ಉಡುಪಿ: ಅಪಘಾತ ಪಡಿಸಿ ಮರಣಕ್ಕೆ ಕಾರಣನಾದ ಆರೋಪಿಗೆ ಶಿಕ್ಷೆ

Spread the love

ಉಡುಪಿ: ಅಪಘಾತ ಪಡಿಸಿ ಮರಣಕ್ಕೆ ಕಾರಣನಾದ ಆರೋಪಿಗೆ ಶಿಕ್ಷೆ

ಉಡುಪಿ: ಅತಿವೇಗ ಹಾಗೂ ಅಜಾಗರೂಕತೆಯಿಂದ ತ್ರಿಚಕ್ರ ಗೂಡ್ಸ್ ವಾಹನವನ್ನು ಚಲಾಯಿಸಿ, ಪಾದಚಾರಿಯ ಸಾವಿಗೆ ಕಾರಣವಾದ ಆರೋಪಿಗೆ ನಗರದ 1 ನೇ ಹೆಚ್ಚುವರಿ ಸಿ.ಜೆ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯವು ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿದೆ.

2017 ಮಾರ್ಚ್ 28 ರಂದು ರಾತ್ರಿ 7.45 ರ ಸುಮಾರಿಗೆ ಉಡುಪಿ ತಾಲೂಕು ವಾರಂಬಳ್ಳಿ ಗ್ರಾಮದ ನಿವಾಸಿಯಾದ ದಿನೇಶ್ ನಾಯಕ್ ಎಂಬಾತನು ಬಾರ್ಕೂರು – ಬ್ರಹ್ಮಾವರ ಮುಖ್ಯ ರಸ್ತೆಯ ಹಂದಾಡಿ ಗ್ರಾಮದ ಗಣೇಶ್ ಸ್ಟೋರ್ಸ್ ಎದುರು ಬಾರ್ಕೂರು ಕಡೆಯಿಂದ ಬ್ರಹ್ಮಾವರ ಕಡೆಗೆ ಅತೀವೇಗ ಮತ್ತು ಅಜಾಗರೂಕತೆಯಿಂದ ವಾಹನವನ್ನು ಚಾಲನೆ ಮಾಡಿ, ರಸ್ತೆ ಬದಿ ನಿಂತಿದ್ದ ಗೋಪಾಲ ಎಂಬಾತನಿಗೆ ಡಿಕ್ಕಿ ಹೊಡೆದ ಪರಿಣಾಮ, ಗೋಪಾಲ ಇವರು ರಸ್ತೆಗೆ ಬಿದ್ದು ತಲೆಗೆ ತೀವ್ರ ಸ್ವರೂಪದ ಗಾಯವಾಗಿ ಮೃತಪಟ್ಟಿರುವ ಹಿನ್ನೆಲೆ, ಬ್ರಹ್ಮಾವರ ಠಾಣೆಯ ವೃತ್ತ ನಿರೀಕ್ಷಕರು ಪ್ರಕರಣ ದಾಖಲಿಸಿಕೊಂಡು ಆರೋಪಿಯ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣೆ ಪತ್ರ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆದು ಆರೋಪ ಸಾಬೀತಾದ ಹಿನ್ನೆಲೆ 1 ನೇ ಹೆಚ್ಚುವರಿ ಸಿ.ಜೆ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯದ ನ್ಯಾಯಾಧೀಶ ಶ್ಯಾಮ್ ಪ್ರಕಾಶ್ ಅವರು ಆರೋಪಿ ದಿನೇಶ್ ನಾಯಕ್ಗೆ 2 ವರ್ಷ 6 ತಿಂಗಳುಗಳ ಕಾರಾಗೃಹ ವಾಸ ಶಿಕ್ಷೆ ಹಾಗೂ 10000 ರೂ. ದಂಡ ವಿಧಿಸಿ, ತೀರ್ಪು ನೀಡಿರುತ್ತಾರೆ.

ಸರಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕಿ ಮೋಹಿನಿ ಕೆ ವಾದ ಮಂಡಿಸಿರುತ್ತಾರೆ.


Spread the love