ಉಡುಪಿಯಲ್ಲಿ ಸಂಭ್ರಮದ ಹಗಲು ರಥೋತ್ಸವ, ಚೂರ್ಣೋತ್ಸವ ಸಂಪನ್ನ

Spread the love

ಉಡುಪಿಯಲ್ಲಿ ಸಂಭ್ರಮದ ಹಗಲು ರಥೋತ್ಸವ, ಚೂರ್ಣೋತ್ಸವ ಸಂಪನ್ನ

ಉಡುಪಿ: ಮಕರ ಸಂಕ್ರಮಣದಂದು ಉಡುಪಿ ಶ್ರೀಕೃಷ್ಣನ ಪ್ರತಿಷ್ಠೆಯ ಸಂಸ್ಮರಣೆಗಾಗಿ ಸಂಕ್ರಮಣದ‌ ಮರುದಿನ ಹಗಲು‌ ಬ್ರಹ್ಮ ರಥೋತ್ಸವ, ಚೂರ್ಣೋತ್ಸವದೊಂದಿಗೆ ಸಪ್ತೋತ್ಸವ ಶನಿವಾರ ಸಂಪನ್ನಗೊಂಡಿತು.

ದ್ವೈತ ಮತ ಸ್ಥಾಪಕ ಶ್ರೀಮಧ್ವಾಚಾರ್ಯರು ಮಕರ ಸಂಕ್ರಮಣದಂದು ಉಡುಪಿಯಲ್ಲಿ ಶ್ರೀಕೃಷ್ಣನನ್ನು ಪ್ರತಿಷ್ಠಾಪಿಸಿದ್ದು, ಈ ಹಿನ್ನೆಲೆಯಲ್ಲಿ ಸಪ್ತೋತ್ಸವ, ಮಕರ ಸಂಕ್ರಮಣದ ರಾತ್ರಿ ಬ್ರಹ್ಮ ರಥ ಸಹಿತ ತ್ರಿರಥೋತ್ಸವ, ಹಗಲು ಬ್ರಹ್ಮರಥ ಸಹಿತ ಚೂರ್ಣೋತ್ಸವ ವಿಶೇಷವಾಗಿ‌ ನಡೆಯುತ್ತದೆ.

ಶ್ರೀಕೃಷ್ಣ ಮಠದ ಶ್ರೀಕೃಷ್ಣ ಮುಖ್ಯಪ್ರಾಣ ಉತ್ಸವ ಮೂರ್ತಿಯನ್ನು ಸುವರ್ಣ ಪಾಲಕ್ಕಿಯಲ್ಲಿ ತಂದು ಬ್ರಹ್ಮರಥದಲ್ಲಿ ಕೂರಿಸಲಾಯಿತು. ದೇವರಿಗೆ ವಿಶೇಷವಾಗಿ ದೊಂದಿ ಬೆಳಕಲ್ಲಿ ಪೂಜೆ ಸಲ್ಲಿಸಲಾಯಿತು. ಬಳಿಕ ನೈವೇದ್ಯ ಸಮರ್ಪಣೆ, ಮಹಾಮಂಗಳಾರತಿಯನ್ನು ಭಕ್ತಿ, ಶ್ರದ್ಧೆಯಿಂದ ಮಾಡಲಾಯಿತು.

ದೇವರಿಗೆ ಸಮರ್ಪಿಸಿದ ಉಂಡೆ, ಚಕ್ಕುಲಿ, ನಾಣ್ಯ, ಹಣ್ಣು ಹಂಪಲು, ತೆಂಗಿನಕಾಯಿಯನ್ನು ಬ್ರಹ್ಮರಥದಿಂದ ಯತಿಗಳು ಭಕ್ತರಿಗೆ ವಿತರಿಸಿದರು. ಬಳಿಕ ರಥಕ್ಕೆ ಇಟ್ಟಿದ್ದ ಮರದ ಮೆಟ್ಟಿಲು ತೆಗೆಯುತ್ತಿದ್ದಂತೆ ರಥಬೀದಿಯಲ್ಲಿ ಸೇರಿದ್ದ ಭಕ್ತರು ರಥದ ಹಗ್ಗ ಎಳೆದು ಒಂದು ಸುತ್ತು ಬಂದರು.

ಉತ್ಸವದ ಬಳಿಕ ಶ್ರೀಕೃಷ್ಣನಿಗೆ ವಸಂತ ಪೂಜೆ ನಡೆಯಿತು. ಶ್ರೀಕೃಷ್ಣ ಮುಖ್ಯ ಪ್ರಾಣ ದೇವರಿಗೆ ಯತಿಗಳು, ಸೇವಾಕರ್ತರಿಗೆ ಓಕುಳಿ ಎರಚಿದರು. ಬಳಿಕ ಮಧ್ವ ಸರೋವರದಲ್ಲಿ ಅವಭೃತ ಸ್ನಾನ ನಡೆಯಿತು. ಮಧ್ಯಾಹ್ನ ಶ್ರೀಕೃಷ್ಣನಿಗೆ ಮಹಾಪೂಜೆ ನಡೆದ ಬಳಿಕ ಅನ್ನ ಸಂತರ್ಪಣೆ ನೆರವೇರಿತು.


Spread the love