಿನ್ನದ ರಥಕ್ಕೆ ಕೈಮುಗಿದರು.

ನೆಟ್ಟ ಗುರ್ಜಿಗಳಲ್ಲಿ ತೂಗು ಹಾಕಿದ ಒಂದೊಂದೆ ಮಡಕೆಗಳನ್ನು ಸಾಂಪ್ರದಾಯಿಕ ಗೊಲ್ಲರ ವೇಷ ಧರಿಸಿದವರು ಒಡೆಯುತ್ತ ಮುಂದೆ ಸಾಗಿದಂತೆ ಮೆರವಣಿಗೆ ಮುಂದೆ ಸಾಗಿತು. ಕೊನೆಯಲ್ಲಿ ಶ್ರೀಕೃಷ್ಣನ ಮಣ್ಣಿನ ಮೂರ್ತಿಯನ್ನು ಮಧ್ವ ಸರೋವರದಲ್ಲಿ ವಿಸರ್ಜಿಸಲಾಯಿತು.

ಕೋವಿಡ್ ಕಾರಣಕ್ಕೆ ಕಳೆದ ಎರಡು ವರ್ಷಗಳಿಂದ ವಿಟ್ಲಪಿಂಡಿ ಮಹೋತ್ಸವ ಅದ್ದೂರಿಯಾಗಿ ನಡೆದಿರಲಿಲ್ಲ. ಈ ಬಾರಿ ಅತೀ ಹೆಚ್ಚು ಜನರ ಭಾಗವಹಿಸುವಿಕೆಯೊಂದಿಗೆ ವೈಭವದಿಂದ ವಿಟ್ಲಪಿಂಡಿ ಮಹೋತ್ಸವ ಜರುಗಿತು. ಒಂದೆಡೆ ಮುದ್ದುಕೃಷ್ಣರ ಕಲರವ, ಮತ್ತೊಂದೆಡೆ ನೂರೆಂಟು ಮುಖವರ್ಣಿಕೆಯ ವೇಷಗಳು, ಈ ಬಾರಿಯ ಹಬ್ವದ ಸಂಭ್ರಮಕ್ಕೆ ಮೆರುಗು ನೀಡಿದವು.


Spread the love