ಉಡುಪಿ-ಉಚ್ಚಿಲ ದಸರಾ: ನೋಡುಗರ ಗಮನ ಸೆಳೆದ ದಾಂಡಿಯಾ ನೃತ್ಯ, ಕುಣಿತ ಭಜನೆ
ಪಡುಬಿದ್ರಿ: ಇಲ್ಲಿನ ಮಹಾಲಕ್ಷ್ಮಿ ದೇವಸ್ಥಾನದ ಉಡುಪಿ-ಉಚ್ಚಿಲ ದಸರಾದಲ್ಲಿ ಕ್ಷೇತ್ರದ ರಥಬೀದಿಯ ಸುತ್ತ ಸಾರ್ವಜನಿಕರಿಂದ ಆಯೋಜಿಸಲಾಗಿದ್ದ ‘ಸಾಮೂಹಿಕ ದಾಂಡಿಯಾ ನೃತ್ಯ’ ನೋಡುಗರ ಗಮನ ಸೆಳೆಯಿತು.
ಕ್ಷೇತ್ರದ ರಥಬೀದಿಯ ಸುತ್ತ ಮಹಿಳೆಯರು, ಮಕ್ಕಳು, ಯುವಕ-ಯುವತಿಯರು ಸಂಭ್ರಮದಿಂದ ದಾಂಡಿಯಾ ನೃತ್ಯಕ್ಕೆ ಹೆಜ್ಜೆ ಹಾಕಿದರು. ನೃತ್ಯ ನೋಡಲೆಂದೇ ಸಾಕಷ್ಟು ಜನರು ದೇವಸ್ಥಾನಗಳ ಸುತ್ತಮುತ್ತ ಜಮಾಯಿಸಿದ್ದು, ದಸರಾ ಸಂಭ್ರಮವನ್ನು ಇಮ್ಮಡಿಗೊಳಿಸಿತು.
ವಿದೇಶಿಯರು ದಾಂಡಿಯಾ ನೃತ್ಯಕ್ಕೆ ಹೆಜ್ಜೆ ಹಾಕಿ ವಿಶೇಷ ಗಮನ ಸೆಳೆದರು. ಡಾ.ನಾಡೋಜ ಜಿ.ಶಂಕರ್, ಉಡುಪಿ ಶಾಸಕ ಯಶ್ಪಾಲ್ ಸುವರ್ಣ, ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ.ಕೋಟ್ಯಾನ್ ಬೆಳ್ಳಂಪಳ್ಳಿ, ದಸರಾ ಸಮಿತಿ ಅಧ್ಯಕ್ಷ ವಿನಯ್ ಕರ್ಕೇರ, ದೇವಳದ ಪ್ರಧಾನ ವ್ಯವಸ್ಥಾಪಕ ಸತೀಶ್ ಅಮೀನ್ ಪಡುಕರೆ ದಾಂಡಿಯಾ ನೃತ್ಯಕ್ಕೆ ಚಾಲನೆ ನೀಡಿದರು.
ಇದಕ್ಕೂ ಮೊದಲು ದಸರಾ ಸಮಾರಂಭಕ್ಕೆ ಭೇಟಿ ನೀಡಿದ ವಿಧಾನಪರಿಷತ್ ಸದಸ್ಯ ಐವನ್ ಡಿಸೋಜ, ನವದುರ್ಗೆಯರು ಹಾಗೂ ಶಾರದಾ ಮಾತೆಯ ವಿಗ್ರಹವನ್ನು ನಿರ್ಮಾಣ ಮಾಡಿದ ಕುಬೇರ ಅವರನ್ನು ಸ್ಮರಣಿಕೆ, ಶಾಲು ಹೊದಿಸಿ ಗೌರವಿಸಲಾಯಿತು.
ಇದೇ ವೇಳೆ ಮೊಗವೀರ ವ್ಯವಸ್ಥಾಪಕ ಮಂಡಳಿಯ ಅಧ್ಯಕ್ಷ ಗಣೇಶ್ ಕಾಂಚನ್, ದಿಲೀಪ್ ಮುಲ್ಕಿ, ದಯಾವತಿಪುತ್ರನ್, ಪ್ರೀತಿ ಶ್ರೀಯಾನ್, ಶೈಲಜಾಮೆಂಡನ್, ಪ್ರಾಪ್ತಿ ಸುವರ್ಣ, ಸುರೇಖಾಪುತ್ರನ್, ಸುಧಾಕರ ಕರ್ಕೇರ ಅವರನ್ನು ಜಿ.ಶಂಕರ್ ಸನ್ಮಾನಿಸಿದರು.
