ಉಡುಪಿಯಲ್ಲಿ ಸರಕಾರಿ ವೈದ್ಯಕೀಯ ಕಾಲೇಜು ತೆರೆಯುವ ಬಗ್ಗೆ ಶಾಸಕ ರಘುಪತಿ ಭಟ್ ಚರ್ಚೆ

Spread the love

ಉಡುಪಿಯಲ್ಲಿ ಸರಕಾರಿ ವೈದ್ಯಕೀಯ ಕಾಲೇಜು ತೆರೆಯುವ ಬಗ್ಗೆ ಶಾಸಕ ರಘುಪತಿ ಭಟ್ ಚರ್ಚೆ

ಉಡುಪಿ: ಜಿಲ್ಲೆಯಲ್ಲಿ ಕೇವಲ ಒಂದು ಖಾಸಗಿ ವೈದ್ಯಕೀಯ ಕಾಲೇಜು ಮಾತ್ರ ಇದ್ದು, ಸರಕಾರಿ ವೈದ್ಯಕೀಯ ಕಾಲೇಜಿನ ಬೇಡಿಕೆ ಇರುವುದರಿಂದ ತಕ್ಷಣದಲ್ಲಿ ಸರಕಾರಿ ವೈದ್ಯಕೀಯ ಕಾಲೇಜು ಆರಂಭಿಸಲು ಯೋಜನೆ ರೂಪಿಸುವ ಬಗ್ಗೆ ಶಾಸಕ ಕೆ. ರಘುಪತಿ ಭಟ್ ರವರು ಅಧಿಕಾರಿಗಳೊಂದಿಗೆ ಸರ್ಕಾರಿ ಭರವಸೆಗಳ ಸಮಿತಿ ಸಭೆಯಲ್ಲಿ ಚರ್ಚಿಸಿದರು.

ಬೆಂಗಳೂರಿನ ವಿಧಾನಸೌಧದಲ್ಲಿ ನಡೆದ ಸರ್ಕಾರಿ ಭರವಸೆಗಳ ಸಮಿತಿ ಸಭೆಯಲ್ಲಿ ವೈದ್ಯಕೀಯ ಶಿಕ್ಷಣ ಇಲಾಖೆಗೆ ಸಂಬಂಧಿಸಿದ ಬಾಕಿ ಇರುವ ಭರವಸೆಗಳ ಬಗ್ಗೆ ಇಲಾಖಾಧಿಕಾರಿಗಳ ಜೊತೆ ಚರ್ಚಿಸುವ ಸಂದರ್ಭದಲ್ಲಿ ಉಡುಪಿಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಆರಂಭಿಸುವ ಪ್ರಸ್ತಾವನೆಯ ಕುರಿತು ಅಧಿಕಾರಿಗಳ ಗಮನ ಸೆಳೆದರು.

ಈಗಾಗಲೇ ಉಡುಪಿ ಜಿಲ್ಲಾಸ್ಪತ್ರೆ ಯನ್ನು 250 ಬೆಡ್ ಗಳ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸುವ ಯೋಜನೆಗೆ ಅನುಮೋದನೆ ದೊರಕಿದೆ. ಸದರಿ ಆಸ್ಪತ್ರೆಯ 10 ಕೀ. ಮೀ. ವ್ಯಾಪ್ತಿಯಲ್ಲಿ ಸರಕಾರಿ ವೈದ್ಯಕೀಯ ಕಾಲೇಜು ಆರಂಭಿಸುವ ಉದ್ದೇಶದಿಂದ 20 ಎಕರೆ ಜಾಗವನ್ನು ಗುರುತಿಸಲಾಗಿದೆ ಎಂದು ಸಮಿತಿ ಸಭೆಯಲ್ಲಿ ಅಧಿಕಾರಿಗಳ ಗಮನಕ್ಕೆ ತಂದರು. ಉಡುಪಿ ಜಿಲ್ಲಾ ಆಸ್ಪತ್ರೆಗೆ ಹೊಂದಿಕೊಂಡಿರುವ ಕಟ್ಟಡದಲ್ಲಿ ಈ ವರ್ಷದಿಂದಲೇ ಬಿಎಸ್ಸಿ ನರ್ಸಿಂಗ್ ಕಾಲೇಜು ಆರಂಭಿಸುವ ಬಗ್ಗೆ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾನಿಲಯದ ಕುಲಸಚಿವರಲ್ಲಿ ಚರ್ಚಿಸಿದರು.

ಭರವಸೆಗಳ ಸಮಿತಿ ಸಭೆಯಲ್ಲಿ ಟಿ. ಕೆ. ಅನಿಲ್ ಕುಮಾರ್, ಪ್ರಧಾನ ಕಾರ್ಯದರ್ಶಿಯವರು, ವೈದ್ಯಕೀಯ ಶಿಕ್ಷಣ ಇಲಾಖೆ, ಎಂ. ಶಿಲ್ಪ, ಜಂಟಿ ಕಾರ್ಯದರ್ಶಿ, ವೈದ್ಯಕೀಯ ಶಿಕ್ಷಣ ಇಲಾಖೆ, ಶಿವಾನಂದ ಕಾಪ್ಸಿ ಕುಲಸಚಿವರು, ರಾಜೀವಗಾಂಧಿ ಆರೋಗ್ಯ ವಿಶ್ವವಿದ್ಯಾನಿಲಯ, ಡಾll ರಾಮಲಿಂಗಪ್ಪ ಸಿ. ಎ. ನಿರ್ದೇಶಕರು, ಕಿಮ್ಸ್ ಹುಬ್ಬಳ್ಳಿ, ಡಾll ಶಿವಕುಮಾರ್ ಸಿ. ಆರ್., ನಿರ್ದೇಶಕರು, ಬ್ರಿಮ್ಸ್, ಬೀದರ್ ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.


Spread the love