ಬೆಳಿಗ್ಗೆಯಿಂದ ರಾತ್ರಿವರೆಗೂ ಭಕ್ತರು ತಂಡೋಪತಂಡವಾಗಿ ಬಂದು ಮಾತೆ ಕಾಲರಾತ್ರಿ ದೇವಿ ಆರಾಧನೆಯೊಂದಿಗೆ ಶ್ರೀ ದೇವಳದ ನವದುರ್ಗೆಯರ ದರ್ಶನ ಪಡೆಯುತ್ತಿದ್ದಾರೆ.
ವಿವಿಧ ಧಾರ್ಮಿಕ ಕಾರ್ಯಕ್ರಮ, ಭಜನಾ ಸಂಕೀರ್ತನೆ, ನೃತ್ಯ ವಿದುಷಿ ದೀಕ್ಷಾ ವಿ. ಚಾಂತಾರು ಅವರಿಂದ ನೃತ್ಯ ಪ್ರದರ್ಶನ, ರಾಗಸಂಗಮ-ಗಣೇಶ್ ಎರ್ಮಾಳ್ ಮತ್ತು ಬಳಗದಿಂದ ಭಕ್ತಿಗೀತಾಂಜಲಿ ಸಂಗೀತ ಕಾರ್ಯಕ್ರಮ ನಡೆಯಿತು.
ದಸರಾ ಪ್ರಯುಕ್ತ ಆಯೋಜಿಸಿದ ಮಹಾಲಕ್ಷ್ಮಿ ದೇವಸ್ಥಾನದ ಪ್ರಾಂಗಣದ ಸುತ್ತ ನಡೆದ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯ ಕುಣಿತ ಭಜನಾ ತಂಡಗಳಿಂದ ಏಕಕಾಲದಲ್ಲಿ ಶ್ರೀ ಕ್ಷೇತ್ರದ ರಥಬೀದಿಯಲ್ಲಿ ನಡೆದ ಸಾಮೂಹಿಕ ಕುಣಿತ ಭಜನೆ ಭಕ್ತಿ ಭಾವವನ್ನು ಉಂಟು ಮಾಡಿತು.
ಕುಣಿತ ಭಜನೆಯಲ್ಲಿ ಹಲವಾರು ತಂಡಗಳ ಸಾವಿರಾರು ಮಂದಿ ಭಾಗವಹಿಸಿದ್ದರು. ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಗೌರವ ಸಲಹೆಗಾರ ಜಿ.ಶಂಕರ್ ಅವರು ದೇವಳದ ಮುಂಭಾಗದ ವೇದಿಕೆಯಲ್ಲಿ ನಡೆಯುತ್ತಿರುವ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಕುಸ್ತಿ ಪಂದ್ಯಾಟಕ್ಕೆ ಚಾಲನೆ ನೀಡಿದರು.
ಅಂತರರಾಷ್ಟ್ರೀಯ ಪವರ್ಲಿಪ್ಪರ್, ಅಲ್ ಇಂಡಿಯಾ ಪವರ್ಲಿಪ್ಪಿಂಗ್ ಫೆಡರೇಷನ್ ಅಧ್ಯಕ್ಷ ಸತೀಶ್ ಕುಮಾರ್ ಕುದ್ರೋಳಿ ಅವರನ್ನು ಈ ಸಂದರ್ಭ ಜಿ.ಶಂಕರ್ ಸನ್ಮಾನಿಸಿ, ಗೌರವಿಸಿದರು.
ಬಾಲಾಂಜನೇಯ ವ್ಯಾಯಾಮ ಶಾಲೆಯ ಅಧ್ಯಕ್ಷ ಉಮೇಶ್ ಗಟ್ಟಿ, ಉಚ್ಚಿಲ ದಸರಾ ಕುಸ್ತಿ ಸ್ಪರ್ಧೆಯ ಸಂಚಾಲಕ ವಿಜಯ ಸುವರ್ಣ, ದ.ಕ. ಮೊಗವೀರ ಮಹಾಜನ ಸಂಘದ ಪ್ರಧಾನ ಕಾರ್ಯದರ್ಶಿ ಶರಣ್ ಕುಮಾರ್ ಮಟ್ಟು, ಸತೀಶ್ ಕುಂದರ್ ಮಲ್ಪೆ, ಸತೀಶ್ ಅಮೀನ್ ಪಡುಕರೆ, ಶೋಭೇಂದ್ರ ಸಸಿಹಿತ್ತು ಇದ್ದರು.